ನಮ್ಮ ಸೇನೆ ನಮ್ಮ ಹೆಮ್ಮೆ

ಯೋಗೀಶ್ ಕುಲಾಲ್ ಸೋಣಂದೂರು

ಭಾರತೀಯ ಸೇನೆ ಎಂದಾಕ್ಷಣ ಏನೋ ರೋಮಾಂಚನ. ಗಡಿ ನುಸುಳುವ ವೈರಿಗಳ ಗುಂಡಿಗೆ ಎದೆಯೊಡ್ಡಿ ಪ್ರತಿದಾಳಿ ನಡೆಸುವ ಸೈನಿಕರನ್ನು ನೆನೆಯುತ್ತಲೇ ಮೈ ಜುಮ್ ಎನ್ನುವುದು. ನಮ್ಮ ಸೈನಿಕರು ನೋಡಲು ಎಷ್ಟು ಖಡಕ್ ಆಗಿರುವರೋ ಸೇವೆಯಲ್ಲಿಯೂ ಅಷ್ಟೇ ಚತುರರಾಗಿರುವರು.1947 ರಲ್ಲಿ ಬ್ರಿಟೀಷರ ಧಾಸ್ಯದಿಂದ ಮುಕ್ತಿಗೊಂಡು ಭಾರತ-ಪಾಕಿಸ್ತಾನವೆಂಬ ವಿಭಜನೆಯ ನಂತರ ಪಾಕಿಸ್ತಾನ ದೇಶವು ಜಮ್ಮು ಮತ್ತು ಕಾಶ್ಮೀರವನ್ನು ತಮ್ಮ ಸ್ವಾಧೀನಪಡಿಸಿಕೊಳ್ಳಲು ಬಹಳಷ್ಟು ಪ್ರಯತ್ನಪಟ್ಟರೂ ಕೂಡಾ ಸಾಧ್ಯವಾಗಿಲ್ಲ. ಅಂದಿನಿಂದ ಇಂದಿನವರೆಗೆ ನಿರಂತರವಾಗಿ ನಮ್ಮ ದೇಶದ ಮೇಲೆ ದಾಳಿ ನಡೆಸುತ್ತಲೇ ಇದೆ ಚೀನಾ ದೇಶವೂ ನಾನಾ ರೀತಿಯಲ್ಲಿ ನಮ್ಮ ದೇಶಕ್ಕೆ ಉಪಟಳ ನೀಡುತ್ತಲೇ ಬಂದಿದೆ. ಇಂತಹ ದಾಳಿಗಳಾದಾಗ ವೈರಿ ರಾಷ್ಟ್ರಗಳ ಸದ್ದಡಗಿಸಿದ್ದು ನಮ್ಮ ಸೇನೆ. ರಾತ್ರಿ ಹಗಲೆನ್ನದೆ. ಬಿಸಿಲು, ಗಾಳಿ, ಮಳೆ ಹಿಮಪಾತ ಯಾವುದನ್ನೂ ಲೆಕ್ಕಿಸದೆ ನಿರ್ವಾತ ಪ್ರದೇಶಗಳಲ್ಲಿ ಕೂಡಾ ಕಾರ್ಯ ನಿರ್ವಹಿಸುವ ಸೈನಿಕರ ಎಂಟೆದೆ ಗುಂಡಿಗೆಯನ್ನು ಮೆಚ್ಚಬೇಕಾದದ್ದೇ. ತನ್ನೆಲ್ಲಾ ಆಸೆ ಆಕಾಂಕ್ಷೆಗಳನ್ನು ಬದಿಗಿಟ್ಟು ಭಾರತಾಂಬೆಯ ರಕ್ಷಣೆಯೊಂದೇ ತಮ್ಮ ಧ್ಯೇಯವಾಗಿಸಿಕೊಂಡು ಅವರುಗಳು ನಿದ್ರಿಸದೆ ನಮ್ಮನ್ನು ನಿಶ್ಚಿಂತೆಯಿಂದ ನಿದ್ರಿಸುವ ಸೈನಿಕರನ್ನು ಪಡೆದ ನಾವು ಧನ್ಯರು.
