ತಾಲೂಕಿನಾದ್ಯಂತ ಅಡಿಕೆಗೆ ಕೊಳೆರೋಗ : ಬೆಳೆ ಕಳೆದುಕೊಂಡ ರೈತರು ಸಂಕಷ್ಟದಲ್ಲಿ.

ಬೆಳ್ತಂಗಡಿ: ಕಳೆದ ಒಂದು ತಿಂಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಅಡಿಕೆ ತೋಟಗಳಲ್ಲಿ ಜೌಷಧಿ ಸಿಂಪಡಣೆ ಮಾಡಲು ಸಾಧ್ಯವಾಗದೆ ಬೆಳ್ತಂಗಡಿ ತಾಲೂಕಿನಾದ್ಯಂತ ಅಡಿಕೆ ತೋಟಗಳಲ್ಲಿ ವ್ಯಾಪಕವಾಗಿ ಕೊಳೆರೋಗ ಬಾಧಿಸಿದ್ದು, ರೈತರು ಕಂಗೆಟ್ಟಿದ್ದಾರೆ.
ಮಳೆಗಾಲ ಆರಂಭವಾಗಿ ಎರಡು ತಿಂಗಳು ಕಳೆಯುತ್ತಾ ಬರುತ್ತಿದ್ದು, ಕಳೆದ ಒಂದು ತಿಂಗಳಿಂದನಿಂದ ಎಡೆಬಿಡದೆ ನಿರಂತರವಾಗಿ ಮಳೆ ಸುರಿದಿದೆ. ಕಳೆದ ವರ್ಷಕ್ಕಿಂತ ಈ ಬಾರಿ ದುಪ್ಪಟ್ಟು ಮಳೆ ಬಂದಿದ್ದರಿಂದ ಅಡಿಕೆ ತೋಟಗಳಲ್ಲಿ ಅಡಿಕೆ ಮರಗಳಿಗೆ ಬೋರ್ಡೋ ದ್ರಾವಣ ಸಿಂಪಡಿಸಲು ಅವಕಾಶವೇ ದೊರೆತ್ತಿಲ್ಲ. ಸಿಂಪಡಣೆಯಾಗಿ ಕಡಿಮೆ ಎಂದರೆ ಒಂದು ಗಂಟೆಯಾದರೂ ಮಳೆ ಬರಬಾರದು ಆದರೆ ಈ ಬಾರಿ ಕೆಲವು ಮಂದಿ ರೈತರು ಜೌಷಧಿ ಸಿಂಪಡಣೆ ಮಾಡಿದ್ದರೂ, ಕೆಲವೇ ಗಂಟೆಗಲಲ್ಲಿ ಮಳೆ ಬಂದಿದ್ದರಿಂದ ಯಾವುದೇ ಪ್ರಯೋಜನವಾಗಲಿಲ್ಲ.
ಇದರಿಂದಾಗಿ ತಾಲೂಕಿನಾದ್ಯಂತ ಅಡಿಕೆ ತೋಟಗಳಲ್ಲಿ ಅಡಿಕೆಗೆ ಕೊಳೆರೋಗ ಬಾಧಿಸಿದ್ದು, ಮರಗಳ ಬುಡದಲ್ಲಿ ರಾಶಿ, ರಾಶಿ ಅಡಿಕೆ ಬಿದ್ದಿರುವುದು ಕಂಡು ಬರುತ್ತಿದೆ. ಕಳೆದ ಒಂದರೆಡು ದಿನಗಳಿಂದ ಬಿಸಿಲು, ಮಳೆ ಬರುತ್ತಿದ್ದು, ಈಗ ಜಾಷಧಿ ಸಿಂಪಡಣೆ ಮಾಡಿದರೂ, ಈಗಾಗಲೇ ಕೊಳೆರೋಗ ಬಾಧಿಸಿರುವುದರಿಂದ ಅಡಿಕೆ ಉಳಿಯುವ ಯಾವುದೇ ಗ್ಯಾರಂಟಿ ಇಲ್ಲ ಎನ್ನುತ್ತಾರೆ ಅಡಿಕೆ ಬೆಳೆಗಾರರು.
ಈಗಾಗಲೇ ಅಡಿಕೆ ಧಾರಣೆ ಕುಸಿತದಿಂದ ಕೆಂಗೆಟ್ಟು ಹೋಗಿರುವ ರೈತರಿಗೆ ಕೊಳೆರೋಗ ಇನ್ನೊಂದು ಹೊಡೆತವಾಗಿದೆ. ಕೊಳೆರೋಗವನ್ನು ನಿಯಂತ್ರಿಸಲು ಅಡಿಕೆ ಬೆಳೆಗಾರರು ಹರಸಾಹಸ ಮಾಡುತ್ತಿದ್ದಾರೆ. ಸೂಕ್ಷಾಣು ಜೀವಿಗಳನ್ನು ನಿಯಂತ್ರಿಸಲು ಇಂದು ಮಾರುಕಟ್ಟೆಯಲ್ಲಿ ವಿವಿಧ ಜೌಷಧಿಗಳು ಪ್ರಚಲಿತದಲ್ಲಿದ್ದರೂ ಇವುಗಳನ್ನು ಬಳಕೆ ಮಾಡಿಯೂ ಹೆಚ್ಚಿನ ಪ್ರಯೋಜ ಕಂಡುಬರುತ್ತಿಲ್ಲ.
ಕೊಯ್ಯೂರು ಗ್ರಾಮದ ಲೋಕೇಶ್ ಪಾಂಡೀಲು ಹಾಗೂ ದೇರ್ಜಾಲು ಹೆಚ್. ನಝೀರ್ ಹುಸೈನ್ ಸೇರಿಂದತೆ ತಾಲೂಕಿನಲ್ಲಿ ನೂರಾರು ರೈತರ ತೋಟದಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಅಡಿಕೆ ಬೆಳೆಯನ್ನೇ ನಂಬಿ ತಾಲೂಕಿನಲ್ಲಿ ಆನೇಕ ಕುಟುಂಬಗಳು ಜೀವನವನ್ನು ನಡೆಸುತ್ತಿದ್ದು, ಬೆಳೆ ನಷ್ಟದಿಂದ ಸಂಕಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅಡಿಕೆ ಕೊಳೆರೋಗ ನಿಯಂತ್ರಣಕ್ಕೆ ಸಸ್ಯ ಸಂರಕ್ಷಣೆ ಜೌಷಧಿ ಖರೀದಿಗೆ ಸರಕಾರ ಶೇ 25 ಸಹಾಯಧನ ದೊರೆಯುತ್ತದೆ. ಗರಿಷ್ಠ 5 ಎಕ್ರೆಯವರೆಗಿನ ಕೃಷಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ತೋಟಗಾರಿಕಾ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಕೊಳೆರೋಗದಿಂದ ರೈತರಿಗೆ ಆಗಿರುವ ನಷ್ಟದ ಬಗ್ಗೆ ಸರಕಾರ ಸ್ಪಂದಿಸಬೇಕಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಸರಕಾರದ ಗಮನವನ್ನು ಸೆಳೆಯುವಂತೆ ಕೃಷಿಕರು ಒತ್ತಾಯಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.