ಮೊಬೈಲ್ ಬಳಸಿ ದಾರಿ ತಪ್ಪಿಸುತ್ತಿದ್ದ ದರೋಡೆಕೋರರ ತಂತ್ರಗಾರಿಕೆ ಉಪ್ಪಿನಂಗಡಿ ಪೊಲೀಸರ ಜಾಣತನದಲ್ಲಿ ಕೊನೆ.

ಬೆಳ್ತಂಗಡಿ : ನಾಲ್ಕು ತಿಂಗಳ ಹಿಂದೆ ಧರ್ಮಸ್ಥಳ ಗ್ರಾಮದ ಪಟ್ರಮೆ ರಸ್ತೆಯ ದೇಂತನಾಜೆಯ ನಾಗೇಂದ್ರ ಪ್ರಸಾದ್ ಅವರ ಮನೆಗೆ ನುಗ್ಗಿ ದರೋಡೆ ನಡೆಸಿದ ಪ್ರಕರಣವನ್ನು ಭೇದಿಸಲು ಪೊಲೀಸರು ವಿಫಲರಾಗಿರುವುದರಿಂದಲೇ ಪುತ್ತೂರಿನ ಕೆದಿಲ ಹಾಗೂ ಉಪ್ಪಿನಂಗಡಿಯ ಇಚ್ಲಂಪಾಡಿಯಲ್ಲಿ ದರೋಡೆ ನಡೆಯುವಂತಾಗಿದೆ. ಈಗ ಉಪ್ಪಿನಂಗಡಿ ಪೊಲೀಸರು ದರೋಡೆಕೋರರನ್ನು ಬಂಧಿಸುವ ಮೂಲಕ ಶ್ಲಾಘನೆಗೆ ಪಾತ್ರರಾಗಿದ್ದಾರೆ.
2017 ನ.29 ರಂದು ಸಂಜೆ ಪೇಟೆಗೆ ಹೋಗಿದ್ದ ನಾಗೇಂದ್ರ ಪ್ರಸಾದ್ ಕತ್ತಲಾಗುತ್ತಿದ್ದಂತೆ ಮನೆಗೆ ಮರಳಿದ್ದರು. ಅವರು ಬೀಗ ತೆರೆದು ಒಳ ಪ್ರವೇಶಿಸುತ್ತಿದ್ದಂತೆಯೇ ಹಿತ್ತಿಲಿನಲ್ಲಿ ಅಡಗಿದ್ದ ಮೂವರು ದರೋಡೆಕೋರರು ಒಳ ನುಗ್ಗಿ ನಾಗೇಂದ್ರ ಪ್ರಸಾದ್‌ನನ್ನು ಕುರ್ಚಿಯಲ್ಲಿ ಕುಳ್ಳಿರಿಸಿ ಬಟ್ಟೆಯಿಂದ ಕಟ್ಟಿ ಹಾಕಿದ್ದರು. ಪಿಸ್ತೂಲ್ ಹಾಗೂ ಚೂರಿ ತೋರಿಸಿ ಹಣ ನೀಡುವಂತೆ ಆಗ್ರಹಿಸಿದ್ದರು. ಸುಮಾರು ಮೂರು ಗಂಟೆಗಳ ಕಾಲ ಮನೆಯನ್ನು ಜಾಲಾಡಿ 4000/-ರೂ, 60000/- ರೂ ಮೌಲ್ಯದ ಚಿನ್ನಾಭರಣ ಮೊಬೈಲ್ ಸೆಟ್, ಪಿನ್ ನಂಬರ್ ಸಹಿತ ಎಟಿಎಂ ಕಾರ್ಡ್ ಅನ್ನು ಒಯ್ದಿದ್ದರು.
ದರೋಡೆಕೋರರು ತಮ್ಮ ವಾಹನದಲ್ಲಿ ನೆಲ್ಯಾಡಿಗೆ ಹೋಗಿ ಅಲ್ಲಿನ ಫೆಡರಲ್ ಬ್ಯಾಂಕಿನ ಎಟಿಎಂನಿಂದ ಸ್ವಲ್ಪ ಹಣ ಪಡೆದರು. ಬಳಿಕ ಉಪ್ಪಿನಂಗಡಿ ಬಂದು ಅಲ್ಲಿನ ಕರ್ನಾಟಕ ಬ್ಯಾಂಕ್ ಎಟಿಎಂನಿಂದ ಆದಿನದ ಕೋಟಾದ ಉಳಿಕೆ ಮೊತ್ತವನ್ನು ಪಡೆದು ನೆಲ್ಯಾಡಿಗೆ ಹಿಂದಿರುಗಿ, ಬಳಿಕ ಬಸ್ಸಿನಲ್ಲಿ ಮಂಗಳೂರಿಗೆ ಹೋಗಿ ಕೇರಳಕ್ಕೆ ಪ್ರಯಾಣಿಸಿದ್ದರು.
