ಆಗಸ್ಟ್ 9 ರ ಜೈಲ್ ಭರೋ ಚಳವಳಿ ಬಗ್ಗೆ ರೈತ ಸಂಘದಿಂದ ಪೂರ್ವಭಾವಿ ಸಭೆ.

ಬೆಳ್ತಂಗಡಿ: ಕೃಷಿ ತಜ್ಞ ಡಾ| ಎಂ.ಎಸ್ ಸ್ವಾಮಿನಾಥನ್ ಕೃಷಿ ಆಯೋಗದ ವರದಿಯನ್ನು ಜಾರಿ ಮಾಡಿದರೆ ಮಾತ್ರ ದೇಶದ ರೈತರ ಆತ್ಮಹತ್ಯೆ ಸೇರಿದಂತೆ ರೈತರ ಎಲ್ಲಾ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ವರದಿಯನ್ನು ನಿರ್ಲಕ್ಷಿಸುತ್ತಿದೆ ಎಂದು ಹಿರಿಯ ರೈತ- ಕಾರ್ಮಿಕ ಮುಖಂಡ ಹರಿದಾಸ್ ಎಸ್ ಎಂ ಹೇಳಿದರು.
ಆಗಸ್ಟ್.9 ರಂದು ಕೈಗೊಳ್ಳಲಿರುವ ರೈತರ ಜೈಲ್ ಭರೋ ಚಳವಳಿಯ ಪ್ರಯುಕ್ತ ಜು. 22 ರಂದು ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ನರೇಂದ್ರ ಮೋದಿ ಸರ್ಕಾರ ಅನುಸರಿಸುತ್ತಿರುವ ಆರ್ಥಿಕ ಧೋರಣೆಗಳಿಂದಾಗಿ ದೇಶದ ರೈತರು, ಶ್ರಮಜೀವಿಗಳ ಜೀವನ ಪರಿಸ್ಥಿತಿ ತೀರ ಹದಗೆಟ್ಟಿದೆ. ಬೆಲೆ ಏರಿಕೆ ಅದರಲ್ಲೂ ಆಹಾರವಸ್ತುಗಳ ಬೆಲೆ ಗಗನಕ್ಕೇರಿದೆ. ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಸಿಗುತ್ತಿಲ್ಲ. ಸ್ವಾಮಿನಾಥನ್ ಆಯೋಗದ ವರದಿಯನ್ನು ನಿರ್ಲಕ್ಷಿಸಿರುವುದೇ ಈ ಎಲ್ಲಾ ಸಮಸ್ಯೆಗಳಿಗೆ ಕಾರಣ ಎಂದರು.
ಸಭೆಯನ್ನು ಉದ್ದೇಶಿಸಿ ಶಿವಕುಮಾರ್ ಎಸ್ ಎಂ ಮಾತನಾಡಿ ರೈತರ, ಆದಿವಾಸಿಗಳ ಕೃಷಿ ಭೂಮಿಯನ್ನು ಬಲವಂತವಾಗಿ ಕಾರ್ಪೊರೇಟ್ ಗಳಿಗೆ ಹಾಗೂ ಭೂಮಾಫಿಯಾಗಳಿಗೆ ವಹಿಸಿಕೊಡಲಾಗುತ್ತಿದೆ. ಬಡ ರೈತರಿಗೆ ಸಾಲಗಳು ಲಭ್ಯವಾಗುತ್ತಿಲ್ಲ. ಇದರಿಂದಾಗಿ ರೈತರು ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ. ಕೇಂದ್ರದ ಆರ್ಥಿಕ ಧೋರಣೆಗಳು ರೈತ, ಕಾರ್ಮಿಕರ ವಿರೋಧಿಯಾದುದು ಎಂದರು.
ಸಭೆಯ ಅಧ್ಯಕ್ಷತೆಯನ್ನು ಸಿಪಿಐ(ಎಂ) ಮುಖಂಡ ವಸಂತ ನಡ ವಹಿಸಿದ್ದರು.
ವೇದಿಕೆಯಲ್ಲಿ ಮುಖಂಡರಾದ ರೋಹಿಣಿ ಪೆರಾಡಿ, ಜಯಂತಿ ನೆಲ್ಲಿಂಗೇರಿ, ಪ್ರಭಾಕರ್ ತೋಟತ್ತಾಡಿ, ಸುಕನ್ಯಾ ಹರಿದಾಸ್, ಸುಜೀತ್ ಅತ್ತಾಜೆ ಉಪಸ್ಥಿತರಿದ್ದರು. ಅನಿಲ್ ಎಂ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.