ರಾಜ್ಯದ ಪ್ರತಿಯೊಬ್ಬ ಕೃಷಿಕನಿಗೂ ಸ್ಮಾರ್ಟ್ ಕಾರ್ಡ್: ಸಚಿವ ರೆಡ್ಡಿ

ಬೆಳ್ತಂಗಡಿ: ರಾಜ್ಯದ ಪ್ರತಿಯೊಬ್ಬ ಕೃಷಿಕನಿಗೂ ಕೃಷಿ ಇಲಾಖೆಯಿಂದ ಸ್ಮಾರ್ಟ್ ಕಾರ್ಡ್ ನೀಡುವ ಮೂಲಕ ರೈತರನ್ನು ಗುರುತಿಸುವ ಕಾರ್ಯ ಸರಕಾರದಿಂದ ನಡೆಯಲಿದೆ. ಮುಂದೆ ಸರಕಾರದ ಸೌಲಭ್ಯ ಪಡೆಯಲು ಇದೇ ಕಾರ್ಡ್ ಆಧಾರವಾಗಲಿದೆ ಎಂದು ರಾಜ್ಯ ಕೃಷಿ ಸಚಿವರಾದ ಎನ್.ಹೆಚ್. ಶಿವಶಂಕರ ರೆಡ್ಡಿ ಹೇಳಿದರು.
ಅವರು ಆ.21ರಂದು ನಡ ಗ್ರಾಮದ ಸುರ್ಯ ಪ್ರಗತಿಪರ ಸಾವಯವ ಕೃಷಿಕ ಪ್ರಭಾಕರ ಮಯ್ಯ ಅವರ ಕೃಷಿ ತೋಟಕ್ಕೆ ಭೇಟಿ ನೀಡಿ, ನಂತರ ನಡೆದ ಸಾವಯವ ಕೃಷಿಕರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೃಷಿ ಇಲಾಖೆಯಲ್ಲಿ ರೈತರ ನೋಂದಾವಣೆ ಕಾರ್ಯ ನಡೆಯುತ್ತಿದ್ದು, ರೈತರು ಜಾಗದ ಸರ್ವೆ ನಂಬ್ರ, ಒಟ್ಟು ಜಾಗ, ಆಧಾರ್ ಕಾರ್ಡ್, ಪಡಿತರ ಕಾರ್ಡ್ ಸೇರಿದಂತೆ ತಮ್ಮ ಸಂಪೂರ್ಣ ಮಾಹಿತಿ ನೀಡಬೇಕು. ಕೃಷಿ ಇಲಾಖೆಯಿಂದ ಸೌಲಭ್ಯ ಪಡೆಯಲು ಆಗಾಗ ಆರ್.ಟಿ.ಸಿ ಸೇರಿದಂತೆ ಇತರ ದಾಖಲೆ ನೀಡುವುದನ್ನು ತಪ್ಪಿಸಲು ಈ ಕಾರ್ಡ್ ನೀಡಲಾಗುತ್ತದೆ. ಇದೇ ಕಾರ್ಡ್ ಆಧಾರದಲ್ಲಿ ಅರ್ಜಿ ನೀಡಿದ ತಕ್ಷಣ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದರು. ರೈತರು ಬೆಳೆಸುವ ಸಾವ ಯವ ಕೃಷಿ ಉತ್ಪನ್ನಗಳನ್ನು ಸಂರಕ್ಷಣೆ ಮತ್ತು ಮಾರುಕಟ್ಟೆಯನ್ನು ಒದಗಿಸುವುದು ಸರಕಾರದ ಜವಾಬ್ದಾರಿಯಾಗಿದೆ. ಇದಕ್ಕಾಗಿ ಪ್ರತಿ ಜಿಲ್ಲೆ ಹಾಗೂ ತಾಲೂಕು ಕೇಂದ್ರದಲ್ಲಿ ಸಾವಯವ ಕೃಷಿ ಮಾರುಕಟ್ಟೆ ಯಾರ್ಡ್ ನಿರ್ಮಿಸಲು ಸರಕಾರಕ್ಕೆ ವರದಿಗಳನ್ನು ನೀಡಿ, ಪಾಳು ಭೂಮಿಯಲ್ಲಿ ಭತ್ತ
ಬೆಳೆಯುವವರಿಗೆ ವಿಶೇಷ ಪ್ಯಾಕೇಜ್ ನೀಡಲು ಯೋಜನೆ ರೂಪಿಸಿ ಕಳುಹಿಸಿ ಎಂದು ಸ್ಥಳದಲ್ಲಿದ್ದ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿ, ಇದರಿಂದ ಕೃಷಿಕರಿಗೆ ಹೆಚ್ಚಿನ ಉತ್ತೇಜನ ನೀಡಿದಂತಾಗುತ್ತದೆ ಎಂದು ತಿಳಿಸಿದರು.
