ಪ್ರಕೃತಿ ವಿಕೋಪ ಮುನ್ನೆಚ್ಚರಿಕೆ ಕುರಿತು ಮಿನಿ ವಿಧಾನ ಸೌಧದಲ್ಲಿ ತುರ್ತುಸಭೆ.

ಬೆಳ್ತಂಗಡಿ: ವಿವಿಧ ಇಲಾಖೆ ಅಧಿಕಾರಿಗಳಿಗೆ ಪ್ರಕೃತಿ ವಿಕೋಪ ಮುನ್ನೆಚ್ಚರಿಕೆ ಕುರಿತು ಮೇ.23 ರಂದು ಮಿನಿವಿಧಾನಸೌಧ ಸಭಾಂಗಣದಲ್ಲಿ ತುರ್ತು ಸಭೆ ನಡೆಯಿತು.

ತಾಲೂಕಿನಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಮುಖ್ಯವಾಗಿ ತಾಲೂಕಿನಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ನಿರ್ವಹಣೆ ಸಮರ್ಪಕವಾಗಿ ನಡೆಯಬೇಕಿದೆ. ಚಾರ್ಮಾಡಿ ಘಾಟಿಯಲ್ಲಿ ರಸ್ತೆ ಕಿರಿದಾಗಿದ್ದು, ವಾಹನಗಳ ದಟ್ಟಣೆಯಿಂದ ಸವಾರರು ಪರದಾಡುತ್ತಿದ್ದಾರೆ. ರಸ್ತೆಯಿಂದ ವಾಹನಗಳನ್ನು ಬದಿಗೆ ಇಳಿಸಲೂ ಸಾಧ್ಯವಾಗದ ಪರಿಸ್ಥಿತಿಯಿದೆ. ಮಳೆ ಬಂದರೆ ಪರಿಸ್ಥಿತಿ ಇನ್ನಷ್ಟು ಜಟಿಲವಾಗಲಿದೆ. ಆದುದರಿಂದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಪುತ್ತೂರು ಉಪವಿಭಾಗ ಸಹಾಯಕ ಆಯುಕ್ತ ಹೆಚ್.ಕೆ.ಕೃಷ್ಣಮೂರ್ತಿ ಯವರಿಗೆ ತಿಳಿಸಿದರು.

ಪ್ರತಿಕ್ರಯಿಸಿದ ಹೆಚ್.ಕೆ. ಕೃಷ್ಣಮೂರ್ತಿ ಯವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಭಿಯಂತರ ಜೊತೆ ಮಾತನಾಡಿ ಕ್ರಮಕೈಗೊಳ್ಳಲು ತಿಳಿಸಲಾಗುವುದು. ಶಿರಾಡಿ ಘಾಟಿ ಆದಷ್ಟು ಬೇಗ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿದೆ. ಚಾರ್ಮಾಡಿ ಪ್ರದೇಶದಲ್ಲಿ ಗುಡ್ಡ ಕುಸಿತವಾಗುವ ಸಾಧ್ಯತೆಗಳಿದ್ದಲ್ಲಿ ಸಮರ್ಪಕ ಕ್ರಮ ಕೈಗೊಳ್ಳಬೇಕಿದೆ ಎಂದರು. ಎಲ್ಲಾ ಇಲಾಖೆ ಅಧಿಕಾರಿಗಳು ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಬೇಕಾಗಿದೆ. ಯಾವುದೇ ಕಾರಣಕ್ಕೂ ಅಧಿಕಾರಿಗಳು ಕೇಂದ್ರ ಸ್ಥಾನದಿಂದ ಹೊರಗೆ ತೆರಳುವ ವೇಳೆ ಅನುಮತಿ ಪಡೆಯುವುದು ಕಡ್ಡಾಯ. ಅಧಿಕಾರಿಗಳು ಯಾವುದೇ ಘಟನೆ ಸಂಭವಿಸಿದ ತಕ್ಷಣ ಸ್ಪಂದಿಸಬೇಕು. ಹಾನಿ ಸಂಭವಿಸಿದ್ದಲ್ಲಿ ಪರಿಹಾರ ನೀಡುವುದಕ್ಕೂ ಮುನ್ನ 24 ಗಟೆಗಳಲ್ಲಿ ನೆರವು ನೀಡಬೇಕು. ಅಗತ್ಯವಿದ್ದಲ್ಲಿ ತನಿಖೆ ಕೈಗೊಳ್ಳಬೇಕು ಎಂದು  ತಿಳಿಸಿದರು.

ಸಹಾಯವಾಣಿ: ಜನರಸಹಾಯಕ್ಕಾಗಿ ದಿನದ 24 ಗಂಟೆಗಳೂ ಸಹಾಯವಾಣಿ ಕಾರ್ಯನಿರ್ವಹಿಸಲಿದೆ. ಪ್ರಕೃತಿ ವಿಕೋಪ, ಅವಘಡ ಸಂಭವಿಸಿದ್ದಲ್ಲಿ  ಜನತೆ ತಕ್ಷಣ 08256-232047 ಗೆ ಕರೆಮಾಡಬಹುದು ಎಂದು ಸಹಾಯಕ ಆಯುಕ್ತರು ತಿಳಿಸಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಟಿ.ಸಿ.ಹಾದಿಮನಿ, ಇ.ಒ. ಬಸವರಾಜ ಅಯ್ಯಣ್ಣನವರ್, ಲೋಕೋಪಯೋಗಿ, ಕಂದಾಯ, ಆರೋಗ್ಯ, ವಿದ್ಯುತ್ ಶಿಕ್ಷಣ, ತೋಟಗಾರಿಕೆ, ಅರಣ್ಯ, ಪೊಲೀಸ್, ಸಮಾಜ ಕಲ್ಯಾಣ  ಮೊದಲಾದ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

 

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.