ಧರ್ಮಸ್ಥಳ: ರುಡ್‌ಸೆಟ್ ಸಂಸ್ಥೆಗಳ ನಿರ್ದೇಶಕರುಗಳ ವಾರ್ಷಿಕ ಸಮ್ಮೇಳನ

ಉಜಿರೆ: ಗ್ರಾಮೀಣ ಭಾರತ ನಿಜವಾದ ಭಾರತ. ಶೇ. 70 ರಷ್ಟು ಮಂದಿ ಗ್ರಾಮೀಣ ಪ್ರದೇಶದಲ್ಲಿದ್ದರೆ, ಶೇ. 30 ರಷ್ಟು ಮಂದಿ ನಗರ ಪ್ರದೇಶದಲ್ಲಿದ್ದಾರೆ. ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ಕೌಶಾಲಾಭಿವೃದ್ಧಿ ಮತ್ತು ಉದ್ಯಮಶೀಲತಾಭಿವೃದ್ಧಿ ಮಾಡಿದರೆ ಮುಂದಿನ ಹತ್ತು ವರ್ಷಗಳಲ್ಲಿ ಭಾರತ ಸೂಪರ್ ಪವರ್ ಆಗಲಿದೆ. ಶ್ರಮ ಆಧಾರಿತ ಆರ್ಥಿಕ ನೀತಿಗಿಂತ ಜ್ಞಾನ ಆಧಾರಿತ ನೀತಿಯೊಂದಿಗೆ ಮಾನವ ಸಂಪನ್ಮೂಲ ಸದುಪಯೋಗ ಮಾಡಿದರೆ ದೇಶದ ಸರ್ವತೋಮುಖ ಪ್ರಗತಿ ಸಾಧ್ಯ. ಇದಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಸರ್ಕಾರದ ಕೌಶಾಲಾಭಿವೃದ್ಧಿ ಮತ್ತು ಉದ್ಯಮಶೀಲತಾಭಿವೃದ್ಧಿ ರಾಜ್ಯ ಸಚಿವ ಅನಂತ್‌ಕುಮಾರ್ ಹೆಗಡೆ ಹೇಳಿದರು.
ಅವರು ಸೆ.18 ರಂದು ಧರ್ಮಸ್ಥಳದಲ್ಲಿ ಶ್ರೀ ಸನ್ನಿಧಿ ಅತಿಥಿ ಗೃಹದಲ್ಲಿ ರುಡ್‌ಸೆಟ್ ಮತ್ತು ಆರ್‌ಸೆಟಿಗಳ ನಿರ್ದೇಶಕರುಗಳ ವಾರ್ಷಿಕ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷಿಪ್ರ ಬೆಳವಣಿಗೆಯೊಂದಿಗೆ ಕಾಲವೂ ವೇಗವಾಗಿ ಬದಲಾಗುತ್ತಿದೆ. ಬದಲಾದ ಕಾಲದ ವಿದ್ಯಮಾನಕ್ಕೆ ಅನುಗುಣವಾಗಿ ನಮ್ಮ ಯೋಚನಾ ಲಹರಿಯನ್ನು ಬದಲಾಯಿಸಬೇಕಾದ ಅನಿವಾರ್ಯತೆ ಇದೆ.
ಪ್ರತಿ ವರ್ಷ ಎರಡು ಕೋಟಿ ಯುವಜನತೆ ಉದ್ಯೋಗ ಬೇಟೆಯಲ್ಲಿರುತ್ತಾರೆ. ಶೇ. 70 ರಷ್ಟು ಮಂದಿ ಆಗಾಗ ತಮ್ಮ ಕೆಲಸ ಬದಲಾಯಿಸಿದರೆ ಶೇ. 30 ರಷ್ಟು ಮಂದಿ ತಮ್ಮ ಉದ್ಯೋಗ ಬದಲಾಯಿಸುತ್ತಾರೆ. ಶ್ರಮ ಆಧಾರಿತ ಆರ್ಥಿಕ ನೀತಿಗಿಂತ ಜ್ಞಾನ ಆಧಾರಿತ ಆರ್ಥಿಕ ನೀತಿಯನ್ನು ಬಳಸಿದಾಗ ಮಾತ್ರ ದೇಶದ ಪ್ರಗತಿ ಸಾಧ್ಯ. ಇಂದು ಎಲ್ಲರೂ ಕಂಪ್ಯೂಟರ್ ಬಳಕೆ ಮಾಡುವುದು ಅನಿವಾರ್ಯವಾಗಿದೆ.