ಕೃಷಿ ಉತ್ಪನ್ನ ಮಾರಾಟಕ್ಕೆ ಜಿಲ್ಲೆಯಲ್ಲಿ ಔಟ್‌ಲೆಟ್ ನೀಡುವ ಕುರಿತು ಮತ್ತು ಸ್ಥಳೀಯ ಬೇಡಿಕೆಯಂತೆ ಕೃಷಿ ಯಂತ್ರಗಳನ್ನು ನೀಡುವ ಕುರಿತು ಪರಿಶೀಲನೆ ನಡೆಸುವುದಾಗಿ ಹೇಳಿದ ಸಚಿವರು ಶೂನ್ಯ ಬಂಡವಾಳದಲ್ಲಿ ಕೃಷಿ ಮತ್ತು ಇಸ್ರೇಲ್ ಮಾದರಿಯಲ್ಲಿ ಮಳೆ ಕೊರತೆ ಇರುವಲ್ಲಿ ಕೃಷಿಗೆ ಆದ್ಯತೆ ನೀಡಲಾಗುವುದು. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೃಷಿ ಬೆಳೆಗಳ ದರ ಪ್ರದರ್ಶಿಸಲಾಗುತ್ತದೆ. ಉತ್ಪನ್ನವನ್ನು ಆನ್‌ಲೈನ್ ಮೂಲಕ ಮಾರಾಟಕ್ಕೂ ವ್ಯವಸ್ಥೆ ಮಾಡಲಾಗುವುದು. ಇದನ್ನು ಗ್ರಾಮೀಣ ಮಾರುಕಟ್ಟೆಗೂ ಲಿಂಕ್ ಕೊಡಲಾಗುವುದು ಎಂದರು.
ಬೆಳೆದ ಕೃಷಿಗೆ ಸರಿಯಾದ ಬೆಲೆ ದೊರೆಯಲು ಕ್ಲಸ್ಟರ್ ಪಾರ್ಮಿಂಗ್ ಸಿಸ್ಟಮ್‌ನ್ನು ಜಾರಿಗೆ ತರಲಾಗುವುದು. ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಲೆ ದೊರೆಯುವಂತೆ ಮಾಡುವುದು ನಮ್ಮ ಎದುರಿರುವ ಸವಾಲಾಗಿದೆ. ಇದರ ಬಗ್ಗೆ ಸರಕಾರ ಪ್ರಯತ್ನಿಸಲಿದೆ ಎಂದು ತಿಳಿಸಿದರು. ಕೃಷಿ ಇಲಾಖೆಯಲ್ಲಿ ವಿವಿಧ ಹುದ್ದೆಗಳು ಖಾಲಿಯಾಗಿದ್ದು, ಈಗಾಗಲೇ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.
