HomePage_Banner_
HomePage_Banner_
HomePage_Banner_

ಜುಲೈ 1: ವೈಯುಕ್ತಿಕ ಆರೋಗ್ಯ ರಕ್ಷಣೆ, ಸಾಮಾಜಿಕ ಸ್ವಾಸ್ಥ್ಯದ ಹೊಣೆ ನೆನಪಿಸುವ ವೈದ್ಯರ ದಿನ.

ಡಾ| ಎಮ್. ಎಮ್. ದಯಾಕರ್ ಉಜಿರೆ

ಬೆಳಗಾತ ನಾನೆದ್ದು ಯಾರ್‍ಯಾರ ನೆನೆಯಾಲಿ….. ಎಂದು ಸಾಗುತ್ತಿತ್ತು ಗ್ರಾಮೀಣ ಭಾರತೀಯರ ಮುಂಜಾನೆ ಯ ಸೊಲ್ನುಡಿಗಳು. ದೇವರನ್ನು, ತಂದೆ, ತಾಯಿ, ಗುರು, ಹಿರಿಯರನ್ನು ಅಲ್ಲದೇ ತನ್ನ ಏಳಿಗೆಗಾಗಿ ಶ್ರಮಿಸಿದವರನ್ನು ನೆನೆಸಿಕೊಳ್ಳುವುದು ಭಾರತೀಯರ ಸತ್ಸಂಪ್ರದಾಯ. ಆಧುನಿಕ ಯುಗದಲ್ಲಿ ಪರರ ಬಗ್ಗೆ ಚಿಂತಿಸಲು ಸಮಯವೇ ಇಲ್ಲದ ಸಂದರ್ಭದಲ್ಲಿ, ತಾಯಿ ಯರಿಗೊಂದು ದಿನ, ಶಿಕ್ಷಕರ ದಿನ, ಮೊದಲಾದ ದಿನಾಚರಣೆಗಳನ್ನು ಆಚರಿಸಲ್ಪಡುತ್ತವೆ. ನಮ್ಮೆಲ್ಲರ ಆರೋಗ್ಯದ ರಕ್ಷಣೆಗಾಗಿ, ನಮ್ಮ ಬಂಧುಗಳ ಕ್ಷೇಮಕ್ಕಾಗಿ ಹಗಲಿರುಳು ದುಡಿಯುವ ವೈದ್ಯರಿಗೂ ಒಂದು ದಿನಾಚರಣೆಯನ್ನು ಕಲ್ಪಿಸಿರುವುದು ಸೂಕ್ತವೇ ಆಗಿದೆ. ಭಾರತೀಯ ನಾಗರೀಕತೆಯಲ್ಲಿ ವೈದ್ಯರಿಗೆ ಪ್ರಮುಖ ಸ್ಥಾನವನ್ನು ನೀಡಲಾಗಿದೆ. ಶ್ರೀಮನ್ನಾರಾಯಣನು ವೈದ್ಯೋತ್ತಮನಾದರೆ, ಭಗವಾನ್ ಶಂಕರನು ವೈದ್ಯನಾಥೇಶ್ವರ ಎಂದು ಪೂಜೆಗೊಳ್ಳುತ್ತಾನೆ. ಇಸ್ಲಾಂನಲ್ಲಿ ದೇವರಿಗಿರುವ ತೊಂಬತ್ತೊಂಬತ್ತು ಹೆಸರುಗಳಲ್ಲಿ ಹಕೀಂ ವೈದ್ಯ ಎನ್ನುವುದು ಸೇರಿದೆ. ಭಾರತದಲ್ಲಿ ವೈದ್ಯಕೀಯಕ್ಕೆ ಭದ್ರ ಬುನಾದಿ ಇಟ್ಟವರು ಶಿತರಕ ಹಾಗೂ ಸುಶ್ರುತೆ. ಸಮಾಜದಲ್ಲಿ ಕುಟುಂಬ ವೈದ್ಯರ (Family Doctor)ಪಾತ್ರ ಬಹಳ ಮುಖ್ಯವಾದದ್ದು. ಕುಟುಂಬದ ಸದಸ್ಯರೆಲ್ಲರ ಆರೋಗ್ಯವಲ್ಲದೇ ಇತರ ಸಮಸ್ಯೆಗಳಿಗೂ ವೈದ್ಯರ ಸಮಾಲೋಚನೆ ಸಲಹೆ ಪಡೆಯುವುದು ಸಾಮಾನ್ಯ.
