ಕುರಿಗಳು ಸಾರ್ ಕುರಿಗಳು?

ಡಾ| ದಿವ ಕೊಕ್ಕಡ, ಕನ್ನಡ ಉಪನ್ಯಾಸಕರು, S.D.M.Ujire

ಮತ್ತೆ ಚುನಾವಣೆ ತೀರಾ ಹತ್ತಿರ (ಮೇ.12) ಬಂದಿದೆ. ಎಲ್ಲ ಪಕ್ಷಗಳ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿ, ಅವುಗಳ ಪರಿಶೀಲನೆಯೂ ಆಗಿ, ಒಂದಷ್ಟು ತಿರಸ್ಕೃತಗೊಂಡದ್ದೂ ಆಯಿತು. ತಿರಸ್ಕೃತಗೊಂಡದ್ದಕ್ಕೆ ಉರುಳು ಸೇವೆಯ ಪ್ರತಿಭಟನೆಯೂ ಆಯಿತು. ಅಭ್ಯರ್ಥಿಗಳ ಆಯ್ಕೆಯ ವೇಳೆ ಅವಕಾಶ ವಂಚಿತರ ಕುಮ್ಮಕ್ಕಿನಿಂದ ಹಿಂದೆಂದೂ ಕಾಣದ ಪ್ರತಿಭಟನೆಗಳೂ ಈ ಬಾರಿ ಎಲ್ಲ ಪಕ್ಷಗಳಲ್ಲು ಸಾಮಾನ್ಯವಾಗಿ ಕಂಡು ಬಂದಿದೆ. ಹಲವರು ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ. ಕೆಲವರು ತಮ್ಮವರನ್ನೇ ಸೋಲಿಸಲು ವಿರೋಧಿಗಳ ಜೊತೆ ಸೇರಿ ಒಳಗಿಂದೊಳಗೆ ಸಂಚು ರೂಪಿಸಿಕೊಂಡಿದ್ದಾರೆ. ಒಟ್ಟಾರೆ ಹಳ್ಳಿಯ ಪಂಚಾಯತ್ ಕಟ್ಟೆಯಿಂದ ಹಿಡಿದು ದಿಲ್ಲಿಯ ಸಂಸತ್ ಭವನದವರೆಗೆ ರಾಜಕೀಯ ವಿಶ್ಲೇಷಣೆ ಶುರುವಾಗಿದೆ.
ರಾಜಕೀಯ ಪಕ್ಷಗಳಿಂದ ಮತಬೇಟೆಗಾಗಿ ಅಬ್ಬರದ ಪ್ರಚಾರಕ್ಕಿಂತಲೂ ಹೆಚ್ಚಾಗಿ ಆರೋಪ-ಪ್ರತ್ಯಾರೋಪಗಳು ಕೇಳಿ ಬರುತ್ತಿವೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಕರ್ನಾಟಕದಲ್ಲಿ ಅಧಿಕಾರ ಹಿಡಿಯಲು ನಿದ್ದೆ ಬಿಟ್ಟು ಜನಾಶೀರ್ವಾದ ಯಾತ್ರೆ, ಪರಿವರ್ತನಾ ಯಾತ್ರೆ, ಬೃಹತ್ ಸಮಾವೇಶ ಇತ್ಯಾದಿ ಇನ್ನಿಲ್ಲದ ಕಸರತ್ತು ಶುರುಮಾಡಿ ಮತದಾರರ ನಿದ್ದೆಗೆಡಿಸುತ್ತಿವೆ. ಈ ನಡುವೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಬಿಎಸ್‌ಪಿಯೊಂದಿಗೆ ಮೈತ್ರಿ ಮಾಡಿಕೊಂಡು ವಿಕಾಸ ಪರ್ವದಲ್ಲಿ ಒಂದು ಅವಕಾಶ ನಮಗೆ ಕೊಟ್ಟು ನೋಡಿ ಎಂದು ಅಂಗಲಾಚಿ ಬೇಡುತ್ತಿದೆ. ಒಟ್ಟಾರೆ ಗಮನಿಸುವಾಗ ಯಾರಲ್ಲೂ ಒಂದು ಸೈದ್ಧಾಂತಿಕ ಬದ್ಧತೆ ಇದ್ದಂತೆ ತೋರುವುದಿಲ್ಲ. ಜಾತಿ-ಧರ್ಮ, ದೇಶ-ಭಾಷೆಗಳ ಮೇಲೆ, ಅಷ್ಟೇ ಯಾಕೆ ಹೆಣದ ಮೇಲೂ ರಾಜಕೀಯ ಮಾಡುವ ವಿಪರೀತ ಹಂತಕ್ಕೆ ನಮ್ಮ ರಾಜಕೀಯ ವ್ಯವಸ್ಥೆ ಮುಟ್ಟಿದೆ ಎಂದರೆ ಇದು ಈ ಕಾಲದ ದುರಂತವಲ್ಲದೆ ಮತ್ತೇನು? ಜನರು ಆರಿಸಿ ಕಳುಹಿಸಿದ ಪ್ರತಿನಿಧಿಗಳು ರಸ್ತೆ, ವಿದ್ಯುತ್, ನೀರು-ಇತ್ಯಾದಿ ಅಭಿವೃದ್ಧಿ ಕೆಲಸ ಮಾಡಬೇಕಾದರೆ ಅದೇ ಆರಿಸಿದ ಜನಗಳೆ ಮತ್ತೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ; ಪೊಲೀಸರಿಂದ ಲಾಠಿ ರುಚಿ ಅನುಭವಿಸಬೇಕಾಗುತ್ತದೆ; ಕೆಲವೊಮ್ಮೆ ಜೈಲೂ ಸೇರಿ ಜೀವನ್ಮರಣ ಹಿಂಸೆ ಅನುಭವಿಸಬೇಕಾಗಿ ಬಂದರೂ ಆಶ್ಚರ್ಯವಿಲ್ಲ. ಅಸಹಾಯಕರನ್ನು, ದೀನ ದಲಿತರನ್ನು, ಕೃಷಿಕರನ್ನು, ಕೂಲಿಕಾರ್ಮಿಕರನ್ನು ಬಡತನದ ಬಾವಿಯಿಂದ ಮೇಲಕ್ಕೆತ್ತುವ ಜನಪ್ರತಿನಿಧಿಗಳ ಸಂಖ್ಯೆ ಇಂದು ಕ್ಷೀಣಿಸುತ್ತಿರುವುದು ವಿಷಾದನೀಯ.
ಕೊಲೆ, ದರೋಡೆ, ಸುಲಿಗೆ, ಅತ್ಯಾಚಾರ, ಅನಾಚಾರ, ಬ್ರಹ್ಮಾಂಡ ಭ್ರ್ರಷ್ಟಾಚಾರಗಳಂತಹ ಸಮಾಜದ್ರೋಹಿ ಕೃತ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಜನನಾಯಕರ ಮತ್ತು ಅಧಿಕಾರಿಗಳ ನಿಷ್ಕ್ರಿಯತೆಗೆ ಹಿಡಿದ ಕನ್ನಡಿ. ಬೇಲಿಯೇ ಹೊಲ ಮೇಯುವ ದೃಶ್ಯ ಈಗ ಸಾಮಾನ್ಯ. ದೇವರ ಮೇಲಿನ ಭಯ, ಪಾಪ-ಪುಣ್ಯ ಇಲ್ಲವೆ ಕಾನೂನಿನ ಭಯವಾಗಲಿ ಇಂದು ಯಾರಿಗೂ ಇದ್ದಂತಿಲ್ಲ. ಧರ್ಮ-ದೇವರು, ಕಾನೂನು-ಕಟ್ಟಳೆಗಳೆಲ್ಲ ಇಂದು ರಾಜಕೀಯ ಪಕ್ಷಗಳ ನಿಯಂತ್ರಣ ದಲ್ಲಿರುವುದು ಈ ಎಲ್ಲ ಅನಪೇಕ್ಷಿತ ವಿದ್ಯಮಾನಗಳಿಗೆ ಮೂಲ ಕಾರಣ ಎಂದನ್ನಿಸುತ್ತದೆ. ಎಲ್ಲವೂ ಮುಖವಾಡ, ಆಡಂಬರ ಅಷ್ಟೆ. ಒಂದು ಕಡೆ ಕಾನೂನು ಬಾಹಿರ, ಅಧರ್ಮ ಮಾರ್ಗದಲ್ಲಿ ಸಂಪಾದನೆ ಮಾಡಿಕೊಂಡು ಮತ್ತೊಂದು ಕಡೆ ತಾನೊಬ್ಬ ಪರಮ ದೈವ ಭಕ್ತ ಮತ್ತು ಒಳ್ಳೆಯ ಸಮಾಜ ಸೇವಕನೆಂಬಂತೆ ಬಿಂಬಿಸಿಕೊಳ್ಳುವವರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಅದೆಷ್ಟೋ ಕುಟುಂಬಗಳ ನೆಮ್ಮದಿ ಹಾಳುಮಾಡುವ ಮದ್ಯದಂಗಡಿಗಳೆಲ್ಲ ನಮ್ಮ ಸಮಾಜ ಸೇವಕರದ್ದು/ರಾಜಕೀಯ ನಾಯಕರದ್ದು ಎಂಬ ಸತ್ಯ ಯಾರಿಗೂ ತಿಳಿಯದ್ದೇನೂ ಅಲ್ಲ. ಹೆಚ್ಚಿನೆಲ್ಲ ಕಳ್ಳದಂಧೆಗಳ ಹಿಂದೆ ಕೃಪಾಕಟಾಕ್ಷವಾಗಿ ರಾಜಕೀಯ ಪಕ್ಷಗಳ ಪ್ರಭಾವಿ ನಾಯಕರ ಕೈವಾಡವಿರುವಾಗ ವ್ಯವಸ್ಥೆ ಸರಿಯಾಗುವುದಾದರೂ ಹೇಗೆ? ಸರಿ ಮಾಡುವವರಾದರೂ ಯಾರು? ಇಂತಹ ವಿಚಾರದ ಬಗ್ಗೆ ಬರೆಯುವುದು, ಮಾತನಾಡುವುದು ಬಿಡಿ ಯೋಚನೆ ಮಾಡುವುದೂ ಮಹಾಪರಾಧ ಎಂಬಂತಾಗಿದೆ. ಆದ್ದರಿಂದ ಜಗದಾದಿಯಿಂದ ಹಿಡಿದು ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ರಾಮರಾಜ್ಯದ ಕನಸು ಕಂಡ ರಾಷ್ಟ್ರಪಿತ ಮಹಾತ್ಮ ಗಾಂಧಿಯವರೆಗೆ, ಅಷ್ಟೇ ಯಾಕೆ ಇದೀಗ ಜಗತ್ತಿನಲ್ಲಿಯೇ ಜನಪ್ರಿಯರಾಗಿರುವ ಮೋದಿಯವರೆಗೆ ಜಗದೋದ್ಧಾರದ ಕನಸು ಕಾಣುವ ಸಾವಿರ ಜನ ಬಂದರೂ ವ್ಯವಸ್ಥೆ ಸರಿಯಾಗುವುದು ಅಷ್ಟು ಸುಲಭದ ಮಾತಲ್ಲ.