ಪ್ರಗತಿಪರ ಕೃಷಿಕರಾದ ಪ್ರಭಾಕರ ಮಯ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, 95 ರೈತರು 165 ಎಕ್ರೆ ಸಾವಯವ ಕೃಷಿಯನ್ನು ಮಾಡುತ್ತಿದ್ದು, ಇದರ ಮಾರುಕಟ್ಟೆಗಾಗಿ ಒಕ್ಕೂಟ ವ್ಯವಸ್ಥೆಯನ್ನು ರಚಿಸಲಾಗಿದೆ. ಅದಕ್ಕಾಗಿ ಜಿಲ್ಲೆಯಲ್ಲಿ ಮತ್ತು ತಾಲೂಕು ಕೇಂದ್ರದಲ್ಲಿ ಮಾರುಕಟ್ಟೆ ವ್ಯವಸ್ಥೆ ಮಾಡಬೇಕು, ಜಿಲ್ಲೆಯಲ್ಲಿ ಭತ್ತ ಕೃಷಿಗೆ ವಿಶೇಷ ಪ್ಯಾಕೇಜ್ ನೀಡಬೇಕು, ಭತ್ತದ ತಳಿ ಸಂರಕ್ಷಕರಿಗೆ ನೆರವು ನೀಡಬೇಕು, ರೈತ ಗುಂಪುಗಳಿಗೆ ಯಂತ್ರೋಪಕರಣ ಖರೀದಿಗೆ ಗರಿಷ್ಠ ಪ್ರಮಾಣದ ಸಹಾಧನ ನೀಡಬೇಕು. ಕೇರಳದಲ್ಲಿರುವಂತೆ ಕುಟುಂಬ ಶ್ರೀ ಯೋಜನೆಯನ್ನು ಜಾರಿ ಮಾಡಬೇಕು ಎಂಬ ಬೇಡಿಕೆಯನ್ನು ಸಚಿವರಿಗೆ ಸಲ್ಲಿಸಿದರು.
ಜಂಟಿ ಕೃಷಿ ನಿರ್ದೇಶಕ ಅಂತೋಣಿ ಮರಿಯ ಇಮಾನ್ಯುವೆಲ್ ಮಾತನಾಡಿ ಕದ್ರಿಯಲ್ಲಿ ಮಾರುಕಟ್ಟೆಗೆ ವ್ಯವಸ್ಥೆ, ಯಂತ್ರೋಪಕರಣಗಳ ಖರೀದಿಗೆ ರೂ.೫ ಲಕ್ಷದವರಗೆ ಸಹಾಯಧನಕ್ಕೆ ಅವಕಾಶ ಇದೆ ಎಂದರು. ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಜಿ.ಪಂ ಸದಸ್ಯೆ ಸೌಮ್ಯಲತಾ ಜಯಂತ ಗೌಡ, ತಾ.ಪಂ ಸದಸ್ಯರಾದ ಕೇಶವತಿ, ಪ್ರವೀಣ್ ಗೌಡ, ಜಲಾನಯನ ಇಲಾಖೆ ನಿರ್ದೇಶಕ ಪದ್ಮಯ್ಯ ನಾಯ್ಕ, ಚಿಕ್ಕಬಳ್ಳಾಪುರ ಜಿ.ಪಂ ಅಧ್ಯಕ್ಷ ಮಂಜುನಾಥ್, ಉಡುಪಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ. ಕೆಂಪೇ ಗೌಡ, ಉಪಕೃಷಿ ನಿರ್ದೇಶಕ ಶಿವಶಂಕರ್ ದಾನಗೊಂಡರ್, ಪ್ರಭಾರ ಕೃಷಿ ನಿರ್ದೇಶಕಿ ಪ್ರೇಮ ಕಾಂಬ್ಲಿ, ಕೃಷಿ ಅಧಿಕಾರಿ ಚಿದಾನಂದ ಹೂಗಾರ್, ನಿವೃತ್ತ ಕೃಷಿ ಅಧಿಕಾರಿ ನಾರಾಯಣ ಸುವರ್ಣ, ತಾಂತ್ರಿಕ ಅಧಿಕಾರಿ ಹುಮೇರಾ ಜಬಿನ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.