ಆರ್‌ಎಂಎಸ್‌ಎ ಶಿಕ್ಷಕರಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ

ಬೆಳ್ತಂಗಡಿ: ಸೆ. 5 ರಂದು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟುಹಬ್ಬವನ್ನು ಶಿಕ್ಷಕರ ದಿನಾಚರಣೆಯಾಗಿ ಎಲ್ಲೆಡೆ ಸಂಭ್ರಮದಿಂದ ಆಚರಿಸುತ್ತಿರುವಂತೆ ಬೆಳ್ತಂಗಡಿಯಲ್ಲಿ ಮಾತ್ರ ಆರ್‌ಎಂಎಸ್‌ಎ ಶಿಕ್ಷಕರಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಯುತ್ತಿದೆ.
ಇಲಾಖಾ ಮೇಲ್ಮಟ್ಟದಲ್ಲಿ ಆಗಿರುವ ಎಡವಟ್ಟಿನಿಂದಾಗಿ ಬೆಳ್ತಂಗಡಿ ತಾಲೂಕಿಗೆ ಬರಬೇಕಾಗಿದ್ದ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ್ (ಆರ್.ಎಂ.ಎಸ್.ಎ) ಶಿಕ್ಷಕರ ವೇತನದ ಬಂಟ್ವಾಳ ತಾಲೂಕಿನ ಖಾತೆಗೆ ಜಮೆಯಾಗಿದ್ದು, ತಾಂತ್ರಿಕ ವ್ಯವಸ್ಥೆಯಡಿ ಕ್ಷಣದಲ್ಲಿ ಸರಿಪಡಿಸಲು ಸಾಧ್ಯವಿರುವ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ಸಕಾಲಿಕವಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಕಳೆದ ೬ ತಿಂಗಳಿಂದ ಆರ್‌ಎಮ್‌ಎಸ್ ನ ೪೬ ಶಿಕ್ಷಕರು ವೇತನವಿಲ್ಲದೆ ಕ್ಯಾಶ್‌ಲೆಸ್! ಸೇವೆ ನೀಡುವಂತಾಗಿದೆ. ಈ ಕಾರಣದಿಂದ ಶಿಕ್ಷಕರು ತಮ್ಮ ದೈನಂದಿನ ಖರ್ಚು, ಕೌಟುಂಬಿಕ ನಿರ್ವಹಣೆ, ಸಾಲ ಮತ್ತು ಇತರ ಹಣಕಾಸು ಸಂಸ್ಥೆಗಳಿಗೆ ಪಾವತಿಸಬೇಕಾಗಿರುವ ಮಾಸಿಕ ಕಂತು ಮತ್ತು ಆರ್ಥಿಕ ವ್ಯವಹಾರ ನಿರ್ವಹಿಸಲಾಗದೆ ಗಂಭೀರ ಸಂಕಷ್ಟಕ್ಕೀಡಾಗಿದ್ದು, ಶಿಕ್ಷಕರ ಸಂಘದ ಸಹಕಾರದೊಂದಿಗೆ ನ್ಯಾಯಕ್ಕಾಗಿ ಅನಿವಾರ್ಯವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಸೆ. 4 ರಿಂದ ಪ್ರತಿಭಟನೆ ಆರಂಭಿಸಿದ್ದಾರೆ.

ಪೂರ್ವ ಮಾಹಿತಿ ಪತ್ರ ನೀಡಿದ್ದರೂ ಬಿಇಒ ಗೊತ್ತಿಲ್ಲ ಎಂದರು!?
ತಮ್ಮ ನೋವಿಗೆ ಸ್ಪಂದಿಸುವಂತೆ ಆ. 28 ರಂದೇ ಬಿಇಒ ಮೂಲಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿತ್ತಾದರೂ, ನೀಡಲಾದ ಅಂತಿಮ ಗಡುವು ದಾಟಿದ್ದರಿಂದ ಸೆ. 4 ರಂದು ಪ್ರತಿಭಟನೆ ಆರಂಭಿಸಲಾಗಿತ್ತು. ಅವರ ಸಮಸ್ಯೆ ಆಲಿಸಲು ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ (ಡಿಡಿಪಿಐ) ಶಿವರಾಮಯ್ಯ ಮಂಗಳೂರಿನಿಂದ ಆಗಮಿಸಿದ್ದರು. ಆದರೆ ಬಿಇಒ ಎ.ಎನ್ ಗುರುಪ್ರಸಾದ್ ಕಚೇರಿಯಲ್ಲಿಲ್ಲದ್ದರಿಂದ ವಿಚಾರಿಸಿದಾಗ ಅವರು ಧರ್ಮಸ್ಥಳಕ್ಕೆ ಮಾರ್ಗದರ್ಶಿ ಅಧಿಕಾರಿಯಾಗಿ ಹೋಗಿರುವುದು ತಿಳಿಯಿತು. ದೂರವಾಣಿ ಮೂಲಕ ವಿಚಾರಿಸಿದಾಗ, ಶಿಕ್ಷಕರ ಪ್ರತಿಭಟನೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂಬ ಉತ್ತರ ಬಂತು. ಆದರೆ ಶಿಕ್ಷಕರು ನೀಡಿದ ಪತ್ರಕ್ಕೆ ಬಿಇಒ ಕಚೇರಿಯಿಂದ ಸ್ವೀಕೃತಿ ಪತ್ರ ನೀಡಲಾದುದನ್ನು ಡಿಡಿಪಿಐ ಅವರಿಗೆ ಶಿಕ್ಷಕರು ತೋರಿಸಿದರು.

