ಮದುವೆಗೆ ಆಮಂತ್ರಣ !

ಶಿವರಾಮ ಶಿಶಿಲ

ಪುರಾಣಕಾಲದಲ್ಲಿ ಜರಗುತ್ತಿದ್ದ ವಿವಿಧ ವಿವಾಹ ಪದ್ಧತಿಗಳಲ್ಲಿ ಸ್ವಯಂವರ ಪದ್ಧತಿಗೆ ಹೆಚ್ಚಿನ ಮಹತ್ವವಿತ್ತು. ಬೌದ್ಧಿಕ ಮತ್ತು ಭೌತಿಕ ಸ್ಪರ್ಧೆಗಳಲ್ಲಿ ಜಯಿಸಿದವನನ್ನು ವಧು ಹಾರಹಾಕಿ ವರಿಸುತ್ತಿದ್ದಳು. ಆದರೆ ಅಲ್ಲಿಯೂ ಶಕ್ತಿ ಸಾಮರ್ಥ್ಯಗಳಿದ್ದ ಅನಾಗರಿಕ ದೈತ್ಯರು, ನಯವಂಚಕ ಬುದ್ದಿಯ ದೇವಾನು ದೇವತೆಗಳು ಈ ಸ್ಪರ್ಧೆಗಳಲ್ಲಿ ಭಾಗವಹಿಸಿ, ನಾನಾ ವಿಧದ ಕೃತ್ರಿಮಗಳಿಂದ ಜಯಗಳಿಸಿ ವಧುವನ್ನು ತನ್ನವಳನ್ನಾಗಿಸುವ ಅನ್ಯಾಯ ಅಕ್ರಮಗಳೂ ಆರಂಭವಾದುವು. ನಳದಮಯಂತಿ ಸ್ವಯಂವರವು ಇದಕ್ಕೆ ನಿದರ್ಶನವಾಗಿದೆ. ತುಂಬಿದ ಸಭೆಯಲ್ಲಿ ದಮಯಂತಿ, ನಳಚಕ್ರವರ್ತಿಯ ರೂಪ ಲಾವಣ್ಯ, ಶಕ್ತಿ ಸಾಮರ್ಥ್ಯ, ಶೀಲ-ಸದ್ಗುಣ ಸಂಪನ್ನತೆಯಿಂದ ಆಕರ್ಷಿತಳಾಗಿ, ಆತನಿಗೆ ಹಾರ ಹಾಕಿ ವರಿಸಲು ಆಗಮಿಸಿದಾಗ, ಆಕೆಯ ಮೋಹಕ ಸೌಂದರ್ಯ ರಾಶಿಗೆ ಮನಸೋತು, ಆಕೆ ನಳಚಕ್ರವರ್ತಿಯನ್ನು ವರಿಸುವ ಇಂಗಿತವನ್ನು ಅರಿತುಕೊಂಡಿದ್ದ ದೇವಾನುದೇವತೆಗಳು, ಆಕೆಯನ್ನು ವರಿಸುವ ಸಲುವಾಗಿ, ನಳನ ರೂಪವನ್ನು ಧರಿಸಿ ಸಾಲಾಗಿ ಅವನೊಂದಿಗೆ ಕುಳಿತಿದ್ದರು. ಈಗ ದಮಯಂತಿ ಇಷ್ಟು ಮಂದಿ ನಳರನ್ನು ಕಂಡು, ನಿಜವಾದ ನಳನು ಯಾರೆಂದು ಊಹಿಸಲು ಸ್ವಲ್ಪ ಸಮಯ ವ್ಯಯಿಸಿದರೂ ಜಾಣೆಯಾದ ಆಕೆ, ನೆಲಸ್ಪರ್ಶಿಸದ ಪಾದಗಳುಳ್ಳ ಬಿಡುಗಣ್ಣ ನಳರೆಲ್ಲ ದೇವತೆಗಳೆಂದು ಅರಿತುಕೊಂಡು, ನೆಲಮೆಟ್ಟಿ ಕುಳಿತು ಕಣ್ಣರೆಪ್ಪೆ ಅಲುಗಾಡಿಸುತ್ತಿದ್ದ ನಳನ ಕಂಠಕ್ಕೆ ಹಾರಹಾಕಿ ಆತನನ್ನು ವರಿಸಿಬಿಟ್ಟಳು.
