ತಾ.ಪಂ. ಸಾಮಾನ್ಯ ಸಭೆ : ಕಂದಾಯ ಇಲಾಖೆಯಲ್ಲಿ ಕೆಲಸ ಆಗುತ್ತಿಲ್ಲ ಎಂಬುದೇ ಪ್ರಧಾನ ಚರ್ಚೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಕಂದಾಯ ಇಲಾಖೆಯಲ್ಲಿ ಜನರ ಕೆಲಸ ಆಗುತ್ತಿಲ್ಲ. ಇಲ್ಲಿ ಮೀಟಿಂಗಿಗೊಂದು ಸಾರಿಯಂತೆ ತಹಶೀಲ್ದಾರರ ಬದಲಾವಣೆ ಆಗುತ್ತಿದೆ. ಒಂದು ಮೀಟಿಂಗ್‌ನಲ್ಲಿ ಬಂದು ಭರವಸೆ ಕೊಟ್ಟುಹೋಗುವ ತಹಶೀಲ್ದಾರ್ ಇನ್ನೊಂದು ಮೀಟಿಂಗಿಗೆ ಇರುವುದಿಲ್ಲ. ಕೆಲವೊಂದು ಸಮಸ್ಯೆಗಳಿಗೆ 10 ವರ್ಷಗಳೇ ಕಳೆಯಿತು. ಹೀಗೆ ಮುಂದುವರಿದರೆ ಹೋರಾಟ ಅನಿವಾರ್ಯ ವಾದಿತು ಎಂದು ತಾ.ಪಂ. ಸಾಮಾನ್ಯ ಸಭೆಯಲ್ಲಿ ಭಾರೀ ಚರ್ಚೆ ನಡೆಯಿತು.
ಬೆಳ್ತಂಗಡಿ ತಾ.ಪಂ. ಸಾಮಾನ್ಯ ಸಭೆಯು ಜೂ.28 ರಂದು ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಉಪಾಧ್ಯಕ್ಷೆ ವೇದಾವತಿ, ವಿಧಾನ ಸಭಾ ಸದಸ್ಯ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಪ್ರೊಬೆಷನರಿ ತಹಶಿಲ್ದಾರ್ ಮದನ್‌ಮೋಹನ್, ತಾ.ಪಂ
ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಟಿ ಸೆಬಾಸ್ಟಿಯನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಬಸರಾಜ್ ಅಯ್ಯಣ್ಣನವರ್ ಸ್ವಾಗತಿಸಿದರು. ಪ್ರಭಾರ ಸಹಾಯಕ ನಿರ್ದೇಶಕ ಗಣೇಶ್ ಹಾಗೂ ಇತರ ಅಧಿಕಾರಿಗಳು ಸಹಕಾರ ನೀಡಿದರು. ಫೆಸಿಲಿಟೇಟರ್ ಜಯಾನಂದ ಲಾಲ ನಿರೂಪಿಸಿದರು.
ತಾಲೂಕು ಕಚೇರಿ ಅವ್ಯವಸ್ಥೆ ಬಗ್ಗೆ ಸದಸ್ಯರಾದ ವಿಜಯ ಗೌಡ, ಎಂ ಶಶಿಧರ ಕಲ್ಮಂಜ, ಕೊರಗಪ್ಪ ಗೌಡ, ಜೋಯೆಲ್ ಮೆಂಡೋನ್ಸಾ, ಧನಲಕ್ಷ್ಮೀ, ಲಕ್ಷ್ಮೀನಾರಾಯಣ, ಜಯರಾಮ ಆಲಂಗಾರು, ಸುಜಾತಾ, ಮೊದಲಾದವರು ಧ್ವನಿಎತ್ತಿದರು.
