ತರಗತಿ ಏಳು – ಮಕ್ಕಳು ಮೂರು…..!

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
ಶಿವರಾಮ ಶಿಶಿಲ

ಪ್ರಕೃತ ಬೇಸಗೆಯ ರಜೆ ಕಳೆದು ಹೊಸ ಹುರುಪಿನೊಂದಿಗೆ ಶಾಲೆಗೆ ಹಾಜರಾಗಿರುವ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಆರಂಭವಾಗಿದೆ. ಶಾಲಾರಂಭದ ದಿನ ಇವರನ್ನು ಶಿಕ್ಷಕವೃಂದ ಮತ್ತು ಶಾಲಾ ಶೈಕ್ಷಣಿಕ ಅಭಿವೃದ್ಧಿ ಸಮಿತಿಯವರು ಅತ್ಯಂತ ಸಂಭ್ರಮದಿಂದ ಬೇಂಡು ವಾಲಗದೊಂದಿಗೆ ಸ್ವಾಗತಿಸಿ ಪಾಯಸದೂಟವನ್ನು ನೀಡಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯ! ಕೇವಲ ದಶ ವರ್ಷಗಳ ಈಚೆಗಿನ ಉತ್ತಮ ಸಂಪ್ರದಾಯವಿದು.
ಹಿಂದೆಲ್ಲ ಹಳ್ಳಿಗಳಲ್ಲಿ ಸರ್ಕಾರಿ ಯಾ ಅನುದಾನಿತ ಶಾಲೆಗಳ ಸಂಖ್ಯೆ ಅತ್ಯಂತ ವಿರಲವಾಗಿತ್ತು. ಗ್ರಾಮದ ಕೇಂದ್ರ ಸ್ಥಳದಲ್ಲಿ ಒಂದು ಹಿರಿಯ ಪ್ರಾಥಮಿಕ ಶಾಲೆ ಇದ್ದು, ಹಳ್ಳಿಯ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ಏಳೆಂಟು ಕಿಲೊ ಮೀಟರ್ ದೂರದಿಂದ ನಡೆದೇ ಬಂದು ಕಲಿಯುತ್ತಿದ್ದರು. ಮಳೆಗಾಲದಲ್ಲಂತೂ ಆ ಮಕ್ಕಳ ಬವಣೆ ಹೇಳತೀರದ್ದಾಗಿತ್ತು. ಹೆಗಲಲ್ಲಿ ಪುಸ್ತಕದ ಚೀಲ, ಒಂದು ಕೈಯಲ್ಲಿ ಕೊಡೆ, ಇನ್ನೊಂದರಲ್ಲಿ ಬುತ್ತಿ ಪಾತ್ರ ಹಿಡಿದು, ತೋಡು-ಹಳ್ಳಗಳನ್ನು ತೆಪ್ಪ-ದೋಣಿಗಳಿಂದ ದಾಟಿ ಬರುವುದು, ಹಾವಸೆಯಿಂದ ಜಾರುತ್ತಿರುವ ಕಾಲುಸಂಕವನ್ನು ಅತ್ಯಂತ ಜಾಗರೂಕತೆಯಿಂದ ಹಾದು ಬರುವುದು, ಗಾಳಿ ಮಳೆಯಿಂದ ಒದ್ದೆ ಮುದ್ದೆಯಾಗುವುದು. ಇವೆಲ್ಲ ಸರ್ವಸಾಮಾನ್ಯವಾಗಿತ್ತು. ಆದರೂ ಹಾಗೆ ಬರುತ್ತಿದ್ದ ಮಕ್ಕಳು ಆ ಸಮಸ್ಯೆಗಳನ್ನು ಲೆಕ್ಕಿಸದೆ, ಅತ್ಯಂತ ಮುತುವರ್ಜಿಯಿಂದ ಕಲಿತುಬಿಡುತ್ತಿದ್ದರು. ಆಗೆಲ್ಲ ಶಿಕ್ಷಕರು ನಿಜವಾದ ಅರ್ಥದಲ್ಲಿ ಅಧ್ಯಾಪಕರಾಗಿದ್ದು ಶಾಲಾ ಪಠ್ಯ-ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡು ವಿದ್ಯಾರ್ಥಿಗಳ ಪುರೋಭಿವೃದ್ಧಿಗೆ ಶ್ರಮಿಸುತ್ತಿದ್ದರು, ಕಾರಣ ಈಗಿನಂತೆ ಅವರಿಗೆ ವಿವಿಧ ಗಣತಿ ಕಾರ್ಯ ಹಾಗೂ ಇನ್ನಿತರ ಸರ್ಕಾರಿ ಚಾಕರಿಗಳು ಆಗ ಅಷ್ಟಾಗಿ ಇರುತ್ತಿರಲಿಲ್ಲ.