ಬೆಂಗಳೂರಿನಲ್ಲಿ ಶಿಕ್ಷಕರ ಜೊತೆ ಧರಣಿ ಕುಳಿತುಕೊಳ್ಳಲು ಶಾಸಕರ ನಿರ್ಧಾರ
ಸೆ. 5 ರಂದು ಧರಣಿ ನಿರತ ಶಿಕ್ಷಕರ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ ಶಾಸಕ ಹರೀಶ್ ಪೂಂಜ ಅವರು, ಇಂದು ಸಂಜೆಯ ಒಳಗೆ ಬೆಂಗಳೂರಿನಿಂದ ಆದೇಶವಾಗುವಂತೆ ಕ್ರಮ ಕೈಗೊಳ್ಳಲಾಗುವುದು. ಅದು ಆಗದೇ ಇದ್ದರೆ ನಿಮ್ಮಲ್ಲಿ ೫ ಮಂದಿ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಸೆ. ೮ ರಂದು ಬೆಂಗಳೂರು ವಿಧಾನ ಸೌಧದಲ್ಲಿ ನಿಮ್ಮ ಜೊತೆ ನಾನೂ ಧರಣಿ ಕುಳಿತುಕೊಳ್ಳಲಿದ್ದೇನೆ ಎಂದು ಭರವಸೆ ನೀಡಿದರು. ಆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಧರಣಿ ಸ್ಥಗಿತಗೊಳಿಸಿದರು.

ಶಿಕ್ಷಕರ ಸಂಘದಿಂದ ಬೆಂಬಲ:
ಆರ್‌ಎಮ್‌ಎಸ್ ಶಿಕ್ಷಕರ ಈ ಪ್ರತಿಭಟನೆಗೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘ, ಎನ್‌ಪಿಎಸ್ ಶಿಕ್ಷಕರ ಸಂಘ, ಪ್ರೌಢ ಶಾಲಾ ಸಹಶಿಕ್ಷಕರ ಸಂಘದವರು ಸಂಪೂರ್ಣ ಬೆಂಬಲ ನೀಡಿದ್ದು ಹೋರಾಟದಲ್ಲಿ ಭಾಗಿಯಾಗಿದ್ದರು. ಪ್ರಮುಖರಾದ ರಾಮಕೃಷ್ಣ ಭಟ್ ಬೆಳಾಲು, ಪ್ರಭಾಕರ್ ನಾರಾವಿ, ಮಹಮ್ಮದ್ ರಿಯಾಝ್, ಶೇಖರ ಶಂಖು, ರಮೇಶ್ ಮಯ್ಯ, ಸುರೇಶ್ ಮಾಚಾರ್, ಮಂಜನಾಯ್ಕ್, ಆದಂ, ಶಿವಪುತ್ರ ಎಸ್, ನಿರಂಜನ ಜೈನ್, ರಘುಪತಿ ಕೆ. ರಾವ್, ರಾಜಗುರು ಹೆಬ್ಬಾರ್, ಅಜಿತ್ ಕೊಕ್ರಾಡಿ, ನಾಗರಾಜ ಡಿ ಮೊದಲಾದವರು ಸಕ್ರೀಯವಾಗಿ ತೊಡಗಿಸಿಕೊಂಡು ಹೋರಾಟಕ್ಕೆ ಧ್ವನಿಯಾದರು.

ಶಾಸಕ, ಮಾಜಿ ಶಾಸಕರ ಸಹಿತ ಜನಪ್ರತಿನಿಧಿಗಳ ಭೇಟಿ, ಮಾತುಕತೆ:
ಸೆ. 4 ರಿಂದ ಶಾಂತ ರೀತಿಯಲ್ಲಿ ಅನಿರ್ಧಿಷ್ಟಾವಧಿ ಧರಣಿ ನಿರತರಾಗಿರುವ ಅರ್‌ಎಂಎಸ್ ಶಿಕ್ಷಕರ ಬೇಡಿಕೆ ಆಲಿಸಲು ಶಾಸಕ ಹರೀಶ್ ಪೂಂಜ, ಮಾಜಿ ಶಾಸಕ ವಸಂತ ಬಂಗೇರ, ಸರಕಾರಿ ನೌಕರರ ಸಂಘದ ತಾ. ಅಧ್ಯಕ್ಷ ಜಯಕೀರ್ತಿ ಜೈನ್, ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ರಾಮಕೃಷ್ಣ, ಜಿ.ಪಂ ಸದಸ್ಯೆ ಮಮತಾ ಎಂ ಶೆಟ್ಟಿ ಮೊದಲಾದವರು ಭೇಟಿ ನೀಡಿ ಮನವಿ ಸ್ವೀಕರಿಸಿದರು. ಶಾಸಕ ಹರೀಶ್ ಪೂಂಜ ಅವರು ಇಲಾಖಾ ಬೆಂಗಳೂರು ಮಟ್ಟದ ಅಧಿಕಾರಿಗಳ ಜೊತೆಯೂ ದೂರವಾಣಿ ಮೂಲಕ ಮಾತನಾಡಿದ ಶಾಸಕರು ಗುರುವಾರದೊಳಗೆ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.