೯೪ ಸಿಯಲ್ಲಿ ಲಂಚ ಕೊಟ್ಟರೆ ಮಾತ್ರ ಕೆಲಸ ಆಗುತ್ತದೆ, ಕಚೇರಿಯೊಳಗೆ ಬ್ರೋಕರ್‌ಗಳೇ ತುಂಬಿಹೋಗಿದ್ದಾರೆ. ಜನಪ್ರತಿನಿಧಿಗಳಾದ ನಾವು ಹೋದರೆ ಅಲ್ಲಿ ಗೌರವ ಸಿಗುತ್ತಿಲ್ಲ. ಆದರೆ ಮಧ್ಯವರ್ತಿಗಳು ಹೋದರೆ ಕುರ್ಚಿ ಕೊಡುತ್ತಾರೆ. ಕಚೇರಿಯಲ್ಲಿರುವ ಸಿಬ್ಬಂದಿ ಹರೀಶ್‌ರಿಂದ ಜನರಿಗೆ ತೊಂದರೆಯಾಗುತ್ತಿದೆ. ಕೆಲವೊಂದು ಕಡತಗಳು ಮಾಯವಾಗುವ ಜಾದೂ ನಡೆಯುತ್ತಿದೆ. ಕೆಲವೊಬ್ಬರಿಗೆ ಹಕ್ಕುಪತ್ರ ನೀಡಲಾಗಿದ್ದರೂ ಪಹಣಿ(ಆರ್‌ಟಿಸಿ)ಯಲ್ಲಿ ಎಂಟ್ರಿ ಆಗುತ್ತಿಲ್ಲ ಎಂಬ ತಾಂತ್ರಿಕ ಅಡಚಣೆ ಇದೆ ಎನ್ನುತ್ತಾರೆ ಅಧಿಕಾರಿಗಳು. ಹಾಗಾದರೆ ಅಂತಹಾ ಹಕ್ಕುಪತ್ರ ಇದ್ದೇನು ಪ್ರಯೋಜನ. ಆಹಾರ ಇಲಾಖೆಯಿಂದ ಅನಿಲ ಭಾಗ್ಯ ಸೌಲಭ್ಯ ಕೊಡುವ ಮುನ್ನವೇ ರೇಷನ್ ಕಾರ್ಡ್‌ನಲ್ಲಿ ಅನಿಲ ಎಂಟ್ರಿ ಮಾಡಲಾಗಿದೆ. ಇದನ್ನು ತೆಗೆಯಲು ಇನ್ನು ಆಗೂದಿಲ್ಲ, ಅವರಿಗೆ ಪರಿಹಾರ ಏನು? ಎಂಬಿತ್ಯಾಧಿಯಾಗಿ ಆರೋಪದ ಮೇಲೆ ಆರೋಪ ಕೇಳಿಬಂತು.
ಸಮಸ್ಯೆಯ ಗಂಭೀರತೆ ಅರಿತ ಶಾಸಕ ಹರೀಶ್ ಪೂಂಜ ಮಾತನಾಡಿ, ಯಾವುದೇ ಸರಕಾರಿ ಇಲಾಖೆ ಇರಲಿ. ಅವರು ಬಯಸಿ ಬರುವ ಕೆಲಸ ತಮ್ಮ ವ್ಯಾಪ್ತಿಯಲ್ಲಿ ಆಗುತ್ತದೆಯೇ. ಅಥವಾ ಅದಕ್ಕೆ ಇಂತಹಾ ಅಡಚಣೆ ಇದೆ. ಆಗುವುದೇ ಇಲ್ಲ ಎಂಬುದಾಗಿ ಅರ್ಜಿದಾರರಿಗೆ ಸ್ಪಷ್ಟವಾದ ಮಾಹಿತಿ ನೀಡಬೇಕು. ಅವರನ್ನು ಹತ್ತಾರು ಸಾರಿ ಕಛೇರಿಗೆ ಬರಿಸಿ ಸತಾಯಿಸಬಾರದು. ಆ ಕೆಲಸ ಆಗುವುದಿಲ್ಲವಾದರೆ ಜನಪ್ರತಿನಿಧಿಗಳಾದ ನಮ್ಮ ಸಹಾಯ ನೀಡಲು ನಾವು ಬದ್ಧ. ನೀವು ಆಗುತ್ತದೆ ಎಂದು ಕಡತಗಳನ್ನು ಅಲ್ಲೇ ಇಟ್ಟು ಕುಣಿಸಿದರೆ ಅವರು ಅಧಿಕಾರಿಗಳ ಮೇಲಿನ ವಿಶ್ವಾಸವನ್ನು ಹೇಗೂ ಕಳೆದುಕೊಳ್ಳುತ್ತಾರೆ. ಜೊತೆಗೆ ಅವರಿಗೆ ನೆರವಾಗಬೇಕಾದ ನಮ್ಮಂತಹಾ ಜನಪ್ರತಿನಿಧಿಗಳ ಮೇಲೂ ನಂಬಿಕೆ ಕಳೆದುಕೊಳ್ಳುತ್ತಾರೆ ಎಂದರು.