ತಜ್ಞ (Specialist) ವೈದ್ಯರು ತಮ್ಮ ತಮ್ಮ ವಿಭಾಗದಲ್ಲಿ ಆಳವಾದ ಅಧ್ಯಯನ ನಡೆಸಿರುತ್ತಾರೆ. ಆಗತಾನೇ ಹುಟ್ಟಿರುವ ಕೂಸಿನಿಂದ ಹಿಡಿದು ವೃದ್ಧರವರೆಗೆ, ಕಾಲಿನಿಂದ ಹಿಡಿದು ಮೆದುಳಿನವರೆಗೆ ಬೇರೆ ಬೇರೆ ವಿಭಾಗಗಳ ತಜ್ಞ ವೈದ್ಯರು ನಮ್ಮ ಆರೋಗ್ಯದ ರಕ್ಷಣೆ ಮಾಡಬಲ್ಲರು. ಅಪಘಾತಕ್ಕೀಡಾದಾಗ ಸಹಸ್ರಾರು ಜನರನ್ನು ಬದುಕಿಸುವ ಉನ್ನತ ಕಾರ್‍ಯವನ್ನು ನಡೆಸುತ್ತಾರೆ. ಸಣ್ಣ ಮತ್ತು ಮಧ್ಯಮ ಸ್ತರದ ಆಸ್ಪತ್ರೆಗಳು ಗ್ರಾಮೀಣ ಜನರಿಗೆ ಬಲು ಉಪಕಾರಿ. ಯಾವುದೇ ತುರ್ತು ಅಗತ್ಯಗಳಿಗೆ ಸ್ಪಂದಿಸುವುದು ಹಗಲಿರುಳು ಜನರ ಸೇವೆಯತ್ತ ಗಮನವೀಯುವುದು ಇಲ್ಲಿಯ ವೈದ್ಯರಿಗೆ ಹೆಮ್ಮೆಯ ಸಂಗತಿ.
ಬೃಹದ್ಗಾತ್ರದ ಕಾರ್ಪೋರೇಟ್ ಆಸ್ಪತ್ರೆಗಳು ಅತೀ ಸೂಕ್ಷ್ಮ ಶಸ್ತ್ರ ಚಿಕಿತ್ಸೆ ಗಳನ್ನು ಕ್ಲಿಷ್ಟಕರವಾದ ಚಿಕಿತ್ಸೆಗಳನ್ನು ಒದಗಿಸುತ್ತವೆ. ಹಲವಾರು ಬಾರಿ ಜೀವನದ ಆಸೆ ಬಿಟ್ಟವರೂ ಬದುಕಿ ಬರುವ ಪವಾಡ ನಡೆಯುವುದೂ ಇದೆ.
ಸಾಮಾಜಿಕ ಚಟುವಟಿಕೆಗಳಲ್ಲಿ ವೈದ್ಯರು ಇತರರಿಗೆ ಮಾದರಿ ಯಾಗುವಂತಹ (ರೋಲ್ ಮಾಡೆಲ್) ಬಾಳನ್ನು ಬಾಳಬೇಕಾಗುತ್ತದೆ. ದುಶ್ಚಟಗಳಿಂದ, ಅವ್ಯವಹಾರಗಳಿಂದ ದೂರವಿದ್ದು, ಸಾಮಾಜಿಕ ಸ್ವಾಸ್ಥ್ಯವನ್ನು ಬಯಸುವವನೇ ನಿಜವಾದ ವೈದ್ಯ. ಬಡಜನರ ರೋಗಿಗಳ ಸಮಸ್ಯೆಗಳಿಗೆ ಶ್ರೇಷ್ಠ ವೈದ್ಯರ ಹೃದಯ ಸದಾ ಮಿಡಿಯುತ್ತಿರುತ್ತದೆ. ರೋಗಗಳ ಚಿಕಿತ್ಸೆ ಮತ್ತು ಪ್ರತಿಬಂಧಿಸುವಲ್ಲಿ (Prevention) ವೈದ್ಯರು ಪ್ರಮುಖ ಪಾತ್ರವಹಿಸುತ್ತಾರೆ. ಆರೋಗ್ಯ ಮಾಹಿತಿ, ಸ್ವಚ್ಛತೆಯ ಬಗ್ಗೆ ತಿಳುವಳಿಕೆ ನೀಡಿ, ಆಹಾರ ಪಥ್ಯದ ಬಗ್ಗೆ ಸಲಹೆ ಸೂಚನೆಗಳನ್ನಿತ್ತು, ರೋಗಗಳು ಬಾರದಂತೆ ತಡೆಯುವುದು ವೈದ್ಯರ ಕರ್ತವ್ಯ. ವೈದ್ಯರು ಸಮಾಜದಲ್ಲಿ ಗೌರವ ಪಡೆದು ಎಲ್ಲರೊಡನೆ ಬೆರೆತು ನಮ್ಮೆಲ್ಲರ ಒಳಿತಿಗೆ ಕಾರಣರಾಗಿದ್ದಾರೆ.

ಜುಲೈ.1 ಭಾರತಕಂಡ ಅಪ್ರತಿಮ ವೈದ್ಯ ಡಾ|| ಬಿ.ಸಿ.ರಾಯ್ ಇವರ ಜನ್ಮ ದಿನಾಚರಣೆ. ಅತ್ಯುತ್ತಮ ವೈದ್ಯರಾಗಿ, ಜನಾನುರಾಗಿ ನಾಯಕರಾಗಿ ಸಚ್ಛಾರಿತ್ರ್ಯ ದ ರಾಜಕಾರಣಿಯಾಗಿ, ಮುಖ್ಯಮಂತ್ರಿ ಯಾಗಿ ಸೇವೆ ಸಲ್ಲಿಸಿದವರು. ಡಾ|| ಬಿ.ಸಿ.ರಾಯ್ 1948 ರಿಂದ ತಮ್ಮ ನಿಧನದವರೆಗೂ (1969) ಸುದೀರ್ಘ ಹದಿನಾಲ್ಕು ವರ್ಷಗಳ ಕಾಲ ಕಾಂಗ್ರೆಸ್ ಮುಖ್ಯಮಂತ್ರಿಯಾಗಿ, ಹಿಂದುಳಿದಿದ್ದ ಪಶ್ಚಿಮ ಬಂಗಾಲ ರಾಜ್ಯವನ್ನು ಮುನ್ನಡೆಸಿ, ಬೆಳಸಿದವರು ಡಾ|| ಬಿ.ಸಿ. ರಾಯ್. ಪ್ರತಿಷ್ಟಿತ FRCS ಮತ್ತು MRCP ಡಿಗ್ರಿಗಳನ್ನು ಏಕಕಾಲ ದಲ್ಲಿ ಗಳಿಸಿದ ಅತೀ ಅಪರೂಪದ ವೈದ್ಯ ಇವರು. 1961 ನೇ ಇಸವಿಯಲ್ಲಿ ಭಾರತರತ್ನ ಗೌರವಕ್ಕೆ ಭಾಜನ ರಾದವರು ತಮ್ಮ ಎಲ್ಲಾ ಆಸ್ತಿಯನ್ನೂ ಸಮಾಜ ಸೇವೆಗಾಗಿ ಮೀಸಲಿಟ್ಟು ಟ್ರಸ್ಟ್ ಒಂದನ್ನು ಸ್ಥಾಪಿಸಿದವರು ಈ ಪುಣ್ಯಾತ್ಮ. ತಮ್ಮ ಮುಖ್ಯಮಂತ್ರಿ ಪದವಿಯ ಸಮಯದಲ್ಲೂ ಉಚಿತವಾಗಿ, ಪ್ರತಿದಿನವೂ ವೈದ್ಯಕೀಯ ಸೇವೆಯನ್ನು ತನ್ನ ನಿವಾಸದ ಸಣ್ಣ ಕೊಠಡಿ ಯೊಂದರಲ್ಲಿ ನೀಡುತ್ತಿದ್ದುದು ಇವರ ಹೃದಯ ವೈಶಾಲ್ಯಕ್ಕೆ ಸಾಕ್ಷಿ. ಈ ವೈದ್ಯ ಶಿಖಾಮಣಿಯ ಜನುಮದಿನವನ್ನು ವೈದ್ಯರ ದಿನ ಎಂದು ಸರ್ಕಾರವೇ ಘೋಷಿಸಿ ನಾವೆಲ್ಲರೂ ಆಚರಿಸುತ್ತಿದ್ದೇವೆ. ವೈಯುಕ್ತಿಕ ಆರೋಗ್ಯದ ರಕ್ಷಣೆ, ಸಾಮಾಜಿಕ ಸ್ವಾಸ್ಥ್ಯದ ಹೊಣೆ ಹೊತ್ತ ವೈದ್ಯ ಸಂಕುಲಕ್ಕಿದೋ ಸಾವಿರ ನಮನಗಳು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.