ಕೊಲೆ ಯತ್ನ ಆರೋಪ ಎದುರಿಸುತ್ತಿದ್ದ ಆರೋಪಿಗಳಿಗೆ ನ್ಯಾಯಾಂಗ ಬಂಧನ.

ಗೇರುಕಟ್ಟೆ: 6 ತಿಂಗಳ ಹಿಂದೆ ಗೇರುಕಟ್ಟೆ ಎಂಬಲ್ಲಿ ನಡೆದ ತಂಡದಿಂದ ಮೂವರ ಮೇಲೆ ಮಾರಣಾಂತಿಕ ಹಲ್ಲೆ ಮತ್ತು ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ರಿ ಆರೋಪದಡಿ ಕೇಸು ಎದುರಿಸಿ ತಲೆಮರೆಸಿಕೊಂಡಿದ್ದ 7 ಮಂದಿ ಆರೋಪಿಗಳು ಮೇ.16 ರಂದು ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ಸುಣ್ಣಲಡ್ಡ ನಿವಾಸಿ ಯಾಕೂಬ್, ಇರ್ಫಾನ್, ರಿಝ್ವಾನ್, ರವೂಫ್ ಯಾನೆ ಮುಹಮ್ಮದ್ ಆಸಿಫ್, ಉಮರಬ್ಬ, ಅಬ್ದುಲ್ ಅಝೀಝ್, ಹೈದರಾಲಿ ಎಂಬವರು ಘಟನೆಗೆ ಸಂಬಂಧಿಸಿ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆಯಲು ಅರ್ಜಿ ಹಾಕಿದ್ದರಾದರೂ ಅಲ್ಲಿ ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಕಳೆದ ಡಿಸೆಂಬರ್ ತಿಂಗಳಿನಿಂದ ತಲೆಮರೆಸಿಕೊಂಡಿದ್ದರು. ಈ ಮಧ್ಯೆ ಅವರು ಸೆಷನ್ಸ್ ನ್ಯಾಯಾಲಯದಿಂದಲೂ ನಿರೀಕ್ಷಣಾ ಜಾಮೀನಿಗೆ ಶ್ರಮಿಸಿ ವಿಫಲರಾಗಿದ್ದರು.
ಆರೋಪಿಗಳು ಅಂದು ಗೇರುಕಟ್ಟೆಯ ಅಂಗಡಿ ಬಳಿ ಇದ್ದ ಹಾರಿಸ್, ಮುಹಮ್ಮದ್ ತಸ್ಲೀಮ್ ಅವರಿಗೆ ಆಯುಧಗಳನ್ನು ಬಳಸಿ ಗಂಭೀರ ಹಲ್ಲೆ ನಡೆಸಿದ್ದರು. ತಡೆಯಲು ಬಂದಿದ್ದ ಶಿಹಾಬ್ ಅವರಿಗೂ ಹಲ್ಲೆ ನಡೆಸಿ, ಗಂಭೀರ ಗಾಯಕ್ಕೊಳಗಾಗಿದ್ದ ಮೂವರೂ ಅಂದು ಮಂಗಳೂರಿನ ಆಸ್ಪತ್ರೆಗಳಲ್ಲಿ ದೀರ್ಘ ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಂಡಿದ್ದರು.
ಘಟನೆಗೆ ಸಂಬಂಧಿಸಿದಂತೆ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ಗಾಯಾಳುಗಳು, ಅವರ ಪರ ಸಾಕ್ಷಿದಾರರುಗಳು ಆಗಿನ ಎಸ್‌.ಪಿ ಸುಧೀರ್ ಕುಮಾರ್ ರೆಡ್ಡಿ ಅವರ ಸಮ್ಮುಖ ನೀಡಿದ್ದ ಹೇಳಿಕೆಯಂತೆ ಮೇಲಿನ ಆರೋಪಿಗಳಾದ 7 ಮಂದಿ ಮತ್ತು ಜೊತೆಗೆ ಅಬೂಬಕ್ಕರ್ ಮತ್ತು ಆದಂ ಶಾಫಿ ಅವರನ್ನೊಳಗೊಂಡು ಒಟ್ಟು 9 ಮಂದಿಯ ವಿರುದ್ಧ ಆಗಿನ ಎಸ್.ಐ ರವಿ ಅವರ ನೇತೃತ್ವದ ಪೊಲೀಸರು ಎಫ್.ಐ.ಆರ್ ದಾಖಲಿಸಿಕೊಂಡಿದ್ದರು. ಈ ಪೈಕಿ ಆದಂ ಶಾಫಿ ಅವರನ್ನು ವಿಚಾರಣೆಗೊಳಪಡಿಸಿಕೊಂಡಿದ್ದ ಪೊಲೀಸರು ಬಳಿಕ ಅವರನ್ನು ಬಿಡುಗಡೆಗೊಳಿಸಿದ್ದಾರೆಂದು ತಿಳಿದುಬಂದಿದೆ. ಅಬೂಬಕ್ಕರ್ ಅವರು ಇನ್ನೂ ತಲೆಮರೆಸಿಕೊಂಡಿದ್ದಾರೆ.
ಇದೀಗ ಎಫ್‌ಐಆರ್‌ಗೊಳಗಾದ 9 ಮಂದಿಯ ಪೈಕಿ 7 ಮಂದಿ ನ್ಯಾಯಾಲಯಕ್ಕೆ ಶರಣಾಗಿದ್ದು ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ಆಯುಧಗಳನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.