ವ್ಯಾಧಿ ಕ್ಷಮತ್ವ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಆಧುನಿಕ ಯುಗದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆಯಿಂದಾಗಿ ಜಗತ್ತು ನಾಗಾಲೋಟದಿಂದ ಅಭಿವೃದ್ಧಿ ಸಾಧಿಸುತ್ತಿದೆ. ಈಗಿನ ಬಹುತೇಕ ಜನರಿಗೆ ಅತೀ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಹಣ, ಅಂತಸ್ತು, ಅಧಿಕಾರ ಮತ್ತು ಕೀರ್ತಿ ಗಳಿಸುವುದು ಗುರಿಯಾಗಿದೆ. ಇದು ಮನುಷ್ಯರ ಮಧ್ಯೆ ಒಂದು ಅನಾರೋಗ್ಯಕರ ಸ್ಪರ್ಧೆಯನ್ನು ಉಂಟುಮಾಡಿದೆ. ಈ ಒತ್ತಡದ ಜೀವನ ಶೈಲಿಯಲ್ಲಿ ಬಹು ಮುಖ್ಯವಾದ ಒಂದು ವಿಷಯವನ್ನು ನಾವು ಕಡೆಗಣಿಸುತ್ತಿದ್ದೇವೆ. ಅದು ನಮ್ಮ ಆರೋಗ್ಯ.
ಪ್ರಾಯಶಃ ಆದಿಮಾನವನಿಂದ ಹಿಡಿದು, ಕಳೆದ ಶತಮಾನದ ಮಧ್ಯದವರೆಗೂ ಮನುಷ್ಯರ ರೋಗ ನಿರೋಧಕ ಶಕ್ತಿ ಅತ್ಯುತ್ತಮವಾಗಿತ್ತು. ಆದರೆ ಶಿಸ್ತು ಕ್ರಮವಿಲ್ಲದೆ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ರೋಗ ನಿರೋಧಕ ಶಕ್ತಿಯಲ್ಲಿ ಗಣನೀಯ ಕುಸಿತ ಕಾಣುತ್ತಿದೆ. ಅಬಾಲ ವೃದ್ಧರಾದಿಯಾಗಿ ಬಹುತೇಕ ಜನರು ಅನೇಕ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.
ಆಯುರ್ವೇದದಲ್ಲಿ ರೋಗ ನಿರೋಧಕ ಶಕ್ತಿಯನ್ನು ವ್ಯಾಧಿ ಕ್ಷಮತ್ವ ಎಂದು ಉಲ್ಲೇಖಿಸಿದ್ದು,ಇದನ್ನು ಕಾಪಾಡಿಕೊಳ್ಳಲು ಹಲವು ಮಾರ್ಗೋ ಪಾಯಗಳನ್ನು ಸೂಚಿಸಲಾಗಿದೆ. ಒಬ್ಬ ವ್ಯಕ್ತಿಯ ಜೀರ್ಣ ಶಕ್ತಿ ಉತ್ತಮವಾಗಿದ್ದಲ್ಲಿ ಆತನ ರೋಗ ನಿರೋಧಕ ಶಕ್ತಿಯೂ ಕೂಡ ಉತ್ತಮವಾಗಿರುತ್ತದೆ. ಇದರಿಂದ ದೇಹದ ಸಪ್ತಧಾತುಗಳಿಗೆ ಸರಿಯಾದ ಪೋಷಣೆ ದೊರೆತು ದೇಹವು ಸಧೃಢ ಗೊಳ್ಳುತ್ತದೆ. ಉತ್ತಮ ಪೋಷಕಾಂಶ ಗಳುಳ್ಳ ನೈಸರ್ಗಿಕ ಆಹಾರ ಸೇವನೆ ನಿಯಮಿತವಾಗಿ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಆಯುರ್ವೇದದಲ್ಲಿ ನಿತ್ಯ ಸೇವನೀಯ ಔಷಧೀಯ ದ್ರವ್ಯಗಳ ಬಗ್ಗೆ ಉಲ್ಲೇಖವಿದೆ. ಇವುಗಳ ನಿರಂತರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ನಮಗೆ ಸುಲಭವಾಗಿ ಲಭ್ಯವಾಗುವಂತಹ ಔಷದೀಯ ದ್ರವ್ಯಗಳನ್ನು ಸಂಕ್ಷಿಪ್ತವಾಗಿ ತಿಳಿದು ಕೊಳ್ಳೋಣ.
ಕಹಿಬೇವು: ಕಹಿಬೇವಿನ ಕಷಾಯ ಅಥವಾ ಎಲೆಗಳನ್ನು ಹಾಗೆಯೇ ಸೇವಿಸುವುದರಿಂದ ಅಜೀರ್ಣ ಮಲಬದ್ದತೆ ನಿವಾರಣೆಯಾಗುತ್ತದೆ. ಅಲ್ಲದೆ ಎದೆಯುಬ್ಬರ, ಹುಳಿತೇಗು ಮುಂತಾದ ಸಮಸ್ಯೆ ಶಮನಗೊಳ್ಳುತ್ತದೆ.