ಮುಖ್ಯವಾಗಿ ಇಂದು ಭಾರತೀಯ ಸೇನೆಯು ಒಂದೆಡೆ ಗಡಿ ಭಾಗಗಳಲ್ಲಿ ಶತ್ರುರಾಷ್ಟ್ರಗಳ ಕುತಂತ್ರಕ್ಕೆ ಬಲಿಯಾಗುತ್ತಿದ್ದರೆ, ಇನ್ನೊಂದೆಡೆ ದೇಶದೊಳಗಿನ ಕೆಲ ದೇಶದ್ರೋಹಿಗಳ ಷಡ್ಯಂತ್ರಕ್ಕೆ ಅತ್ಯಮೂಲ್ಯ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಯಾರೋ ಮಾಡಿದ ತಪ್ಪಿಗೆ ಸೇವಾ ಯೋಧರು ಬಲಿಯಾಗುತ್ತಿದ್ದಾರೆ. ಜಮ್ಮು ಕಾಶ್ಮೀರದ ಕೆಲವೊಂದು ರಾಷ್ಟ್ರವಿರೋಧಿ ಶಕ್ತಿಗಳು ನಮ್ಮ ರಕ್ಷಣೆಗೆ ನಿಂತಿರುವ ಸೇನೆಯ ಮೇಲೆ ಕಲ್ಲು ತೂರುವಂತಹ, ಹಲ್ಲೆ ಮಾಡುವಂತಹ ಘಟನೆಗಳ ದೃಶ್ಯ ತುಣುಕುಗಳನ್ನು ನೋಡಿದ್ದೇವೆ. ಛತ್ತೀಸ್‌ಗಡದಂತಹ ರಾಜ್ಯಗಳಲ್ಲಿ ನಕ್ಸಲೈಟ್ ದಾಳಿಗಳನ್ನು ಕಂಡಿದ್ದೇವೆ. ಎಷ್ಟೋ ಜನ ಯೋಧರು ಇಂತಹ ವಿಧ್ವಂಸಕ ಕೃತ್ಯಗಳಿಂದಾಗಿ ಹುತಾತ್ಮರಾಗಿದ್ದಾರೆ, ಗಾಯಗೊಂಡಿದ್ದಾರೆ, ದೇಹದ ಅಂಗಾಂಗಗಳನ್ನು ಕಳೆದುಕೊಂಡು ಅದೆಷ್ಟೋ ಜನ ಯೋಧರು ನರಕ ಯಾತನೆ ಅನುಭವಿಸುತ್ತಿದ್ದಾರೆ. ಇವೆಲ್ಲಾ ಆಗುತ್ತಿರುವುದು ಈ ದೇಶದ ಅನ್ನ ತಿಂದು ದೇಶಕ್ಕೆ ದ್ರೋಹ ಬಗೆಯುವ ದೇಶದ್ರೋಹಿಗಳಿಂದ. ಒಂದು ವೇಳೆ ಇಂತಹ ಕೃತ್ಯವೆಸಗಿದವರನ್ನು ನಮ್ಮ ಸೇನೆಯು ಹತ್ಯೆಗೈದರೆ, ಸೆರೆಹಿಡಿದರೆ ಅವರ ಪರವಾಗಿ ವಾದ ಮಾಡುವವರು ನಮ್ಮಲ್ಲಿಯೇ ಇದ್ದಾರೆ. ದೇಶದ್ರೋಹಿಗಳ ಪರವಾಗಿ ಘೋಷಣೆ ಕೂಗುವವರೂ ಈ ನೆಲದಲ್ಲಿಯೇ ಇದ್ದಾರೆ. ಇಂತಹವರಿಗೆ ಏನೆನ್ನಬೇಕು? ಹಣದಾಸೆಗೆ ಬಲಿಯಾಗಿ ಈ ದೇಶವನ್ನೇ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿರುವುದು ವಿಪರ್ಯಾಸವೇ ಸರಿ.
ದೇಶದೊಳಗೆ ಭೂಕಂಪ, ಚಂಡಮಾರುತ, ನೆರೆ ಮುಂತಾದ ಪ್ರಕೃತಿ ವಿಕೋಪಗಳೆದುರಾದಾಗ ನಮ್ಮ ನೆರವಿಗೆ ಬರುವ ಸೇನಾ ಯೋಧರು ಸಾಮಾನ್ಯರೇ? ತಮ್ಮ ಪ್ರಾಣದ ಹಂಗು ತೊರೆದು ಸಂತ್ರಸ್ತರನ್ನು ರಕ್ಷಿಸುವ ಸೇನೆಯ ಕಾರ್ಯ ಮೆಚ್ಚಬೇಕಾದದ್ದೇ. ಮಾನವ ಸೇತುವೆ ನಿರ್ಮಿಸಿ ತಮ್ಮ ಮೈಮೇಲೆಯೇ ದಡ ಸೇರಿಸುವ ಯೋಧರ ಧೈರ್ಯ, ಸ್ಥೈರ್ಯ ನಿಜಕ್ಕೂ ಅದ್ಭುತ. ಈಗ ಕರ್ನಾಟಕ ವಿಧಾನಸಭೆಯ ಮತದಾನದ ಸಮಯವಾದುದರಿಂದ ಭದ್ರತಾದೃಷ್ಟಿಯಿಂದ ಇಲ್ಲೂ ಕೂಡಾ ಸೇನಾ ತುಕಡಿಗಳು ನಿಯುಕ್ತಿಗೊಂಡಿವೆ. ಬೇರೆ ಬೇರೆ ರಾಜ್ಯಗಳಿಂದ ಬಂದಿರುವ ಸೇನಾ ಸಿಬ್ಬಂದಿಗಳು