ಕಷ್ಟವು ಬರುವುದು ಹೀಗೆ

Advt_NewsUnder_1
Advt_NewsUnder_1
Advt_NewsUnder_1
ಎಂ. ಬಾಬು ಶೆಟ್ಟಿ ನಾರಾವಿ

ಬಾಳೆಯ ಹಣ್ಣನು ತಿಂದವಸೆವರು| ಸಿಪ್ಪೆಯ ಬೀದಿಯ ಕೊನೆಗೆ|
ಕಾಣದೆ ಕಾಲಿಟ್ಟು ಜಾರುವರನ್ಯರು| ಕಷ್ಟವು ಬರುವುದು ಹೀಗೆ||
ಡಿ.ಎಸ್.ವಿ ಪರಮೇಶ್ವರ ಭಟ್ಟ ಅವರ ನುಡಿ ಮುತ್ತುಗಳಿಂದ ಆಯ್ದ ಸಾಲುಗಳು ಮೇಲಿನವು. ಯಾರೋ ಮಾಡಿದ ತಪ್ಪಿನಿಂದ, ತೋರಿದ ನಿರ್ಲಕ್ಷ್ಯರಿಂದ ಅಮಾಯಕರು, ನಿರಪರಾಧಿಗಳು ಶಿಕ್ಷೆ ಅನುಭವಿಸುವ ವಿಪರ್ಯಾಸವನ್ನು ನಾವು ಸಮಾಜದಲ್ಲಿ ದಿನನಿತ್ಯ ಕಾಣುತ್ತೇವೆ. ಐದಂತಸ್ತಿನ, ಏಳಂತಸ್ತಿನ, ಹನ್ನೆರೆಡಂತಸ್ತಿನ ಗಗನಚುಂಬಿ ಕಟ್ಟಡಗಳು ಲೆಕ್ಕವಿಲ್ಲದಷ್ಟು ಏಳುತ್ತವೆ. ಲಕ್ಷಗಟ್ಟಲೆ ಬಡ ಕಾರ್ಮಿಕರು ಕಾರ್ಯನಿರತರಾಗಿರುತ್ತಾರೆ. ಯಾರದೋ ತಪ್ಪಿನಿಂದ, ಪ್ರಮಾದದಿಂದ ಕೆಲವೊಮ್ಮೆ ಕಟ್ಟಡಗಳು ಅರ್ಧದಲ್ಲೇ ಅಥವಾ ಪೂರ್ಣಗೊಂಡ ಮೇಲೆ ಕುಸಿದು ಬೀಳುವುದಿದೆ. ಆಗ ಪ್ರಾಣ ಕಳೆದುಕೊಳ್ಳುವ ಅಸಂಖ್ಯಾತರು ನಿರಪ ರಾಧಿಗಳು, ಮೇಲೆ ಉಲ್ಲೇಖಿಸಿದ ಉದಾಹರಣೆಯಲ್ಲಿ ಒಬ್ಬಾತ ತಿಳಿಗೇಡಿ ಬಾಳೆಯ ಹಣ್ಣು ತಿಂದು ಸಿಪ್ಪೆಯನ್ನು ನಿರ್ಲಕ್ಷ್ಯದಿಂದ ಬೀದಿಗೆ ಎಸೆದು ಹೋಗುತ್ತಾನೆ. ಬಸ್ಸು ಹಿಡಿಯುವ ಧಾವಂತದಲ್ಲಿ ಓಡುವ ಪ್ರಯಾಣಿಕನೊಬ್ಬ ಕಾಣದ ಆ ಸಿಪ್ಪೆಯ ಮೇಲೆ ಕಾಲಿಟ್ಟು ಜಾರಿ ಬೀಳುತ್ತಾನೆ. ಯಾವುದೋ ಅತ್ಯಂತ ಅಗತ್ಯದ ಕಾರ್ಯಾರ್ಥವಾಗಿ ಹೋಗಬೇಕಾಗಿ ಬರುತ್ತದೆ. ಬಾಳೆಹಣ್ಣಿನ ಸಿಪ್ಪೆ ನಿರ್ಲಕ್ಷ್ಯದಿಂದ ಬೀದಿಗೆಸೆದು ಹೋದವ ಯಾರೋ? ಕಾಣದೆ ಅದರ ಮೇಲೆ ಕಾಲಿಟ್ಟು ಜಾರಿ ಬಿದ್ದು ಅನಿರೀಕ್ಷಿತ ಆಘಾತಕ್ಕೆ ಒಳಗಾದವ ಯಾರೋ? ಹೀಗೆ ಕಷ್ಟಗಳು, ಆಪತ್ತುಗಳು, ಸಾವಿನ ದುರ್ಘಟನೆಗಳು ಯಾರೋ ಮಾಡಿದ ತಪ್ಪಿನಿಂದಾಗಿ ಅನಿರೀಕ್ಷಿತವಾಗಿ ಅದೃಷ್ಟಹೀನರನ್ನು ಹಿಂಬಾಲಿಸುವೆ.
