ಕೇಂದ್ರದಲ್ಲಿ ನೇರ ಚರ್ಚೆಗೆ ಬೆನ್ನು ಹಾಕುತ್ತಿರುವ ಕಾಂಗ್ರೆಸ್: ಧರ್ಮೇಂದ್ರ ಪ್ರಧಾನ್ ಆರೋಪ

ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಬೆಳ್ತಂಗಡಿ ಭೇಟಿ
ಸಭೆಯಲ್ಲಿ ಏನೇನು?
ಪಕ್ಷದ ಆಂತರಿಕ ಸಭೆಯಾಗಿದ್ದುದರಿಂದ ಪ್ರಾರಂಭದ ಉದ್ಘಾಟನಾ ಕಾರ್ಯಕ್ರಮದ ವರೆಗೆ ಮಾತ್ರ ಪತ್ರಕರ್ತರಿಗೆ ಅನುಮತಿ ನೀಡಲಾಗಿತ್ತು. ಸಭೆ ಉದ್ಘಾಟನೆಗೊಳಿಸಿ ಧರ್ಮೇಂದ್ರ ಪ್ರಧಾನ್ ಅವರು ಮಾತನಾಡಿದ ಬಳಿಕ ಪತ್ರಕರ್ತರಿಗೆ ವಂದನಾರ್ಪಣೆ ನೀಡಲಾಯಿತು. ಅದಕ್ಕೂ ಮುನ್ನ ಪತ್ರಕರ್ತರನ್ನು ಆಹ್ವಾನಿಸುವಾಗಲೂ ಇದೇ ರೀತಿ ಹೇಳಿಯೇ ಕರೆಯಲಾಗಿತ್ತು. ಸಭೆಯಲ್ಲಿ ಸಂಘಟಕರು ಧನ್ಯವಾದ ಹೇಳುವ ಮುನ್ನವೇ ಧರ್ಮೇಂದ್ರ ಪ್ರಧಾನ್ ಕೂಡ ತಮ್ಮ ಭಾಷಣದ ಕೊನೆಗೆ ಪತ್ರಕರ್ತರಿಗೆ ಧನ್ಯವಾದ ಎಂದು ಹೇಳಿದರು!. ಬಳಿಕ ಪಕ್ಷದ ಕಾರ್ಯಕರ್ತರು ನಾಯಕರ ಜೊತೆ ಅವರು  2 ಗಂಟೆಗಳ ಕಾಲ ಮಾತುಕತೆ ನಡೆಸಿದರು. ಸಭೆಯಲ್ಲಿ ಮುಂದಿನ ಅಭ್ಯರ್ಥಿಯ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂಬುದು ವಿಶೇಷವಾಗಿತ್ತು. ಸಭೆಯಲ್ಲಿ 241 ಬೂತ್ ಸಮಿತಿಗಳ ಅಧ್ಯಕ್ಷರುಗಳು, 55 ಶಕ್ತಿ ಕೇಂದ್ರಗಳ ಪ್ರಮುಖರು, 8 ಮಹಾಶಕ್ತಿ ಕೇಂದ್ರಗಳಿಂದ ಅಧ್ಯಕ್ಷ-ಕಾರ್ಯದರ್ಶಿಗಳು, ಪಂಚಾಯತ್ ಸಮಿತಿಯಿಂದ ಅಧ್ಯಕ್ಷ ಕಾರ್ಯದರ್ಶಿಗಳು, ಜಿ.ಪಂ, ತಾ.ಪಂ, ಗ್ರಾ.ಪಂ. ಸದಸ್ಯರುಗಳು, ಜಿಲ್ಲಾ ಹಾಗೂ ಮಂಡಲದ ಪದಾಧಿಕಾರಿಗಳಿಗೆ ಮಾತ್ರ ಅವಕಾಶವಿತ್ತು.

ಬೆಳ್ತಂಗಡಿ : ಕಳೆದ 55 ವರ್ಷಗಳ ಕಾಲ ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತ ನಡೆಸಿದ್ದು ಜನರಿಗೆ ಮೂಲಭೂತ ಸೌಕರ್ಯ ಕೊಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಆದರೆ ಅದನ್ನು ಕೇಳುವ ಅಧಿಕಾರ ನಮಗಿಲ್ಲವೇ? ಈ ಬಗ್ಗೆ ಕಾಂಗ್ರೆಸ್ ಜೊತೆ ನಾವು ಚರ್ಚೆಗೆ ಸದಾ ಸಿದ್ಧವಿದ್ದು ಕಾಂಗ್ರೆಸ್ ಇದಕ್ಕೆ ಹಿಂದೇಟು ಹಾಕುತ್ತಿರುವುದು ಯಾಕೆ ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವರೂ ಆಗಿರುವ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಪ್ರಶ್ನಿಸಿದರು.
ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಇದರ ಮಂಡಲ ವತಿಯಿಂದ ಮಾ. 24 ರಂದು ಎಸ್‌ಡಿಎಂ ಕಲಾಭವನ ಬೆಳ್ತಂಗಡಿಯಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ವಿಶೇಷ ಸಿದ್ಧತಾ ಪ್ರೇರಣಾ ಸಭೆ, ಬೆಳ್ತಂಗಡಿ ಮಂಡಲಕ್ಕೆ ಅಧಿಕೃತ ಭೇಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಧರ್ಮೇಂದ್ರ ಪ್ರಧಾನ್ ಮಾತಿನ ಮುಖ್ಯಾಂಶಗಳು:
ನರೇಂದ್ರ ಮೋದೀಜಿಯವರು ಅನೇಕ ಜನಕಲ್ಯಾಣ ಯೋಜನೆಗಳನ್ನು ದೇಶಕ್ಕೆ ಕೊಟ್ಟಿದ್ದಾರೆ. ಅದರ ಪ್ರಯೋಜನ ನಮ್ಮ ಜನತೆಗೆ ತಲುಪಲು ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು.