ಹಾಗಾದರೆ ಸುಧಾರಣೆಗಿರುವ ದಾರಿ ಯಾವುದೆಂದರೆ, ನಾವು ನಮ್ಮ ವೈಯಕ್ತಿಕ ನೆಲೆಯಲ್ಲಿ ಬದಲಾಗಬೇಕು. ನಾವು ಜಾಗೃತರಾಗಬೇಕು; ಸುಸಂಸ್ಕೃತರಾಗಬೇಕು; ವಿಚಾರವಂತ ರಾಗಬೇಕು. ರಾಜಕೀಯದಲ್ಲಿರುವವರು ಈಗ ರಾವಣ, ಜರಾಸಂಧ, ಕೀಚಕ ಮತ್ತು ಯಮರಾಗಿದ್ದರೆ ಮತದಾರರಾದ ನಾವುಗಳೇ ಕಾರಣ. ಯಾಕೆಂದರೆ ಕವಿ ನಿಸಾರ್ ಅಹಮದ್ ಅವರ ಮಾತಿನಲ್ಲಿ ಹೇಳುವುದಾದರೆ ನಾವು ಮತದಾರರೆಲ್ಲ ಸ್ವಂತಿಕೆಯೇ ಇಲ್ಲದ ಕುರಿಗಳು ಸಾರ್ ಕುರಿಗಳು. ಆದ್ದರಿಂದ ಯೋಗ್ಯರನ್ನು ಆಯ್ಕೆ ಮಾಡುವ ಮತ್ತು ಆಯ್ಕೆಯಾದ ಅಯೋಗ್ಯರನ್ನು ಯೋಗ್ಯರನ್ನಾಗಿ ಮಾಡುವ ಜವಾಬ್ದಾರಿ ನಮ್ಮದು. ಅಂತಹ ಶಕ್ತಿ ಪ್ರಜಾಶಕ್ತಿಗಿದೆ. ನಾವು ಜಾಗೃತರಾಗೋಣ. ಗುಡಿ-ಚರ್ಚು-ಮಸೀದಿಗಳನ್ನು ಕಟ್ಟುವ ಅಥವಾ ಕೆಡಹುವ ಮತ ಓಲೈಕೆಯ ನಾಯಕರು ನಮಗೆ ಬೇಕಾಗಿಲ್ಲ; ನಮಗೆ ಬೇಕಾದ್ದು ನಾವೆಲ್ಲರು ಒಂದೆ ಜಾತಿ ಒಂದೆ ಮತ ಒಂದೆ ಕುಲ ಎಂದು ನಮ್ಮನ್ನೆಲ್ಲ ಸಹೋದರ-ಸಹೋದರಿಯರಂತೆ ನೆಮ್ಮದಿಯಿಂದ ಜೊತೆಯಲ್ಲಿ ಬದುಕಲು ಅವಕಾಶ ಮಾಡಿಕೊಡುವ ಹೃದಯವಂತ ಧೀಮಂತರು ಬೇಕಾಗಿದ್ದಾರೆ. ನಿಜವಾಗಿಯೂ ಧರ್ಮದಲ್ಲಿ ಶ್ರದ್ಧೆಯಿರುವ, ಆಧ್ಯಾತ್ಮದಲ್ಲಿ ಆಸಕ್ತಿಯಿರುವ, ಜಾತಿ-ಮತ-ದೇಶ-ಭಾಷೆ, ಬಡವ-ಬಲ್ಲಿದ, ಹಿರಿಯ-ಕಿರಿಯ, ಮೇಲು-ಕೀಳು ಮೊದಲಾದ ಎಲ್ಲೆಯನ್ನು ಮೀರಿ, ಎಲ್ಲರನ್ನು ಪ್ರೀತಿಯಿಂದ ಮಾತನಾಡಿಸುವ, ಎಲ್ಲರ ಕಷ್ಟಗಳಿಗೆ ಸ್ಪಂದಿಸುವ ಸೇವಾ ನಿಷ್ಠೆಯ ಸಹೃದಯರು, ಸಾತ್ವಿಕ ಸಜ್ಜನರು-ವ್ರತನಿಷ್ಠರು ಬೇಕಾಗಿದ್ದಾರೆ.