ಕ್ರಮೇಣ ಗ್ರಾಮಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದಂತೆಲ್ಲ ಅಲ್ಲಲ್ಲಿ ಕಿರಿಯ ಪ್ರಾಥಮಿಕ ಶಾಲೆಗಳು ಪ್ರಾರಂಭಗೊಂಡವು. ಇದರಿಂದಾಗಿ ಕಿರಿಯ ಮಕ್ಕಳಿಗೆ ಇಂತಹ ಸಮೀಪದ ಶಾಲೆಗಳಿಗೆ ಬಂದು ಕಲಿಯಲು ಅನುಕೂಲವಾದರೂ, ಐದು ತರಗತಿಗಳಿಗೆ ಒಬ್ಬರು ಯಾ ಇಬ್ಬರು ಅಧ್ಯಾಪಕರು ಶಿಕ್ಷಣ ಒದಗಿಸಬೇಕಾದ ಅನಿವಾರ್ಯತೆ ಒದಗಿತು, ವಿವಿಧ ಖಾನೇಶುಮಾರಿಗಳು, ಕಮ್ಮಟ-ತರಬೇತಿಗಳು, ಮೀಟಿಂಗ್‌ಗಳು ಶಾಲಾ ದಿನಗಳನ್ನು ಕಬಳಿಸತೊಡಗಿದುದರಿಂದ ಪಾಠ ಪ್ರವಚನಗಳು ಸರಿಯಾಗಿ ನಡೆಯದೆ ಶಿಕ್ಷಣದ ಗುಣಮಟ್ಟ ಕುಸಿಯತೊಡಗಿತು. ಸಿಲೆಬಸುಗಳಲ್ಲಿ ಕ್ಲಿಷ್ಟಕರ ವಿಷಯಗಳು ಸೇರಿಕೊಂಡು, ಶೈಕ್ಷಣಿಕವಾಗಿ ವಿವಿಧ ಪ್ರಯೋಗಗಳು ನಡೆದು ಶಿಕ್ಷಕರೂ, ವಿದ್ಯಾರ್ಥಿಗಳು ಅವುಗಳ ಬಲಿಪಶುಗಳಾದರು. ಇವೆಲ್ಲ ಪ್ರಯೋಗಗಳು ಸರ್ಕಾರಿ ಶಾಲಾ ಶಿಕ್ಷಕರಿಗೆ ಮಾತ್ರ ಅನ್ವಯಿಸಿದುದರಿಂದ ಅಲ್ಲಿ ಪಾಠ ಪ್ರವಚನಗಳಿಗೆ ಅಡಚಣೆಯುಂಟಾದಾಗ ಹೆತ್ತವರು ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸತೊಡಗಿದರು.
ಇದರಿಂದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆ ದಿನೇ ದಿನೇ ಕುಸಿಯತೊಡಗಿತು. ಈ ಸಂದರ್ಭವನ್ನು ಉಪಯೋಗಿಸಿಕೊಂಡು ಖಾಸಗಿ ಶಾಲೆಗಳು ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ಎಲ್ಲಾ ಉಪಾಯಗಳನ್ನು ಅನುಷ್ಠಾನಗೊಳಿಸಿ, ಎಲ್‌ಕೆಜಿ, ಯುಕೆಜಿ ಯಿಂದಲೇ ಆಂಗ್ಲ ಮಾಧ್ಯಮದ ಶಿಕ್ಷಣವನ್ನು ನೀಡತೊಡಗಿದುದರಿಂದ, ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಿಗೆ ಬಲವಾದ ಹೊಡೆತ ಬಿದ್ದಿತು!.
ಈಗ ಸರ್ಕಾರಿ ಶಾಲೆಗಳಿಗೆ ಬಿಸಿಯೂಟ, ಬಿಸಿ ಹಾಲು, ಬೈಸಿಕಲು, ಪಠ್ಯ ಪುಸ್ತಕ, ಸಮವಸ್ತ್ರ ಮುಂತಾದ ಸಕಲ ಸವಲತ್ತುಗಳನ್ನು ಸರ್ಕಾರ ಉಚಿತವಾಗಿ ನೀಡುತ್ತಿದ್ದರೂ, ಅವೆಲ್ಲವುಗಳಿಗಿಂತ ಮುಖ್ಯವಾಗಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸಲು, ಶಿಕ್ಷಕರ ಕೊರತೆಯಿಂದ ಅಡ್ಡಿಯಾಗುವುದರಿಂದ ಬಹುತೇಕ ಸರ್ಕಾರಿ ಶಾಲೆಗಳೀಗ ವಿದ್ಯಾರ್ಥಿಗಳ ದಾಖಲಾತಿ ಇಲ್ಲದೆ ನಿರ್ಜೀವವಾಗಿಬಿಟ್ಟಿವೆ.
