ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಹಾಗೂ ದಲಿತ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ.

  ಬೆಳ್ತಂಗಡಿ:  ಸಂವಿಧಾನ ಶಿಲ್ಪಿ , ಪ್ರಜಾಪ್ರಭುತ್ವದ ಪಿತಾಮಹ , ಮಹಾ ಮಾನವತಾವಾದಿ ಡಾ. ಬಿ.ಆರ್ ಅಂಬೇಡ್ಕರ್ ಅವರು ಜಗತ್ತಿನ ಜ್ಞಾನ ಭಂಡಾರ. ಅವರನ್ನು ಅನುಸರಿಸಿ , ಅವರ ಸಿದ್ಧಾಂತವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ತುರ್ತು ಅಗತ್ಯವಿದೆ ಎಂದು ಬೆಳ್ತಂಗಡಿ ಗುರುದೇವ ಕಾಲೇಜಿನ ಉಪನ್ಯಾಸಕಿ ಹೇಮಾವತಿ ಧಮ್ಮಾನಂದ ಹೇಳಿದರು.

ಅವರು ಬೆಳ್ತಂಗಡಿ ಡಾ/ ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಹಾಗೂ ದಲಿತ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ನಡೆದ ಡಾ/ ಬಾಬಾ ಸಾಹೇಬ್ಅಂಬೇಡ್ಕರ್ ಅವರ 127 ನೆಯ ಜನ್ಮದಿನಾಚರಣೆ ಹಾಗೂ ಅಂತರ್ಜಾತಿ ವಿವಾಹಿತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಒಟ್ಟಿಗೆ ಊಟ ಮಾಡುವುದರಿಂದ ಸಭೆ , ಸಮಾರಂಭದಲ್ಲಿ ಭಾಗವಹಿಸುವುದರಿಂದ, ಒಟ್ಟಿಗೆ ಕುಳಿತು ಕೊಳ್ಳುವುದರಿಂದ ನಾಗರಿಕತೆಗೆ ವಿರುದ್ಧವಾದ ಅಮಾನವೀಯ ಜಾತಿ ಪದ್ದತಿಯ ನಾಶ ಅಸಾಧ್ಯ. ಅಂತರ್ಜಾತಿ ವಿವಾಹಗಳಿಂದ ಮಾತ್ರ ಜಾತಿ ನಿರ್ಮೂಲನೆ ಸಾಧ್ಯ ಎಂದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ನಂಬಿದ್ದರು. ವಿಪರ್ಯಾಸವೆಂದರೆ ಇಂದು ಬಹುತೇಕ ಅಂತರ್ಜಾತಿ ವಿವಾಹವಾದವರು ತಮ್ಮ ಮಕ್ಕಳಿಗೆ ಗಂಡ ಅಥವಾ ಹೆಂಡತಿಯ ಜಾತಿಯ ಮಕ್ಕಳಿಗೆ ಮದುವೆ ಮಾಡಿ ಕೊಡುತ್ತಿದ್ದು ಇದರಿಂದಾಗಿ ಸಮಾಜದಲ್ಲಿ ಜಾತಿ ವ್ಯವಸ್ಥೆಯು ಹಾಗೆಯೇ ಉಳಿಯುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಡಾ/ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂದೇಶವನ್ನು ಮತ್ತು ಜೀವನದ ಕೆಲವು ಸಂದರ್ಭಗಳನ್ನು ಎಳೆಎಳೆಯಾಗಿ ಬಿಡಿಸಿ ವಿವರಿಸಿದ ಅವರು ಡಾ/ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನ ನಮಗೆಲ್ಲ ಮಾದರಿಯಾಗಲಿ ಎಂದು ಹಾರೈಸಿದರು.

ಕಾರ್ಮಿಕ ನಾಯಕ , ನ್ಯಾಯವಾದಿ ಶಿವಕುಮಾರ್ ಎಸ್ ಎಂ ಮಾತನಾಡಿ ಜಗತ್ತಿನ ಮಹಾನ್ ಚೇತನ ಅಂಬೇಡ್ಕರ್ ಅವರನ್ನು ಕೆಲವರು ಜಾತಿಗೆ ಸೀಮಿತಗೊಳಿಸುವ ಸಂಕುಚಿತ ಮನೋಭಾವ ಹೊಂದಿದ್ದಾರೆ. ಇನ್ನೊಂದೆಡೆ ಡಾ/ ಬಿ.ಆರ್ ಅಂಬೇಡ್ಕರ್ ರಚಿಸಿದ ಸಂವಿಧಾನ ಬದಲಾವಣೆಗೆ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದ್ದು , ಅದರ ವಿರುದ್ಧ ಜನ ಸಮುದಾಯ ಸಿಡಿದೇಳಬೇಕಾದ ಅಗತ್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಅಧ್ಯಕ್ಷ ವಸಂತ ನಡ ಮಾತನಾಡಿ ದೇಶದಾದ್ಯಂತ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿರುವ ಈ ಸಂದರ್ಭದಲ್ಲಿ ಅದರ ವಿರುದ್ಧ ಹೋರಾಟಕ್ಕೆ ಸ್ಪೂರ್ತಿಯಾಗಿ ಅಂಬೇಡ್ಕರ್ ನಮಗೆ ಪ್ರಸ್ತುತವೆನಿಸುತ್ತಾರೆ ಎಂದ ಅವರು ಶೋಷಿತ ಸಮುದಾಯ ಸಂಘಟಿತಗೊಂಡು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುವುದೇ ನಾವು ಅಂಬೇಡ್ಕರ್ ಅವರಿಗೆ ನೀಡುವ ಗೌರವ ಎಂದರು.

ಅಂತರ್ಜಾತಿ ವಿವಾಹಿತರ ಪರವಾಗಿ ಪದ್ಮನಾಭ ಗರ್ಡಾಡಿ , ಜೆರಿ ಪತ್ರಾವೋ ಮಾತನಾಡಿದರು.

ಮೊದಲಿಗೆ ದಲಿತ ಹಕ್ಕುಗಳ ಸಮಿತಿಯ ಶೇಖರ್ ಎಲ್ ಸ್ವಾಗತಿಸಿ, ಕೊನೆಗೆ ವಂದಿಸಿದರು.

ಕೊನೆಯಲ್ಲಿ ಹಿರಿಯ ನಟ ಮಮ್ಮುಟ್ಟಿ ನಟಿಸಿದ ರಾಷ್ಟ್ರಪ್ರಶಸ್ತಿ ವಿಜೇತ , ಅಂಬೇಡ್ಕರ್ ಜೀವನ ಚರಿತ್ರೆ ಆಧಾರಿತ ಚಲನಚಿತ್ರ ಪ್ರದರ್ಶನ ಮಾಡಲಾಯಿತು. ವೇದಿಕೆಯಲ್ಲಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ತಾಲೂಕು ಸಂಘಟನಾ ಕಾರ್ಯದರ್ಶಿ ಜಯಾನಂದ ಪಿಲಿಕಲ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.