ಇಂಥೆಲ್ಲ ಹುಚ್ಚು ಬೇಡ!

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
ಶಿವರಾಮ ಶಿಶಿಲ

ಯಕ್ಷಗಾನದಲ್ಲಿ ಮೂಡಲಪಾಯ, ಪಡುವಲಪಾಯ ಸಣ್ಣಾಟ, ದೊಡ್ಡಾಟ, ಶ್ರೀಕೃಷ್ಣ ಪಾರಿಜಾತ, ತೆಂಕುತಿಟ್ಟು, ಬಡಗುತಿಟ್ಟು, ಬಡಾಬಡಗುತಿಟ್ಟು ಇತ್ಯಾದಿ ಪ್ರಭೇದಗಳಿವೆ. ಆಯಾ ಪ್ರದೇಶದ ಸಂಪ್ರದಾಯಕ್ಕನುಗುಣವಾಗಿ ಇವುಗಳ ಪ್ರದರ್ಶನ ಜರಗುತ್ತದೆ. ಘಟ್ಟದ ಮೇಲಿನ ಬಯಲಾಟ ಸಂಪ್ರದಾಯಕ್ಕೂ, ಕರಾವಳಿಯ ಸಂಪ್ರದಾಯಕ್ಕೂ, ವೇಷಭೂಷಣ, ಹಾಡು, ಅಭಿನಯ, ಕುಣಿತ, ಮಾತುಗಾರಿಕೆಗಳಲ್ಲಿ ಹಲವು ವ್ಯತ್ಯಾಸಗಳನ್ನು ಮನಗಾಣಬಹುದು. ಹಾಗಿದ್ದರೂ ಕೂಡ ಈ ಯಕ್ಷಗಾನ ಪ್ರಭೇದಗಳು ಮನೋರಂಜನೆಯೊಂದಿಗೆ ಸತ್ಯ, ಧರ್ಮ, ನ್ಯಾಯ ನೀತಿಗಳಿಗೆ ಸಂಬಂಧಿಸಿದ ಧಾರ್ಮಿಕ, ಪೌರಾಣಿಕ, ಐತಿಹಾಸಿಕ ಜ್ಞಾನವನ್ನು ಜನಸಾಮಾನ್ಯರಿಗೆ ಉಣಬಡಿಸಿ, ಅವರ ನೈತಿಕತೆ, ಸಂಸ್ಕಾರ, ಸಾಮಾನ್ಯ ಜೀವನ ಶೈಲಿಯನ್ನು ವಿಕಾಸಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವುದು ಶ್ಲಾಘನೀಯ!
ಪ್ರಕೃತ ಕರಾವಳಿಯ ಯಕ್ಷಗಾನ ಆಟ-ಕೂಟಗಳನ್ನು ಮಾತ್ರ ಅವಲೋಕಿಸಿದರೂ ಕೂಡ, ಮಹನೀಯರ ಮೇಳ, ಮಹಿಳೆಯರ ಮೇಳ ಮತ್ತು ಮಕ್ಕಳ ಮೇಳಗಳೆಂದು ವಿಂಗಡಿಸಲ್ಪಟ್ಟು, ದೇಶವಿದೇಶಗಳಲ್ಲಿ ಪ್ರದರ್ಶನಗೊಂಡು ಜಯಭೇರಿ ಬಾರಿಸುತ್ತಿರುವುದು ಅದರ ಹೆಗ್ಗಳಿಕೆ ಎನ್ನಬಹುದು. ಹಿಂದೆಲ್ಲ ಕಲಾವಿದರ ಸಂಖ್ಯೆ ಕಡಿಮೆ ಇರುತ್ತಿದ್ದು, ಕೇವಲ ಬೆರಳಣಿಕೆಯ ಮೇಳಗಳು (ಪುರುಷರದ್ದು) ಪ್ರದರ್ಶನ ನೀಡುತ್ತಿದ್ದವು. ಆಗ ಈಗಿರುವಂತೆ ಅಲ್ಲಲ್ಲಿ ಯಕ್ಷಗಾನ ಶಾಲೆಗಳಿರಲಿಲ್ಲ. ಕೇವಲ ಕೂಡ್ಲು ಮೇಳದ ಶ್ಯಾನುಭೋಗರ ಮನೆಯಲ್ಲಿ ಹಿಮ್ಮೇಳ ಮುಮ್ಮೇಳಗಳಲ್ಲಿ ಕಲಿಸಲಾಗುತ್ತಿತ್ತು. ಭಾಗವತ ಶಕಪುರುಷ ಅಜ್ಜಬಲಿಪರು ಕೂಡ ಶಾಸ್ತ್ರೀಯ ರಾಗಗಳನ್ನು ಸಾಂಪ್ರದಾಯಿಕ ಶೈಲಿಗೆ ಅಳವಡಿಸಿ ಆ ಕಲಾಶಾಲೆಯಲ್ಲಿ ಕಲಿತು ಯಕ್ಷಗಾನ ಸಾಂಪ್ರದಾಯಿಕ ಶೈಲಿಯ ಸೊಬಗನ್ನು ಮರೆಯಿಸಿದರು. ಆದರೆ ಇಂತಹ ಕಲಿಯುವಿಕೆಯ ಅವಕಾಶ ಎಲ್ಲರಿಗೂ ಸಕಾರಣ ಸಿಗುತ್ತಿರಲಿಲ್ಲ. ಮೇಳದ ಹಿಮ್ಮೇಳ, ಮುಮ್ಮೇಳದ ಕಲಾವಿದರ ಶಿಷ್ಯತ್ವ ಸ್ವೀಕರಿಸಿ ಅವರ ಚಿಕ್ಕಪುಟ್ಟ ಸೇವೆ ಮಾಡುತ್ತಾ ಕಿರಿಯ ಹುಡುಗರು ಕಲಿತುಕೊಳ್ಳುತ್ತಿದ್ದರು.
ಆಗ ತುಲಾ ಮಾಸದ ಹತ್ತರಂದು (ಪತ್ತನಾಜೆ) ಆಯಾ ದೇವಸ್ಥಾನಗಳಿಂದ ಗೆಜ್ಜೆ ಕಟ್ಟಿ ಸೇವೆ ಸಲ್ಲಿಸಿ ತಿರುಗಾಟಕ್ಕೆ ಹೊರಡುವ ಮೇಳಗಳು ವೃಷಭ ಮಾಸದ ಪತ್ತನಾಚೆಗೆ ಆ ವರ್ಷದ ತಿರುಗಾಟವನ್ನು ಕೊನೆಗೊಳಿಸಿ ಮೂಲಸ್ಥಾನ ಗಳಿಗೆ ಹಿಂದಿರುಗಿ ಸೇವೆಯಾಟವಾಗಿ ಗೆಜ್ಜೆ ಬಿಚ್ಚಿಸುವ ಪದ್ಧತಿ ರೂಢಿಯಲ್ಲಿತ್ತು. ಕೆಲವು ಮೇಳಗಳಲ್ಲಿ ಈ ಪದ್ಧತಿ ಇನ್ನೂ ಉಳಿದುಕೊಂಡಿದೆ. ಅನಂತರದ ಆರು ತಿಂಗಳು ಕಲಾವಿದರಿಗೆ ಕಲಾವ್ಯವಸಾಯ ಇರದ ಕಾರಣ ಜೀವನೋಪಾಯಕ್ಕಾಗಿ ತಮ್ಮ ಹಾಗೂ ಅನ್ಯರ ಮನೆಯಲ್ಲಿ ದುಡಿಯಬೇಕಾಗುತ್ತಿತ್ತು. ಆದರೆ ಕೆಲವರಿಗೆ ಮೈಮುರಿದು ದುಡಿಯಲು ಬರುತ್ತಿರಲಿಲ್ಲ.
ಹೀಗಾಗಿ ಮೇಳದ ಕೆಲವು ಮಂದಿ ಸೇರಿಕೊಂಡು, ಮೇಳದ ಯಜಮಾನರಿಂದ ಸ್ತ್ರೀವೇಷ, ಪುಂಡುವೇಷಗಳ ವೇಷಭೂಷಣ, ಹಿಮ್ಮೇಳ ಪರಿಕರಗಳನ್ನು ಬಾಡಿಗೆಗೆ ಪಡೆದು ಸಣ್ಣಮೇಳ ಕಟ್ಟಿಕೊಳ್ಳುತ್ತಿದ್ದರು. ಮನೆ ಮನೆಗಳಿಗೆ ತೆರಳಿ 10-15 ನಿಮಿಷಗಳ ಪ್ರದರ್ಶನ ಕೊಟ್ಟು ಪಡೆದ ಸಂಭಾವನೆಯಿಂದ ಜೀವನ ಸಾಗಿಸುತ್ತಿದ್ದರು. (ಕೆಲವೆಡೆ ಇದು ಇನ್ನು ಜಾಲ್ತಿಯಲ್ಲಿದೆ.)
