ಕಲ್ಮಂಜ ಗ್ರಾಮಸಭೆ.

Advt_NewsUnder_1
Advt_NewsUnder_1

ಕಲ್ಮಂಜ ಗ್ರಾ.ಪಂ. ಗ್ರಾಮ ಸಭೆಯು ಜು. 28 ರಂದು ಗ್ರಾ.ಪಂ. ಸಭಾಭವನದಲ್ಲಿ ಜರುಗಿತು.
ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ಜಯಲಕ್ಷ್ಮೀ ವಹಿಸಿದ್ದರು. ಉಪಾಧ್ಯಕ್ಷ ದಿನೇಶ್ ಗೌಡ ಸಹಿತ ಸದಸ್ಯರುಗಳು, ತಾ.ಪಂ. ಸದಸ್ಯೆ ಧರ್ಣಮ್ಮ ಯಾನೆ ಲೀಲಾವತಿ, ಉಜಿರೆ ಜಿ.ಪಂ. ಸದಸ್ಯೆ ನಮಿತಾ ಕೆ. ಪೂಜಾರಿ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಟಿ. ಸೆಬಾಸ್ಟಿಯನ್ ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಾರನಾಥ ನಾಯ್ಕ ಸ್ವಾಗತಿಸಿ ವರದಿ ಹಾಗೂ ಜಮಾ ಖರ್ಚು ಮಂಡಿಸಿದರು. ಪಶುಸಂಗೋಪನೆ ಇಲಾಖೆಯ ಪಶುವೈದ್ಯಾಧಿಕಾರಿ ಡಾ. ಕಾರ್ತಿಕ್ ಮಾರ್ಗದರ್ಶಿ ಅಧಿಕಾರಿಯಾಗಿದ್ದರು.
ಮುಂಡಾಜೆ ಕಲ್ಮಂಜ ರಸ್ತೆಯ ಕಾಮಗಾರಿ ನಿರ್ವಹಿಸಲು 1 ವರ್ಷದ ಅವಧಿಯಿದ್ದು ಸದ್ರಿ ಕೆಲಸ ನಿರ್ವಹಿಸಿದ ಗುತ್ತಿಗೆದಾರರು ಕೇವಲ 3 ತಿಂಗಳಲ್ಲೇ ತ್ವರಿತವಾಗಿ ಕೈಗೊಂಡು ಸಮರ್ಪಕ ಕ್ಯೂರಿಂಗ್ ಆಗದೆ ಇದೀಗ 7 ಕೋಟಿ ರೂ. ವೆಚ್ಚದ ಕಾಮಗಾರಿ ಸಂಪೂರ್ಣ ನಿಷ್ಪ್ರಯೋಜಕವಾಗುವ ಹಂತಕ್ಕೆ ಬಂದಿದೆ. ಈ ಬಗ್ಗೆ ಗುತ್ತಿಗೆದಾರರ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಬೇಕಾಗುತ್ತದೆ ಎಂದು ಗ್ರಾ.ಪಂ. ಮಾಜಿ ಅಧ್ಯಕ್ಷ ಸಾಂತಪ್ಪ ಗೌಡ ಹಾಗೂ ಊರವರು ಆಕ್ರೋಶ ವ್ಯಕ್ತಪಡಿಸಿದರು. ಜನರ ಬಹುಬೇಡಿಕೆ ಕಾಮಗಾರಿಯಾಗಿದ್ದ ಈ ರಸ್ತೆಗೆ ಅನುದಾನ ಬಿಡುಗಡೆಯಾಗಬೇಕಾದರೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಬಳಿಕ ಬಂದ ಅನುದಾನ ಈಗ ನೀರಿನ ಮೇಲೆ ಇಟ್ಟ ಹೋಮದಂತಾಗಿದೆ ಎಂಬುದು ಗ್ರಾಮಸ್ಥರ ಆರೋಪ. ಅಲ್ಲದೆ ಪಿಲತ್ತಡ್ಕ, ಪಡೀಲು ಸನಿಹ ರಸ್ತೆಯಲ್ಲಿದ್ದ ಕಿರು ಸೇತುವೆ ಅಗಲೀಕರಣ ಕಾಮಗಾರಿ ಮಾಡದ ಗುತ್ತಿಗೆದಾರರು ಜನತೆಗೆ ಅನ್ಯಾಯವೆಸಗಿದ್ದಾರೆ. ಅಲ್ಲದೆ ಇಲ್ಲಿ ಕಿರಿದಾದ ರಸ್ತೆಯಲ್ಲಿ ಅಪಘಾತವಾಗುವ ಸಂಭವವಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಮುಂಡಾಜೆ ವಲಯದ ಲೈನ್‌ಮೇನ್ ತುರ್ತು ಕರೆಗಳಿಗೆ ಸ್ಪಂದಿಸುತ್ತಿಲ್ಲ. ಅವರನ್ನು ಬದಲಾಯಿಸಿ. ಜನ ಅಪಾಯಕ್ಕೆ ಸಿಲುಕಿದಾಗ ಮೆಸ್ಕಾಂ ಇಲಾಖೆಗೆ ಕರೆ ಮಾಡಿದಾಗ ಈ ರೀತಿ ಅನುಭವ ಆದರೆ ಆಗುವ ಪ್ರಾಣಾಪಾಯಕ್ಕೆ ಯಾರು ಹೊಣೆ ಎಂದು ಜನ ಪ್ರಶ್ನಿಸಿದರು. ಡಿಸಿ ಮನ್ನಾ ಭೂಮಿಯಲ್ಲಿ ಅರ್ಹರಿಗೆ ನಿವೇಶನ ಹಂಚದೆ ಗ್ರಾಮ ಕರಣಿಕರು ಬೇಜವಾಬ್ಧಾರಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದರು. ಅಲ್ಲದೆ ೯೪ಸಿ ಯೋಜನೆಯಡಿ ಮನೆ ಇಲ್ಲದವರಿಗೆ ಇನ್ನೊಬ್ಬರ ಮನೆ ಮುಂದೆ ನಿಲ್ಲಿಸಿ ಪೋಟೋ ತೆಗೆಸಿ ಗ್ರಾಮ ಸಹಾಯಕರು ಹಣ ಪಡೆದುಕೊಂಡು ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ ಎಂದು ಆಕ್ಷೇಪಿಸಿದ ವಿದ್ಯಮಾನವೂ ನಡೆಯಿತು.