ಪ್ರತಿಯಬ್ಬರೂ ಶ್ರಮ ಗೌರವದ ಬಗ್ಗೆ ತಿಳಿದಿರಬೇಕು. ಯಾವುದೇ ಕೆಲಸದ ಬಗ್ಗೆ ಗೌರವ, ಅಭಿಮಾನ ಹೊಂದಿರಬೇಕು. ಕೆಲಸದಲ್ಲಿ ಸಣ್ಣದು, ದೊಡ್ಡದು ಎಂಬ ಭಾವನೆ ಸಲ್ಲದು. ಮುಂದೆ ವ್ಯಕ್ತಿಯ ಕೌಶಲ ಸಾಮಾರ್ಥ್ಯ ಹೊಂದಿಕೊಂಡು ಕೇಂದ್ರ ಸರ್ಕಾರ ಕೌಶಲ ಪ್ರಮಾಣ ಪತ್ರ ನೀಡಲಿದೆ. ಯಾವುದೇ ಪದವಿ ಪಡೆದರೂ ಆತನ ಕೌಶಲಕ್ಕೆ ಆದ್ಯತೆ ನೀಡಲಾಗುತ್ತದೆ. ರುಡ್‌ಸೆಟ್ ಮತ್ತು ಆರ್‌ಸೆಟಿ ಮಾಡುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಪೂರ್ಣ ಬೆಂಬಲ ನೀಡುತ್ತದೆ ಎಂದು ಸಚಿವರು ಭರವಸೆ ನೀಡಿದರು. ಎಲ್ಲರೂ ಪ್ರೀತಿ – ವಿಶ್ವಾಸದಿಂದ ಸಾರ್ಥಕ ಜೀವನ ನಡೆಸಬೇಕು. ಸಭ್ಯ, ಸುಸಂಸ್ಕೃತ ನಾಗರೀಕರಾಗಬೇಕು ಎಂದು ಅವರು ಸಲಹೆ ನೀಡಿದರು.
ಸಚಿವ ಅನಂತ್ ಕುಮಾರ್ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಪತ್ನಿ ಶ್ರೀರೂಪಾ ಹೆಗಡೆ ಉಪಸ್ಥಿತರಿದ್ದರು. ಸಂಸದ ನಳಿನ್‌ಕುಮಾರ್ ಕಟೀಲ್ ಉಪಸ್ಥಿತರಿದ್ದರು. ಬೆಂಗಳೂರಿಗೆ ಮಂಜೂರಾದ ತರಬೇತಿ ಸಂಸ್ಥೆಯ ಕಟ್ಟಡ ನಿರ್ಮಾಣಕ್ಕೆ ಪ್ರಾಯೋಜಿತ ಬ್ಯಾಂಕುಗಳು ಹಾಗೂ ಕೇಂದ್ರ ಸರ್ಕಾರ ನೆರವು ನೀಡಬೇಕೆಂದು ಹೆಗ್ಗಡೆಯವರು ಕೋರಿದರು.
ರುಡ್‌ಸೆಟ್ ಕೇಂದ್ರೀಯ ಕಾರ್ಯಾಲಯದ ನಿರ್ದೇಶಕ ಎಂ. ಜನಾರ್ದನ್ ಸ್ವಾಗತಿಸಿದರು. ಗುರ್‌ಗಾಂವ್ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಒ.ಪಿ. ಗುಪ್ತಾ ಧನ್ಯವಾದವಿತ್ತರು. ಅನಸೂಯ ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.