ಜನ ಸೇವೆ, ಸಮಾಜ ಸೇವೆ, ದೇಶ ಸೇವೆಯ ನಿರ್ಮಲ ಭಾವನೆಯ ಜನಪ್ರತಿನಿಧಿಗಳ ಸಂಖ್ಯೆ ಇಂದು ಅಲ್ಲೊಂದು ಇಲ್ಲೊಂದು ಮಾತ್ರ ಕಂಡು ಬಂದರೆ ಆಶ್ಚರ್ಯವಿಲ್ಲ. ಬಹುತೇಕ ಸೇವೆಗಿಂತ ಸ್ವಾಹ ಮಾಡುವ ಕಳಂಕಿತ ಅಭ್ಯರ್ಥಿಗಳೇ ರಾಜಕೀಯದಲ್ಲಿ ಮೆರೆದಾಡುವುದು ಎಲ್ಲೆಡೆ ಸಾಮಾನ್ಯ ಎಂಬಂತಾಗಿದೆ. (ಈ ನಿಟ್ಟಿನಲ್ಲಿ ಕಳೆದ ವಾರದ ಸುದ್ದಿ ಸಂಚಿಕೆಯಲ್ಲಿ ಪ್ರಕಟವಾದ ಸಿನಾನ್ ಇಂದಬೆಟ್ಟು ಅವರ ಛೇ…..ಇಂಥವರೂ ನಮ್ಮನ್ನು ಆಳುತ್ತಿದ್ದಾರೆ! ಎಂಬ ಶೀರ್ಷಿಕೆಯ ಲೇಖನವನ್ನು ಗಮನಿಸಬಹುದು.)
ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗಲಿಲ್ಲವೆಂದು ಮೊನ್ನೆ ಮೊನ್ನೆ ರಾಜ್ಯಾದ್ಯಂತದ ಎಲ್ಲ ಪಕ್ಷಗಳ ಆಕಾಂಕ್ಷಿಗಳು ನಡೆದುಕೊಂಡ ರೀತಿಗಳನ್ನು ನೋಡುವಾಗ, ಅಥವಾ ಚುನಾವಣೆಯಲ್ಲಿ ಗೆಲ್ಲಬೇಕು ಎಂಬ ಉದ್ದೇಶದಿಂದ ಸಮಾಜದ್ರೋಹಿಗಳ ಕಾಲುಹಿಡಿಯಲೂ ಹೇಸದೆ ಯಾವ ಕೊಳಕು ವೇಷವನ್ನವಾದರೂ ಧರಿಸುವುದನ್ನು ನೋಡುವಾಗ, ನಿಜಕ್ಕೂ ನಮ್ಮ ನಾಯಕರಾಗುವವರು ಎಷ್ಟೊಂದು ಚಾರಿತ್ರ್ಯಹೀನರೆಂಬುದು ಸ್ಪಷ್ಟವಾಗುತ್ತದೆ. ಜನಪ್ರತಿನಿಧಿಗಳು ಎಂತೆಂತಹವರಿದ್ದಾರೆ ಎಂಬುದನ್ನು ಈಗಿನ ಸಾಮಾಜಿಕ ಜಾಲತಾಣಗಳು, ಸಮೂಹ ಮಾಧ್ಯಮಗಳು ಕ್ಷಣಮಾತ್ರದೊಳಗೆ ತೋರಿಸಿ ಬಿಡುತ್ತವೆ. ಆದುದರಿಂದ ಮತದಾನ ನಮ್ಮ ಸಂವಿಧಾನ ಬದ್ಧ ಹಕ್ಕು ಎಂದು ಕೊಲೆ ದರೋಡೆ ಸುಲಿಗೆ ಅತ್ಯಾಚಾರ ಅನಾಚಾರ ಭ್ರಷ್ಟಾಚಾರ ಮೊದಲಾದ ಸಮಾಜದ್ರೋಹಿ ಸಂಗತಿಗಳಲ್ಲಿ ಭಾಗಿಯಾಗುವ ಇಲ್ಲವೆ ಪ್ರೋತ್ಸಾಹ ನೀಡುವ ಅಥವಾ ಅಂತಹವರನ್ನು ರಕ್ಷಣೆ ಮಾಡುವ ಉದ್ದೇಶದಿಂದ ಅಧಿಕಾರಕ್ಕೇರಲು ತವಕಿಸಿ ವೋಟಿಗಾಗಿ ಹಣ, ಹೆಂಡ, ಸೀರೆ, ಪಂಚೆ ನೀಡುವ ಅಭ್ಯರ್ಥಿಗಳಿಗೆ ಮತ ನೀಡಿ ಸುಂದರ ಸಮಾಜವನ್ನು ಬಲಿಯಾಗಿಸುವುದು ಬೇಡ. ಯಾಕೆಂದರೆ ಸಾವಿರಾರು ವರ್ಷಗಳ ಇತಿಹಾಸವಿರುವ ನಮ್ಮ ಸಮಾಜ ಇನ್ನೂ ಸಾವಿರಾರು ವರ್ಷಗಳ ಕಾಲ ಉಳಿಯಬೇಕಿದೆ. ನಮ್ಮ ಮಕ್ಕಳು, ಮೊಮ್ಮಕ್ಕಳು ಈ ಸಮಾಜದಲ್ಲಿ ನೆಮ್ಮದಿಯಿಂದ ಬಾಳಿ ಬದುಕಬೇಕಿದೆ. ಪ್ರಕೃತಿ ಪರಿಸರ ಜೀವ ವೈವಿಧ್ಯಗಳೊಂದಿಗೆ ಮಾನವ ಹಿರಿಯರ ಆಶಯ ಆಶೀರ್ವಾದದಿಂದ ಅನ್ಯೋನ್ಯವಾಗಿ ಹೆಜ್ಜೆಹಾಕಬೇಕಿದೆ. ಈ ನಿಟ್ಟಿನಲ್ಲಿ ಭವಿಷ್ಯದ ಬಗ್ಗೆ ಬದ್ಧತೆಯಿಂದ ಯೋಚಿಸುವ ಸುಶಿಕ್ಷಿತ ವ್ಯಕ್ತಿಗಳು ನಮ್ಮ ನಾಯಕರಾಗಿ ಆರಿಸಿ ಬರುವ ಬಗ್ಗೆ ನಾವು ಮತದಾರರೆಲ್ಲ ಗಂಭೀರವಾಗಿ ಯೋಚಿಸಬೇಕಿದೆ. ನಾವೆಲ್ಲ್ಲ ರಾಜಕೀಯದಲ್ಲಿ ಶಿಕ್ಷಿತರಾದಾಗ ಇದು ಸಾಧ್ಯ. ಇಲ್ಲದಿದ್ದಲ್ಲಿ 2300 ವರ್ಷಗಳ ಹಿಂದೆ ವಿಶ್ವದ ಮಹಾದಾರ್ಶನಿಕ ತತ್ವಜ್ಞಾನಿ ಗ್ರೀಸ್ ದೇಶದ ಪ್ಲೇಟೋ ಎಂಬಾತ ಹೇಳಿದ್ದ ಈ ಮಾತಿನಂತಾಗುತ್ತದೆ ನಮ್ಮ ಕತೆ.
ನಾವು ಸುಂದರವಾಗಿ ವಿನ್ಯಾಸಿಸುವ ಕೇಶ ವಿನ್ಯಾಸಕರನ್ನು, ಬಟ್ಟೆಯನ್ನು ನವೀನ ಶೈಲಿಯಲ್ಲಿ ಹೊಲಿಯುವ ದರ್ಜಿಗಳನ್ನು, ಚಪ್ಪಲಿಗಳನ್ನು ಗಟ್ಟಿಮುಟ್ಟಾಗಿ ತಯಾರಿಸಿಕೊಡಬಲ್ಲವರನ್ನು ಹುಡುಕುತ್ತೇವೆ. ಆದರೆ ದೇಶದ/ರಾಜ್ಯದ/ಸಮಾಜದ ಹಿತಾಸಕ್ತಿಗಳನ್ನು ಕಾಪಾಡಬಲ್ಲ ಸಮರ್ಥರನ್ನು ಆಯ್ಕೆ ಮಾಡಿಕೊಳ್ಳದೆ ಸಂಕಷ್ಟಕ್ಕೀಡಾಗುತ್ತೇವೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.