ಅಂದಾಜು 1950-60ನೇ ದಶಕದಲ್ಲಿ ಇಂಥ ಚಿಕ್ಕ ಮೇಳವನ್ನು ರಚಿಸಿ ಪ್ರದರ್ಶನ ಕೊಟ್ಟವರಲ್ಲಿ ಪ್ರಸಿದ್ಧ ಹಾಸ್ಯ ಕಲಾವಿದ ಮಧೂರು ಕುಂಞಂಬು ಹಾಸ್ಯಗಾರರು ಮೊದಲಿಗರೆನ್ನಬಹುದು. ೫೦ರ ದಶಕದಲ್ಲಿ ಅವರು ನಮ್ಮ ಮನೆಗೂ ಬಂದು ಪ್ರದರ್ಶನ ಕೊಟ್ಟ ಅರೆಬರೆ ನೆನಪು ಇನ್ನೂ ಮನದಿಂದ ಮಾಸಿಲ್ಲ ಅನಂತರದ ಮೂರು ವರ್ಷಗಳ ಬಳಿಕ ಅಂದರೆ ಅಂದಾಜು 1954ರಲ್ಲಿ ಹಿಮ್ಮೇಳ ಕಲಾವಿದರಾಗಿದ್ದ ನನ್ನ ಅಪ್ಪ ಮತ್ತು ಅಣ್ಣ ಇಂಥದ್ದೊಂದು ಚಿಕ್ಕ ಮೇಳ ಕಟ್ಟಿದರು.
ಬಳ್ಳಂಬೆಟ್ಟು ಮೇಳದ ಯಜಮಾನ ಶೀನಪ್ಪ ಭಂಡಾರಿಗಳಿಂದ ಬೇಕಾದ ಪರಿಕರಗಳನ್ನು ಬಾಡಿಗೆಗೆ ಪಡೆದು, ಸ್ತ್ರೀವೇಷ, ಪುರುಷವೇಷಕ್ಕೆ ಮೇಳದಿಂದಲೇ ಕಲಾವಿದರನ್ನು ಕರೆಯಿಸಿ ಮಳೆಗಾಲದಲ್ಲಿ ಈ ಪ್ರದರ್ಶನ ಶುರುಮಾಡಿಯೇ ಬಿಟ್ಟರು. ನಮ್ಮ ಮನೆಯ ಕೊಟ್ಟಿಗೆಯಲ್ಲಿ ಸಂಜೆ ಹೊತ್ತು ಮುಖವರ್ಣಿಕೆ, ವೇಷಭೂಷಣ ತೊಡುವಿಕೆ ಇತ್ಯಾದಿಗಳನ್ನು ನಾವು ಕಿರಿಯರು ಕುತೂಹಲದಿಂದ, ಬೆರಗು ಕಣ್ಣಿಂದ ನೋಡಿ ಖುಷಿಪಡುತ್ತಿದ್ದೆವು.
ವೇಷಗಳು ಸಿದ್ಧವಾದೊಡನೆ ಗೆಜ್ಜೆಕಟ್ಟಿ ಮಹಾಗಣಪತಿಗೆ ಗಜಮುಖದವಗೆ ಪ್ರಾರ್ಥನೆ ಸಲ್ಲಿಸಿ ಮನೆ ಮನೆಗಳಿಗೆ ಸಂಚರಿಸಿ ಪ್ರದರ್ಶನ ನೀಡಲಾಯಿತು. ಹಾಡುಗಾರಿಕೆಗೆ ಅಣ್ಣ, ಮದ್ದಲೆವಾದನಕ್ಕೆ ಅಪ್ಪ, ಶ್ರುತಿ ಬಾರಿಸಲು ನಾನು, ಪೆಟ್ರೋಮೆಕ್ಸ್ ಹಿಡಿಯಲು ನೆರೆಮನೆಯ ರಾಮಣ್ಣ. ಪ್ರತಿಧಿನ ಸಂಜೆ 7 ಗಂಟೆಯಿಂದ ರಾತ್ರಿ ೧೦ ಗಂಟೆಯ ತನಕ ಈ ಪ್ರದರ್ಶನ! ಅದರೆಡೆಯಲ್ಲಿ ಮನೆಮನೆಗಳಿಗೆ ಬೆಳಕಿನೊಂದಿಗೆ ಬರುತ್ತಿರುವ ಈ ತಂಡವನ್ನು ಕಂಡ ನಾಯಿಗಳ ಅಬ್ಬರದ ಬೊಗಳುವಿಕೆಯ ಸ್ವಾಗತವೇ ಸ್ವಾಗತ! ಆದರೂ ಈ ಸಂಭ್ರಮವನ್ನು ಕಂಡೂ ಎಲ್ಲರಿಗೂ ಖುಷಿಯೋ ಖುಷಿ, ಸ್ತ್ರೀ ಪುರುಷ ಪಾತ್ರಧಾರಿಗಳಿಂದ ಪಂಚವಟಿ ಪ್ರಸಂಗದ ಶ್ರೀರಾಮಸೀತಾ ಸಂವಾದ ನೋಡಿದೆಯಾ ರಾಮ ನೋಡಿದೆಯ ದೊಡ್ಡ ಕಾಡಿನಿಂದಲೋಡಿಬಂದು ಆಡುವಂಥ ಪೊಂಮೃಗವ, ರಾಮ ಮಯಾಶೂರ್ಪಣಖಿಯರ ಸಂವಾದ ರಾಘವ ನರಪತೇ ಶೃಣುಮಮ ವಚನಂ, ಸುಭದ್ರಾಕಲ್ಯಾಣದ ಶ್ರೀಕೃಷ್ಣ ಸತ್ಯಭಾಮಾ ಸಂವಾದ ಆವನಾರಿಯ ಮೇಲೆ ಮನವಾಯ್ತು ನಿನಗೆ, ಶ್ರೀಕೃಷ್ಣ ಚಂದ್ರಾವಳಿಯ ಚಂದ್ರಾವಳಿ ವಿಲಾಸದ ಸಂವಾದ ಭಳಿರೆ ಚಂದ್ರಾವಳಿ ನಿನ್ನನ್ನು ಕಾಣದೆ.. ಇತ್ಯಾದಿ ಪ್ರದರ್ಶನಗಳು ಬಹಳ ರೋಚಕವಾಗಿ ಸಾಗಿದವು. ಕೈತುಂಬಾ ಸಂಭಾವನೆ ಸಿಕ್ಕಿತು. ಹೀಗೆ ತಿಂಗಳುಗಳ ಪ್ರದರ್ಶನ ನಡೆದಾಗ ನವರಾತ್ರಿ ಹಬ್ಬ ಬಂತು. ಆಗ ಪುರುಷವೇಷಧಾರಿ ಕಲಾವಿದನಿಗೆ ದೂರದ ಮನೆಯಿಂದ ಕರೆ ಬಂದ ಕಾರಣ, ಆತ ನಾಳೆ ಬರುತ್ತೇನೆಂದು ಹೇಳಿ ಹೋದವ ಮತ್ತೆ ಬರಲೇ ಇಲ್ಲ.
ಈಗೇನು ಮಾಡುವುದು? ಬೇರೆ ಕಲಾವಿದರನ್ನು ಎಲ್ಲಿಂದ ಕರೆತರುವುದು? ದಿನದ ಪ್ರದರ್ಶನವಿರದಿದ್ದರೂ ಸ್ತ್ರೀ ವೇಷದವನ ಊಟ ತಿಂಡಿ ಖರ್ಚು, ದಿನದ ಸಂಬಳ, ವೇಷಭೂಷಣಾ ದಿಗಳ ಬಾಡಿಗೆ ತಪ್ಪದೆ ಎಣಿಸಿಕೊಡಬೇಕಾದ ದುರ್ಭರ ಪರಿಸ್ಥಿತಿ, ಅಪ್ಪ, ಅಣ್ಣ ತಲೆಮೇಲೆ ಕೈಹೊತ್ತು ಚಿಂತಾಮಗ್ನರಾದರು. ದಿನವೂ ಶ್ರುತಿ ಬಾರಿಸುತ್ತ ಕಲಾವಿದರ ಸಂಭಾಷಣೆಯನ್ನು ಆಲಿಸುತ್ತಿದ್ದ ನನಗೆ ಆ ಮಾತುಗಳು ಕಂಠಪಾಠವಾಗಿ ಬಿಟ್ಟಿದ್ದವು, ನೋಡ ನೋಡುತ್ತಾ ಕುಣಿತ, ಅಭಿನಯ ಎಲ್ಲ ಅದಾಗಲೇ ಚೆನ್ನಾಗಿ ರೂಢಿಸಿಕೊಂಡಿದ್ದೆ. ಸ್ತ್ರೀವೇಷದವನು ಕುಳ್ಳನಾಗಿದ್ದುದರಿಂದ ಅವನಷ್ಟೇ ಎತ್ತರವಾಗಿದ್ದ ನಾನು (ನಾಲ್ಕನೇ ತರಗತಿ ವಿದ್ಯಾರ್ಥಿ) ಅವನೊಂದಿಗೆ ಪಾತ್ರ ಮಾಡಿದರೆ ಹೇಗೆ? ಎಂಬ ಹುಂಬ ಧೈರ್‍ಯ ನನ್ನನ್ನು ಅಣ್ಣನ ಮುಂದೆ ತಂದು ನಿಲ್ಲಿಸಿ, ಅಣ್ಣನಲ್ಲಿ ನನ್ನ ಬಯಕೆಯನ್ನು ಹೇಳುವಂತಾಯಿತು. ನದಿಯಲ್ಲಿ ಮುಳುಗಿದವನಿಗೆ ದರ್ಬೆಹುಲ್ಲಿನ ಆಧಾರ ಸಿಕ್ಕಿದಂತೆ ಅಣ್ಣ ಅದಕ್ಕೆ ಒಪ್ಪಿಯೇ ಬಿಟ್ಟರು. ಇಡೀ ದಿನ ನನ್ನ ಅರ್ಥಗಾರಿಕೆಯನ್ನು ಆಲಿಸಿ, ಕುಣಿತವನ್ನು ತಿದ್ದಿ ರಾತ್ರಿಯ ಪ್ರದರ್ಶನಕ್ಕೆ ನನ್ನನ್ನು ಸಿದ್ದಗೊಳಿಸಿದರು.
ಒಂದೆರಡು ಪ್ರದರ್ಶನಗಳ ಬಳಿಕ ನಮ್ಮ ಜೋಡಿ ಒಗ್ಗಿಕೊಂಡು ಅನಂತರದ ಪ್ರದರ್ಶನವನ್ನು ಎಲ್ಲರೂ ಮೆಚ್ಚುವಂತಾದರು. ಹೀಗಿರಲೊಂದು ದಿನ ರಾತ್ರಿ ನನ್ನ ಗಣಿತ ಉಪಾಧ್ಯಾಯರ ಮನೆಯಲ್ಲಿ ನಮ್ಮ ಪ್ರದರ್ಶನವಾಯಿತು.
ಅವರು ಪ್ರದರ್ಶನವನ್ನೇನೋ ಮೆಚ್ಚಿಕೊಂಡು ಕೈತುಂಬಾ ಸಂಭಾವನೆ ನೀಡಿದರೂ, ನೋಡಿ ಆತ್ಮೀಯರೇ, ಈ ಹುಡುಗ ಕಲಿಯುವಿಕೆಯಲ್ಲಿ ತರಗತಿಯಲ್ಲಿ ಪ್ರಥಮ ಸ್ಥಾನದಲ್ಲಿದ್ದಾನೆ. ಇಂಥವನಿಗೆ ಈ ಎಲ್ಲ ಹುಚ್ಚು ಕಟ್ಟಿಸಿ ಅವನ ಶಿಕ್ಷಣ ಅಡ್ಡಿಪಡಿಸಬೇಡಿ ಎಂದು ಖಾರವಾಗಿಯೇ ಹೇಳಿಬಿಟ್ಟರು. ಖಂಡಿತ ಹಾಗೇ ಮಾಡುವುದಿಲ್ಲ ಸರ್, ನವರಾತ್ರಿ ಕೊನೇದಿನ ನಮ್ಮ ಪ್ರದರ್ಶನಕ್ಕೆ ಮಂಗಲ ಹಾಡುತ್ತೇವೆ. ಇವನ ಶಿಕ್ಷಣಕ್ಕೆ ಅಡ್ಡಿ ಬರುವುದಿಲ್ಲ ಎಂದು ಅಣ್ಣ ಮಾತುಕೊಟ್ಟಾಗ ಗುರುಗಳು ತೃಪ್ತಿ ಪಟ್ಟರು.
ಆಮೇಲೆ ನನ್ನೆಲ್ಲಾ ಶಿಕ್ಷಣ ಮುಗಿದ ಬಳಿಕವೇ ನಾನು ಯಕ್ಷಗಾನಕ್ಕೆ ಪಾದಾರ್ಪಣೆ ಮಾಡಿದ್ದು, ಆದರೂ ಆ ಎಳವೆಯಲ್ಲಿ ಪಡೆದ ಅನುಭವ ನನಗೆ ಹಿಮ್ಮೇಳ ಮುಮ್ಮೇಳ ಕಲಿಯಲು ಆಧಾರವಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.