ನಿಡ್ಲೆ ಪದ್ಮಲತಾ ಮೋಹನ್‌ರವರ ‘ಪ್ರೀತಿಯೆಂಬ ಚುಂಬಕ’ ಕಥಾಸಂಕಲನ ಬಿಡುಗಡೆ

ನಿಡ್ಲೆ: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಸಮೀಪದ ನಿಡ್ಲೆ ಗ್ರಾಮದ ಲೇಖಕಿ ಪದ್ಮಲತಾ ಮೋಹನ್ ರವರ ಕಥಾಸಂಕಲನ ಪ್ರೀತಿಯೆಂಬ ಚುಂಬಕ ಬೆಂಗಳೂರಿನ ಬಸವೇಶ್ವರ ನಗರದ ಕೆ.ಇ.ಎ ಪ್ರಭಾತ್ ರಂಗಮಂದಿರದಲ್ಲಿ ಆ.26 ರಂದು ಬಿಡುಗಡೆಗೊಂಡಿತು.
ಸಮಾರಂಭದ ಅಧ್ಯಕ್ಷತೆಯನ್ನು ‘ವಿಹಾರಿ ವೈನತೇಯ’ ಕಾವ್ಯನಾಮ ಗಳಿಂದ ಪ್ರಸಿದ್ಧರಾದ ಹಿರಿಯ ಲೇಖಕ, ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರಾದ ಶ್ರೀನಿವಾಸ ಉಡುಪರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯ ಲೇಖಕಿ ಪತ್ರಕರ್ತೆ ಶ್ರೀಮತಿ ಭಾಗ್ಯಲಕ್ಷ್ಮೀ ಮಗ್ಗೆಯವರು ಉಪಸ್ಥಿತರಿದ್ದರು.
ಕೃತಿ ಪರಿಚಯ ಮಾಡಿದ ಸಾಹಿತಿ ಕನ್ನಡಪ್ರಭ ಪತ್ರಿಕೆಯ ಪುರವಣಿ ಸಂಪಾದಕರಾದ ಜೋಗಿಯವರು (ಗಿರೀಶ್ ರಾವ್ ಹತ್ವಾರ್) ಮಾತನಾಡಿ, ಸಾಮಾನ್ಯವಾಗಿ ದೊಡ್ಡವರ ಕಥೆಗಳು ಮಕ್ಕಳಿಗೆ ಓದಲು ಕೊಡದಿರುವ ಪದ್ಧತಿ ಇದೆ. ಆದರೆ ಈ ಲೇಖಕಿಯ ಕಥೆಗಳು ದೊಡ್ಡವರ ಜೊತೆ ಮಕ್ಕಳು ಓದಬಹುದಾಗಿದೆ. ಕೇವಲ ಮನೋರಂಜನೆಯ ಉದ್ದೇಶ ಅಲ್ಲ. ಬದಲಾಗಿ ಆಧುನಿಕ ಸಮಾಜದಲ್ಲಿ ಕಂಡು ಬರುತ್ತಿರುವ ಸಾಮಾನ್ಯ ಸಮಸ್ಯೆಗಳ ಮೇಲೆ ಕಥೆ ಹೆಣೆದು ಆದಕ್ಕೊಂದು ತಮ್ಮದೇ ರೀತಿಯಲ್ಲಿ ಪರಿಹಾರ ಕೊಡುವ ಪ್ರಯತ್ನವನ್ನು ಲೇಖಕಿ ಮಾಡಿ ಅದರಲ್ಲಿ ಯಶಸ್ವಿಯಾಗಿದ್ದಾರೆ . ಈ ಕೃತಿಯಲ್ಲಿ ಮನೋಲೋಕದ ವಿಚಾರಗಳ ಕಡೆ ಗಮನಹರಿಸಿ ಲೇಖಕಿ ತಮ್ಮ ವೈಜ್ಞಾನಿಕ ಮನೋಭಾವನೆಯನ್ನು ತೋರಿದ್ದಾರೆ ಎಂದು ಜೋಗಿಯವರು ಶ್ಲಾಘಿಸಿದರು.
ವಿಶೇಷ ಅತಿಥಿಗಳಾಗಿದ್ದ ಲೇಖಕಿಯವರ ತಂದೆ ನಿಡ್ಲೆ ರಘುರಾಮ ರಾವ್ ರವರು ಮಾತನಾಡಿ, ಮಕ್ಕಳು ಓದಿನ ಜೊತೆ ಬೇರೆ ಹವ್ಯಾಸಗಳನ್ನು ಬೆಳೆಸಿಕೊಳ್ಳ ಬೇಕು. ಪೋಷಕರು ಮಕ್ಕಳಿಗೆ ಇಂಥ ಹವ್ಯಾಸಗಳನ್ನು ಬೆಳೆಸುವಲ್ಲಿ ಸಹಕರಿಸಬೇಕು. ತಾನು ಮಗಳ ಬರವಣಿಗೆಗೆ ಪ್ರೋತ್ಸಾಹಿಸಿದ್ದುದರಿಂದ ಇಂದು ಅವರು ಬರವಣಿಗೆಯಲ್ಲಿ ಪ್ರಗತಿ ಹೊಂದಲು ಸಾಧ್ಯವಾಯಿತೆಂದು ಅಭಿಪ್ರಾಯಪಟ್ಟರು.

ಲೇಖಕಿ ಪರಿಚಯ:

ನಿಡ್ಲೆ ಗ್ರಾಮದ ಲೇಖಕಿ ಪದ್ಮಲತಾ ಮೋಹನ್‌ರವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸ್ತವ್ಯವಿದ್ದು, ಬೆಂಗಳೂರಿನ ರಾಜಾಜಿನಗರದ ಎ.ಎಸ್.ಸಿ ಇಂಡಿಪೆಂಡೆಂಟ್ ಪಿಯು ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಣ್ಣ ವಯಸ್ಸಿನಲ್ಲೇ ಇವರ ಹಲವು ಕವನಗಳು ತರಂಗ, ಸುದ್ದಿ ಸಂಗಾತಿ, ಪ್ರಿಯಾಂಕ ಮತ್ತು ರಾಗಸಂಗಮ ಮುಂತಾದ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ಕವನಗಳಾದ ‘ಒಂದು ಹೆಣ್ಣಿನ ಕಥೆ’, ‘ಮಂದಸ್ಮಿತೆ’, ‘ನಾನು ಮಹಿಳೆ ಹೇಡಿಯಲ್ಲ’, ‘ಮಾಯಾಕನ್ನಡಿ’ ಮುಂತಾದ ಕವನಗಳು ಹಿರಿಯ ಕವಿಗಳಿಂದ ಪ್ರಶಂಸಿಸಲ್ಪಟ್ಟಿದೆ. ಪ್ರಸ್ತುತ ಆಧುನಿಕ ಸಮಾಜದಲ್ಲಿ ನಡೆಯುತ್ತಿರುವ ಹಲವು ವಿಷಯ ವಸ್ತುಗಳ ಬಗ್ಗೆ ಉತ್ತಮ ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. ಅವುಗಳಲ್ಲಿ ಮುಖ್ಯವಾದವು ‘ಮಕ್ಕಳಲ್ಲಿ ಶಿಸ್ತು’, ‘ಚಿಕ್ಕ ಮಕ್ಕಳ ದೊಡ್ಡ ಮಾತುಗಳು’,  ‘ಪಾಪ ಮಾಡಿದ ಪಾಪಿಗಳು’ ಜನಮೆಚ್ಚುಗೆಗೆ ಪಾತ್ರವಾಗಿದೆ.
ಇವೆಲ್ಲದರ ಜೊತೆ ಕಥೆ ರಚಿಸುವುದು ಇವರ ಇಷ್ಟವಾದ ಕೆಲಸ. ತರಂಗ, ಸುಧಾ ಗೃಹಶೋಭಾದಂತಹ ಬಹಳ ಪ್ರಸಿದ್ಧವಾದ ಪತ್ರಿಕೆಗಳಲ್ಲಿ ಸತತವಾಗಿ ಇವರ ಕಥೆಗಳು ಪ್ರಕಟವಾಗುತ್ತಿದ್ದು, ತಮ್ಮ ಕಥೆಗಳಲ್ಲಿ ಉತ್ತಮ ಗುಣಮಟ್ಟವನ್ನು ಕಾಯ್ದುಕೊಂಡು ಹಲವು ಬರಹಗಾರರ ನಡುವೆ ವಿಭಿನ್ನ ಶೈಲಿಯ ಲೇಖಕಿ ಎನಿಸಿಕೊಂಡಿದ್ದಾರೆ.
ಸಹೃದಯ ಕವಿಗಳ ಜೊತೆ ಸೇರಿ ‘ಕವಿ ಕಾವ್ಯ ಸ್ನೇಹ ಬಳಗ’ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದು, ಅಲ್ಲಿ ಪ್ರತಿ ತಿಂಗಳು ಕವಿಗೋಷ್ಠಿ ಮತ್ತು ಗಾಯನ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಉದಯೋನ್ಮುಖ ಕವಿಗಳಿಗೆ ವೇದಿಕೆ ಒದಗಿಸಿ ಕೊಡುತ್ತಿದ್ದಾರೆ. ಜೊತೆಗೆ ಹಲವು ಕಡೆ ಪೋಷಕರು ಮತ್ತು ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಉಪನ್ಯಾಸವನ್ನೂ ನೀಡುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.