ಕಲ್ಮಂಜ ಬಳಿ ಇರುವ ಇಂಗು ಗುಂಡಿಯನ್ನು ಒಂದೋ ಮುಚ್ಚಬೇಕು. ಇಲ್ಲದಿದ್ದರೆ ಅದಕ್ಕೆ ಆವರಣ ಗೋಡೆ ರಚಿಸಬೇಕು ಎಂಬ ಬೇಡಿಕೆ ಕೇಳಿಬಂತು. ಬನದಬೈಲು ರಸ್ತೆ ಸಂಚಾರಕ್ಕೆ ಅಯೋಗ್ಯವಾಗಿದ್ದು ಕೆಸರು ತುಂಬಿದ ರಸ್ತೆಗೆ ಇಲ್ಲೇ ವ್ಯಕ್ತಿಯೊಬ್ಬರು ಕೊಡುತ್ತೇನೆಂದು ಭರವಸೆ ನೀಡಿರುವ ಕೆಂಪುಕಲ್ಲಿನ ಹುಡಿ ಹಾಕಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಆಗ್ರಹಿಸಲಾಯಿತು. ಹೈವೇ ರಸ್ತೆಯ ಚರಂಡಿ ತೆಗೆಸಿದ ಮಣ್ಣನ್ನು ಅಲ್ಲೇ ಪಕ್ಕದಲ್ಲಿ ಸುರಿದ ಪರಿಣಾಮ ಅನೇಕ ಅಪಘಾತಗಳು ಸಂಭವಿಸುತ್ತಿದೆ. ಇದಕ್ಕೆಲ್ಲಾ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆ. ಇದಕ್ಕೆ ಗ್ರಾಮ ಪಂಚಾಯತ್‌ನಿಂದ ಖಡಕ್ ಸೂಚನೆ ನೀಡಬೇಕು. ಚರಂಡಿಯಿಂದ ಎತ್ತಲಾದ ಮಣ್ಣನ್ನು ಬೇರೆಡೆಗೆ ಸಾಗಿಸಿ ಕ್ರಮ ಆಗಬೇಕು ಎಂದು ಬಿ.ಎನ್. ಹಮೀದ್ ಸಹಿತ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮ ಸಭೆಯಲ್ಲೇ ಸೌಲಭ್ಯಗಳ ವಿತರಣೆ: ವಿಕಲಾಂಗರಾಗಿರುವ ಅಣ್ಣಿ ಗೌಡ ಮತ್ತು ಚೋಮ ಅವರಿಗೆ ಗಾಲಿ ಕುರ್ಚಿ ವಿತರಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಶೇ. ೧೦೦ ಫಲಿತಾಂಶ ಪಡೆದ ಕಲ್ಮಂಜ ಸರಕಾರಿ ಪ್ರೌಢ ಶಾಲೆಗೆ ಗ್ರಾಮ ಸಭೆಯಲ್ಲಿ ಸನ್ಮಾನ ನಡೆಯಿತು. ಶಾಲಾ ಶಿಕ್ಷಕಿ ಸಹನಾ ಕೆ.ಎನ್ ಅವರು ಬಹುಮಾನ ಸ್ವೀಕರಿಸಿ ಬಳಿಕ ಅಭಿನಂದಿಸಿ ಮಾತನಾಡಿದರು.
ಸಭೆಯನ್ನುದ್ದೇಶಿಸಿ ಜಿ. ಪಂ. ಸದಸ್ಯೆ ನಮಿತಾ ಅವರು ಮಾತನಾಡಿ, ಮಾಜಿ ಶಾಸಕ ವಸಂತ ಬಂಗೇರ ಅವರು ಈ ಗ್ರಾಮಕ್ಕೆ ಹೆಚ್ಚಿನ ಅನುದಾನ ಒದಗಿಸಿಕೊಟ್ಟಿದ್ದಾರೆ. ಈಗಿನ ಶಾಸಕರೂ ಇದಕ್ಕೆ ಪೂರಕವಾಗಿ ಅನುದಾನಗಳನ್ನು ಒದಗಿಸಿಕೊಡಬೇಕು ಎಂದರು.
ಮೆಸ್ಕಾಂ ಮತ್ತು ಕಂದಾಯ ಇಲಾಖೆ ಗ್ರಾಮ ಕರಣಿಕರ ಕ್ರಮವನ್ನು ಖಂಡಿಸಿದ ಅವರು ಜನರ ಕೆಲಸ ಮಾಡುವಲ್ಲಿ ವಿಳಂಬವಾದಲ್ಲಿ ಜಿ.ಪಂ. ಸಭೆಯಲ್ಲೇ ನೇರ ಪ್ರಸ್ತಾಪಮಾಡುವುದಾಗಿ ಎಚ್ಚರಿಕೆ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.