ದಾರಿ ಯಾವುದು?

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
ಎಂ.ಬಾಬು ಶೆಟ್ಟಿ ನಾರಾವಿ

ಸುಬ್ಬು ಜಗ್ಗಣ್ಣನವರ ಐದು ಮಂದಿ ಮಕ್ಕಳಲ್ಲಿ ಕೊನೆಯವನು. ವಯಸ್ಸು ಹದಿನಾರುದಾಟಿದರೂ ಶಿಕ್ಷಣದ ಬೆಳಕು ಆತನ ಬದುಕಿಗೆ ಬೀಳಲಿಲ್ಲ. ಕಾರಣ ಅವನ ತಂದೆ ಜಗ್ಗು ಜವಾಬ್ದಾರಿಯಿಲ್ಲದ ಉಡಾಳ ಮನುಷ್ಯ, ಮನೆ, ಮಡದಿ, ಮಕ್ಕಳು ಎಂಬ ಯಾವ ಕಾಳಜಿಯೂ ಇಲ್ಲದೆ ಬದುಕಿಗೊಂದು ಸರಿಯಾದ ದಾರಿ ಬೇಕು ಎಂಬ ಸಾಮಾನ್ಯ ಜ್ಞಾನವೂ ಇಲ್ಲದೆ ಸೋಮಾರಿಗಳ ಕೂಟದಲ್ಲಿಯೇ ದಿನಗಳೆಯುತ್ತಿದ್ದವ ಆತ. ಕುಡಿತ, ಜುಗಾರಿ, ಕೋಳಿ ಅಂಕ, ಗಲಾಟೆಗಳಲ್ಲಿ ಸಕ್ರಿಯನಾಗಿದ್ದ ಜಗ್ಗು ಮನೆಗೂ ಸರಿಯಾಗಿ ಬರುತ್ತಿರಲಿಲ್ಲ. ಆತನ ಪತ್ನಿ ಪರಮ ಸಾದ್ವಿ. ಇಂಥ ಗಂಡನೊಡನೆಯೂ ಗೊಣಗದೆ ದಿನರಾತ್ರಿ ದುಡಿದು ಮನೆ ನಿಭಾಯಿಸುತ್ತಿದ್ದಳು. ಆಕೆಯ ನಾಲ್ಕು ಮಕ್ಕಳಲ್ಲಿ ಹುಡುಗಿಯರಿಬ್ಬರು ವಿವಾಹಿತರಾಗಿದ್ದಾರೆ. ಸುಬ್ಬುನ ಅಣ್ಣಂದಿರಿಬ್ಬರು ಘಟ್ಟದಲೆಲ್ಲೋ ಇದ್ದಾರೆ. ಸುಬ್ಬು ರಾಜು ಮಾಸ್ಟ್ರ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಾನೆ. ಅದೊಂದು ದಿನ ತೋಟದಲ್ಲಿ ಅಡಕೆ ತೆಗೆಯುತ್ತಿದ್ದರು. ಸುಬ್ಬು ಅಡಕೆ ಹೆಕ್ಕಿ ಮನೆಗೆ ಸಾಗಿಸುತ್ತಿದ್ದ, ಒಂದೆರಡು ಗೊನೆ ಅಡಕೆಯನ್ನು ಬಾಳೆಗಿಡದ ಬುಡದಲ್ಲಿ ಹೂತಿಟ್ಟಿದ್ದ. ಮಾಸ್ಟ್ರ ಮನೆಗೆ ಅವನ ಮನೆ ದಾಟಿಯೇ ಹೋಗಬೇಕು. ರಾತ್ರಿ ಅದನ್ನು ತೆಗೆದು ಅಂಗಡಿಗೆ ಮಾರುವುದು ಅವನ ಗುರಿಯಾಗಿತ್ತು. ಇದನ್ನು ಅವನು ಇದಕ್ಕೆ ಮೊದಲು ಮಾಡುತ್ತಿದ್ದ. ಆದರೆ ಆ ದಿನ ಅದು ಮಾಸ್ಟ್ರ ಸೂಕ್ಷ್ಮ ದೃಷ್ಟಿಗೆ ಬಿದ್ದುಬಿಟ್ಟಿತು. ಆದರೆ ಅವರು ಸುಮ್ಮನಿದ್ದರು, ಸಂಜೆ ಕೆಲಸ ಬಿಟ್ಟು ಸಂಬಳ ಪಡೆದು ಸುಬ್ಬು ಮನೆಗೆ ಹೋದ. ಮಾಸ್ಟ್ರು ತೋಟದಲ್ಲಿ ಕಾದು ಕುಳಿತರು. ನೀರಿಕ್ಷೆಯಂತೆ ರಾತ್ರಿಯಾಗುತ್ತಲೇ ಸುಬ್ಬು ಅಡಕೆ ಬಚ್ಚಿಟ್ಟ ಕಡೆಗೆ ಬಂದು ಗೊನೆಗಳನ್ನು ತೆಗೆದು ಹೊರಡಬೇಕೆನ್ನುವಾಗ ಮಾಸ್ಟ್ರು ಆತನ ಕೈ ಹಿಡಿದು ಬಿಟ್ಟರು. ಆತ ಗಾಬರಿಯಾಗಿ ಬಿಟ್ಟ. ಆದರೆ ಮಾಸ್ಟ್ರು ಶಾಂತವಾಗಿಯೇ ಇದ್ದರು. ಹಿಡಿದ ಕೈಯನ್ನು ಬಿಡದೆ ಅವರೆಂದರು ನೋಡು ಸುಬ್ಬು, ನಿನ್ನ ದಾರಿ ಇದು ಸರಿಯಲ್ಲ. ಕಳ್ಳತನ, ಮೋಸ, ವಂಚನೆಯಿಂದ ಯಾರು ಜೀವನದಲ್ಲಿ ಮೇಲೆ ಬರಲಾರರು. ನನ್ನ ವಿದ್ಯಾರ್ಥಿಯೊಬ್ಬ ಮುಂಬಯಿಯಲ್ಲಿ ಹೋಟೆಲ್ ಮಾಲಿಕನಿದ್ದಾನೆ. ನಾನವನಿಗೆ ತಿಳಿಸುತ್ತೇನೆ, ನೀನು ಮುಂಬಯಿಗೆ ಹೋಗು. ಟಿಕೇಟು ನಾನೇ ತೆಗೆದು ಕೊಡುತ್ತೇನೆ, ಅಲ್ಲಿ ಹೊಟೇಲಲ್ಲಿ ಹಗಲು ಹೊತ್ತು ದುಡಿದು ರಾತ್ರಿ ಶಾಲೆ ಸೇರಿ ನಿನ್ನ ಜೀವನ ಸಾರ್ಥಕ ಪಡಿಸಿಕೋ, ನಾನೀ ವಿಷಯವನ್ನೂ ಯಾರಿಗೂ ಹೇಳುವುದಿಲ್ಲ. ನೀನೂ ಹೇಳಬೇಡ. ಏನು ಬೇಸರ ಪಡಬೇಡ ಹೋಗು ಎಂದರು.