ಇತಿಹಾಸಕಾಲಕ್ಕೆ ಬಂದಾಗ, ರಾಜರಾಜರೊಡನೆ ಯುದ್ಧ ಸಂಭವಿಸಿ ಅದರಲ್ಲಿ ಸೋತ ರಾಜನು ತನ್ನ ಮಾನ ಪ್ರಾಣ, ರಾಜ್ಯವನ್ನು ಉಳಿಸಿಕೊಳ್ಳುವುದಕ್ಕಾಗಿ, ಗೆದ್ದ ರಾಜನಿಗೆ ತನ್ನ ಸುಪುತ್ರಿಯನ್ನೀ, ಸಹೋದರಿಯನ್ನೋ ಮದುವೆ ಮಾಡುವ ಮುಖಾಂತರ ಸಂಬಂಧವನ್ನು ಬೆಳೆಸುವ ಪದ್ಧತಿ ಜಾರಿಗೆ ಬಂತು. ಕ್ರಮೇಣ ವೈರಿಗಳಿಂದ ಬಂದೊದಗುವ ಈ ವಿಪತ್ತನ್ನು ನಿವಾರಿಸಲಿಕ್ಕಾಗಿ, ತೊಟ್ಟಿಲ ಹೆಣ್ಣು ಶಿಶುವನ್ನು ಬಲಿಷ್ಠ ಬಂಧುವಿನ ಸುಪುತ್ರನಿಗೆ ಮದುವೆ ಮಾಡಿಕೊಟ್ಟು ಹೆತ್ತವರು ಕೈತೊಳೆದುಕೊಳ್ಳತೊಡಗಿದರು. ಮುಂದಕ್ಕೆ ಅಪ್ರಾಪ್ತ ವಯಸ್ಸಿನ ವಧುವಿನ ಅಭಿಪ್ರಾಯಕ್ಕೆ ಬೆಲೆ ಕೊಡದೆ ನಾನಾ ಕಾರಣಗಳಿಗಾಗಿ ಹೆತ್ತವರು ಮದುವೆ ಮಾಡಿಸಿದ್ದೂ ಇದೆ. ಹೀಗಾಗಿ ವಧುವಿಗೆ ಈ ಕುರಿತ ಸ್ವಾತಂತ್ರ್ಯ ತಪ್ಪಿ ಹೋಗಿ ಹೆತ್ತವರು ಒಪ್ಪಿದ (ಆತ ವೃದ್ಧನಿರಲಿ, ಸಂಸ್ಕಾರಹೀನನಿರಲಿ, ಕುರೂಪಿಯಾಗಿರಲಿ) ವರನನ್ನು ವರಿಸಲೇಬೇಕಾದಂತಹ ಪರಿಸ್ಥಿತಿ ಎರುರಾಯಿತು. ಹೆತ್ತವರು ಎದುರಿಸುತ್ತಿದ್ದ ವಿವಿಧ ಸಮಸ್ಯೆಗಳ ನಿವಾರಣೆಗಾಗಿ ಇಂತಹ ಪದ್ಧತಿ ಸಾಮಾನ್ಯವಾಗಿತ್ತು. (ಎಲ್ಲ ವಿವಾಹಗಳು ಇದೇ ರೀತಿ ನಡೆಯುತ್ತಿರಲಿಲ್ಲವಾದರೂ, ಕೆಲವು ವಿವಾಹಗಳು ಈ ರೀತಿ ನಡೆದೇ ತೀರುತ್ತಿತ್ತು) ವಧುವನ್ನು ವಿಚಾರಿಸದೆ, ತಮಗೆ ಖುಶಿ ಬಂದ ವರನನ್ನು ಆರಿಸಿ ವಿವಾಹ ಮಾಡುವ ಸಂಪ್ರದಾಯ ತೀರ ಇತ್ತೀಚಿನವರೆಗೆ ಎಂದರೆ 40-50 ವರ್ಷಗಳಿಗಿಂತ ಹಿಂದಿನ ತನಕ ನಡೆದೇ ನಡೆದಿತ್ತು. ಆದರೆ ಅಂದಾಜು 40 ವರ್ಷಗಳಿಂದ ಈ ಸಂಪ್ರದಾಯಕ್ಕೆ ಕಡಿವಾಣ ಬಿದ್ದು, ವಿವಾಹವಾಗಲು ವಧುವಿಗೆ 18 ವರ್ಷ ಮತ್ತು ವರನಿಗೆ 21 ವರ್ಷ ತುಂಬಿರಬೇಕೆಂಬ ಕಾನೂನು ಬಂದುದರಿಂದ ಪ್ರಾಯಪ್ರಬುದ್ಧರಾದ ವಧೂವರರ ಅಭಿಪ್ರಾಯಕ್ಕೂ ಮಹತ್ವ ಬಂತು. ಈಗ ವಧೂವರರು ಪರಸ್ಪರ ನೋಡಿ, ಅವರ ವಿವಿಧ ಅಭಿರುಚಿ, ಅರ್ಹತೆ, ಸಾಧನೆ, ವೃತ್ತಿ ಇತ್ಯಾದಿಗಳ ಕುರಿತು ತಿಳಿದುಕೊಂಡು, ಇಂತಹ ವಿಚಾರವಿನಿಮಯದಿಂದ ಸ್ವಭಾವವನ್ನೂ ಅರ್ಥೈಸಿಕೊಂಡು ಪೂರ್ಣ ಒಪ್ಪಿಗೆ ನೀಡಿದ ಬಳಿಕವೇ ನಿಶ್ಚಿತಾರ್ಥ ವಿಧಿ ನೆರವೇರುತ್ತದೆ. ಆ ದಿನದಿಂದಲೇ ಅವರು ಒಂದು ರೀತಿಯಲ್ಲಿ ಮುಕ್ಕಾಲುಪಾಲು ವಧೂವರರೇ ಆಗಿಬಿಡುತ್ತಾರೆ!
