ಸೆ. 5 ರಿಂದ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ಆಧಾರ್ ತಿದ್ದುಪಡಿ ಆರಂಭ

ಬೆಳ್ತಂಗಡಿ: ಉಡುಪಿ ಮತ್ತು ದ.ಕ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ಸೆ. 5 ರಿಂದ ಆಧಾರ್ ತಿದ್ದುಪಡಿ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಅಪರ ಜಿಲ್ಲಾಧಿಕಾರಿ ಎಸ್ ಕುಮಾರ್ ತಿಳಿಸಿದ್ದಾರೆ.
ಆಧಾರ್ ತಿದ್ದುಪಡಿ, ನೊಂದಾವಣಿಗಾಗಿ ಇನ್ನು ಮುಂದೆ ಆಧಾರ್ ಕೇಂದ್ರ ಹುಡುಕಬೇಕಾಗಿಲ್ಲ. ಬದಲಾಗಿ ಆಯಾಯಾ ಗ್ರಾ.ಪಂ ಕಚೇರಿಗಳಲ್ಲೇ ಈ ಪ್ರಕ್ರೀಯೆ ಪ್ರಾರಂಭವಾಗಿ ಜನತೆಯ ಬಹುಬೇಡಿಕೆಗೆ ಭಾರೀ ಸ್ಪಂದನೆ ದೊರೆತಂತಾಗಲಿದೆ ಎಂದೇ ನಂಬಲಾಗಿದೆ. ಆಧಾರ್‌ನಲ್ಲಿ ಮನೆವಿಳಾಸ ಬದಲಾವಣೆ, ಮೊಬೈಲ್ ನಂಬರ್ ಸೇರ್ಪಡೆ, ಹೆಸರು ತಿದ್ದುಪಡಿ ಇತ್ಯಾಧಿ ಪ್ರಕ್ರೀಯೆ ಮಾಡಬಹುದಾಗಿದೆ. ಅದಕ್ಕಾಗಿ ಆಯಾಯಾ ಪಂಚಾಯತ್‌ನ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಸಿಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ (ಈ ಆಡಳಿತ) ಸಹಯೋಗದೊಂದಿಗೆ ಆಧಾರ್ ತಿದ್ದುಪಡಿ ಬಗ್ಗೆ ಜಿ.ಪಂ ಹಂತದಲ್ಲಿ ತರಬೇತಿ ನೀಡಲಾಗಿದೆ. ಎಲ್ಲಾ ಗ್ರಾ.ಪಂ ಗಳಲ್ಲಿ ಸಾಫ್ಟ್‌ವೇರ್ ಅಳವಡಿಕೆ ಕಾರ್ಯ ಕೂಡ ಪೂರ್ಣಗೊಂಡಿದೆ. ಆನ್ಲೈನ್ ಮೂಲಕ ಆಧಾರ್ ನೊಂದಣಿ ಪ್ರಕ್ರೀಯೆ ಕೂಡ ಅಂತಿಮಗೊಂಡಿದೆ ಎಂದು ತಿಳಿಸಿದ್ದಾರೆ. ನೆಟ್‌ವರ್ಕ್ ಸಮಸ್ಯೆ ಇರುವ ಪಂಚಾಯತ್‌ಗಳನ್ನು ಹೊರತುಪಡಿಸಿ ಉಳಿದ ಪಂಚಾಯತ್‌ಗಳಲ್ಲಿ ಈ ಕೇಂದ್ರ ಕಾರ್ಯಾರಂಭಿಸಲಿದೆ ಎಂದು ಎಸ್ ಕುಮಾರ್ ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿದ್ದಾರೆ.
ಖಾಸಗಿ ಕೇಂದ್ರಗಳು ಬಂದ್, ಸರಕಾರಿ ಸೇವೆಯೂ ದುಸ್ತರ
ಜಿಲ್ಲೆಯಲ್ಲಿ ಇದ್ದ ಎಲ್ಲಾ ಖಾಸಗಿ ಆಧಾರ್ ಕೇಂದ್ರಗಳು ಜನರನ್ನು ಸುಲಿಗೆ ಮಾಡುತ್ತಿದೆ ಎಂಬ ದೂರು ವ್ಯಾಪಕವಾಗಿತ್ತು. ಅಲ್ಲದೆ ಈಗ ತಾಂತ್ರಿಕ ಕಾರಣದಿಂದ ಎಲ್ಲಾ ಕೇಂದ್ರಗಳು ಮುಚ್ಚಲ್ಪಟ್ಟಿದೆ. ಈಗ ತಾಲೂಕು ಕಚೇರಿಯಲ್ಲಿ ಅಪರಾಹ್ನ ಮಾತ್ರ ಸೇವೆ ಇದೆ. ಅಲ್ಲೂಕೂಡ ಹೆಚ್ಚುವರಿ ಹಣ ಪಡೆಯಲಾಗುತ್ತಿದೆ ಎಂಬ ದೂರು ಇದೆ. ತಾಲೂಕಿನ ಬೆಳ್ತಂಗಡಿ- ಧರ್ಮಸ್ಥಳ ಅಂಚೆ ಕಚೇರಿಯಲ್ಲಿ ಮತ್ತು ಎಸ್‌ಬಿಐ ಸಂತೆಕಟ್ಟೆ ಶಾಖೆಯಲ್ಲಿ ಆಧಾರ್ ನೊಂದಣಿ ವ್ಯವಸ್ಥೆ ಇದೆ. ಆದರೆ ಕೆಲ ದಿನಗಳಿಂದ ಬೆಳ್ತಂಗಡಿ ಅಂಚೆ ಕಚೇರಿಯಲ್ಲಿ ಸರ್ವರ್ ಸರಿಇಲ್ಲ, ಮೆಷಿನ್ ಸರಿಇಲ್ಲ, ಸಿಬಂದಿ ರಜೆ ಇದ್ದಾರೆ ಎಂಬ ಸಬೂಬು ಹೇಳಲಾಗುತ್ತಿದೆ. ಎಸ್‌ಬಿಐ ನಲ್ಲೂ ಕೂಡ ಕಳೆದ ವಾರ ವಿಚಾರಣೆಗೆ ಬಂದವರಿಗೆ, ಮುಂದಿನ ವಾರ ಬನ್ನಿ ಎಂದು ವಾಪಾಸು ಕಳುಹಿಸಲಾಗುತ್ತಿದೆ. ಬೆಳ್ತಂಗಡಿ ಅಂಚೆ ಕಚೇರಿಯಲ್ಲಿ ಸೌಲಭ್ಯವಿದ್ದರೂ ಅಲ್ಲಿ ಅಳವಡಿಸಲಾದ ಪುಸ್ತಕದಲ್ಲಿ ಹೆಸರು ಮತ್ತು ಫೋನ್‌ನಂಬರ್ ನೊಂದಾಯಿಸಿ ಬರಬೇಕು. ಬಳಿಕ ಅಲ್ಲಿಂದ ಕರೆ ಬರುವವರೆಗೆ ಚಾತಕ ಪಕ್ಷಿಯಂತೆ ಕಾದುಕುಳಿತುಕೊಳ್ಳುವ ಸ್ಥಿತಿ ಇದೆ. ಎಸ್‌ಬಿಐ ನಲ್ಲಿ ವ್ಯವಸ್ಥೆ ಇದ್ದರೂ ಬೆಳಗ್ಗೆ ಬ್ಯಾಂಕ್ ತೆರೆಯುವ ಮುನ್ನ ಕ್ಯೂನಲ್ಲಿ ನಿಂತುಕೊಂಡ ೨೫ ಮಂದಿಗೆ ಮಾತ್ರ ಆಧಾರ್ ನೊಂದಣಿ ನಡೆಯುತ್ತಿದೆ. ಅದಕ್ಕಾಗಿ ಜನ ಬೆಳಗ್ಗೆ 7.30 ಕ್ಕೆ ಬಂದು ಬ್ಯಾಂಕ್ ಬಾಗಿಲು ಕಾಯುವ ಸ್ಥಿತಿ ಇದೆ.

ಗ್ರಾ.ಪಂ ಗಳಲ್ಲಿ ಆಧಾರ್ ನೊಂದಣಿ ಪ್ರಾರಂಭ ಎಂದು ಅಪರ ಜಿಲ್ಲಾಧಿಕಾರಿ ಎಸ್ ಕುಮಾರ್ ಪ್ರಕಟಣೆ ನೀಡಿದ್ದರೂ ಬೆಳ್ತಂಗಡಿ ತಾಲೂಕಿನ 48 ಪಂಚಾಯತ್‌ಗಳಲ್ಲಿ ಒಂದು ಕಡೆಯೂ ಕೂಡ ಸೆ.5 ರಂದು ಆಧಾರ್ ಸೇವೆ ಪ್ರಾರಂಭವಾಗಿಲ್ಲ.
ಈ ಬಗ್ಗೆ ತಾ. ಪಂ ವ್ಯವಸ್ಥಾಪಕರಲ್ಲಿ ವಿಚಾರಿಸಿದಾಗ, ಸೆ. 4 ರಂದು ಡಾಟಾ ಆಪರೇಟರ್‌ಗಳಿಗೆ ತರಬೇತಿ ಆಗಿದೆ. ಆದರೆ ತಾಂತ್ರಿಕ ತೊಂದರೆಯಿಂದ ಸೇವೆ ಪ್ರಾರಂಭವಾಗಿಲ್ಲ. ಸಧ್ಯದಲ್ಲೇ ಎಲ್ಲ ಕಡೆ ಸೇವೆ ನೀಡಲಾಗುವುದು ಎಂದಿಷ್ಟೇ ಹೇಳಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.