ಇತ್ತೀಚೆಗೆ ಉತ್ತರ ಪ್ರದೇಶದ ಖುಷಿನಗರದ ಡಿವೈನ್ ಪಬ್ಲಿಕ್ ಶಾಲೆಯ ಮಕ್ಕಳನ್ನು ತುಂಬಿಕೊಂಡ ವಾಹನವೊಂದು ರೈಲ್ವೇ ಕ್ರಾಸಿಂಗ್‌ನಲ್ಲಿ ಶಾಲಾ ವಾಹನದ ಚಾಲಕನ ನಿರ್ಲಕ್ಷ್ಯದಿಂದ ರೈಲಿಗೆ ಡಿಕ್ಕಿಯಾಗಿ ಹದಿಮೂರು ಮಂದಿ ಹಸುಳೆಗಳು ಮರಣಕ್ಕೀಡಾಗಿ, ಎಂಟು ಮಂದಿ ಗಂಭೀರ ಗಾಯಗೊಂಡು ಸಾವು-ಬದುಕಿನ ಹೋರಾಟದಲ್ಲಿ ಸಿಕ್ಕಿಕೊಂಡ ಆಘಾತಕಾರಿ ಘಟನೆ ನಡೆಯಿತು. ಘಟನೆಗೆ ಕಾರಣ ಶಾಲಾ ವಾಹನದ ಚಾಲಕ ಇಯರ್‌ಫೋನ್ ಹಾಕಿಕೊಂಡು ಸಂಗೀತ ಕೇಳುತ್ತ ಈ ಲೋಕವನ್ನು ಮರೆತು ವಾಹನ ಚಲಾಯಿಸುತ್ತಿದ್ದುದು. ಇಪ್ಪತ್ತೈದು ಮಕ್ಕಳನ್ನು ಹೊತ್ತಿದ್ದ ಆ ಶಾಲಾ ವಾಹನದಲ್ಲಿ ಬೆಳಗ್ಗಿನ ಏಳುಘಂಟೆ ಸಮಯಕ್ಕೆ ಅದರೊಳಗಿನ ಕಂದಮ್ಮಗಳೆಲ್ಲರೂ ನಗುನಗುತ್ತ ಸಂತೋಷದಲ್ಲಿದ್ದರು. ಈ ಮಕ್ಕಳ ಪ್ರಾಣ ನನ್ನ ಕೈಯಲ್ಲಿದೆ ಎಂಬ ಪ್ರಜ್ಞೆ ಕಳೆದುಕೊಂಡ ಕರ್ತವ್ಯ ಭ್ರಷ್ಟ ಚಾಲಕ ತನ್ನ ಪ್ರಮಾದಕ್ಕೆ ತಾನೂ ಬಲಿಯಾದುದಲ್ಲದೆ ಅಷ್ಟೂ ಮಕ್ಕಳ ಮನೆಯ ಆನಂದದ ನಂದಾ ದೀಪವನ್ನೇ ನಂದಿಸಿ ಬಿಟ್ಟ! ಅಷ್ಟೂ ಮಕ್ಕಳ ಹೆತ್ತವರು ಜೀವಮಾನವಿಡೀ ಕಣ್ಣೀರಿಡುವಂತೆ ಮಾಡಿ ಬಿಟ್ಟ! ಕರ್ತವ್ಯ ಪ್ರಜ್ಞೆ ಎಂಬುದು ಎಷ್ಟು ಪವಿತ್ರ! ಅದರ ನಿರ್ವಹಣೆಯಲ್ಲಿರಬೇಕಾದ ಎಚ್ಚರ ಎಷ್ಟು ಅನಿವಾರ್ಯ ಎಂಬುದನ್ನು ಅನುಕ್ಷಣವೂ ಗಂಭೀರವಾಗಿ ಚಿಂತಿಸ ಬೇಕಾದುದು ಪ್ರತಿಯೊಬ್ಬರ ಕರ್ತವ್ಯ!
