ಕೀಟ ತಡೆಗೆ ಟ್ರೈಕೋಗ್ರಾಮಾ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕೀಟಗಳ ಹಾವಳಿ ಪ್ರತಿಯೊಂದು ಬೆಳೆಯಲ್ಲೂ ಇದ್ದೆ ಇದೆ. ಸಮೀಕ್ಷೆಯೊಂದರ ಪ್ರಕಾರ ರೈತ ಬೆಳೆದ ಬೆಳೆಯ ಶೇ.30 ರಷ್ಟು ಕೀಟಗಳ ಪಾಲಾಗುತ್ತಿದೆಯಂತೆ. ಬಹು ವಿಧದ ರೋಗಗಳನ್ನು ತರಬಲ್ಲ ಶತ್ರು ಕೀಟಗಳನ್ನು ನಾಶಪಡಿಸುವುದು ಅಷ್ಟು ಸುಲಭದ ಮಾತಲ್ಲ. ಕೀಟನಾಶಕಗಳನ್ನು ಬಳಸಬೇಕಾದ ಅನಿವಾರ್ಯತೆ. ಅವು ದುಬಾರಿಯೊಂದಿಗೆ ಈ ಭೂಮಿಯ ಅಂತಸಂತ್ವವನ್ನು ಕಡಿಮೆ ಮಾಡುತ್ತವೆ ಎನ್ನುವುದು ಸತ್ಯ. ಸಾವಯವ ಕೀಟನಾಶಕಗಳ ಬಳಕೆಯಾಗುತ್ತಿದ್ದರೂ ಅವುಗಳಿಂದ ಸಂಪೂರ್ಣ ಪರಿಹಾರ ದೊರೆಯುತ್ತಿಲ್ಲ. ಕೀಟ ತಡೆಗೆ ಬದಲಿ ಉಪಾಯವೊಂದನ್ನು ರೈತರು ಕಂಡುಕೊಳ್ಳಬೇಕಾದ ಅಗತ್ಯತೆಯಿದೆ. ಈ ನಿಟ್ಟಿನಲ್ಲಿ ಟ್ರೈಕೋಗ್ರಾಮಾ ಒಂದು ಉತ್ತಮ ಆಯ್ಕೆ. ಕಬ್ಬು ಬೆಳೆಗಾರರಾದ ರಾಮದುರ್ಗಾ ತಾಲೂಕಿನ ಮುಕ್ಕಾಂಖಾನಪೇಠದ ಮಲ್ಲಿಕಾರ್ಜುನ ಗುರುಮಾಹಂತಪ್ಪ ಹಳ್ಯಾಳ್ ಕಬ್ಬು ಬೆಳೆಗೆ ದಾಳಿಯಿಡುವ ಕೀಟ ತಡೆಗೆ ಹೊಸ ಉಪಾಯವೊಂದನ್ನು ಕಂಡು ಹಿಡಿದಿದ್ದಾರೆ. ಅದರಲ್ಲಿ ಕಳೆದ ಆರು ವರ್ಷಗಳಿಂದ ಯಶಸ್ಸನ್ನು ಗಳಿಸಿದ್ದಾರೆ. ಸರಿಯಾದ ಮಾಹಿತಿ, ಮಾರ್ಗದರ್ಶನ ದೊರೆತರೆ ಪ್ರತಿಯೊಬ್ಬ ಬೆಳೆಗಾರನು ಆಳವಡಿಸಬಹುದಾದ ಸರಳ ವಿಧಾನವಿದು. ಸರಿಯಾದ ಮಾಹಿತಿಯೊಂದಿಗೆ ಮಾರ್ಗದರ್ಶನ ವನ್ನಿತ್ತರೆ ಕೆಲವೆ ವರ್ಷಗಳಲ್ಲಿ ರೈತರು ಕೀಟ ಹಾವಳಿಯಿಂದ ಮುಕ್ತರಾಗುವುದರಲ್ಲಿ ಎರಡು ಮಾತಿಲ್ಲ.