ಅಧಿಕಾರಿಗಳು ಪತ್ರದ ಮೂಲಕ ವ್ಯವಹಾರ ಮಾಡಿ. ಬಾಯ್ದೆರೆ ಉತ್ತರ ಕೊಡಬೇಡಿ. ಒಂದು ವೇಳೆ ನೀವು ಬದಲಾದರೂ ಸಮಸ್ಯೆ ಏನು ಎಂದು ಕಡತ ನೋಡುವಾಗ ಇನ್ನೊಬ್ಬರಿಗೆ ತಿಳಿಯುತ್ತದೆ ಎಂದರು.
ದೂರು ಇರುವ ಸಿಬ್ಬಂದಿಯನ್ನು ಮತ್ತೆ ಗ್ರಾಮಕ್ಕೆ ಕಳಿಸಿದ್ದೇನೆ: ತಹಶಿಲ್ದಾರ್
ಸಹಾಯಕ ಆಯುಕ್ತರಾಗಿದ್ದ ನೇಮಕಗೊಂಡು ಇದೀಗ ಬೆಳ್ತಂಗಡಿ ತಹಶಿಲ್ದಾರ್ ಆಗಿ ಪ್ರೊಬೆಷನರಿ ಕರ್ತವ್ಯ ಸಲ್ಲಿಸುತ್ತಿರುವ ಅಧಿಕಾರಿ ಮದನ್‌ಮೋಹನ್ ಅವರು ಮಾತನಾಡಿ, ಈಗಾಗಲೇ ತಾಲೂಕು ಕಚೇರಿಯಲ್ಲಿ ಆಪಾದನೆಗಳನ್ನು ಎದುರಿಸುತ್ತಿರುವ ಸಿಬ್ಬಂದಿಗಳನ್ನು ಬದಲಾಯಿಸಿ ಮತ್ತೆ ಗ್ರಾಮಗಳಿಗೇ ಕಳುಹಿಸಿದ್ದೇನೆ. ದೂರುಗಳು ಇರುವ ಸಿಬ್ಬಂದಿಯ ಕೆಲಸದ ಬಗ್ಗೆ ಪರಿಶೀಲನೆ ಕೈಗೊಳ್ಳಲಿದ್ದೇನೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ತಾಲೂಕು ಕಚೇರಿ ಆವರಣದಲ್ಲಿ ಕಡತಗಳಿಲ್ಲದೆ ತಿರುಗಾಡುವ ಮಂದಿಯನ್ನು ವಿಚಾರಿಸಲಾಗುತ್ತಿದೆ. ಅಂತವರನ್ನು ಈಗಾಗಲೇ ತರಾಟೆಗೂ ತೆಗೆದುಕೊಂಡಿದ್ದೇನೆ ಎಂದರು.
ಮಾಲಾಡಿ ಶಾಲಾ ಆಟದ ಮೈದಾನ ಅತಿಕ್ರಮಣ ಆಗುತ್ತಿದ್ದರೂ ಶಿಕ್ಷಣಾಧಿಕಾರಿ ತಲೆಕೆಡಿಸಿಕೊಂಡಿಲ್ಲ ಎಂದು ಸದಸ್ಯರು ಆರೋಪಿಸಿದಾಗ, ಸದ್ರಿ ಜಾಗದ ಸರ್ವೆ ನಡೆಸಿ ಪೊಲೀಸ್ ಇಲಾಖೆಯವರ ಸಹಕಾರವನ್ನೂ ಪಡೆದು ಅವತ್ತೇ ಬೇಲಿ ನಿರ್ಮಿಸೋಣ ಎಂದು ಶಾಸಕರು ತಿಳಿಸಿದರು. ಸರ್ವೆ ಇಲಾಖೆ ಮತ್ತು ಶಿಕ್ಷಣ ಇಲಾಖೆ ದಿನಾಂಕ ನಿಗಧಿಪಡಿಸುವಂತೆ ಸೂಚಿಸಿದರು.