ರಾಜು ಮಾಸ್ಟ್ರು ಸುಬ್ಬನಿಗೆ ಸಹಾಯ ಮಾಡುವಂತೆ ತನ್ನ ಶಿಷ್ಯನಿಗೆ ತಿಳಿಸಿದ್ದಲ್ಲದೆ ಆತನ ಮುಂಬಯಿ ಪ್ರಯಾಣದ ಎಲ್ಲಾ ವ್ಯವಸ್ಥೆ ಮಾಡಿದರು. ಖರ್ಚಿಗೆ ಒಂದಷ್ಟು ಹಣವನ್ನೂ ಕೊಟ್ಟರು. ಅವರ ಮಾರ್ಗದರ್ಶನದಂತೆ ಮುಂಬಯಿ ಸೇರಿದ ಸುಬ್ಬು ಕೇವಲ ಹದಿನೈದು ವರ್ಷಗಳಲ್ಲಿ ಒಬ್ಬ ಹೊಸ ಮನುಷ್ಯನಾಗಿ ಬಿಟ್ಟ. ಹೊಟೇಲಲ್ಲಿ ದುಡಿದು ರಾತ್ರಿ ಶಿಕ್ಷಣದಿಂದ ಎಂ.ಎ. ಪದವಿ ಪಡೆದು ಮುಂಬಯಿಯಲ್ಲಿ ಎರಡು ಶಿಕ್ಷಣ ಸಂಸ್ಥೆಗಳ ಒಡೆತನವುಳ್ಳವನಾದ. ಅರುವತ್ತಕ್ಕಿಂತಲೂ ಹೆಚ್ಚು ಮಂದಿ ಅವನ ಆಸರೆಯಲ್ಲಿ ಜೀವನ ಮಾಡುವಂತಾಯಿತು. ಊರಿನಲ್ಲಿ ಹೊಸ ಮನೆ ಕಟ್ಟಿಸಿ ವೃದ್ಧಾಪ್ಯದಲ್ಲಿದ್ದ ತಾಯಿ ಸತ್ಯಳನ್ನು ಸುಖದ ಸುಪತ್ತಿಗೆಯಲ್ಲಿ ಇರುವಂತೆ ನೋಡಿಕೊಂಡ. ಹೊಸ ಮನೆಯ ಪ್ರವೇಶದ್ವಾರದಲ್ಲಿ ರಾಜು ಮಾಸ್ಟ್ರ ಬ್ರಹದ್ಗಾತ್ರದ ಭಾವಚಿತ್ರವನ್ನಿರಿಸಿ- ನನಗೆ ದಾರಿ ತೋರಿದ ದೇವರು- ಎಂಬ ಬರಹದೊಂದಿಗೆ ರಾಜು ಮಾಸ್ಟ್ರ ಅಗಲಿದ ಆತ್ಮಕ್ಕೆ ಚಿರ ಗೌರವದ ಉದಾರತನ ಮೆರೆದ.
ದಾರಿ ಯಾವುದಯ್ಯಾ ವೈಕುಂಠಕ್ಕೆ ದಾರಿ ತೋರಿಸಯ್ಯಾ ಎಂದು ದಾಸವರೇಣ್ಯ ಪುರಂದರ ದಾಸರು ಬದುಕಿನ ಲಕ್ಷ್ಯ ಸೇರುವುದರಲ್ಲಿ ಭಗವಂತನ ಸಹಾಯವನ್ನು ಯಾಚಿಸಿದ್ದಾರೆ. ಈ ಪ್ರಪಂಚದ ಬದುಕಿನಲ್ಲಿ ಒಬ್ಬೊಬ್ಬರದು ಒಂದೊಂದು ದಾರಿ. ಬದುಕಿನ ದಾರಿಯ ಆಯ್ಕೆಯಲ್ಲಿ ಎಚ್ಚರ, ನಿಸ್ಪ್ಟಹತೆ ಅನಿವಾರ್ಯ. ಈ ಆಯ್ಕೆಯೇ ನಮ್ಮ ಉದ್ಧಾರ ಅಥವಾ ಪತನದ ಅಸ್ತಿಭಾರ. ಮಹಾತ್ಮ ಬುದ್ಧ ದೇವನು ಈ ಪ್ರಪಂಚದ ಜನರನ್ನು ಅವರು ಸಾಗುವ ಜೀವನದ ದಾರಿಯನ್ನನುಸರಿಸಿ ನಾಲ್ಕು ವರ್ಗಗಳಾಗಿ ವಿಂಗಡಿಸಿದ್ದಾನೆ. ಕತ್ತಲೆಯಿಂದ ಕತ್ತಲೆಗೆ ಹೋಗುವವರು, ಕತ್ತಲೆಯಿಂದ ಬೆಳಕಿಗೆ ಹೋಗುವವರು, ಬೆಳಕಿನಿಂದ ಕತ್ತಲೆಗೆ ಹೋಗುವವರು, ಬೆಳಕಿನಿಂದ ಬೆಳಕಿಗೆ ಹೋಗುವವರು. ಇವೇ ನಾಲ್ಕು ವರ್ಗಗಳು.