ಏನಿದು ಪ್ರಯೋಗ?: ಮಲ್ಲಿಕಾರ್ಜುನ ಕಬ್ಬು ಬೆಳೆಗಾರ. ಇವರಿಗೆ ಆರು ಎಕರೆ ಇಪ್ಪತ್ತೇಳು ಗುಂಟೆ ಜಮೀನಿದೆ. ಪತ್ನಿ ಮಾಯಾ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಾನೇಶ್ವರಿ ಸ್ವಸಹಾಯ, ಇವರು ಗುರುಕಲಾರಿ ಮಹಾಂತೇಶ ಪ್ರಗತಿಬಂಧು ತಂಡವನ್ನು ಸೇರಿಕೊಂಡು ಮೂರು ಎಕರೆಯಲ್ಲಿ ಕಬ್ಬು, ಮೂರು ಎಕರೆಯಲ್ಲಿ ಶೇಂಗಾ, ಐವತ್ತೈದು ಮಾವು ಗಿಡಗಳು, ಆರುನೂರು ಸಾಗುವಾಣಿ, ಲಿಂಬೆ, ಸೀತಾಫಲ, ಹಲಸು, ದಾಳಿಂಬೆ, ಗೋಡಂಬಿ ಹೀಗೆ ಪಕ್ಕ ಸಾವಯವದಲ್ಲಿ ಸಮಗ್ರ ಬೆಳೆಗಳನ್ನು ಬೆಳೆದಿದ್ದಾರೆ. ಕಬ್ಬು ಇವರಿಗೆ ಅನ್ನ ನೀಡುವ ಪ್ರಮುಖ ಬೆಳೆ. ಕೀಟಗಳ ಹಾವಳಿಯಿಂದಾಗಿ ವರ್ಷದಿಂದ ವರ್ಷಕ್ಕೆ ಇಳುವರಿ ಕಡಿಮೆಯಾಗುತ್ತಿತ್ತು. ಈ ಸಮಸ್ಯೆಯನ್ನು ಹತ್ತಿರದಿಂದ ಕಂಡ ಇಲ್ಲಿನ ರೈತರಿಂದ ಸಕ್ಕರೆ ತಯಾರಿಗೆ ಕಬ್ಬು ಖರೀದಿಸುವ ಪ್ಯಾರಿ ಶುಗರ್ ಕಂಪನಿ ಕೀಟ ಹತೋಟಿ ಮಾಡುವ ನಿಟ್ಟಿನಲ್ಲಿ ತಮಿಳುನಾಡಿನಲ್ಲಿ ಹೊಸ ವಿಧಾನದ ಬಗ್ಗೆ ತರಬೇತಿಯನ್ನು ನೀಡಿತು. ಅವರಿಂದ ತರಬೇತಿ ಪಡೆದು ಬಂದ ಮಲ್ಲಿಕಾರ್ಜುನ ಟ್ರ್ಯೆಕೋಗ್ರಾಮ ಪರತಂತ್ರ ಜೀವಿಯನ್ನು ತಾನು ತಯಾರಿಸುವ ಮೂಲಕ ಯಶಸ್ಸನ್ನು ಕಂಡಿದ್ದಾರೆ.
ಏನಿದು ಟ್ರ್ರೈಕೋಗ್ರಾಮ : ಹೆಚ್ಚಿನ ರೈತರಿಗೆ ಈ ಹೆಸರೆ ಹೊಸತು. ಕೆಲವರು ಒಂಚೂರು ಮಾಹಿತಿಯಿದ್ದರೂ ಇದು ನಮ್ಮಿಂದ ಆಸಾಧ್ಯವೆಂದುಕೊಂಡು ಸುಮ್ಮನಾಗಿದ್ದಾರೆ. ಟ್ರೈಕೋಗ್ರಾಮ ಅತೀ ಸಣ್ಣ ಕೀಟವಾಗಿದ್ದು ಬೆಳೆಗಳಿಗೆ ಬಾಧಿಸುವ ಸುಮಾರು 200 ವಿಧದ ಕೀಟಗಳ ಮೊಟ್ಟೆಗಳನ್ನು ತಿಂದು ನಾಶಪಡಿಸುತ್ತದೆ. ಸಣ್ಣ ಗಾತ್ರದ ಸುಮಾರು 2000 ಮೊಟ್ಟೆಗಳಿರುವ ಕಾರ್ಡ್‌ನ್ನು ಆರಂಭದಲ್ಲಿ ತಮಿಳುನಾಡಿನಿಂದ ಖರೀದಿಸಿ ತಂದರು. ಇದೀಗ ಮೊಟ್ಟೆಗಳನ್ನು ಇವರೇ ತಯಾರಿಸುತ್ತಿದ್ದಾರೆ. ಸಣ್ಣ ಗಾತ್ರದ ಮೊಟ್ಟೆಗಳು ಒಂದು ಕಾರ್ಡ್‌ಗೆ ಅಂಟಿಕೊಂಡಿರುತ್ತದೆ. ಒಂದು ಕಾರ್ಡ್‌ಗೆ ರೂ. 