ಮಾರಾಟ ನೆಪದಲ್ಲಿ ಸಮೀಕ್ಷೆ
ಮನೆ ಮನೆಗಳಿಗೆ ಮಿಕ್ಸಿ ಗ್ರೈಂಡರ್ ಮಾರಾಟ, ಹಳೆ ಮಿಕ್ಸಿಗೆ ಹೊಸ ಮಿಕ್ಸಿ ಗ್ರೈಂಡರ್ ಬದಲಾಯಿಸುವ ಆಫರ್‌ಗಳೊಂದಿಗೆ ಮನೆ ಮನೆ ಭೇಟಿ ನೀಡುವ ಈ ದರೋಡೆಕೋರರು ನಿರ್ಜನ ಪ್ರದೇಶ, ಅಲ್ಲಿನ ಶ್ರೀಮಂತರ ಮನೆ ಹಾಗೂ ಅಲ್ಲಿರುವ ಸದಸ್ಯರ ಮಾಹಿತಿ ಸಂಗ್ರಹಿಸುತ್ತಿದ್ದರು. ಇವರು ತಾವು ಯಾವುದೇ ಮನೆಗೆ ನುಗ್ಗಿದರೂ ಕೂಡಲೇ ಅಲ್ಲಿನ ಟಿ.ವಿ ಧ್ವನಿಯನ್ನು ಹೆಚ್ಚಿಸುತ್ತಿದ್ದರು. ಮಾತ್ರವಲ್ಲದೆ ಪ್ರತಿ ಊರಿನಲ್ಲೂ ಮಾಹಿತಿದಾರರನ್ನು ಹಾಗೂ ವಾಹನ ಸೌಲಭ್ಯವನ್ನು ಒಸದಗಿಸುವ ನೆಟ್ ವರ್ಕ್ ಹೊಂದಿದ್ದರು.
ಆಟಿಕೆ ಪಿಸ್ತೂಲ್
ಇವರು ಬಳಸುವ ಪಿಸ್ತೂಲ್ ಸಹಿತ ಮಾರಕಾಯುಧಗಳೆಲ್ಲವೂ ಆಟಿಕೆಯದಾಗಿದ್ದು, ಪ್ರತಿ ಕೃತ್ಯದ ಬಳಿಕ ಅದನ್ನು ಎಸೆಯುತ್ತಿದ್ದರು. ಕೇರಳದ ತ್ರಿಶ್ಶೂರ್‌ನ ಸಲಾಂ, ಇಲ್ಯಾಸ್, ನೆಲ್ಸನ್ ಅವರೇ ಇಂಥ ಚಾಣಾಕ್ಷ ದರೋಡೆಕೋರರು. ಇವರನ್ನು ಬಂಧಿಸಲು ಧರ್ಮಸ್ಥಳ ಪೊಲೀಸರು ವಿಫಲರಾಗಿದ್ದರೂ ಉಪ್ಪಿನಂಗಡಿ ಎಸ್ಸೈ ನಂದಕುಮಾರ್ ಮತ್ತವರ ಅಪರಾಧ ಪತ್ತೆದಳ ಈ ಕಾರ್ಯದಲ್ಲಿ ಯಶಸ್ಸು ಸಾಧಿಸಿದೆ.
ಕದ್ದ ಮೊಬೈಲ್ ಸೀಮ್‌ನಲ್ಲಿ ದಾರಿ ತಪ್ಪಿಸುತ್ತಿದ್ದರು!
ಮೊಬೈಲ್ ಕದ್ದುಕೊಂಡೊಯ್ದರೆ ಪೊಲೀಸರ ಕೈಗೆ ಸಿಕ್ಕಿ ಬೀಳಲು ಸುಲಭವಾಗುತ್ತದೆ. ಇದನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ತಂತ್ರ ಈ ದರೋಡೆಕೋರರದ್ದು. ನೆಲ್ಯಾಡಿಯಿಂದ ಮಂಗಳೂರಿಗೆ ಬಂದು ಅಲ್ಲಿನ ಬಿಗ್ ಬಜಾರ್‌ನಿಂದ ಕಡಿಮೆ ಬೆಲೆಯ ಮೊಬೈಲ್ ಸೆಟ್ ಖರೀದಿಸಿ ತಾವು ದರೋಡೆ ನಡೆಸಿ ತಂದಿದ್ದ ಮೊಬೈಲ್‌ನಲ್ಲಿದ್ದ ಎರಡು ಸೆಟ್‌ಗಳಿಗೆ ಹಾಕಿ ಅವುಗಳ ಪೈಕಿ ಒಂದನ್ನು ಶಿರಸಿ ಬಸ್ಸಿನ ಸೀಟಿನಡಿಯಲ್ಲಿ ಹಾಗೂ ಇನ್ನೊಂದನ್ನು ತಮಿಳುನಾಡಿಗೆ ಸಂಚರಿಸುವ ಬಸ್ಸಿನಲ್ಲಿ ಹಾಕಿ ಕೇರಳಕ್ಕೆ ಹೋಗಿದ್ದರು. ಸಾಮಾನ್ಯವಾಗಿ ಮೊಬೈಲ್ ನೆಟ್‌ವರ್ಕ್ ಆಧರಿಸಿ ಪೊಲೀಸ್ ತನಿಖೆ ನಡೆಯುತ್ತದೆ ಎನ್ನುವುದನ್ನು ಅರಿತಿದ್ದ ಇವರು ಪೊಲೀಸರನ್ನು ಶಿರಸಿ ಹಾಗೂ ತಮಿಳುನಾಡಿನೆಲ್ಲೆಡೆ ಅಲೆಯುವಂತೆ ಮಾಡಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.