ಕೆಲವೊಮ್ಮೆ ಒಬ್ಬನ ಅಥವಾ ಕೆಲವರ ಪ್ರಮಾದದಿಂದ, ನಿರ್ಲಕ್ಷ್ಯದಿಂದ, ತಪ್ಪು ಹೆಜ್ಜೆಯಿಂದ, ಬಹುಮಂದಿ ಬಹುಕಾಲ ನೋವುಣ್ಣ ಬೇಕಾದ, ಮಾನಸಿಕ ದೈಹಿಕ ಕ್ಲೇಶಗಳಿಗೆ ಗುರಿಯಾಗಿ ದುಃಖ ಪಡಬೇಕಾದ ದುರ್ಧರ ಪ್ರಸಂಗ ಬರಬಹುದು. 1757 ರಿಂದ 1947 ರ ವರೆಗೆ 190 ವರ್ಷಗಳ ಕಾಲ ಭಾರತದಲ್ಲಿ ಆಂಗ್ಲರ ಪ್ರಭುತ್ವ ಮರೆಯಿತು. ಈ ದೀರ್ಘ ಕಾಲಾವಧಿಯಲ್ಲಿ ಭಾರತೀಯರು ಅನುಭವಿಸಿದ ನೋವು, ಸುರಿಸಿದ ಕಣ್ಣೀರು ವರ್ಣನಾತೀತ, ಊಹನಾತೀತ!
ಕೊನೆಗೂ ಆ ಸಾವು ನೋವಿನ ಕಥೆಯ ಕೊನೆಯಂಕ 1947 ರಲ್ಲಿ ಕೊನೆಗೊಂಡಾಗ ಆಂಗ್ಲರು ನಮಗೆಕೊಟ್ಟ ಕೊಡುಗೆ ಬಡತನ, ನಿರುದ್ಯೋಗ, ಆರ್ಥಿಕ ಅಸಮಾನತೆ, ಪ್ರತಿಕೂಲ ವ್ಯಾಪಾರ ನೀತಿ ಇತ್ಯಾದಿ! ಈ ಕರುಣಾಜನಕ ಕರ್ಮಕಾಂಡದ ಪ್ರಾರಂಭ ಹೇಗೆ? ಎಂಥ ಸ್ವಾರ್ಥ ಪ್ರೇರಿತ ಎಂಬುದರ ಕಡೆಗೆ ಗಮನ ಹರಿಸಿದರೆ ನಾವು ಮಮ್ಮಲ ಮರುಗುತ್ತೇವೆ. 190 ವರ್ಷಗಳ ಈ ದೀರ್ಘಾವಧಿಯಲ್ಲಿ ಸೆರೆಮನೆಯ ಹಿಂಸೆಗೊಳಗಾದ, ನೇಣುಗಂಬವೇರಿದ, ಜೀವನ್ನುತ ಸ್ಥಿತಿಯಲ್ಲಿ ನರಕ ಅನುಭವಿಸಿದ ಭಾರತೀಯ ದೇಶಭಕ್ತರ ಸಂಖ್ಯೆಯೇನು ಕಡಿಮೆಯೇ? ಇದಕ್ಕೆಲ್ಲ ಮೂಲ ಕಾರಣ 1605-1627 ರ ವರೆಗೆ ಭಾರತವನ್ನಾಳಿದ್ದ ಮೊಗಲ್ ಬಾದಷಹ ಜಹಾಂಗೀರನ ಕಾಲದ ಒಂದು ಘಟನೆ. ಆಗ ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿಗೆ ಭಾರತದಲ್ಲಿ ವ್ಯಾಪಾರ ಮಾಡಲು ಬಾದಷಹ ಜಹಾಂಗೀರನಿಂದ ಒಪ್ಪಿಗೆ ದೊರೆಯಿತು.
