ಹಿಂದೂ ಸಂಘಟನೆಗಳ ಅವಹೇಳನ: ವಿಹಿಂಪ ದಿಂದ ಠಾಣೆಗೆ ದೂರು

ಬೆಳ್ತಂಗಡಿ: ಇಲ್ಲಿನ ತಾಲೂಕು ಕಚೇರಿ ಬಳಿ ದಲಿತ ಸಂಘರ್ಷ ಸಮಿತಿ ಆ. 27 ರಂದು ನಡೆಸಿದ ಪ್ರತಿಭಟನೆಯಲ್ಲಿ ಹಿಂದೂ ಸಂಘಟನೆಗಳ ವಿರುದ್ಧ ಅವಾಚ್ಯ ಮತ್ತು ಕೀಳು ಅಭಿರುಚಿಯ ಶಬ್ಧಗಳನ್ನು ಉಪಯೋಗಿಸಿ ನಿಂದಿಸಲಾಗಿದೆ. ಅಲ್ಲದೆ ಅತ್ಯಂತ ಶ್ರದ್ಧೆಯಿಂದ ಕಾಣುವ ಅನೇಕ ವಿಚಾರಗಳ ಬಗ್ಗೆ ತುಚ್ಚ ರೀತಿಯಲ್ಲಿ ಅವಹೇಳಿಸಲಾಗಿದೆ ಎಂದು ಆಪಾದಿಸಿ ವಿ.ಹಿಂ.ಪ ಬೆಳ್ತಂಗಡಿ ಠಾಣೆಗೆ ದೂರು ನೀಡಿದೆ.
ಶೇಖರ್ ಕುಕ್ಕೇಡಿ, ವಸಂತ ಬಿ.ಕೆ, ಶೇಖರ ಲಾಯಿಲ, ಚಂದು ಎಲ್ ಇವರು ಹಿಂದೂ ಸಂಘಟನೆ ವಿರುದ್ಧ ಅಚಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಹಿಂದೂ ಧರ್ಮದ ಪರ ಕೆಲಸ ಮಾಡುತ್ತಿರುವ ಆರ್‌ಎಸ್‌ಎಸ್ ಸಂಘಟನೆ ಬಗ್ಗೆ ತುಚ್ಚವಾಗಿ ಮಾತನಾಡಿರುತ್ತಾರೆ. ಪ್ರತಿಭಟನೆಯ ಕೊನೆಗೆ ಅಲ್ಲಿ ಸೇರಿದ್ದ ವ್ಯಕ್ತಿಗಳು ಹಿಂದೂ ಧರ್ಮದ ಪವಿತ್ರ ನಂಬಿಕೆಯ ಬಿಂದುವಾದ ಕೇಸರಿ ಬಣ್ಣವನ್ನು ಹೊಂದಿರುವ ಭಗವಾಧ್ವಜವನ್ನು ಬೆಂಕಿ ಹಾಕಿ ಮನುಸ್ಮೃತಿಯ ಸಂಕೇತವಾದ ಕರಪತ್ರ, ಪುಸ್ತಕಗಳನ್ನು ಸುಟ್ಟಿರುತ್ತಾರೆ. ಪ್ರತಿಭಟನಾಕಾರರು ಹಿಂದೂಗಳ ಧಾರ್ಮಿಕ ನಂಬಿಕೆ ಮತ್ತು ಚಿನ್ಹೆಗಳನ್ನು ಅವಮಾನಿಸುವ ದುರುದ್ದೇಶದಿಂದ ಮತ್ತು ಹಿಂದೂ ಮುಸ್ಲಿಂ ಕೋಮು ಸಂಘರ್ಷ ಉಂಟಾಗುವ ಪ್ರಚೋದನೆ ನೀಡಿದ್ದಾರೆ ಎಂದು ವಿಹಿಂಪ ಅಧ್ಯಕ್ಷ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಕಾರ್ಯದರ್ಶಿ ನವೀನ್ ನೆರಿಯ ದೂರಿನಲ್ಲಿ ಆಪಾದಿಸಿದ್ದಾರೆ.
ಹಿಂದೂ ಸಂಘಟನೆಗಳಿಂದ ಖಂಡನೆ:
ಡಿಎಎಸ್‌ಎಸ್ ಎಂಬ ಹೆಸರಿನಲ್ಲಿ ಬೆಳ್ತಂಗಡಿ ಮಿನಿ ವಿಧಾನ ಸೌಧದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 25-30 ಮಂದಿ ಸೇರಿ ಹಿಂದೂ ಧರ್ಮ, ಹಿಂದೂ ಧರ್ಮದ ಕುರಿತಾಗಿ ಕೆಲಸ ಮಾಡುತ್ತಿರುವ ಆರ್‌ಎಸ್‌ಎಸ್ ವಿರುದ್ಧ ಅವಾಚ್ಯವಾಗಿ ಮತ್ತು ಕೀಳು ಅಭಿರುಚಿಯ ಶಬ್ಧಗಳನ್ನು ಉಪಯೋಗಿಸಿ ಭಾಷಣ ಮಾಡಿದ್ದನ್ನು ಖಂಡಿಸುತ್ತೇವೆ ಎಂದು ವಿಶ್ವಹಿಂದೂ ಪರಿಷತ್, ಭಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ಬೆಳ್ತಂಗಡಿ, ದ.ಕ ಜಿಲ್ಲೆ ಪತ್ರಿಕಾ ಹೇಳಿಕೆಯಲ್ಲಿ ಖಂಡಿಸಿದೆ.
ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇನ್ನು ಮುಂದೆ ಇಂತಹಾ ಕುಕೃತ್ಯಗಳು ನಡೆದಲ್ಲಿ ಧರ್ಮಾಂಧ ಶಕ್ತಿಗಳಿಗೆ ಅವರದೇ ಭಾಷೆಯಲ್ಲಿ ಸೂಕ್ತ ಉತ್ತರ ನೀಡುವುದಾಗಿ ಸಂಘಟನೆ ತೀರ್ಮಾನಕ್ಕೆ ಬಂದಿದೆ ಎಂದು ಖಂಡನಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.