25 ವರ್ಷಗಳಿಂದ ಈಡೇರದ ಜನರ ಬೇಡಿಕೆ: ಅಡಿಕೆ ಮರದ ಕಾಲು ಸಂಕದಲ್ಲಿ ವಿದ್ಯಾರ್ಥಿಗಳ ಸರ್ಕಸ್.

Advt_NewsUnder_1
Advt_NewsUnder_1
Advt_NewsUnder_1

ಮಿತ್ತಬಾಗಿಲು: ಮಿತ್ತಬಾಗಿಲು ಗ್ರಾಮದ ಕುಕ್ಕಾವು ಎಂಬಲ್ಲಿಯ ಕಕ್ಕೆನೇಜಿ ಬಳಿ ಇರುವ ಏಳೂವರೆ ಹಳ್ಳಕ್ಕೆ ಕಿರು ಸೇತುವೆ ಬೇಕೆಂಬುದು ಈ ಭಾಗದ ಜನರ 25 ವರ್ಷಗಳ ಬೇಡಿಕೆ. ಆದರೆ ಅದು ಇಂದಿಗೂ ಈಡೇರಿಲ್ಲ. ಇದರಿಂದ ಮಳೆಗಾಲದ ಅವಧಿಯಲ್ಲಿ ಇಲ್ಲಿಯ ನಾಗರಿಕರು, ಶಾಲಾ-ಕಾಲೇಜಿಗೆ ಹೋಗುವ ಮಕ್ಕಳು ಹಳ್ಳದಾಟಲು ಅಡಿಕೆ ಮರದಿಂದ ನಿರ್ಮಿಸಿರುವ ಕಾಲು ಸಂಕದಲ್ಲೇ ಇಂದಿಗೂ ಹಳ್ಳವನ್ನು ದಾಟಬೇಕಾದ ಅನಿವಾರ್ಯ ಪರಿಸ್ಥಿತಿ ಮುಂದುವರಿದಿದೆ.
ಕುಕ್ಕಾವಿನಿಂದ ಕೂಡಬೆಟ್ಟು ದೇವಸ್ಥಾನ ತನಕ ಈ ಪರಿಸರದಲ್ಲಿ ಸುಮಾರು 150ಕ್ಕೂ ಹೆಚ್ಚು ಮನೆಗಳಿವೆ. ಈ ಭಾಗದ ಜನರು ಅಗತ್ಯ ಕೆಲಸ ಕಾರ್ಯಗಳಿಗೆ ಪೇಟೆ, ಪಟ್ಟಣಗಳಿಗೆ ಹೋಗಬೇಕಾದರೆ ಹಾಗೂ ಈ ಭಾಗದ ಮಕ್ಕಳು ಶಾಲಾ-ಕಾಲೇಜುಗಳಿಗೆ ಹೋಗಬೇಕಾದರೆ ಕುಕ್ಕಾವಿನಲ್ಲಿರುವ ಏಳೂವರೆ ಹಳ್ಳವನ್ನು ದಾಟಿಯೇ ಹೋಗಬೇಕು.
ಅಪಾಯ ಕಟ್ಟಿಟ್ಟ ಬುತ್ತಿ: ಬೇಸಿಗೆ ಕಾಲದಲ್ಲಿ ಆದರೆ ಹಳ್ಳದಾಟಿಯಾದರೂ ಹೋಗಬಹುದು. ಆದರೆ ಮಳೆಗಾಲದ ಸುಮಾರು ಆರು ತಿಂಗಳು ಇಲ್ಲಿಯ ನಾಗರಿಕರ ಪಾಡು ಹೇಳತೀರದು. ಹಳ್ಳದಲ್ಲಿ ಪೂರ್ತಿ ಪ್ರವಾಹ ಹರಿದು ಬರುತ್ತಿದ್ದರೂ, ಇದನ್ನು ಲೆಕ್ಕಿಸದೇ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಅಪಾಯಕಾರಿಯಾದ ಕಾಲು ಸಂಕದ ಮೇಲೆಯೇ ಸರ್ಕಸ್ ಮಾಡಿಕೊಂಡು ಹಳ್ಳವನ್ನು ದಾಟದೆ ಬೇರೆ ಯಾವುದೇ ವಿಧಿಯಿಲ್ಲ. ಸ್ವಲ್ಪ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ.