ಒಂದು ವರ್ಗದ ಜನರು ಕತ್ತಲೆಯಿಂದ ಕತ್ತಲೆಗೆ ಹೋಗುವವರು. ಇವರು ನಿಜವಾಗಿಯೂ ದುರದೃಷ್ಟವಂತರು. ಪತನದಿಂದ ಪತನಕ್ಕೆ ಜಾರುತ್ತ ಹೋಗುವ ದೌರ್ಭಾಗ್ಯವಂತರು ಇವರು! ವಿದ್ಯೆಯಿಲ್ಲ, ಸಂಪತ್ತಿಲ್ಲ, ಉತ್ತಮವಂಶದ ಹಿನ್ನಲೆಯಿಲ್ಲ, ಬುದ್ಧಿಯಂತೂ ಇಲ್ಲವೇ ಇಲ್ಲ. ಇಂಥವರು ತಮ್ಮ ಅಜ್ಞಾನ ಅವಿವೇಕಗಳಿಂದ ದುಷ್ಟಚಟ, ದುಷ್ಟಕೂಟಗಳಿಗೆ ಅಂಟಿಕೊಂಡು ತಮ್ಮ ಅಂಧಕಾರಮಯ ಬದುಕನ್ನು ಇನ್ನಷ್ಟು ಅಂಧಕಾರಕ್ಕೆ ತಳ್ಳಿ ವ್ಯರ್ಥ ಮಾಡಿಕೊಳ್ಳುತ್ತಾರೆ. ಅಪರಾಧಗಳ ಮೇಲೆ ಅಪರಾಧಗಳನ್ನೆಸಗುತ್ತ ಸಮಾಜಕ್ಕೆ, ಸರ್ವರಿಗೆ ಸಮಸ್ಯೆಯಾಗುತ್ತಾರೆ. ಇವರು ಕತ್ತಲೆಯಿಂದ ಕತ್ತಲೆಗೆ ಹೋಗುವ ವರ್ಗದವರು ಇವರ ಬಗ್ಗೆ ನಿಜವಾಗಿಯೂ ಕನಿಕರ ಪಡಬೇಕು.
ಇನ್ನೊಂದು ವರ್ಗದವರು ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವವರು. ಈ ವರ್ಗದವರು ಹುಟ್ಟಿನಿಂದ ಯಾವ ಭಾಗ್ಯ ವಿಶೇಷವನ್ನೂ ಪಡೆದಿರುವುದಿಲ್ಲ. ಬಡವರಾಗಿ ಅವಿದ್ಯಾವಂತರಾಗಿ ವಂಶ, ಮನೆತನದ ಯಾವ ಹೆಚ್ಚುಗಾರಿಕೆಯೂ ಇಲ್ಲದಿದ್ದರು ತಮ್ಮ ಪ್ರಯತ್ನದಿಂದ ತಮಗೆ ದೊರಕಿದ ಮಾರ್ಗದರ್ಶನದಿಂದ, ಛಲವಂತರಾಗಿ ಸಾಧನೆಗಳಿಂದ ಅದ್ಭುತ ಯಶಸ್ಸಿನೆಡೆಗೆ ಸಾಗುತ್ತಾರೆ. ಮೇಲೆ ಉಲ್ಲೇಖಿಸಿದ ಸುಬ್ಬುವಿನ ಕಥೆ ಇದಕ್ಕೆ ಸೂಕ್ತನಿದರ್ಶನ ! ಕತ್ತಲೆಯಲ್ಲಿದ್ದವರು ಬೆಳಕಿನ ದಾರಿ ಹಿಡಿದು ಸಂಪತ್ತು, ಕೀರ್ತಿ, ಜನಪ್ರಿಯತೆಗೆ ಪಾತ್ರರಾಗುವ ಎಲ್ಲರಿಗೂ ಮಾದರಿಯಾಗುವ ಭಾಗ್ಯವಂತರಿವರು. ಮತ್ತಷ್ಟು ಮಂದಿಗೆ ಕತ್ತಲೆಯಿಂದ ಬೆಳಕಿನೆಡೆಗೆ ಸಾಗಲು ಪ್ರೇರಕರಾಗುತ್ತಾರೆ. ಇವರದು ಘನತೆಯ ಬದುಕು!
