ಬಡವರ ಶ್ರೇಯೋಭಿವೃದ್ಧಿಗಾಗಿ ಟ್ರಸ್ಟ್ ಹೋರಾಟ: ಬಂಗೇರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನಾಗರಿಕ ಸೇವಾ ಬಳಗಗಳ ತಾಲೂಕು ಮಟ್ಟದ ಸಮಾವೇಶ
ಬೆಳ್ತಂಗಡಿ: ನಾಗರಿಕ ಸೇವಾ ಟ್ರಸ್ಟ್ ಶೋಷಿತರ ಧ್ವನಿಯಾಗಿ ಬಡವರ ಶ್ರೇಯೋಭಿವೃದ್ಧಿಗಾಗಿ ಹಲವಾರು ವರ್ಷಗಳಿಂದ ಹೋರಾಟವನ್ನು ಮಾಡುತ್ತಾ ಬರುತ್ತಿದೆ. ಚುನಾವಣೆ ಸಮಯ ಎಲ್ಲಾ ಪಕ್ಷಗಳ ಅಭ್ಯರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಜನರ ಪ್ರಣಾಳಿಕೆಯೊಂದಿಗೆ ವಿವಿಧ ಹಕ್ಕೊತ್ತಾಯವನ್ನು ಮಂಡಿಸಿ ಜನಪ್ರತಿನಿಧಿ ಮತ್ತು ಮತದಾರರಲ್ಲಿ ಜಾಗೃತಿ ಮೂಡಿಸುವ ಉತ್ತಮ ಕೆಲಸ ಮಾಡುತ್ತಿದೆ ಎಂದು ಬೆಳ್ತಂಗಡಿ ಕ್ಷೇತ್ರದ ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಅವರು ಮಾ. 26 ರಂದು ಶ್ರೀ ಗುರುನಾರಾಯಣ ಸೇವಾ ಸಂಘದ ಸಭಾಭವನದಲ್ಲಿ ನಾಗರಿಕ ಸೇವಾ ಟ್ರಸ್ಟ್ ಗುರುವಾಯನಕೆರೆ ಮತ್ತು ಟ್ರಸ್ಟ್ ಪ್ರವರ್ತಿತ ಜನ ಸಂಘಟನೆಗಳಾದ ದ.ಕ ಪರಿಸರಾಸಕ್ತರ ಒಕ್ಕೂಟ, ಕರಾವಳಿ ಮಹಿಳಾ ಜಾಗೃತಿ ವೇದಿಕೆ, ಕೃಷಿಕರ ವೇದಿಕೆ-ಕರ್ನಾಟಕ, ದಲಿತ ಅಭಿವೃದ್ಧಿ ಸಮಿತಿ ಮತ್ತು ಸ್ವಸಹಾಯ ಸಂಘಗಳು ಇವುಗಳ ಸದಸ್ಯರನ್ನೊಳಗೊಂಡ `ನಾಗರಿಕ ಸೇವಾ ಬಳಗಗಳ ಸಕ್ರಿಯ ಸದಸ್ಯರ ಬೆಳ್ತಂಗಡಿ ತಾಲೂಕು ಮಟ್ಟದ ಸಮಾವೇಶ’ವನ್ನು ಉದ್ಘಾಟಿಸಿ ಮಾತನಾಡಿದರು.
