HomePage_Banner_
HomePage_Banner_
HomePage_Banner_

ಬರೀ ಸಿನಿಮಾ ತಾರೆಯರೇ ಬದುಕಾ ?

 ಸುನಿಲ್  ಡಿ.ಕೆ.ಆರ್.ಡಿ.ಎಸ್ ಬೆಳ್ತಂಗಡಿ

 ಸಿನಿಮಾ ಮನೋರಂಜನೆಯ ಒಂದು ವಿಧ. ಕೇವಲ ಎರಡುವರೆ ಗಂಟೆಗಳಲ್ಲಿ ಮುಗಿದು ಹೋಗುವ ಒಂದು ಕಾಲ್ಪನಿಕ ಕಥೆಯೇ ಹೊರತು ವಾಸ್ತವ ಅಲ್ಲ. ಸಿನಿಮಾ ಇಲ್ಲದಿದ್ದರೆ ಈ ದುನಿಯಾ ಎಷ್ಟು ಚೆನ್ನಾಗಿರುತ್ತಿತ್ತೋ ಏನೋ. ಬಹುಷಃ ಸಿನಿಮಾ ರಂಗದ ಬಗ್ಗೆ ಹಾಗೂ ಸಿನಿಮಾ ತಾರೆಯರ ಬಗ್ಗೆ ಚಿಂತನೆ ಮಾಡುತ್ತಿರುವುದು ಇದೇ ಮೊದಲಿರಬೇಕು.
ಪ್ರಸ್ತುತ ಈ ಪ್ರಪಂಚದಲ್ಲಿ ಸಿನಿಮಾ ನಟ ನಟಿಯರನ್ನು ದೇವರಂತೆ ಕಾಣುವ ಜನ. ಹಾ! ಎಂಥಹಾ ವಿಪರ್‍ಯಾಸ! ತಮ್ಮ ಅಭಿನಯದ ಯಾವುದೇ ಒಂದು ಸಿನಿಮಾ ಹಿಟ್ ಆದರೆ ಅಂತಹ ನಟ ಅಥವಾ ನಟಿ ಮೇಲಕ್ಕೆ ಏರುತ್ತಾರೆ. ಮಾತ್ರವಲ್ಲ ಅವರಿಗೆ ಸಾವಿರಾರು ಮಂದಿ ಅಭಿಮಾನಿಗಳಾ ಗುತ್ತಾರೆ. ಸಿನಿಮಾ ಉದ್ಯಮ ಇಂದು ವ್ಯವಹಾರವಾಗಿ ಬೆಳೆದಿದೆ ಎಂದು ಹೇಳಿದರೆ ಖಂಡಿತಾ ಸುಳ್ಳಾಗುವುದಿಲ್ಲ. ಸಿನಿಮಾ ನೋಡದಿದ್ದರೆ, ಸಿನಿಮಾ ಹಾಡು ಕೇಳದಿದ್ದರೆ ಇಂದು ಅನೇಕರಿಗೆ ಏನೋ ಕಳೆದುಕೊಂಡಂತೆ ಆಗುತ್ತದೆ ಹಾಗೂ ಜೀವಿಸಲು ಅಸಾಧ್ಯ ಎಂಬ ಪರಿಸ್ಥಿತಿ ಎದುರಾಗಿದೆ. ಅದರಲ್ಲೂ ಈಗಿನ ಯುವ ಜನಾಂಗಕ್ಕೆ ಸಿನಿಮಾ ತಮ್ಮ ಜೀವನದ ಒಂದು ಅಂಗವಾಗಿ ಮಾರ್ಪಟ್ಟಿದೆ. ದೇವರ ಹಾಡು ಗೊತ್ತಿಲ್ಲಾ ಆದರೆ ಸಿನಿಮಾ ಹಾಡು ಸದಾ ಬಾಯಲ್ಲಿ. ಹಿಂದಿನ ಕಾಲದ ಸಿನಿಮಾ ಹಾಗೂ ಹಾಡುಗಳು ತುಂಬಾ ಅರ್ಥಗರ್ಭಿತ. ಆ ಕಾರಣದಿಂದ ಅವು ಇಂದಿಗೂ ವಾಸ್ತವ ಹಾಗೂ ಜೀವಂತವಾಗಿಯೇ ಉಳಿದಿವೆ. ಆದರೆ ಇಂದಿನ ಹಾಡಿನ ಸಾಲುಗಳು ಇದಕ್ಕೆ ತದ್ವಿರುದ್ಧ. ಅರ್ಥಇಲ್ಲದ ಸಾಲುಗಳು ಹಾಗೂ ಸಾಹಿತ್ಯ. ಎಷ್ಟೇ ಒಳ್ಳೆಯ ಹಾಡುಗಳಿದ್ದರೂ ಅವುಗಳ ಬಾಳಿಕೆ ಕೇವಲ ಒಂದೆರಡು ವರ್ಷ ಮಾತ್ರ. ನಂತರ ಇನ್ನೊಂದು ಹಾಡು ಅಥವಾ ಸಿನಿಮಾ ಅವುಗಳ ಸ್ಥಾನವನ್ನು ಪಡೆಯುತ್ತದೆ.
ಇಲ್ಲಿ ಇಂದು ನನ್ನ ಆಕ್ಷೇಪದ ವಿಚಾರ ಎಂದರೆ ಸಿನಿಮಾ ತಾರೆಯರನ್ನು ಅಗತ್ಯಕ್ಕಿಂತ ಹೆಚ್ಚಾಗಿ ಹೈಲೆಟ್ ಮಾಡಿರುವುದು. ನಟರಿಗೋಸ್ಕರ ಜೀವ ಕೊಡುವ ಅಭಿಮಾನಿಗಳು ಇಂದು ನಮ್ಮಲ್ಲಿ ಅನೇಕರು ಇದ್ದಾರೆ ಎಂಬ ಕಹಿ ಸತ್ಯವನ್ನು ನಾವೆಲ್ಲರೂ ಒಪ್ಪಲೇಬೇಕಾದ ವಿಚಾರ. ನಟ ನಟಿಯರು ಏನು ಪುಕ್ಕಟೆ ಅಭಿನಯ ಮಾಡುವುದಿಲ್ವೇ? ಲಕ್ಷಾಂತರ ಹಣವನ್ನು ಅವರಿಗೋಸ್ಕರ ಸುರಿಯಬೇಕು.
ರಿಯಾಲಿಟಿ ಶೋನಲ್ಲಿ ಹೊಸ ಸಿನಿಮಾದ ಬಗ್ಗೆ ನಟ, ನಟಿ, ನಿರ್ದೇಶಕ, ನಿರ್ಮಾಪಕರಿಂದ ಪ್ರಮೋಷನ್, ರಿಯಾಲಿಟಿ ಶೋನಲ್ಲಿ ನಿರೂಪಕರಾಗಿ, ಜಾಹೀರಾತುಗಳಲ್ಲಿ, ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ, ಟಿ.ವಿ ಮಾಧ್ಯಮದಲ್ಲಿ ವಿಶೇಷ ಅಥಿತಿಯಾಗಿ, ಧಾರವಾಹಿಗಳ ಶತದಿನೋತ್ಸವದ ಸಂಭ್ರಮದಲ್ಲಿ, ಹೊಸ ಮಳಿಗೆ, ಶೋರೂಮ್ ಉದ್ಘಾಟನೆ…… ಹೀಗೆ ಅನೇಕ ರೀತಿಯಲ್ಲಿ ಸಿನಿಮಾ ತಾರೆಯರ ಕಾರುಬಾರನ್ನು ನಾವು ಕಾಣುತ್ತೇವೆ. ಅವರೇ ಸೆಲೆಬ್ರಿಟಿಗಳು.
ಇಲ್ಲಿ ನನ್ನ ಸವಾಲು ಏನೆಂದರೆ ಸಿನಿಮಾ ತಾರೆಯರಿಲ್ಲದೇ ನಮ್ಮ ಕಾರ್ಯಕ್ರಮಗಳು ನಡೆಯುದಿಲ್ವೇ?. ಹೊಸ ಸಿನಿಮಾದ ಪ್ರಚಾರ ಕಾರ್ಯ ರಿಯಾಲಿಟಿ ಶೋ ನಂತರ ಕಾರ್ಯಕ್ರಮಗಳಲ್ಲಿ ಯಾಕೇ? ಸಿನಿಮಾ ಹಾಗೂ ರಾಜಕೀಯ ವ್ಯಕ್ತಿಗಳನ್ನು ಬಿಟ್ಟು ಬೇರೆ ರಂಗಗಳಲ್ಲಿ ವ್ಯಕ್ತಿಗಳು ನಮ್ಮಲ್ಲಿ ಇಲ್ವೇ? ಅಂಥವರನ್ನು ಯಾಕೆ ಈ ಟಿ.ವಿ ಮಾಧ್ಯಮಗಳು ಬೆಳಕಿಗೆ ತರುವ ಪ್ರಯತ್ನ ಮಾಡುವುದಿಲ್ಲ? ಇದಕ್ಕೆ ಅಪವಾದ ಎಂಬಂತೆ ನಾಟಕ, ಯಕ್ಷಗಾನ, ಜನಪದ ಕಲೆ ಹಾಗೂ ವಿಶಿಷ್ಟ ಸಾಧನೆ ಮಾಡಿದ ವ್ಯಕ್ತಿಗಳನ್ನು ಕೆಲವು ಟಿ.ವಿ ಮಾಧ್ಯಮಗಳು ಬೆಳಕಿಗೆ ತರುವ ಪ್ರಾಮಾಣಿಕ ಪ್ರಯತ್ನವನ್ನು ಇಂದೂ ಸಹ ಮಾಡುತ್ತಿವೆ. ಅವರ ಈ ಕಾಯಕಕ್ಕೆ ನನ್ನ ಧನ್ಯವಾದಗಳು. ಇಂತದ್ದೇ ಹಲವು ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಮಾಧ್ಯಮಗಳು ಗುರುತಿಸುವ ಪ್ರಯತ್ನ ಬೇಕಾಗಿದೆ. ಉದಾಹರಣೆಗೆ ಹೇಳುವುದಾದರೆ ದೇಶ ಕಾಯುವ ಯೋಧರು, ನಿವೃತ್ತ ಯೋಧರು, ಖ್ಯಾತ ಸಾಹಿತಿಗಳು, ಚಿಂತಕರು, ಪರಿಣತ ಕೃಷಿಕರು, ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸೇವೆಯಲ್ಲಿ ತೊಡಗಿಕೊಂಡವರು, ವಿಶೇಷ ಸಾಧಕರು, ಆಪತ್‌ಕಾಲಕ್ಕೆ ದೇವರಂತೆ ಬಂದು ನೆರವಾಗು ವವರು. ಇಂತವರನ್ನು ನಮ್ಮ ಮಾಧ್ಯಮದಲ್ಲಿ ಹೈಲೆಟ್ ಮಾಡಿದರೆ ಇವರ ಸಾಧನೆ ಇತರರಿಗೂ ಸ್ಫೂರ್ತಿಯಾಗುವಲ್ಲಿ ಖಂಡಿತಾ ಸಂದೇಹವಿಲ್ಲ.
ನಾನು ಇಲ್ಲಿ ಬರೀ ಸಿನಿಮಾ ತಾರೆಯರನ್ನು ಟಾರ್ಗೆಟ್ ಮಾಡುತ್ತಿಲ್ಲ. ಈ ವ್ಯವಸ್ಥೆಗೆ ನಾವೆಲ್ಲರೂ ಕಾರಣ, ಜೊತೆಗೆ ಮಾಧ್ಯಮ ಕೂಡ. ಈ ನಿಟ್ಟಿನಲ್ಲಿ ದೃಶ್ಯ ಹಾಗೂ ಶ್ರಾವ್ಯ ಮಾಧ್ಯಮಗಳಿಗೂ ಒಂದು ಉತ್ತಮ ಜವಾಬ್ದಾರಿ ಇದೆ. ಈ ಸಿನಿಮಾ ಹಾಗೂ ಧಾರವಾಹಿ ಯಂತಹ ಕಾರ್ಯಕ್ರಗಳಿಂದಾಗಿ ಸಮಾಜದಲ್ಲಿ ಅಶ್ಲೀಲತೆ ಹೆಚ್ಚಾಗಿದೆ ಎಂಬ ನಗ್ನ ಸತ್ಯವನ್ನು ನಾವೆಲ್ಲರೂ ಒಪ್ಪಿಕೊಳ್ಳಬೇಕು. ಜೊತೆಗೆ ಇಲ್ಲಿ ಒಳ್ಳೆತನಕ್ಕಿಂತ ಕೆಟ್ಟದನ್ನು ಹೆಚ್ಚು ಉತ್ಪ್ರೇಕ್ಷೆ ಆಗಿ ತೋರಿಸುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ತಾರೆಯರಿಗೆ ಅತೀ ಹೆಚ್ಚು ಅನುಯಾಯಿ ಗಳು ಇರುತ್ತಾರೆ ಹಾಗೂ ತಾರೆಯರ ಹೆಸರಿನಲ್ಲಿ ಅವರ ಅಭಿಮಾನಿಗಳು ಅನೇಕ ಖಾತೆಗಳನ್ನು ನಡೆಸುತ್ತಾರೆ. ಸಿನಿಮಾ ತಾರೆಯರನ್ನು ಮೇಲಕ್ಕಿಟ್ಟು ಅವರನ್ನು ದೇವರಂತೆ ಕಾಣುವ ಮಾಧ್ಯಮಗಳಿಗೆ ನನ್ನ ವಿರೋಧವಿದೆ. ಸ್ವಾಮಿ, ನಮ್ಮ ಹಳ್ಳಿಯ ಕನಿಷ್ಟ ಪ್ರತಿಭೆಗಳಿಗೂ ಪ್ರಾಮುಖ್ಯತೆ ತಮ್ಮ ಮಾಧ್ಯಮಗಳ ಮೂಲಕ ಕೊಡಿ. ಲಕ್ಷ ಲಕ್ಷ ರೂಪಾಯಿ ಸಂಭಾವನೆಯಾಗಿ ಪಡೆದು, ಐಶಾರಾಮಿ ಜೀವನ ನಡೆಸುವ ಸಿನಿಮಾ ತಾರೆಯರು ಎಷ್ಟು ಸಮಾಜಮುಖಿ ಕಾರ್ಯಕ್ರಮ ಗಳನ್ನು ಹಾಗೂ ಸಮಾಜದ ಬಡ ಜನರ ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ ಎಂಬುದೇ ಪ್ರಶ್ನೆ?. ಇವರ ಆದಾಯದ ಸ್ವಲ್ಪ ಪಾಲನ್ನು ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾಗಿಟ್ಟರೆ ನಮ್ಮ ದೇಶ ಯಾವತ್ತೋ ಮುಂದುವರಿ ಯುತ್ತಿತ್ತು. ಇದಕ್ಕೆ ದೃಷ್ಟಾಂತವೆಂದರೆ ಕೆಲ ಸಿನಿಮಾ ತಾರೆಯರು ತಮ್ಮದೇ ಆದ ಟ್ರಸ್ಟ್ ಆರಂಭಿಸಿ, ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನೊಂದವರ ಬಾಳಿಗೆ ಆಶಾಕಿರಣ ವಾಗಿದ್ದಾರೆ. ಇವರಿಗೆ ನನ್ನ ಕೋಟಿ ಕೋಟಿ ವಂದನೆಗಳು. ಇನ್ನೊಂದೆಡೆ ಹೊಸ ಹೊಸ ಪ್ರತಿಭೆಗಳ ಗುರುತಿಸುವಿಕೆ ಆಗಬೇಕು ಹಾಗೂ ಅವರಿಗೂ ಅವಕಾಶ ಸಿಗಬೇಕು.
ನಮ್ಮಲ್ಲಿ ಹಲವರಿಗೆ ಮಾದರಿ ವ್ಯಕ್ತಿ ಸಿನಿಮಾ ತಾರೆಯರು. ಇವರ ಜೀವನ ಎಷ್ಟು ಚೆನ್ನಾಗಿರುತ್ತದೆ ಎಂದು ನಾವು ನೀವು ದೃಶ್ಯ ಮಾಧ್ಯಮದಲ್ಲಿ ಕಾಣುತ್ತೇವೆ. ನಾನು ಹೇಳುವುದು ಇಷ್ಟೇ, ಬುದ್ಧ, ಮಹಾವೀರ, ಅಂಬೇಡ್ಕರ್, ಗಾಂಧೀ, ಕಲಾಮ್, ತೆರೇಸಾ ಇಂತವರು ನಮ್ಮ ಜೀವನದ ಮಾದರಿ ವ್ಯಕ್ತಿಗಳಾಗಬೇಕೇ ಹೊರತು ಸಿನಿಮಾ ನಟರಲ್ಲ. ಇಲ್ಲಿ ಉಲ್ಲೇಖಿಸಿದ ಕೆಲವು ಅಂಶಗಳು ತಮಗೆ ಸ್ವಲ್ಪ ಕಹಿಯಾಗಿ ಅನುಭವಿಸಬಹುದು ಆದರೆ ಸ್ವಲ್ಪ ಆಳವಾಗಿ ಚಿಂತನೆ ನಡೆಸಿ ಪ್ರಜ್ಞಾವಂತ ನಾಗರೀಕರೇ ಹಾಗೂ ಕಾರ್ಯಪ್ರವೃತ್ತರಾಗಿ. ಸಿನಿಮಾ ಬೇಕು, ಆದರೆ ಎಷ್ಟು ಬೇಕೋ ಅಷ್ಟೇ ಸಾಕು. ನೆನಪಿಡಿ, ಸಿನಿಮಾ ಇಲ್ಲದಿದ್ದರೂ ಬದುಕು ನಡೆಯುತ್ತದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.