35 ಬೆಲೆಯಿದೆ. ಒಂದು ಎಕರೆಗೆ ೪ ಕಾರ್ಡ್‌ಗಳು ಬೇಕು. ಮೊಟ್ಟೆಗಳಿರುವ ಕಾರ್ಡ್‌ನ್ನು ತಂದು ಕಬ್ಬು ಅಥವಾ ಯಾವುದೇ ಬೆಳೆಯ ಎಲೆಗಳಲ್ಲಿ ಇಡಬೇಕು. ಇಪ್ಪತ್ತನಾಲ್ಕು ಗಂಟೆಯೊಳಗೆ ಮೊಟ್ಟೆಯೊಡೆದು ಅದರಿಂದ ಪತಂಗಗಳು ಹುಟ್ಟಿಕೊಳ್ಳುತ್ತವೆ. ಪತಂಗ ೪೫ ದಿನಗಳವರೆಗೆ ಬದುಕುತ್ತದೆ. ರೈತರ ಕೃಷಿಯನ್ನು ಹಾಳುಗೆಡವುವ ಕೀಟಗಳು ಇವುಗಳ ಪ್ರಮುಖ ಆಹಾರ. ಗದ್ದೆಯಲ್ಲಿ ಇದ್ದ ಎಲ್ಲಾ ಕೀಟನಾಶಕ ಪತಂಗ, ಹುಳಗಳ ಮೊಟ್ಟೆಯನ್ನು ಇವು ತಿಂದು ಬಿಡುತ್ತವೆ. ಹೀಗೆ ಸುಲಭವಾಗಿ ಕೀಟಗಳು ಕಣ್ಮರೆಯಾಗುತ್ತವೆ. ನಾಲ್ಕು ವಾರಕ್ಕೊಂದು ಬಾರಿಯಂತೆ ಕಾರ್ಡ್ ಕಟ್ಟುತ್ತಿರಬೇಕು.
ಮುಂಜಾಗರೂಕತೆ ಅಗತ್ಯ : ಕಾರ್ಡ್ ಕಟ್ಟುವ ಒಂದು ವಾರಗಳ ಮುಂಚಿತವಾಗಿ ಹೊಲಕ್ಕೆ ಯಾವುದೆ ರೀತಿಯ ಕೀಟನಾಶಕವನ್ನು ಸಿಂಪಡಿಸಬಾರದು. ಒಮ್ಮೆ ಕಾರ್ಡ್ ಕಟ್ಟಲು ಆರಂಭಿಸಿದ ನಂತರ ಮತ್ತೆ ಯಾವುದೇ ರೀತಿಯ ಕೀಟನಾಶಕಗಳ ಅಗತ್ಯವಿಲ್ಲ. ಈ ವಿಧಾನವನ್ನು ಮುಂದುವರಿಸಿದರಾಯಿತು. ಸರ್ವಋತುಗಳಲ್ಲೂ ಕಾರ್ಡ್ ಕಟ್ಟಬಹುದು.
ಉಪಯೋಗ : ಭೂಮಿಯನ್ನು ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಇದೊಂದು ಉತ್ತಮ ಪ್ರಯತ್ನ. ಶ್ರಮವು ಕಡಿಮೆ. ಆರೋಗ್ಯದ ದೃಷ್ಟಿಯಿಂದಲೂ ಉತ್ತಮ. ರಾಸಾಯನಿಕಯುಕ್ತ ಕೀಟನಾಶಕಗಳ ಬಳಕೆ ಕಡಿಮೆಯಾಗುವುದರಿಂದ ಬೇಸಾಯದ ವೆಚ್ಚವನ್ನು ಕಡಿಮೆ ಮಾಡಬಹುದಾಗಿದೆ. ಎಲ್ಲಾ ಬೆಳೆಗಳಿಗೂ ಸೂಕ್ತವಾಗಿದ್ದು ಇದೊಂದು ಪರಿಸರಪೂರಕ ವಿಧಾನವಾಗಿದೆ.
ಎಲ್ಲಾ ಬೆಳೆಗಳಿಗೂ ಸೂಕ್ತ : ಕೀಟಗಳು ಎಲ್ಲಾ ಬೆಳೆಗಳಿಗೂ ಕಾಡುತ್ತವೆ. ಅದರಿಂದ ಎಲ್ಲಾ ಬೆಳೆಗಳಿಗೂ ಸೂಕ್ತ. ಕಬ್ಬು, ಹತ್ತಿ, ಭತ್ತ, ಶೇಂಗಾ, ಟೊಮೆಟೋ, ಬದನೆ, ಮೆಣಸಿನಕಾಯಿ, ಗುಲಾಬಿ, ನಿಂಬೆ, ಜೋಳ ಮುಂತಾದ ಬೆಳೆಗಳನ್ನು ಕಾಡುವ ಸಸಿಗಳ ಕಾಂಡ, ಗಣಿಕೆ ಕಾಯಿ ಕೊರೆಯುವ, ಎಲೆ ಮಡಚುವ, ಕೊಳವೆ ಕಟ್ಟುವ, ಮೊಗ್ಗು ಮತ್ತು ಹೂವು ಕೊರೆಯುವ, ಎಲೆ ತಿನ್ನುವ ಕೀಟಗಳನ್ನು ಪತಂಗಗಳು ತಿಂದು ಮುಗಿಸುತ್ತವೆ.
ಮೊಟ್ಟೆ ಎಲ್ಲಿ ಸಿಗುತ್ತದೆ? : ಸಾಮಾನ್ಯವಾಗಿ ಎಲ್ಲಾ ಕೃಷಿ ಇಲಾಖೆಗಳಲ್ಲಿ ಮೊಟ್ಟೆ ಇರುವ ಕಾರ್ಡ್ ಸಿಗುತ್ತಿದೆ. ಅಂಚೆ ಮೂಲಕ ಊರಿಂದ ಊರಿಗೆ ಸಾಗಾಟ ಕೂಡಾ ಸುಲಭ. ಪ್ರತಿ ಜಿಲ್ಲೆಗೊಂದರಂತೆ ಪ್ರಯೋಗಾಲಯವನ್ನು ತೆರೆಯಲಾಗಿದೆ. ಮಲ್ಲಿಕಾರ್ಜುನರವರು ಸ್ವತಹ ಮೊಟ್ಟೆ ತಯಾರಿಸುತ್ತಿದ್ದು ಬೇಕಾದ ತರಬೇತಿ, ಮಾಹಿತಿ, ಮೊಟ್ಟೆಗಳನ್ನು ನೀಡಲು ಅವರು ಸಿದ್ಧರಿದ್ದಾರೆ.
ನಾವೇ ಮೊಟ್ಟೆಗಳನ್ನು ತಯಾರಿಸಿಕೊಳ್ಳಬಹುದು : ಮೊಟ್ಟೆಯನ್ನು ಸ್ವತಹ ತಯಾರಿಸಿಕೊಳ್ಳ ಬಹುದಾಗಿದೆ. ಆದರೆ ಒಂಚೂರು ಅನುಭವ ಇರಬೇಕು. ಇವರು 10 ಅಡಿ ವಿಸ್ತೀರ್ಣದ ಪ್ರತ್ಯೇಕ ರೂಮನ್ನು ಮಾಡಿಕೊಂಡಿದ್ದಾರೆ. ಒಂದು ತಟ್ಟೆಯಲ್ಲಿ ಧಾನ್ಯದ ನುಚ್ಚು(ರವೆ)ಯನ್ನು ಹಾಕಿ ಗಾಳಿ ಸುಳಿಯದಂತೆ ಮುಚ್ಚಿಡಬೇಕು. ಸ್ವಲ್ಪ ಸಮಯ ಬಿಟ್ಟ ನಂತರ ಅದರಲ್ಲಿ ಬಾಲವಿರುವ ಹುಳಗಳು ಹುಟ್ಟಿಕೊಳ್ಳುತ್ತವೆ. ಮೂರು ವಾರದೊಳಗೆ ಅವು ಪತಂಗವಾಗಿ ಬಿಡುತ್ತವೆ. ಪತಂಗಗಳನ್ನು ಅದರಿಂದ ತೆಗೆದು 20 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರುವ ಒಂದು ಬಾಕ್ಸ್‌ನೊಳಗೆ ಒಂದು ದಿನಗಳ ಕಾಲ ಹಾಕಿಡಬೇಕು. ಅಲ್ಲಿ ಸಂಭೋಗಕ್ರಿಯೆ ನಡೆದು ಪತಂಗ ಮೊಟ್ಟೆ ಇಟ್ಟು ಅಲ್ಲೇ ಸಾಯುತ್ತದೆ.