ಎತ್ತಿನ ಹೊಳೆ ನಮ್ಮ ಸರಕಾರದ ಯೋಜನೆ. ಇದನ್ನು ಆರಂಭದಿಂದಲೂ ವಿರೋಧಿಸುತ್ತಾ ಬಂದಿದ್ದೇನೆ. ಆದರೆ ಒಂದು ಕೈಯ ಚಪ್ಪಳೆ ಸಾಕಾಗಲಿಲ್ಲ. ಈ ಯೋಜನೆಯ 12 ಸಾವಿರ ಕೋಟಿ ನೀರಿಗಿಟ್ಟ ಹೋಮದಂತಾಗಲಿದೆ. ಮಳೆ ನೀರು ಸಮುದ್ರಕ್ಕೆ ಸೇರಿ ಪೋಲಾಗುತ್ತಿದೆ ಎನ್ನುತ್ತಾರೆ. ಈ ನೀರನ್ನು ತಡೆ ಹಿಡಿಯಲು ಅಲ್ಲಲ್ಲಿ ಚೆಕ್ ಡ್ಯಾಮ್ ನಿರ್ಮಿಸಲು ಸಹ ಅನುದಾನ ನೀಡುವಂತೆ ಸರಕಾರವನ್ನು ಒತ್ತಾಯಿಸಿದ್ದೇನೆ. ಕುಮ್ಕಿ ಭೂಮಿ ರೈತರಿಗೆ ನೀಡಲು ಕಾನೂನು ಮಾಡಬೇಕು ಎಂದು ಕಾಗೋಡು ತಿಮ್ಮಪ್ಪ ಅವರು ಪ್ರಯತ್ನಿಸಿದವರು. ಅರಣ್ಯ ವಾಸಿಗಳಿಗೆ ಹಕ್ಕುಪತ್ರ ಕೊಡುವ ಬಗ್ಗೆಯೂ ಪ್ರಯತ್ನಗಳು ನಡೆದಿದೆ. ಡಿ.ಸಿ. ಮನ್ನಾ ಭೂಮಿ ಹಂಚಿಕೆ ಈಗಾಗಲೇ ಆರಂಭಗೊಂಡಿದೆ ಎಂದು ತಿಳಿಸಿದರು.
ನಾಗರಿಕ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕೆ. ಸೋಮನಾಥ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಪಟ್ರಮೆಯಲ್ಲಿ ಮಂಗನ ಕಾಯಿಲೆ, ಪಶ್ಚಿಮಘಟ್ಟ ಉಳಿಸಿ ಪಾದಯಾತ್ರೆ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಹೆಚ್‌ಪಿಸಿಎಲ್ ಪೈಪ್‌ಲೈನ್, ನಂದಿಕೂರು ಉಷ್ಣ ವಿದ್ಯುತ್ ಸ್ಥಾವರ, ನೇತ್ರಾವತಿ ಉಳಿಸಿ ಪಾದಯಾತ್ರೆ, ಬೀಡಿ ಕಾರ್ಮಿಕರ ಪರ, ಬಡವರ ಧ್ವನಿಯಾಗಿ ನಾಗರಿಕ ಸೇವಾ ಟ್ರಸ್ಟ್ ಹೋರಾಟ ಮಾಡುತ್ತಾ ಬಂದಿದೆ. ಸ್ವಸಹಾಯ ಸಂಘಗಳು ಹೇಗಿರಬೇಕು, ಹೇಗೆ ಕಾರ್ಯನಿರ್ವಹಿಸಬೇಕು ಎಂಬುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಸತ್ಯ, ಧರ್ಮ, ನ್ಯಾಯಕ್ಕಾಗಿ ಹೋರಾಟ ಮಾಡಿ ಭಯಮುಕ್ತ ಸಮಾಜ ನಿರ್ಮಾಣ ಟ್ರಸ್ಟ್‌ನ