ಅಭಿವೃದ್ಧಿ ಬಗೆಗೆ ಚರ್ಚೆಗೆ ಬರಬೇಕಾದ ಕಾಂಗ್ರೆಸ್ ಲೋಕಸಭೆ ಮತ್ತು ರಾಜ್ಯ ಸಭೆಗಳಲ್ಲಿ ಕೋಲಾಹಲವೆಬ್ಬಿಸಿ ಚರ್ಚೆಗೆ ಅವಕಾಶವಿಲ್ಲದಂತೆ ಮಾಡುತ್ತಿದೆ. ಬೊಬ್ಬೆ ಹೊಡೆದರೆ ಅದು ಚರ್ಚೆ ಆಗದು.
ಈಚೆಗೆ ಆಗಿರುವ ಬ್ಯಾಂಕ್ ಹಗರಣದ ಮೂಲ ತಿಳಿಸಲೂ ನಾವು ಬದ್ಧ, ಹಗರಣ ಆರಂಭ ಹೇಗೆ? ಇದರ ಹಿಂದೆ ಯಾರಿದ್ದಾರೆ? ಎಂದು ಚರ್ಚೆಯ ಸಂದರ್ಭ ನಾವು ತಿಳಿಸುತ್ತೇವೆ.
ಕೇಂದ್ರ ಸರಕಾರ ಮಹಿಳೆಯರಿಗೆ ಅನುಕೂಲವಾಗುವಂತೆ ಪ್ರಧಾನಮಂತ್ರಿ ಉಜ್ವಲಾ ಯೋಜನೆ, ಕೃಷಿಕರಿಗೆ ಅನುಕೂಲವಾಗುವಂತೆ ಫಸಲ್ ಭೀಮಾ ಯೋಜನೆ,
ಯುವಕರಿಗೆ ಮುದ್ರಾ ಯೋಜನೆ, ಬೇಟಿ ಬಚಾವೋ ಯೋಜನೆ, ಸ್ವಚ್ಛಭಾರತ್‌ನಂತಹಾ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ತಂದಿದೆ.
ಕಾಂಗ್ರೆಸ್ ಯುವಜನತೆಗೆ, ಕೃಷಿಕರಿಗೆ ಯಾವುದೇ ಯೋಜನೆ ತರುವಲ್ಲಿ ಅಂದು ಯಶಸ್ಸಾಗಿರಲಿಲ್ಲ ಎಂಬುದು ಗಮನಾರ್ಹ ಎಂದರು.
ಸಭೆಯ ಅಧ್ಯಕ್ಷತೆಯನ್ನು ಮಂಡಲದ ಅಧ್ಯಕ್ಷ ರಂಜನ್ ಜಿ. ಗೌಡ ವಹಿಸಿದ್ದು, ಅತಿಥಿಗಳನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಮಾಜಿ ಶಾಸಕ ಆಯನೂರು ಮಂಜುನಾಥ್ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಬಿಜೆಪಿ ಪ್ರ. ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಚುನಾವಣಾ ಪ್ರಭಾರಿ ಹಾಗೂ ಮಾಜಿ ಶಾಸಕಿ ಶೈಲಜಾ ಭಟ್, ಮಾಜಿ ಶಾಸಕ ಪ್ರಭಾಕರ ಬಂಗೇರ, ಮಾಜಿ ಸಚಿವ ಗಂಗಾಧರ ಗೌಡ, ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ ಮೊದಲಾದವರು ಉಪಸ್ಥಿತರಿದ್ದರು.
ದ.ಕ. ಜಿಲ್ಲಾ ಬಿ.ಜೆಪಿ. ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ, ಬಿಜೆಪಿ ಮಾಜಿ ಅಧ್ಯಕ್ಷೆ ಶಾರದ ರೈ, ಜಿ.ಪಂ. ಮತ್ತು ತಾ.ಪಂ. ಸದಸ್ಯರು ಉಪಸ್ಥಿತರಿದ್ದರು. ತಾ.ಪಂ ಸದಸ್ಯ ವಿಜಯ ಗೌಡ ವೇಣೂರು, ವಿಜಯ ಅತ್ತಾಜೆ ಕಾರ್ಯಕ್ರಮ ನಿರೂಪಿಸಿದರು. ಗೀತಾ ರಾಮಣ್ಣ ಗೌಡ, ಧನಲಕ್ಷ್ಮೀ ಧರ್ಮಸ್ಥಳ ವಂದೇ ಮಾತರಂ ಹಾಡಿದರು. ಪಕ್ಷದ ಪ್ರ.ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಉಪ್ಪಡ್ಕ ವಂದನಾರ್ಪಣೆಗೈದರು. ಸಮಾವೇಶದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಸಂಪತ್ ಬಿ. ಸುವರ್ಣ ಅವರು ಹೊರತಂದ ಕೇಂದ್ರ ಸರಕಾರದ ಯೋಜನೆಗಳ ಮಾಹಿತಿ ಕೈಪಿಡಿ ನಮೋ ಭಾರತವನ್ನು ಧರ್ಮೇಂದ್ರ ಪ್ರಧಾನ್ ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು. ಧರ್ಮೇಂದ್ರ ಪ್ರಧಾನ್ ಅವರನ್ನು ಮಂಡಲದ ವತಿಯಿಂದ ವಿಶೇಷ ರೀತಿಯಲ್ಲಿ ಸನ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.