ಇನ್ನೊಂದು ವರ್ಗದವರು, ಬೆಳಕಿನಿಂದ ಕತ್ತಲೆಗೆ ಹೋಗುವವರು, ಭಗವಂತ ಕೊಟ್ಟ ಭಾಗ್ಯ, ಸೌಲಭ್ಯಗಳನ್ನು ಕಾಲಿನಿಂದೊಗೆದು ದೌರ್ಭಾಗ್ಯಗಳನ್ನು ಆಮಂತ್ರಿಸುವ ಇವರು ವಿದ್ಯೆ, ಕುಲ, ಸಂಪತ್ತು, ಅಧಿಕಾರ ಎಲ್ಲವೂ ಇದ್ದರೂ ಅಧಃ ಪತನಕ್ಕೆ ಹೋಗುವವರು. ಬದುಕನ್ನು ವ್ಯರ್ಥಮಾಡಿಕೊಳ್ಳುವವರು.
ಇನ್ನೊಂದು ವರ್ಗದವರು, ಭಾಗ್ಯವಂತರು. ಜ್ಞಾನಿಗಳು, ವಿವೇಕಿಗಳು, ವಿದ್ಯೆ, ಸಂಪತ್ತು, ವಂಶಗೌರವ, ಅಧಿಕಾರ, ಆರೋಗ್ಯ ಎಲ್ಲವೂ ಇವರಿಗೆ ಜನ ಜಾತವಾಗಿ ಬಂದಿರುತ್ತದೆ. ಇದೆಲ್ಲವೂ ಭಗವಂತ ಕೊಟ್ಟ ಭಾಗ್ಯವೆಂಬ ಎಚ್ಚರ ತಪ್ಪದೆ, ಬಂದ ಭಾಗ್ಯವನ್ನು ಇನ್ನಷ್ಟು ಎತ್ತರಕ್ಕೇರಿಸಿ, ಲೋಕ ಸಂಗ್ರಹ ಕಾರ್ಯದಲ್ಲಿ ತೊಡಗಿರುತ್ತ ಬದುಕನ್ನು ಸಾರ್ಥಕಪಡಿಸಿಕೊಳ್ಳುವ ಈ ವರ್ಗದವರು ನಿಜಕ್ಕೂ ಪ್ರಶಂಸನೀಯರು.
ನಮ್ಮ ದಾರಿ ಯಾವುದು? ಕತ್ತಲೆಯಿಂದ ಕತ್ತಲೆಗೆ ಹೋಗುವ ದಾರುಣ ಬದುಕಂತೂ ಖಂಡಿತಬೇಡ. ಬೆಳಕಿನಿಂದ ಕತ್ತಲೆಗೆ ಹೋಗುವ ದಾರಿಯೂ ಸಮಾಜದ ನೆಮ್ಮದಿಗೆ ಮಾರಕ! ಕತ್ತಲೆಯಿಂದ ಬೆಳಕಿನೆಡೆಗೆ ಹೋಗುವವರಾಗೋಣ ಇಲ್ಲವೆ ಬೆಳಕಿನಿಂದ ಬೆಳಕಿನೆಡೆಗೆ ಹೋಗುವ ಭಾಗ್ಯಶಾಲಿಗಳಾಗೋಣ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.