ಉದ್ದೇಶವಾಗಿದೆ ಎಂದರು. ಮುಖ್ಯ ಅತಿಥಿ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಸಮಾಜದ ತಳಮಟ್ಟದಲ್ಲಿರುವರ ಅಭಿವೃದ್ಧಿಗಾಗಿ ಹೋರಾಟ ಮಾಡುವ ಸಂಸ್ಥೆಗಳು ಇನ್ನಷ್ಟು ಬೆಳೆಯಬೇಕು ಎಂದರು. ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ ಮಾತನಾಡಿ ನಾಗರಿಕ ಸೇವಾ ಟ್ರಸ್ಟ್ ಸಮಾಜ ಮುಖಿ ಕಾರ್ಯಕ್ರಮಗಳ ಮೂಲಕ ಜನರಿಗೆ ತಮ್ಮ ಹಕ್ಕು ಮತ್ತು ಕರ್ತವ್ಯದ ಬಗ್ಗೆ ಜಾಗೃತಿ ಮೂಡಿಸಿ ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಮಾತನಾಡಿ ಪ್ರಜಾಪ್ರಭುತ್ವದಲ್ಲಿ ಬಲ ಇಲ್ಲದವರಿಗೆ ಬಲ ತುಂಬಬೇಕಾದ ಕಾರ್ಯವಾಗಬೇಕು, ಇಂದಿಗೂ ದಲಿತರು, ಬಡವರು, ರೈತರು ಬಲ ಹೀನರಾಗುತ್ತಾ ಹೋಗುತ್ತಿದ್ದು, ಪ್ರಬಲರು ಮತ್ತಷ್ಟು ಪ್ರಬಲರಾಗುತ್ತಾ ಇದ್ದಾರೆ, ಬಲಹೀನರ ಬಲ ಹೆಚ್ಚಾದಾಗ ಪ್ರಜಾಪ್ರಭುತ್ವಕ್ಕೆ ಅರ್ಥ ಬರುತ್ತದೆ ಎಂದರು. ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸ್ವಯಂಸೇವಾ ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷ ಎಸ್. ಕುಮಾರ್ ವಹಿಸಿ ಜನರ ಹೆಸರಲ್ಲಿ ವ್ಯಾಪಾರೀಕರಣ ಮಾಡುವುದು ಸ್ವಯಂ ಸೇವಾ ಸಂಸ್ಥೆ ಆಗಲು ಸಾಧ್ಯವಿಲ್ಲ, ಜನರಲ್ಲಿ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಬೇಕು ಇದನ್ನು ನಾಗರಿಕ ಸೇವಾ ಟ್ರಸ್ಟ್ ಮಾಡುತ್ತಿದೆ ಎಂದರು.
ವೇದಿಕೆಯಲ್ಲಿ ಜಲತಜ್ಞ ಶ್ರೀ ಪಡ್ರೆ, ನಿವೃತ್ತ ದ.ಕ. ಜಿಲ್ಲಾ ಲೀಡ್ ಡಿಸ್ಟ್ರಿಕ್ಟ್ ಮೆನೇಜರ್ ಹೇಮಂತ ಭಿಡೆ, ದ.ಕ. ಪರಿಸರಾಸಕ್ತರ ಒಕ್ಕೂಟ ಉಪಾಧ್ಯಕ್ಷ ಐ. ಕುಶಾಲಪ್ಪ ಗೌಡ, ದಲಿತ ಅಭಿವೃದ್ಧಿ ಸಮಿತಿ ಸಂಚಾಲಕ ನಾರಾಯಣ ಕಿಲಂಗೋಡಿ, ಕೃಷಿಕರ ವೇದಿಕೆ ಕರ್ನಾಟಕ ಕಾರ್ಯದರ್ಶಿ ಸದಾಶಿವ ಹೆಗ್ಡೆ, ಕರಾವಳಿ ಮಹಿಳಾ ಜಾಗೃತಿ ವೇದಿಕೆ ಅಧ್ಯಕ್ಷೆ ಮುಮ್ತಾಜ್, ದಲಿತ ಅಭಿವೃದ್ಧಿ ಸಮಿತಿ ಸಂಚಾಲಕ ಸೋಮ ಕೆ. ಉಪಸ್ಥಿತರಿದ್ದರು.
ಟ್ರಸ್ಟ್ ಕಾರ್ಯದರ್ಶಿ ಜಯಪ್ರಕಾಶ್ ಭಟ್ ಸಿ.ಹೆಚ್. ಸ್ವಾಗತಿಸಿದರು. ಕರಾವಳಿ ಮಹಿಳಾ ಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷೆ ವಿದ್ಯಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.