ಸಂಗೀತ ಸಾಧಕಿ ವಿದುಷಿ ಕೆ.ಆರ್. ಶಾಂತ

Advt_NewsUnder_1
Advt_NewsUnder_1
Advt_NewsUnder_1
ಕೆ.ಆರ್ ಶಾಂತಾ
ಸಾಂತೂರು ಶ್ರೀನಿವಾಸ ತಂತ್ರಿ

ಸಂಗೀತ, ಪಕ್ಕ ವಾದ್ಯ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕಾಂಚನ ಹೆಸರು ಕಲಾಭಿಮಾನಿಗಳ ಸ್ಮೃತಿಪಟಲ ದಲ್ಲಿ ಸದಾ ಹಸಿರಾಗಿ ಅಚ್ಚಳಿಯದೆ ಉಳಿದಿದೆ. ಕಾಂಚನ ಪುಟ್ಟ ಹಳ್ಳಿಯಾದರೂ ಸಂಗೀತ ಕ್ಷೇತ್ರಕ್ಕೆ ಸಂದ ಕೊಡುಗೆ ಅತ್ಯಪೂರ್ವವಾದುದು. ಕಾಂಚನ ಊರಿನ ಪಕ್ಕದ ಕುದ್ಮಾರು ಮನೆತನವೂ ಹೆಸರುವಾಸಿಯಾಗಿದೆ. ಕುದ್ಮಾರು ಶ್ರೀಮತಿ ಮಹಾಲಕ್ಷ್ಮೀ ಮತ್ತು ಪದ್ಮನಾಭ ಕುಞಂಣ್ಣಾಯ ದಂಪತಿಗಳ ಪುತ್ರಿ ಕೆ.ಆರ್. ಶಾಂತಾ ಸಂಗೀತಾಸಕ್ತಿಯಿಂದ ವಯೋಲಿನ್ ವಾದಕಿಯಾಗಿ ಮಾಡಿದ ಸಾಧನೆ ಅಮೋಘ.
ಕಾಂಚನ ವಿದ್ವಾನ್ ವೆಂಕಟ ಸುಬ್ರಹ್ಮಣ್ಯ ಅಯ್ಯರ್ ಗರಡಿಯಲ್ಲಿ ಸಂಗೀತ ಮತ್ತು ವಯೋಲಿನ್ ಅಭ್ಯಸಿಸಿದ ಅವರು ಗುರುವಿನ ಅಚ್ಚುಮೆಚ್ಚಿನ ಶಿಷ್ಯೆ. ಸತತ 12 ವರ್ಷಗಳ ನಿರಂತರ ಅಭ್ಯಾಸದ ಫಲವಾಗಿ 1978 ರಲ್ಲಿ ವಯೋಲಿನ್ ವಾದನ ವಿದ್ವತ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 3 ನೇ ರ್‍ಯಾಂಕ್ ಪಡೆದ ಹೆಗ್ಗಳಿಕೆ ಅವರದ್ದು. ಕೆ.ಆರ್. ಶಾಂತ ತನ್ನ 15 ನೇ ವಯಸ್ಸಿನಿಂದ ತೊಡಗಿ 70 ರವರೆಗೂ ಸುದೀರ್ಘ 55 ವರ್ಷಗಳಲ್ಲಿ ಕಲಾ ಮಾತೆಯ ಸೇವೆಯನ್ನು ಸಾರ್ಥಕಗೊಳಿಸಿದ ಅಪರೂಪದ ಕಲಾವಿದರು. ಅವರು ತನ್ನ ಇಳಿವಯಸ್ಸಿನಲ್ಲೂ ಸಂಗೀತಾಸಕ್ತರಿಗೆ ಮನೆಯಲ್ಲೇ ಹಾಡುಗಾರಿಕೆ ಮತ್ತು ವಯೋಲಿನ್ ವಾದನ ಹೇಳಿ ಕೊಡುತ್ತಿರುವುದು ಅವರ ಕಲಾಪ್ರೌಢಿಮೆಗೆ ಸಾಕ್ಷಿ.
1970  ಮಾರ್ಚ್ 16 ರಂದು ರಾಮಕುಂಜದಲ್ಲಿ ವಾಸ್ತವ್ಯವಿದ್ದ ರಘುಪತಿ ಭಟ್ ಅವರ ಬಾಳ ಸಂಗಾತಿಯಾಗಿ ಪಡೆದ ಕೆ.ಆರ್. ಶಾಂತಾ ರಾಮ ಮನೋಹರ, ಗುರುರಾಜ ಮತ್ತು ವಸಂತ ಕುಮಾರ ಪುತ್ರತ್ರಯರನ್ನು ಪಡೆದು ಉಜಿರೆಯ ಕೂಡಿಗೆಯಲ್ಲಿ ಸಂತೃಪ್ತ ಜೀವನ ನಡೆಸುತ್ತಿದ್ದಾರೆ.
ಕೆ.ಆರ್. ಶಾಂತಾ ಅವರ ಕಲಾ ಸೇವೆಯನ್ನು ಗುರುತಿಸಿ ಶೃಂಗೇರಿಯ ಸುರುಳಿಯಲ್ಲಿ ಪೀಠಾಧಿಪತಿಗಳಿಂದ ಸನ್ಮಾನ, ಬೆಳ್ತಂಗಡಿ ತಾ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ತುಳು ಶಿವಳ್ಳಿ ಸಭಾ ವತಿಯಿಂದ ವಿಶ್ವ ಮಹಿಳಾ ದಿನದ ವಿಶೇಷ ಪುರಸ್ಕಾರ, ವಿವಿಧ ಸಂಘ ಸಂಸ್ಥೆಗಳು ಶಿಷ್ಯ ವೃಂದದಿಂದ ಅಭಿವಂದನೆ, ಗೌರವ ಸನ್ಮಾನಗಳು ಸಂದಿವೆ. ಸರಳ ಸೌಜನ್ಯತೆಯ ಸಾಕಾರ ಮೂರ್ತಿಯಾಗಿ ಯಾವುದೇ ಪ್ರಶಂಸೆ ಹೆಗ್ಗಳಿಕೆಗಳನ್ನು ಆಶಿಸದೆ ಅಪಾರ ಶಿಷ್ಯರಿಗೆ ತನ್ನ ಕಲಾ ಶ್ರೀಮಂತಿಕೆಯನ್ನು ಧಾರೆಯೆರೆಯುವ ಅಪರೂಪದ ಕಲಾಕಾರರು. ಬಹುಕಾಲ ಅವರ ಕಲಾ ಸೇವೆ ನಿರಂತರವಾಗಿ ಸಾಗಲಿ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.