ದಶಕಗಳ ಹಿಂದೆ 200-300ವಿದ್ಯಾರ್ಥಿಗಳಿದ್ದ ಸರ್ಕಾರಿ ಶಾಲೆಗಳಲ್ಲೀಗ ವರ್ಷೇ ವರ್ಷೇ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಾ ಬಂದು ಏಳು ತರಗತಿಗಳಲ್ಲಿ ಕೇವಲ ಮೂರೇ ಮೂರು ವಿದ್ಯಾರ್ಥಿಗಳು, ಅವರಿಗೆ ಓರ್ವ ಅದ್ಯಾಪಿಕೆ, ಮೀಟಿಂಗಿನ ದಿನ ಅದ್ಯಾಪಕರಿಲ್ಲದ ಶಾಲೆ ಎಂಬಂಥ ದಯನೀಯ ಪರಿಸ್ಥಿತಿಯು ಶಿರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಒದಗಿ ಬಂದುದನ್ನು 07/06/2018 ರ ವಿಜಯಕರ್ನಾಟಕ ಪತ್ರಿಕೆಯಲ್ಲಿ ಓದಿದ್ದೇವೆ. ವಿಜಯ ಕರ್ನಾಟಕದ ೧೮-೦೬-೨೦೧೮ರ ವರದಿಯಲ್ಲಿ ಖಾಸಗಿ ಶಾಲೆಗಳಿಂದ ಹೊಡೆತ, ಬಂಟ್ವಾಳ ತಾಲೂಕಿನ ಎರಡು ಸರ್ಕಾರಿ ಶಾಲೆಗಳು ಬಂದ್ ಎಂಬುದನ್ನೂ ನೋಡಿದ್ದೇವೆ.
ಈಗ ಪ್ರತಿಯೊಂದು ಸರ್ಕಾರಿ ಶಾಲೆಗೆ ಸಾಮಾನ್ಯವಾಗಿ ಸುಸಜ್ಜಿತ ಕಟ್ಟಡ, ಪಾಠ-ಪೀಠ, ಕ್ರೀಡೋಪಕರಣಗಳು, ಕ್ರೀಡಾಂಗಣ, ರಂಗಮಂಟಪಗಳು ಎಂದು ಎಲ್ಲ ಸವಲತ್ತುಗಳೂ ಇವೆ, ಆದರೆ ಮಕ್ಕಳ ಸಂಖ್ಯೆ ಕಡಿಮೆಯಾದೊಡನೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರನ್ನು ಅಲ್ಲಿಂದ ಎತ್ತಂಗಡಿ ಮಾಡುತ್ತಾರೆ. ಇನ್ನೊಂದೆಡೆ ಪ್ರತಿಭಾ ಸ್ಪರ್ಧೆಗಳು ಆಗಾಗ ನಡೆಯುತ್ತಿರುವುದರಿಂದ, ಅದಕ್ಕೆ ವಿದ್ಯಾರ್ಥಿಗಳನ್ನು ಅಣಿಗೊಳಿಸಲು ಶಿಕ್ಷಕರು ತೊಡಗಬೇಕಾಗುತ್ತದೆ. ಹೀಗಾಗಿ ನಿಗದಿತ ವೇಳೆಯಲ್ಲಿ ಪಾಠಗಳನ್ನು ಮಾಡಿ ಮುಗಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಕಲಿತರೂ, ಕಲಿಯದಿದ್ದರೂ ಅನುತ್ತೀರ್ಣತೆ ಎಂಬುದಿಲ್ಲ ಎಂಬ ವಿವರ ವಿದ್ಯಾರ್ಥಿಗಳಿಗೂ, ಪೋಷಕರಿಗೂ ತಿಳಿದಿರುವುದರಿಂದ ಮತ್ತು ವಿದ್ಯಾರ್ಥಿಗಳ ಉತ್ಕರ್ಷೆಗಾಗಿ ಶಿಸ್ತು ಶಿಕ್ಷೆಗಳನ್ನು ಅಳವಡಿಸುವ ಸ್ವಾತಂತ್ರ್ಯ ಶಿಕ್ಷಕರಿಗೆ ಇಲ್ಲದಿರುವುದರಿಂದ ಸರ್ಕಾರಿ ಶಾಲೆಗಳ ಶೈಕ್ಷಣಿಕ ಅವನತಿಗೆ ಇವು ನಾಂದಿಯಾಗಿವೆ.
