ವೇಣೂರು : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ, ವೇಣೂರು ಇಲ್ಲಿ ಬಾಷ್ ಅಟೋಮೋಟಿವ್ ಎಲೆಕ್ಟ್ರೋನಿಕ್ಸ್ ಇಂಡಿಯಾ ಪ್ರೈ.ಲಿ. ತಾಂತ್ರಿಕ ತರಬೇತಿ ಕೇಂದ್ರ ಇತ್ತೀಚೆಗೆ ಉದ್ಘಾಟನೆ ಗೊಂಡಿತು.
ವೇಣೂರು ಐಟಿಐ ಹಾಗೂ ಭಾಷ್ ಸಂಸ್ಥೆಯೊಂದಿಗೆ ನಡೆಸಿರುವ ಒಡಂಬಡಿಕೆ ಹಸ್ತಾಂತರಿಸಿದ ಭಾಷ್ ಕಂಪನಿಯ ಆಡಳಿತ ನಿರ್ದೇಶಕರಾದ ಗುರುಪ್ರಸಾದ್ ಮುದ್ಲಾಪುರ್ ಮಾತನಾಡಿ, ಅತ್ಯುತ್ತಮ ಗುಣಮಟ್ಟದ ತಾಂತ್ರಿಕ ತರಬೇತಿಯನ್ನು ನೀಡುತ್ತಿರುವ ವೇಣೂರು ಐಟಿಐ ನೊಂದಿಗೆ ಇಂತಹ ಒಡಂಬಡಿಕೆ ಮಾಡುತ್ತಿರುವುದು ಸಂತಸವನ್ನುಂಟು ಮಾಡಿದೆ ಎಂದರು. ಬಾಷ್ ಸಂಸ್ಥೆಯ ವಾಣಿಜ್ಯ ವಿಭಾಗದ ಉಪಾಧ್ಯಕ್ಷ ಕುಮಾರ್ ಎಸ್. ಮಾತನಾಡಿ ವೇಣೂರು ಐಟಿಐ ತರಬೇತಿದಾರರ ಶಿಸ್ತು, ತಾಂತ್ರಿಕ ನೈಪುಣ್ಯತೆ, ಸಮಯ ಪಾಲನೆ, ವಿಧೇಯತೆಂದಾಗಿ ಇಲ್ಲಿನ ಹೆಚ್ಚಿನ ತರಬೇತಿದಾರರು ಭಾಷ್ ಸಂಸ್ಥೆಯಲ್ಲಿ ಉದ್ಯೋಗ ಗಳಿಸುವಂತಾಗಿದೆ ಎಂದು ನುಡಿದರು.
ಬಾಷ್ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಡಿ.ಜಿ.ಎಂ. ಗಿರೀಶ್ ಲೋಬೊ ಭಾಷ್ ಸಂಸ್ಥೆಯ ಕಾರ್ಯ ವೈಖರಿಯನ್ನು ಕಿರು ಚಿತ್ರಣದೊಂದಿಗೆ ವಿವರಿಸುವುದೊಂದಿಗೆ ಕಳೆದ ನಾಲ್ಕು ವರ್ಷಗಳಿಂದ ಭಾಷ್ ಸಂಸ್ಥೆಯಲ್ಲಿ ಶಿಶುಕ್ಷು ತರಬೇತಿಯ ಅಖಿಲ ಭಾರತ ವೃತ್ತಿ ಪರೀಕ್ಷೆಯಲ್ಲಿ ವೇಣೂರು ಐಟಿಐ ತರಬೇತಿದಾರರು ಪ್ರಥಮ ಸ್ಥಾನ ಗಳಿಸುತ್ತಿರುವುದು ಈ ಸಂಸ್ಥೆಯು ನೀಡುತ್ತಿರುವ ಉತ್ತಮ ಗುಣ ಮಟ್ಟದ ತರಬೇತಿಗೆ ಹಿಡಿದ ಕೈಗನ್ನಡಿ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ.ಯಶೋವರ್ಮ ಮಾತನಾಡಿ, ಈ ನೂತನ ತರಬೇತಿ ಕೇಂದ್ರದ ಉಪಯೋಗದಿಂದ ಹೊಸ ಹೊಸ ತಂತ್ರ ಜ್ಞಾನದೊಂದಿಗೆ ತರಬೇತಿದಾರರ ಕೌಶಲ್ಯ ವೃದ್ಢಿಸಲಿ ಹಾಗೂ ಬಾಷ್ ಸಂಸ್ಥೆಯೊಂದಿಗಿನ ಬಾಂದವ್ಯ ನಿರಂತರವಾಗಿ ಮುಂದುವರಿಯಲಿ, ಎಂದು ಹಾರೈಸಿದರು.
ಐಟಿಐ ನ ನಿವೃತ್ತ ಪ್ರಾಚಾರ್ಯರಾದ ಸದಾನಂದ ಪೂಜಾರಿ ಸಂಸ್ಥೆಯು ನಡೆದು ಬಂದ ಹಾದಿಯ ಬಗ್ಗೆ ಕಿರುವರದಿಯನ್ನು ವಾಚಿಸಿದರು. ಐಟಿಐ ಪ್ರಾಚಾರ್ಯರಾದ ವಿಶ್ವೇಶ್ವರ ಪ್ರಸಾದ್ ಕೆ.ಆರ್. ಸ್ವಾಗತಿಸಿ, ನೇಮಕಾತಿ ಅಧಿಕಾರಿ ಎಂ.ಆರ್. ಜೈನ್ ವಂದಿಸಿದ ಕಾರ್ಯಕ್ರಮವನ್ನು ಬಾಷ್ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಹಿರಿಯ ಅಧಿಕಾರಿ ಶ್ಯಾಮ್ ಸುಂದರ್ ಹಾಗೂ ಐಟಿಐ ಕಿರಿಯ ತರಬೇತಿ ಅಧಿಕಾರಿ ಪದ್ಮಪ್ರಸಾದ್ ಬಸ್ತಿ ನಿರ್ವಹಿಸಿದ್ದರು.
ಒಡಂಬಡಿಕೆಗೆ ಸಹಕರಿಸಿದ ಬಾಷ್ ಸಂಸ್ಥೆಯ ಸಯ್ಯದ್ ಅಲ್ತಾಫ್, ವಿಕ್ರಮ್ ಕೆ.ವಿ, ಶ್ರೀಧರ್ ಕೆ, ಶ್ಯಾಮ್ ಸುಂದರ್ ಮತ್ತು ವಿಶ್ವನಾಥ್ ರವರನ್ನು ಎಸ್.ಡಿ.ಎಂ ಆಡಳಿತ ಮಂಡಳಿಯ ಪರವಾಗಿ ಸನ್ಮಾನಿಸಲಾತು.