ಮೊಟ್ಟೆಯನ್ನು ಕಾರ್ಡ್‌ಗೆ ಅಂಟಿಸಬೇಕು. ಹೀಗೆ ತಯಾರಿಸಿದ ಮೊಟ್ಟೆಗಳನ್ನು ಒಂದು ತಿಂಗಳುಗಳ ಕಾಲ ಫ್ರಿಜ್‌ನಲ್ಲಿ ಸಂಗ್ರಹಿಸಿಡ ಬಹುದಾಗಿದೆ. ಮಲ್ಲಿಕಾರ್ಜುನ ತಾನು ಸ್ವತಹ ಕಾರ್ಡ್ ತಯಾರಿಸಿ ರಾಜ್ಯದ ರೈತರಿಗೆ ಅಂಚೆ ಮೂಲಕ ಕಳುಹಿಸಿಕೊಡುತ್ತಿದ್ದಾರೆ. ತಿಂಗಳಿಗೆ ಸುಮಾರು ಐದು ಸಾವಿರ ಕಾರ್ಡ್‌ಗಳನ್ನು ಇವರು ಮಾರಾಟ ಮಾಡುತ್ತಿದ್ದಾರೆ. ಬೇರೆ ಬೇರೆ ಕಡೆಗಳಿಗೆ ಹೋಗಿ ಉಚಿತವಾದ ಮಾಹಿತಿಯನ್ನು ನೀಡುತ್ತಿದ್ದಾರೆ. ಕಳೆದ ಎಂಟು ವರ್ಷಗಳಿಂದ ಜಮೀನಿಗೆ ಕೀಟನಾಶಕವನ್ನೇ ಅಳವಡಿಸಿಲ್ಲ. ಟ್ರೈಕೋಗ್ರಾಮಾ ಬಳಕೆಯಿಂದಾಗಿ ಭೂಮಿಯ ಫಲವತ್ತತೆ ಹೆಚ್ಚಿದೆ. ಅಲ್ಲದೆ ಇಳುವರಿಯ ಪ್ರಮಾಣವು ಹೆಚ್ಚಾಗಿದೆ ಎನ್ನುವುದು ಮಲ್ಲಿಕಾರ್ಜು ನರವರ ಅನುಭವದ ಮಾತು. ಬಳಕೆಯ ಬಗ್ಗೆ ತಾವು ಅವರಿಂದ ಹೆಚ್ಚಿನ ಮಾಹಿತಿ ಪಡೆಯಬಹುದು. ಅವರ ಮೊಬೈಲ್ ನಂಬರ್ : 9481658191 . ಎಲ್ಲಾ ರೈತರು ಇತ್ತ ಕಡೆ ಒಲವು ತೋರಿದರೆ ಭೂಮಿ ಮುಂದಿನ ದಿನಗಳಿಗೂ ಉಳಿದೀತು ! ಪ್ರತಿಯೊಬ್ಬರು ಸ್ವತಹ ತಯಾರಿಸಿಕೊಳ್ಳಬಹುದಾಗಿದ್ದು ಒಂಚೂರು ಅನುಭವ ಅತ್ಯಗತ್ಯ. ಇದು ಪರಿಸರ ಪೂರಕವಾಗಿದ್ದು ಕೀಟನಾಶಕಗಳ ಬಳಕೆಯನ್ನು ತಡೆಯುವ ನಿಟ್ಟಿನಲ್ಲಿ ಮಾದರಿ ಪ್ರಯತ್ನವಿದು.

ಚಂದ್ರಹಾಸ   ಚಾರ್ಮಾಡಿ

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.