ಇಂಗ್ಲಿಷರು ಜಹಾಂಗೀರನಿಗೆ ಯುರೋಪಿನ ಬೆಲೆ ಬಾಳುವ ಹಾಗೂ ಅಪೂರ್ವ ಕೊಡುಗೆಗಳನ್ನು ನೀಡಿ ಖುಷಿಪಡಿಸಿದರು. ಇದರಿಂದ ಆಕರ್ಷಿತನಾದ ಬಾದಷಹನು ಭಾರತದಲ್ಲಿ ಅವರಿಗೆ ಬೇಕಾದಂತೆ ವ್ಯಾಪಾರ ಮಾಡಲು ಅನುಮತಿ ನೀಡಿದನು. ಮಾತ್ರವಲ್ಲದೆ ಜಹಾಂಗೀರನು ಇಂಗ್ಲೆಂಡಿನ ರಾಜ ಜೇಮ್ಸನಿಗೆ ಒಂದು ಪತ್ರ ಬರೆದು ಈಸ್ಟ್ ಇಂಡಿಯಾ ಕಂಪೆನಿಗೆ ಮುಕ್ತ ವ್ಯಾಪಾರ ಸ್ವಾತಂತ್ರ್ಯವನ್ನೂ, ಎಲ್ಲಾ ಸಹಕಾರವನ್ನು ನೀಡುವ ನಿರ್ಧಾರವನ್ನೂ ತಿಳಿಸಿ- ನಮ್ಮೊಳಗಿ ಸ್ನೇಹಾಚಾರ ಶಾಶ್ವತವಾಗಿರಲಿ- ಎಂದು ತಿಳಿಸಿದನು. ಬೆರಳು ತೋರಿಸಿದರೆ ದೇಹ ನುಂಗುವ ಆಂಗ್ಲರು ಈ ಸ್ನೇಹಾಚಾರವನ್ನು-ಚೆನ್ನಾಗಿಯೇ ಬಳಸಿಕೊಂಡರು. ಜಹಾಂಗೀರ ಬಾದಷಹ ಭಾರತವನ್ನು ನಿರ್ಬಂಧ ರಹಿತವಾಗಿ ಇಂಗ್ಲಿಷರಿಗೆ ತೆರೆದಿಟ್ಟ ಪರಿಣಾಮವಾಗಿ ಭಾರತ ದೇಶ ಎರಡು ಶತಮಾನಗಳ ಕಾಲ ಆಂಗ್ಲರಿಂದ ಅಸಹನೀಯವಾದ ದೈಹಿಕ, ಮಾನಸಿಕ ಹಿಂಸೆಯನ್ನು ಅನುಭವಿಸಬೇಕಾಗಿ ಬಂತು. ಆಂಗ್ಲರ ವಿಲಾಸೀ ವಸ್ತುಗಳಲ್ಲಿ ಬಾದಷಹನು ಮನಸೋಲದಿರುತ್ತಿದ್ದರೆ ಇಂಗ್ಲಿಷರಿಗೆ ಭಾರತದಲ್ಲಿ ನೆಲೆಯೂರುವುದು ಸುಲಭ ಸಾಧ್ಯವಾಗಿರಲಿಲ್ಲ.
ಉನ್ನತಾಧಿಕಾರದಲ್ಲಿರುವವರು, ಜವಾಬ್ದಾರಿಯ ಕರ್ತವ್ಯದಲ್ಲಿ ತೊಡಗಿರುವವರು ಕ್ಷಣ ಕಾಲ ಎಚ್ಚರ ತಪ್ಪಿದರೂ ಸಾಕು ಅದರ ದುಷ್ಪರಿಣಾಮ ಎಷ್ಟು ಆಗಾಧ ಮತ್ತು ಅಮಾಯಕರ ಬದುಕಿಗೆ ಎಷ್ಟು ಗಂಡಾಂತರಕಾರಿ ಎಂಬುದಕ್ಕೆ ಅತ್ಯಂತ ಜ್ವಲಂತ ನಿದರ್ಶನ ಮೇಲಿನ ಪ್ರಕರಣ! ಇಲ್ಲಿ ಸಮಾಜಕ್ಕಿರುವ ಜೀವಂತ ಪಾಠವೆಂದರೆ ಪ್ರತಿಯೊಬ್ಬರಿಗೂ ಕರ್ತವ್ಯವೇ ದೇವರು! ಅದರಲ್ಲೂ ಉನ್ನತ ಸ್ಥಾನದಲ್ಲಿರುವವರಿಗೆ ಕರ್ತವ್ಯಕ್ಕಿಂತ ಮಿಗಿಲಾದ ತಪಸ್ಸಿಲ್ಲ. ಕರ್ತವ್ಯ ಪರಾತಣತೆಯೇ ದೇವರ ಪೂಜೆ. ಭಗವಂತನಿಗೆ ಇದಕ್ಕಿಂತ ಇಷ್ಟವಾದ, ಶ್ರೇಷ್ಠವಾದ ಪೂಜೆ ಬೇರೆಯಿಲ್ಲ. ಕರ್ತವ್ಯ ಪಾಲನೆಯೇ ಶ್ರೇಷ್ಠ ಧರ್ಮ, ಅದೇ ತ್ಯಾಗದ ಹಾದಿ. ಕರ್ತವ್ಯದಲ್ಲೇ ದೇವರನ್ನೂ ಕಾಣುವ ಶ್ರೇಷ್ಠ ಮನೋಮಟ್ಟ ಬೆಳೆಸಿ ಕೊಂಡಾಗಲೇ ಸಮಾಜದ ಸರ್ವೋದ್ಧಾರ ಸಾಧ್ಯ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.