ಹಿಂದೆಲ್ಲ ಎಳೆಯ ಪ್ರಾಯದ ವಧೂವರರಿಗೆ ಎಲ್ಲರೆದುರಿಗೆ ಪರಸ್ಪರ ಮಾತನಾಡಲೂ ನಾಚಿಕೆ ಅಡ್ಡಬರುತ್ತಿತ್ತು. ವಧೂ ಪರೀಕ್ಷೆಗೆ ಹೋದ ವರನಿಗೆ ಆಕೆಯನ್ನು ನೋಡಲೂ ಮುಜುಗರವಾಗುತ್ತಿತ್ತು. ಇದಕ್ಕೆ ಕಾರಣ ಆತನ ಎಳೆಯ ಪ್ರಾಯ ಮತ್ತು ಆಗಿನ ಕೌಟುಂಬಿಕ ಸನ್ನಿವೇಶ! ಇದರೊಂದಿಗೆ, ಹೆತ್ತವರು ನಿಕಟ ಸಂಬಂಧಿಕರೊಳಗೆ ವಧೂವರರನ್ನು ಆರಿಸಿ, ಪರಸ್ಪರ ಹೆತ್ತವರೇ ನಿರ್ಧರಿಸಿ, ವಧೂವರರ ಒಪ್ಪಿಗೆ ಪಡೆಯದೆ, ತಮ್ಮ ಇಚ್ಛೆಗನುಸಾರ ಮದುವೆ ಮಾಡಿಸಿದ್ದೂ ಇದೆ, ಇಂತಹ ಮದುವೆ ಪ್ರಕರಣ ನನ್ನ ಜೀವನದಲ್ಲೂ ನಡೆದು ಹೋಗಿದೆ! ಇದು ಜರಗಿದುದು 1961 ನೇ ಇಸವಿಯ ದಶಂಬರ ತಿಂಗಳಲ್ಲಿ! ಅದಕ್ಕೆ ಮೂರು ದಿನಗಳ ಮೊದಲು ಶಿಕ್ಷಕರ ತರಬೇತಿಯ ಅಂಗವಾದ ಪ್ರಾಕ್ಟಿಕಲ್ ಟೀಚಿಂಗಿಗೆ ಉಜಿರೆಯ ಜನಾರ್ದನ ಸ್ವಾಮಿ ಹಿರಿಯ ಪ್ರಾಥಮಿಕ ಶಾಲೆಗೆ ಹೋಗಿದ್ದೆ. ಪ್ರಾಕ್ಟಿಕಲ್ ಟೀಚಿಂಗ್ ಕ್ಲಾಸ್ ಮುಗಿಸಿ ಶಾಲೆಯ ಜಗಲಿಗೆ ಬಂದಾಗ, ಅಲ್ಲಿ ನನಗಾಗಿ ಅರ್ಧ ಗಂಟೆಯಿಂದ ಕಾಯುತ್ತಿದ್ದ ಅಣ್ಣನವರು ಬಂದು ಮದುವೆಯ ಆಮಂತ್ರಣ ಪತ್ರಿಕೆಯನ್ನು ನನಗೆ ಕೊಟ್ಟು ಇದನ್ನು ಬಿಡಿಸಿ ಓದು ಎಂದರು. ಅಂತೆಯೇ ಅದನ್ನು ಬಿಡಿಸಿ ಗಮನವಿಟ್ಟು ಓದಿದೆ! ಅದರಲ್ಲಿ ಅಣ್ಣನಿಗೂ, ನನಗೂ ನಮ್ಮ ಸೋದರ ಮಾವನ ಹುಡುಗಿಯರೊಂದಿಗೆ ಇಂಥ ದಿನ, ಇಂಥ ಶುಭ ಮುಹೂರ್ತದಲ್ಲಿ ಮದುವೆ ಎಂದು ಪ್ರಕಟವಾಗಿತ್ತು!
ವಿಶೇಷವೆಂದರೆ ನನಗೆ ಆ ಸುದ್ದಿ ತಿಳಿದುದು ಆ ಆಮಂತ್ರಣ ಪತ್ರಿಕೆಯಿಂದಲೆ! ಇದೆಲ್ಲ ನನ್ನಮ್ಮನ ಆತುರದ ಸಾಹಸಕಾರ್ಯವಾಗಿತ್ತು. ಹೇಗಾದರೂ ಮಾಡಿ, ತನ್ನ ಸಹೋದರನ ಮಕ್ಕಳನ್ನು ನಮಗೆ ಮದುವೆಮಾಡಿಬಿಡಬೇಕೆಂಬ ಬಹುದಿನಗಳ ಹಂಬಲವಿತ್ತು. ನನಗಾಗ 18 ವರ್ಷ ಪ್ರಾಯ! ನನ್ನಲ್ಲಿ ಈ ಕುರಿತು ವಿಚಾರಿಸಿದರೆ, ನಾನಿದಕ್ಕೆ ಸುತರಾಂ ಒಪ್ಪುತ್ತಿರಲಿಲ್ಲ. ಇಷ್ಟು ಬೇಗನೆ ಮದುವೆ ಮಾಡಿಸುವುದಕ್ಕೆ ಅಣ್ಣನೂ ಒಡಂಬಡದೆ, ನನ್ನ ಪರವಾಗಿ ಅಮ್ಮನಲ್ಲಿ ಆತ ಎಷ್ಟೇ ವಾದಿಸಿದರೂ, ಹಠಮಾರಿ ಅಮ್ಮ ಅದಕ್ಕೆ ಸೊಪ್ಪು ಹಾಕದೆ, ಅಣ್ಣನನ್ನು ಮಾವನಲ್ಲಿಗೆ ಒತ್ತಾಯಪೂರ್ವಕ ಕರೆದುಕೊಂಡು ಹೋಗಿ ಮದುವೆ ನಿಶ್ಚಿತಾರ್ಥ ಮುಗಿಸಿ ಆಮಂತ್ರಣ ಪತ್ರಿಕೆ ಪ್ರಿಂಟ್ ಮಾಡಿಸಿಯೇ ಬಿಟ್ಟರು.
ನನ್ನ ಎಳವೆಯಲ್ಲಿಯೇ ನಾವು ಕಾಸರಗೋಡಿನಿಂದ ವಲಸೆ ಬಂದ ಕಾರಣ ಆ ಸೋದರ ಮಾವನನ್ನಾಗಲೀ ಆ ಹುಡುಗಿಯನ್ನಾಗಲೀ ಮದುವೆ ದಿನದ ತನಕ ನಾನು ನೋಡಿಯೇ ಇರಲಿಲ್ಲ. ಹೀಗಾಗಿ ಅಣ್ಣ ಕೊಟ್ಟ ಆಮಂತ್ರಣ ಪತ್ರಿಕೆಯನ್ನು ಓದಿ, ಮುಜುಗರಪಟ್ಟುಕೊಂಡ ನನ್ನನ್ನು ಅಣ್ಣ ಹಲವಾರು ಮಾತುಗಳಿಂದ ಸಾಂತ್ವನಪಡಿಸಿ, ಸಹಪಾಠಿಗಳಿಗೂ, ಗುರುವೃಂದಕ್ಕೂ ವಿತರಿಸಲು ಬೇಕಾಗುವಷ್ಟು ಆಮಂತ್ರಣಪತ್ರಿಕೆಗಳನ್ನು ನನಗೆ ಕೊಟ್ಟು ಮರುದಿನದಿಂದಲೇ ರಜೆ ಪಡೆದು ಬರಬೇಕೆಂದು ಆದೇಶಿಸಿ ಹೊರಟುಹೋದರು.
