ಅಂಗನವಾಡಿ ಮಿನಿ ಆದರೆ ಸಮಸ್ಯೆ ಬಿಗ್: ಕೆಲಸದೊತ್ತಡದ ಸುಳಿಯಲ್ಲಿ ಮಿನಿ ಅಂಗನವಾಡಿ ಕಾರ್ಯಕರ್ತರು.

ಸ್ಥಳೀಯವಾಗಿ ಶಾಲಾ ಪೂರ್ವ ಶಿಕ್ಷಣ ಪಡೆಯಲು ಅರ್ಹವಾಗಿರುವ ಮಕ್ಕಳ ಸಂಖ್ಯೆ ಜಾಸ್ತಿ ಇರುವ ಗ್ರಾಮದ ಅಂಗನವಾಡಿ ಕೇಂದ್ರಕ್ಕಿಂತ ದೂರ ಇರುವ ಪ್ರದೇಶದಲ್ಲಿ ಮಿನಿ ಅಂಗನವಾಡಿ ಕೇಂದ್ರ ತೆರೆದು ಕೆಲಸಕಾರ್ಯ ಆರಂಭಿಸುವಂತೆ ಜನರ ಆಶೋತ್ತರಗಳಿಗೆ ಸ್ಪಂದನೆಗಾಗಿ ಎಂಬ ಮಹತ್ವದ ಉದ್ಧೇಶದಿಂದ ತೆರೆಯಲಾಗಿರುವ ತಾಲೂಕಿನ ಒಟ್ಟು ೧೮ ಮಿನಿ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತರ ಸ್ಥಿತಿ ಈಗ ದೇವರಿಗೂ ಪ್ರೀತಿ ಎಂಬಂತಾಗಿದೆ.
ಅತ್ತ ಪೂರ್ಣ ಪ್ರಮಾಣದ ಅಂಗನವಾಡಿ ಕಾರ್ಯಕರ್ತರಷ್ಟು ಸಂಬಳವೂ ಇಲ್ಲ, ಇತ್ತ ಅಂಗನವಾಡಿ ಸಹಾಯಕಿಯರ ಸಹಾಯವೂ ಇಲ್ಲದೆ ಗಣತಿ, ಪಲ್ಸ್‌ಪೋಲಿಯೋ, ಮಾತೃಪೂರ್ಣ, ಮಾತೃವಂದನ, ಶಾಲಾ ಪೂರ್ವ ಶಿಕ್ಷಣ, ಪೂರಕ ಆಹಾರ, ಐಸಿಡಿಎಸ್‌ನ ಎಲ್ಲಾ ಸೇವೆಗಳು ಹೀಗೆ ಪೂರ್ಣ ಪ್ರಮಾಣದ ಕೇಂದ್ರಗಳ ಕಾರ್ಯಕರ್ತರಿಗೆ ಇಲಾಖೆ ವಹಿಸುವ ಎಲ್ಲಾ ಕೆಲಸ ಕಾರ್ಯಗಳ ಹೊಣೆಯನ್ನೂ ಅವರ ತಲೆಗೆ ಕಟ್ಟಿ ಅತ್ತ ಬಿಟ್ಟು ಹೋಗಲೂ ಆಗದೆ, ಇತ್ತ ಕೆಲಸ ನೆಚ್ಚಿಕೊಂಡು ತೃಪ್ತಿಯಿಂದ ಇರಲೂ ಆಗದೆ ಅಡಕತ್ತರಿಯಲ್ಲಿ ಸಿಲುಕಿ ಒದ್ದಾಡುವಂತಹಾ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ನಡುವೆ ಕೆಲವೆಡೆ ಅಂಗನವಾಡಿ ಸಹಾಯಕಿಯರಾಗಿ ತುಂಬು ಸೇವೆ ಮಾಡಿದವರನ್ನು
ಜೇಷ್ಠತೆಯ ಆಧಾರದಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಪದೋನ್ನತಿಗೊಳಿಸಲಾಗುತ್ತಿದ್ದು, ಅಲ್ಲೂ ಕೂಡ ಮಿನಿ ಅಂಗನವಾಡಿ ಕೇಂದ್ರದ ಕಾರ್ಯಕರ್ತರನ್ನು ಪರಿಗಣನೆಗೆ ತೆಗೆದುಕೊಳ್ಳದೆ ಇರುವುದರಿಂದ ಅವರಿಗಾಗುತ್ತಿರುವ ಅನ್ಯಾಯಕ್ಕೆ ನ್ಯಾಯವೇ ಇಲ್ಲದಂತಾಗಿದೆ. ೨೦೧೦-೧೧ ರಲ್ಲಿ ಜಾರಿಗೆ ಬಂದಿರುವ ಮಿನಿ ಅಂಗನವಾಡಿ ಕೇಂದ್ರಗಲ್ಲಿ ಇರುವ ಕಾರ್ಯಕರ್ತೆಯರನ್ನು ಇಲಾಖೆ ನಿಯಮಾನುಸಾರ ಪಡೆದುಕೊಂಡಿದೆ. ಅವರಿಗೆ ಅಂಗನವಾಡಿ ಸಹಾಯಕರಿಗೆ ನೀಡುವ ಸಂಬಳ ನೀಡಲಾಗುತ್ತಿದೆ. ಪ್ರಾರಂಭದಲ್ಲಿ ಮಕ್ಕಳಿಗೆ ಆಹಾರ ವಗೈರೆ ಪಡೆದುಕೊಳ್ಳಲು ಅನುಕೂಲವಾಗುವ ದೃಷ್ಟಿಯಲ್ಲಿ ಈ ಕೇಂದ್ರಗಳನ್ನು ತೆರೆಯಲಾಗಿತ್ತು. ಆದರೆ ಇಂದು ಇಲ್ಲಿರುವ ಮಕ್ಕಳ ಸಂಖ್ಯೆ ನೋಡಿದರೆ ಪೂರ್ಣಕಾಲಿಕ ಅಂಗನವಾಡಿ ಕೇಂದ್ರಗಳಿಗಿಂತ ಹೆಚ್ಚು ಮಕ್ಕಳು ಮಿನಿ ಅಂಗನವಾಡಿ ಕೇಂದ್ರಗಳ ಲ್ಲಿದ್ದಾರೆ. ಅಲ್ಲಿ ಮಕ್ಕಳಿಗೆ ಬೇಕಾಗುವ ಎಲ್ಲಾ ಸೌಲಭ್ಯಗಳನ್ನೂ ಇಲ್ಲಿರುವ ಕಾರ್ಯಕರ್ತರು ಪ್ರಾಮಾಣಿಕವಾಗಿ ನಿಷ್ಟೆಯಿಂದ ಮಾಡುತ್ತಾ ಬರುತ್ತಿದ್ದಾರೆ. ಕಟ್ಟಡಗಳು ಮತ್ತು ಇತರ ವ್ಯವಸ್ಥೆ ಮಾಡಿಕೊಂಡಿರುವ ಇಲಾಖೆ ಅಲ್ಲಿರುವ ಕಾರ್ಯಕರ್ತರಿಗೆ ಆಗುತ್ತಿರುವ ಸಮಸ್ಯೆ ಗಳ ಬಗ್ಗೆ ಯತಾರ್ಥ ಅರಿತುಕೊಂಡಿದೆ ಯಾದರೂ ಅವರಿಗೆ ಸೂಕ್ತ ಮಾನವಹಕ್ಕು ಮತ್ತು ನ್ಯಾಯ ಒದಗಿಸದೇ ದಿವ್ಯಮೌನಕ್ಕೆ ಶರಣಾಗಿರುವುದು ಅವರ ಜಾಣಕು ರುಡುತನವನ್ನು ಪ್ರದರ್ಶಿಸುತ್ತಿದೆ.
ಮನವಿಗಳ ಮೇಲೆ ಮನವಿ ನೀಡಿದರೂ ಪರಿಹಾರ ಶೂನ್ಯ: ಈಗಾಗಲೇ ಮಿನಿ ಅಂಗನವಾಡಿ ಕೇಂದ್ರದ ಕಾರ್ಯಕರ್ತರು ಇಲಾಖೆಯ ವಿರುದ್ಧವಲ್ಲದಿದ್ದರೂ ನಮಗೆ ಸೂಕ್ತ ನ್ಯಾಯ ಕೊಡಿ ಎಂದು ಸರಕಾರದ ಮಟ್ಟದಲ್ಲಿ ಮನವಿಗಳಮೇಲೆ ಮನವಿಗಳನ್ನು ನೀಡುತ್ತಾ ಬರುತ್ತಿದ್ದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಕ್ರೀಯಿಸುತ್ತಾರೆ. ಇತ್ತೀಚೆಗೆ ಸಂಸದರಿಂದ ಸಾರ್ವಜನಿಕ ಅಹವಾಲು ಸ್ವೀಕಾರ ಸಂದರ್ಭ ಕೂಡ ಮಿನಿ ಅಂಗನವಾಡಿ ಕಾರ್ಯಕರ್ತರಾದ ಲೋಕಮ್ಮ ದೊಂಪದಪಲ್ಕೆ, ಮಣಿಲದ ಗೀತಾ ಮತ್ತು ಬಲ್ಯಾರಬೆಟ್ಟು ಭವಾನಿ ಅವರು ಮನವಿ ನೀಡಿದ್ದಾರೆ. ನಮ್ಮ ಕೇಂದ್ರಗಳಲ್ಲಿ ಸಹಾಯಕಿರಿಲ್ಲದೇ ಇರುವುದರಿಂದ ನಾವು ಕೇಂದ್ರ ಬಿಟ್ಟು ಎಲ್ಲೂ ಹೋಗುವಂತಿಲ್ಲ. ಬೇರೆ ಯಾರನ್ನಾದರೂ ನಿಲ್ಲಿಸಿ ಹೋದರೂ ಕೂಡ ಏನಾದರೂ ಸಂಭವಿಸಿದಲ್ಲಿ ನಾವೇ ಹೊಣೆಗಾರರಾಗುತ್ತೇವೆ. ಆದ್ದರಿಂದ ನಮ್ಮ ಸಮಸ್ಯೆಯನ್ನು ಸರಕಾರ ಮನದಟ್ಟು ಮಾಡಿಕೊಂಡು ಸೂಕ್ತ ಪರಿವರ್ತಿತ ನಿಯಮ ಜಾರಿಗೆ ತರಬೇಕು ಎಂದು ಅವರು ಆಗ್ರಹಿಸುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.