ಅನುದಾನಿತ ಮತ್ತು ಅನುದಾನರಹಿತ ಆಂಗ್ಲ ಮಾದ್ಯಮ ಶಾಲೆಗಳಲ್ಲಿ ಸಾಕಷ್ಟು ಶಿಕ್ಷಕವೃಂದವಿದ್ದು, ಪಾಠ ಪ್ರವಚನಗಳಲ್ಲಿ ಅಸಡ್ಡೆ ತೋರುವ ಮಕ್ಕಳಿಗೆ ಶಿಸ್ತು-ಶಿಕ್ಷೆಗಳ ಅನುಭವವಿರುವುದರಿಂದ, ಅಲ್ಲದೆ ಪೋಷಕರು ಶಿಕ್ಷಣ ಶುಲ್ಕ, ವಾಹನ ಶುಲ್ಕ ಭರಿಸಿ, ಮಕ್ಕಳ ಕಲಿಕೆಯ ಕುರಿತು ನಿಗಾವಹಿಸುವುದರಿಂದ ಮಕ್ಕಳು ಶಿಕ್ಷಕರ ಹಾಗೂ ಪೋಷಕರ ಹೆದರಿಕೆಯಿಂದಲಾದರೂ ಕಲಿಯಲೇಬೇಕಾಗುತ್ತದೆ, ಹೀಗಾಗಿ ಈ ರೀತಿ ವಿವಿಧ ಒತ್ತಡಗಳಿಂದ ಕಲಿಯುವ ಈ ಮಕ್ಕಳು ಪ್ರಥಮ ದರ್ಜೆಯ ಪ್ರಜೆಗಳಾಗಿಯೂ, ಲಂಗುಲಗಾಮಿಲ್ಲದ ಸರ್ಕಾರಿ ಶಾಲಾ ಮಕ್ಕಳು ದ್ವಿತೀಯ ದರ್ಜೆಯ ಪ್ರಜೆಗಳಾಗಿಯೂ ರೂಪುಗೊಳ್ಳುತ್ತಿರುವುದನ್ನು (ಇದಕ್ಕೆ ಅಪವಾದವೂ ಇರಬಹುದು) ಕಣ್ಣಾರೆ ಕಾಣುತ್ತಿದ್ದೇವೆ.
ಪ್ರಕೃತ ಕರ್ನಾಟಕದಲ್ಲಿ ಚುನಾವಣೆ ನಡೆದು, ಹೊಸ ಸರ್ಕಾರದ ರಚನೆಯಾಗಿದೆ. ಇದರ ಶಿಕ್ಷಣ ಸಚಿವರು ಸರ್ಕಾರಿ ಶಾಲೆಗಳ ಪ್ರಕೃತದ ಸನ್ನಿವೇಶವನ್ನು ಚೆನ್ನಾಗಿ ಪರಾಮರ್ಶಿಸಿ, ಕುಂದುಕೊರತೆಗಳನ್ನು ಅರಿತುಕೊಂಡಿದ್ದಾರೆ. ಈ ಬರವನ್ನು ನೀಗಿಸಲು ಪ್ರತಿಯೊಂದು ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ತೆರೆದು, ಒಂದನೇ ತರಗತಿಯಿಂದ ಇಂಗ್ಲಿಷನ್ನು ಒಂದು ಭಾಷೆಯನ್ನಾಗಿ ಕಲಿಸುವ ವ್ಯವಸ್ಥೆ ಮಾಡಲಿಕ್ಕಿದೆ ಎಂದಿದ್ದಾರೆ. ಇಂತಹ ಸೌಲಭ್ಯ ದೊರೆತಾಗ, ಎಲ್ಲ ಶಾಲೆಗಳಲ್ಲೂ ಏಕರೂಪದ ಗುಣಾತ್ಮಕ ಶಿಕ್ಷಣ ದೊರಕಲೆಡೆಯಿದೆ. ಇದರಿಂದ ದೂರದ ಖಾಸಗಿ ಶಾಲೆಗಳಿಗೆ ಹೋಗುವ ವಾಹನ ಶುಲ್ಕ, ಶಿಕ್ಷಣ ಶುಲ್ಕ, ಪ್ರಯಾಣ ಆಯಾಸ ತಪ್ಪಿದಂತಾಗಿ, ಬಡಮಕ್ಕಳಿಗೆ ಉತ್ತಮ ಪ್ರಯೋಜನ ಸಿಗಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.