ನೆಲ್ಲಿಕಾಯಿ: ಬೆಟ್ಟದ ನೆಲ್ಲಿಕಾಯಿಯ ನಿತ್ಯಸೇವನೆಯಿಂದ ರಕ್ತ ಪರಿಚಲನೆ ಉತ್ತಮವಾಗಿ, ರಕ್ತದಲ್ಲಿ ಸಕ್ಕರೆ ಅಂಶ ಮತ್ತು ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣದಲ್ಲಿಡಲು ಸಹಾಯಕಾರಿ.
ಬೆಳ್ಳುಳ್ಳಿ: ದಿನನಿತ್ಯ 3-4 ಎಸಳು ಬೆಳ್ಳುಳ್ಳಿ ಸೇವನೆ ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟ ಮತ್ತು ರಕ್ತದೊತ್ತಡ ಕಡಿಮೆ ಮಾಡಿ ಹೃದಯಾಘಾತದ ಸಾಧ್ಯತೆಯನ್ನು ನಿಯಂತ್ರಿಸುತ್ತದೆ.
ಹರಿದ್ರಾ: ಮನೆಯಲ್ಲೆ ಬೆಳೆದ ಅರಶಿನವನ್ನು ಹುಡಿ ಮಾಡಿ ನಿತ್ಯ ಒಂದು ಚಮಚ ಹಾಲಿನೊಂದಿಗೆ ಸೇರಿಸಿ ಸೇವಿಸುವುದರಿಂದ, ಗಂಟು ನೋವು, ಸಿಹಿ ಮೂತ್ರ ರೋಗ, ಕ್ಯಾನ್ಸರ್ ಮುಂತಾದ ರೋಗಗಳು ಹಾಗೂ ಇನ್ನಿತರ ಸೋಂಕುಗಳ ವಿರುದ್ದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಶುಂಠಿ: ಪ್ರತಿದಿನ ಸಣ್ಣ ತುಂಡು ಶುಂಠಿಯನ್ನು ಸೇವಿಸಿದಲ್ಲಿ ಜೀರ್ಣಶಕ್ತಿ ವೃದ್ಧಿಯಾಗುತ್ತದೆ ಹಾಗೂ ಅನೇಕ ಉದರ ಸಂಬಂಧಿ ಸಮಸ್ಯೆಗಳು ನಿವಾರಣೆ ಯಾಗುತ್ತದೆ.
ಮೆಂತ್ಯೆ: ಮೆಂತ್ಯೆ ಕಾಳುಗಳನ್ನು ಹಿಂದಿನ ರಾತ್ರಿ ನೆನೆಸಿಟ್ಟು ಅದನ್ನು ನಿತ್ಯ ಖಾಲಿ ಹೊಟ್ಟೆಗೆ ಸೇವಿಸುವುದರಿಂದ ರಕ್ತದೊತ್ತಡ ಮತ್ತು ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು.
ಜೀರಿಗೆ: ಅರ್ಧ ಚಮಚದಷ್ಟು ಜೀರಿಗೆಯನ್ನು ನಿಯಮಿತವಾಗಿ ಸೇವಿಸುತ್ತಾ ಬಂದಲ್ಲಿ ಜೀರ್ಣ ಶಕ್ತಿ ಹೆಚ್ಚಾಗಿ ಮಲಬದ್ಧತೆಯನ್ನು ತಡೆಗಟ್ಟಬಹುದು.
ತುಳಸಿ: ತುಳಸಿ ಎಲೆಗಳ ನಿಯಮಿತ ಸೇವನೆ ಪದೇ ಪದೇ ಉಂಟಾಗುವ ಕೆಮ್ಮು ಮತ್ತು ಕಫವನ್ನು ತಡೆಗಟ್ಟಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಅಶ್ವಗಂಧ: ಅಶ್ವಗಂಧ ಚೂರ್ಣವನ್ನು ನಿತ್ಯ ಹಾಲಿನೊಂದಿಗೆ ಸೇವಿಸುವುದರಿಂದ ದೇಹ ಶಕ್ತಿಯುತಗೊಳಿಸಿ ಅಕಾಲ ವೃದ್ದಾಪ್ಯವನ್ನು ಮುಂದೂಡುತ್ತದೆ. ಈ ಎಲ್ಲಾ ಔಷಧೀಯ ದ್ರವ್ಯಗಳು ಮನುಷ್ಯನ ವ್ಯಾಧಿಕ್ಷಮತ್ವವನ್ನು ಹೆಚ್ಚಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸುಲಭವಾಗಿ ಲಭ್ಯವಾಗುವಂತಹ ಈ ಔಷಧೀಯ ದ್ರವ್ಯಗಳನ್ನು ನಾವು ದೈನಂದಿನ ಜೀವನದಲ್ಲಿ ಉಪಯೋಗಿಸಿದಲ್ಲಿ ನಿಸ್ಸಂದೇಹವಾಗಿ ಧೀರ್ಘಕಾಲ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಡಾ| ಹರ್ಷವರ್ಧನ ಬಿ., ಉಪನ್ಯಾಸಕರು,
ಪ್ರಸನ್ನ ಆಯುರ್ವೇದ ಕಾಲೇಜು, ಲಾಲ, ಬೆಳ್ತಂಗಡಿ

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.