ನಮ್ಮ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ದೇಶರಕ್ಷಣೆಯ ಕಾರ್ಯದಲ್ಲಿ ಸೇನೆಯ ಸೇವೆಯು ಬಹಳಷ್ಟು ಪ್ರಾಮುಖ್ಯವಾಗಿದೆ. ಸರ್ಜಿಕಲ್ ಸ್ಟ್ರೈಕ್‌ನಂತಹ ಅತ್ಯಂತ ಅಪಾಯಕಾರಿ ಕಾರ್ಯಾಚರಣೆಯಲ್ಲಿ ಹಲವು ಉಗ್ರರನ್ನು ಹೊಡೆದುರುಳಿಸಿದಾಗ ಕೆಲ ವ್ಯಕ್ತಿಗಳು ಸೇನಾ ಯೋಧರನ್ನೇ ಅನುಮಾನದ ದೃಷ್ಟಿಯಿಂದ ಪುರಾವೆ ಕೇಳಿರುವುದು ವಿಪರ್ಯಾಸ. ಕಾಶ್ಮೀರದಲ್ಲಿ ಸೇನೆಯ ಮೇಲೆ ಕಲ್ಲು ತೂರಿದ ಓರ್ವ ವ್ಯಕ್ತಿಯನ್ನು ತಮ್ಮ ಸೇನಾವಾಹನದ ಮುಂಭಾಗದಲ್ಲಿ ಕಟ್ಟಿ ದೇಶದ್ರೋಹಿಗಳಿಗೆ ಸವಾಲೆಸೆದ ಯೋಧರನ್ನು ಸೇನೆಯಿಂದ ಅಮಾನತು ಮಾಡಬೇಕೆಂದು ಕೆಲವರು ಪ್ರತಿಭಟಿಸಿದ್ದು ದುರದೃಷ್ಟಕರ. ಶತ್ರು ರಾಷ್ಟ್ರಗಳ ಸದ್ದಡಗಿಸುವ ಯೋಧರಿಗೆ ನಮ್ಮೊಳಗಿನ ರಾಷ್ಟ್ರವಿರೋಧಿಗಳನ್ನು ಮಟ್ಟಹಾಕುವುದೇ ಕಷ್ಟಕರವಾಗಿದೆ.
ಈ ರೀತಿ ಭಾರತೀಯ ಸೇನೆಯು ದೇಶದ ರಕ್ಷಣೆಗಾಗಿ ತನ್ನೆಲ್ಲಾ ಆಸೆ ಕನಸು, ಕುಟುಂಬ, ಬಂಧುವರ್ಗ ಎಲ್ಲವನ್ನೂ ಬದಿಗಿರಿಸಿ ಭಾರತಾಂಬೆಯ ರಕ್ಷಣೆಯೊಂದೇ ಜಬಾಬ್ದಾರಿಯೆಂದು ತಿಳಿದು ತೆರಳುವ ತ್ಯಾಗಮಯಿಗಳು ಮನೆಬಿಟ್ಟು ಕರ್ತವ್ಯಕ್ಕೆ ತೆರಳಿದ ಯೋಧ ಮರಳಿ ಮನೆ ಸೇರುವನೆಂಬ ಯಾವುದೇ ಭರವಸೆಯಿರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಹೆಚ್ಚಿನ ಜನರಿಗೆ ಸೈನಿಕರ ಬಗ್ಗೆ ಪರಿಚಯಿಸುವುದರ ಮೂಲಕ ಜಾಗೃತರಾಗಿದ್ದಾರೆ.
ಹೆಚ್ಚಿನ ಕಾರ್ಯಕ್ರಮಗಳಲ್ಲಿ ಸೇನೆಯಲ್ಲಿ ಕಾರ್ಯನಿರ್ವಹಿಸಿರುವ ಯೋಧರನ್ನು ಗುರುತಿಸುವ, ಸನ್ಮಾನಿಸುವ ಕೆಲಸ ಶ್ಲಾಘನೀಯ. ಸೈನಿಕರನ್ನು ಕಂಡರೆ ಗೌರವದಿಂದ ಕಾಣುವ ಗುಣ ಎಲ್ಲರಲ್ಲಿ ಬೆಳೆಯಲಿ ಅವರನ್ನು ಅವಮಾನಿಸುವಂತಹ ಘಟನೆಗಳು ನಡೆಯದಿರಲಿ. ಸರಕಾರದ ಮೇಲಿನ ಸೇಡಿಗೆ ಸೈನಿಕರನ್ನು ಬಲಿಪಡೆಯುವ ನಕ್ಸಲೆಟ್‌ನ ವಿದ್ವಂಸಕ ಕೃತ್ಯಗಳು ಕೊನೆಯಾಗಲಿ. ಸೈನಿಕರೇ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಭರವಸೆಯ ಮಾತುಗಳು ಅವರಿಗೆ ಶ್ರೀರಕ್ಷೆಯಾಗಲಿ. ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತು ನಿವೃತ್ತರಾದ ಕೆಚ್ಚೆದೆಯ ವೀರಯೋಧರಿಗೆ ನಮ್ಮದೊಂದು ಬಿಗ್ ಸಲ್ಯೂಟ್. ಜೈ ಹಿಂದ್.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.