ಈ ಅನಿರೀಕ್ಷಿತ ಘಟನೆಯಿಂದ ನಾನು ಕಂಗಾಲಾಗಿ ಹೋದೆ. ಭಾರವಾದ ಮನಸ್ಸಿನಿಂದ ತರಬೇತಿ ಸಂಸ್ಥೆಯ ಸಿದ್ಧವನ ವಸತಿಗೃಹ ಸೇರಿದೆ. ಈ ವಿಚಾರವನ್ನು ಸಹಪಾಠಿಗಳಿಗೆ ತಿಳಿಸಲೂ ನಾಚಿಕೆ. ಗುರುಗಳಿಗೆ ಆಮಂತ್ರಣ ನೀಡಿ ರಜೆ ಪಡೆಯಲೇಬೇಕಾದ ಸಂದಿಗ್ಧ ಪರಿಸ್ಥಿತಿ. ಏನು ಮಾಡುವುದೆಂದೇ ಅರಿಯದಾದೆ. ಕೊನೆಗೆ ಗಟ್ಟಿ ಮನಸ್ಸು ಮಾಡಿ ನನ್ನ ಆತ್ಮೀಯ ಹಿತೈಷಿ ಸಹಪಾಠಿಗಳಾದ ಕೊಕ್ಕಡದ ಶಿವರಾಮ ತೋಡ್ತಿಲ್ಲಾಯರಿಗೂ, ನಾರಾಯಣ ಶಬರಾಯರಿಗೂ ಈ ವಿವರವನ್ನು ಗುಟ್ಟಾಗಿ ತಿಳಿಸಿದಾಗ, ಅವರು ಬಹಳ ಹರ್ಷಗೊಂಡು, ಶಿವರಾಮಣ್ಣ ಇದರಲ್ಲಿ ಮುಜುಗರ ಪಡುವಂತಹದು ಏನಿದೆ? ಗುರುಗಳಲ್ಲಿಗೆ ಆಮಂತ್ರಣ ನೀಡಲು ನಾವೂ ಬರುತ್ತೇವೆ. ಈಗಲೇ ಹೋಗಿಬಿಡುವ ಎಂದು ಧೈರ್‍ಯತುಂಬಿ ನನ್ನನ್ನು ಸಾಗಿಸಿದರು. ಮುಖ್ಯ ಗುರುಗಳಾದ ಶ್ರೀರಾಮ ಮೋಹನರಾಯರಿಗೂ, ಉಪ ಮುಖ್ಯಗುರು ಶ್ರೀ ರಾಜಾರಾಮ ರಾಯರಿಗೂ ಆಮಂತ್ರಣ ಪತ್ರಿಕೆ ನೀಡಿದಾಗ ಅವರು ಸಂತೋಷದಿಂದ ಹರಸಿ, ರಜೆನೀಡಿ ಕಳುಹಿಸಿದರು. ಮೊದಲೇ ಮಾಡಿದ ಒಪ್ಪಂದದಂತೆ ನಾನು ಮರುದಿನ ಮನೆಗೆ ಹೊರಟು ಬಳಿಕ ಸಹಪಾಠಿಗಳಿಗೆ ಆಮಂತ್ರಣ ಪತ್ರಿಕೆ ವಿತರಿಸಲಾಗಿತು.
ನಿಗದಿತ ದಿನದ ನಿಶ್ಚಿತ ಮುಹೂರ್ತಕ್ಕೆ ನಮ್ಮ ಮದುವೆಯೂ ನಡೆದುಹೋಯಿತು. ಆಗ ವಾಹನ ಸೌಕರ್ಯವಿಲ್ಲದ ಕಾರಣ, ಗುರುಗಳೀರ್‍ವರನ್ನು ಬೈಸಿಕಲಿನಲ್ಲಿ ಸಾಗಿಸಿ ತೋಡ್ತಿಲ್ಲಾಯರೂ, ಶಬರಾಯರೂ ಮದುವೆ ಸಮಾರಂಭಕ್ಕೆ ತಲಪಿಸಿಬಿಟ್ಟರು. ಸಹಪಾಠಿಗಳೆಲ್ಲರ ಪರವಾಗಿ ವಿವಿಧ ಉಡುಗೊರೆಗಳನ್ನು ತಂದೊಪ್ಪಿಸಿ, ಶುಭವನ್ನು ಹಾರೈಸಿದರು. ಇಂತಹ ಆತ್ಮೀಯ ಹಿತೈಷಿಗಳಾದ ತೋಡ್ತಿಲ್ಲಾಯರನ್ನೂ ಶಬರಾಯರನ್ನೂ ಎಂದೆಂದೂ ನಾನು ಮರೆಯುವಂತಿಲ್ಲ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.