ತಾತ್ಕಲಿಕ ವ್ಯವಸ್ಥೆ: ಏಳೂವರೆ ಹಳ್ಳಕ್ಕೆ ಪ್ರತಿ ಬಾರಿಯೂ ಊರಿನ ಗ್ರಾಮಸ್ಥರು ಅಡಿಕೆ ಮರದಿಂದ ಕಿರು ಕಾಲು ಸಂಕವೊಂದನ್ನು ನಿರ್ಮಿಸಿ ಹಳ್ಳದಾಟಲು ತಾತ್ಕಲಿಕ ವ್ಯವಸ್ಥೆ ಮಾಡುತ್ತಾರೆ. ಇದು ಮಳೆಗಾಲದಲ್ಲಿ ಹಳ್ಳದಾಟುವ ಈ ಭಾಗದ ಸಾವಿರಾರು ಮಂದಿಗೆ ಹೆಚ್ಚಿನ ಪ್ರಯೋಜವಾಗುತ್ತದೆ. ಶಾಲಾ-ಕಾಲೇಜಿಗೆ ಹೋಗುವ ಮಕ್ಕಳು ಕೂಡಾ ಅಪಾಯಕಾರಿಯಾದ ಈ ಸೇತುವೆಯ ಮೂಲಕವೇ ಹೋಗಬೇಕು. ಶಾಲೆಗೆ ಹೋಗುವ ಸಣ್ಣ ಮಕ್ಕಳನ್ನು ಪೋಷಕರು ಬೆಳಗ್ಗೆ ಮತ್ತು ಸಂಜೆ ಕೈಯಲ್ಲಿ ಹಿಡಿದು ಸಂಕ ದಾಟಿಸಬೇಕಾದ ಅನಿವಾರ್ಯತೆಯೂ ಇಲ್ಲಿದೆ.
ಊರವರಿಂದ ಅಡಿಕೆ ಮರದ ಸೇತುವೆ: ಇತ್ತೀಚೆಗೆ ಮತ್ತೆ ಊರ ನಾಗರಿಕರು ಸ್ಥಳೀಯ ಗಣ್ಯರಾದ ವಾಸುದೇವ ಕಕ್ಕೆನೇಜಿ ಇವರ ಮುಂದಾಳತ್ವದಲ್ಲಿ ಒಂದೇ ದಿನದಲ್ಲಿ 20 ಮಂದಿ ಒಟ್ಟು ಸೇರಿ ಶ್ರಮದಾನದ ಮೂಲಕ ಅಡಿಕೆ ಮರದಿಂದ ಕಿರು ಕಾಲು ಸಂಕವನ್ನು ನಿರ್ಮಿಸಿದ್ದಾರೆ.
ಕುಕ್ಕಾವು ಆಸುಪಾಸಿನ ಮನೆಯವರು ಅಡಿಕೆ ಮರ ಹಾಗೂ ಇತರ ಸಾಮಾಗ್ರಿಗಳನ್ನು ಉಚಿವಾಗಿ ನೀಡಿದ್ದರು. ಇದನ್ನು ತಂದು ಸುಮಾರು 45 ಅಡಿ ಉದ್ದ ಮತ್ತು 4 ಅಡಿ ಅಗಲಕ್ಕೆ ಹಳ್ಳಕ್ಕೆ ಅಡಿಕೆ ಮರವನ್ನು ಆಧಾರವಾಗಿ ನಿಲ್ಲಿಸಿ, ಮೇಲ್ಗಡೆ ಅದೇ ಮರದ ದಂಡೆ ರಚಿಸಿ ಅದಕ್ಕೆ ಅಡ್ಡವಾಗಿ ಅಡಿಕೆ ಮರವನ್ನು ಸಿಗಿದು ರೀಪು ಹೊಡೆದಿದ್ದಾರೆ. ಮಳೆಗಾಲದಲ್ಲಿ ಜಾರದಂತೆ ಇದರ ಮೇಲ್ಗಡೆ ತೆಳುವಾಗಿ ಮರಳು ಮತ್ತು ಜಲ್ಲಿಹುಡಿಯನ್ನು ಮಿಕ್ಸಿಮಾಡಿ ಹರಡಿ ಗಟ್ಟಿಗೊಳಿಸಿದ್ದಾರೆ. ಇದು ಮಳೆಗಾಲದಲ್ಲಿ ಹಾವಸೆ ಹಿಡಿದು ಜಾರದಂತೆ ಮಾಡುತ್ತದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಸೇತುವೆ ಬೇಡಿಕೆ: ಆಧುನಿಕ ತಂತ್ರಜ್ಞಾನದಲ್ಲಿ ದೇಶ ಎಷ್ಟೋ ಮುಂದುವರಿದಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಜನರಿಗೆ ಮೂಲ ಭೂತ ಸೌಕರ್ಯ ಒದಗಿಸುವಲ್ಲಿ ಸರಕಾರ ವಿಫಲವಾಗಿದೆ. ಆನೇಕ ಪ್ರಗತಿ ಕಾರ್ಯಗಳು ನಡೆದರೂ ಹಳ್ಳಿಗಳಲ್ಲಿ ಇಂತಹ ಕಾಲು ಸಂಕಗಳು, ನದಿ ದಾಟಲು ತೆಪ್ಪಗಳು ಅಲ್ಲಲ್ಲಿ ಕಂಡು ಬರುತ್ತಿದೆ. ಕುಕ್ಕಾವಿನಲ್ಲಿ ಕಳೆದ 25 ವರ್ಷಗಳಿಂದಲೂ ಪ್ರತಿ ವರ್ಷ ಇಂತಹ ಮರದ ಕಾಲು ಸಂಕವನ್ನು ಗ್ರಾಮಸ್ಥರು ನಿರ್ಮಿಸುತ್ತಾ ಬರುತ್ತಿದ್ದಾರೆ. ಇದು ಶಾಶ್ವತವಾದ ಪರಿಹಾರವಲ್ಲ. ಇಲ್ಲಿಗೆ ಕಿರುಸೇತುವೆಯೊಂದರ ಅಗತ್ಯವಿದೆ. ಸರಕಾರ, ಜನಪ್ರತಿನಿಧಿಗಳು ಇದರ ಬಗ್ಗೆ ಗಮನ ಹರಿಸಿ, ಪ್ರಥಮ ಆದ್ಯತೆಯಲ್ಲಿ ಇಲ್ಲಿಗೆ ಕಿರು ಸೇತುವೆಯೊಂದನ್ನು ನಿರ್ಮಿಸುವುದರ ಮೂಲಕ ಈ ಭಾಗದ ಜನರ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸುವಂತೆ ಈ ಭಾಗದ ನಾಗರಿಕರು ಒತ್ತಾಯಿಸಿದ್ದಾರೆ.
ಏಳುವರೆ ಹಳ್ಳಕ್ಕೆ ಸೇತುವೆ ಬೇಕೆಂಬುದು ಈ ಭಾಗದ ಜನರ ಹಲವು ವರ್ಷಗಳ ಬೇಡಿಕೆ. ಆದರೆ ಅದು ಇಂದಿಗೂ ಈಡೇರಿಲ್ಲ.ಇದಕ್ಕಾಗಿ ಶಾಸಕರು, ಸಂಸದರು, ಸಚಿವರು, ಅಧಿಕಾರಿಗಳಿಗೆ, ಸರಕಾರಕ್ಕೆ ಸಲ್ಲಿಸಿದ ಮನವಿಗಳಿಗೆ ಲೆಕ್ಕವಿಲ್ಲ. ಈ ಹಿಂದೆ ಇಲ್ಲಿ ಕಿರು ಸೇತುವೆ ನಿರ್ಮಾಣಕ್ಕೆ ಇಂಜಿನಿಯರ್ ಬಂದು ಸ್ಥಳ ತನಿಖೆ ನಡೆಸಿ ಸುಮಾರು ರೂ.40 ಲಕ್ಷದ ಎಸ್ಟೀಮೇಟ್ ಮಾಡಿ ನಬಾರ್ಡ್‌ಗೆ ಕಳುಹಿಸಲಾಗಿತ್ತು. ಆದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ವಾಸುದೇವ ರಾವ್ ಕಕ್ಕೆನೇಜಿ ತಿಳಿಸುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.