ಶಾಲೆಗಳಿಗೆ ಅಕ್ಕಿ ಮಾತ್ರ ಸರಬರಾಜಾಗಿದೆ ಎಂದು ಸದಸ್ಯರೊಬ್ಬರ ಪ್ರಶ್ನೆಗೆ ಉತ್ತರಿಸಿದ ಬಿಇಒ ಅವರು, ಅಂತಹಾ ದೂರು ನನ್ನ ಗಮನಕ್ಕೆ ಬಂದಿಲ್ಲ. ನಾನು ಹೋದ ಶಾಲೆಗಳಲ್ಲಿ ಇತರ ಎಲ್ಲಾ ವಸ್ತುಗಳು ದಾಸ್ತಾನು ಇದೆ ಎಂದು ಉತ್ತರಿಸಿದಾಗ ಮಧ್ಯಪ್ರವೇಶಿಸಿದ ಶಾಸಕರು, ನೀವು ಹೋದ ಶಾಲೆ ಎಂದು ಉತ್ತರ ನೀಡುವುದು ಸರಿಯಲ್ಲ. ಎಲ್ಲಾ ಶಾಲೆಗಳ ಜವಾಬ್ಧಾರಿಯೂ ನಿಮ್ಮ ಮೇಲಿದೆ ಎಂದು ಸೂಚ್ಯವಾಗಿ ಎಚ್ಚರಿಸಿದರು. ಅಕ್ಷರದಾಸೋಹಕ್ಕೆ ಪ್ರತ್ಯೇಕ ವಿಭಾಗ ಇರುವುದರಿಂದ ಅವರನ್ನು ಕೇಳೋಣವೆಂದರೆ ಅವರು ಚಾರ್ಮಾಡಿಯಲ್ಲಿದ್ದ ಜವಾಬ್ದಾರಿಯೊಂದರ ಕಾರಣಕ್ಕೆ ಸಭೆಗೆ ಹಾಜರಾಗಿರಲಿಲ್ಲ.
ಕರಾಯ ಶಾಲೆಯ ಕೊಠಡಿ ಉಪಯೋಗಕ್ಕೆ ಬಾರದೇ ಇರುವುದು, ವಿದ್ಯುತ್ ಸಂಪರ್ಕಕ್ಕೆ ಕೆಲವು ಮನೆಗಳು ಬಾಕಿ ಇರುವುದು, ಕೆಲಸ ಆದರೂ ಸಂಪರ್ಕ ನೀಡಲು ಬಾಕಿ ಇರುವುದು, ದಿಡುಪೆಯಿಂದ ಮೇಲಕ್ಕೆ ಸಂಸೆ ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗಿರುವ ಪ್ರದೇಶದ ರಸ್ತೆಯ ಜಾಗವನ್ನು ಸರ್ವೆ ನಡೆಸಿ ಗುರುತಿಸುವುದು, ಸಾಲ ಮನ್ನಾ ಯೋಜನೆ ಜನಪ್ರತಿನಿಧಿಗಳಾದವರಿಗೆ ಹೊರತುಪಡಿಸಿ ನೀಡಲು ಸರಕಾರ ಚಿಂತನೆ ನಡೆಸಿರುವ ತೀರ್ಮಾನವನ್ನು ಹಿಂಪಡೆಯಬೇಕು, ಕಲ್ಮಂಜ ಸೇರಿ ಕೆಲವೆಡೆ ಇರುವ ಡಿಸಿ ಮನ್ನಾ ಭೂಮಿ ವಿತರಣೆ ಬಗ್ಗೆ, ಮಾಜಿ ಸೈನಿಕರಿಗೆ ಜಾಗ ಮೀಸಲಿಡುವ ಬಗ್ಗೆ, ಬಾರ್ಯದಲ್ಲಿ ಉದ್ಘಾಟನೆಯಾದ ಸೇವಾ ಕೇಂದ್ರ ಕಟ್ಟಡ ಉದ್ಘಾಟನೆ ಫಲಕದಲ್ಲಿ ಶಾಸಕರ ಹೆಸರು ಹಾಕುವ ಪ್ರಸ್ತಾಪ ಕಳೆದ ಸಭೆಯದ್ದಾದರೂ ಅದು ಇನ್ನೂ ಜಾರಿಯಾಗದ ಬಗ್ಗೆ, ನೆರಿಯ ಗ್ರಾಮ ಸಭೆಗೆ ತಾ. ಮಟ್ಟದ ಅಧಿಕಾರಿಗಳು ಭಾರದೇ ಇದ್ದುದರಿಂದ ಆಗಿದ್ದ ಕಿರಿಕಿರಿ ಬಗ್ಗೆ, ಚರ್ಚೆಗಳು ನಡೆದವು. ಕಳೆದ ಸಭೆಯ ನಡವಳಿಗಳ ಬಗ್ಗೆ ಚರ್ಚೆ ನಡೆದು ಮಧ್ಯಾಹ್ನ ಊಟದ ಬಳಿಕವೂ ಸಭೆ ಮುಂದುವರಿಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.