ಬೆಳ್ತಂಗಡಿ ಡಯಾಲಿಸಿಸ್ ಕೇಂದ್ರ ಮತ್ತೆ ಕಾರ್ಯಾರಂಭ ಸರಕಾರಿ ಆಸ್ಪತ್ರೆ ನೀರಿನ ಸಮಸ್ಯೆ ಪರಿಹಾರ

10 ಗಂಟೆಯೊಳಗೆ ಇನ್ನೊಂದು ಕೊಳವೆಬಾವಿ
ತೋಡಿಸಿದ ಶಾಸಕರು
2.5 ಇಂಚು ನೀರು ಲಭ್ಯ
ಸರಕಾರಿ ಆಸ್ಪತ್ರೆಗೆ ಉಚಿತ ನೀರು ಒದಗಿಸಿದ ನಿವೃತ್ತ ಎಸ್‌ಪಿ ಪಿತಾಂಬರ ಹೇರಾಜೆ
ಪಟ್ಟಣ ಪಂಚಾಯತ್‌ನಿಂದ ಇನ್ನೊಂದು ನೀರಿನ ಸಂಪರ್ಕ
ಆಸ್ಪತ್ರೆ ವಸತಿಗೃಹಗಳಿಗೂ ತಟ್ಟಿದ ನೀರಿನ ಸಮಸ್ಯೆ ತಾಪ
ಶಾಸಕರಿಂದ ದಿಢೀರ್ ಭೇಟಿ, ಪರಿಶೀಲನೆ

ಬೆಳ್ತಂಗಡಿ: ಕಳೆದ ವಾರ ನೀರಿನ ಅಭಾವದಿಂದ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಕಾರ್ಯಾಚರಿಸುತ್ತಿದ್ದ ಡಯಾಲಿಸಿಸ್ ಕೇಂದ್ರ ತಾತ್ಕಾಲಿಕ ವಾಗಿ ಕಾರ್ಯ ಸ್ಥಗಿತಗೊಳಿಸಿದ್ದೂ ಮಾತ್ರವಲ್ಲದೆ ಸರಕಾರಿ ಆಸ್ಪತ್ರೆ ಸೇರಿದ್ದ ರೋಗಿಗಳು, ವಸತಿಗೃಹದಲ್ಲಿ ವಾಸವಾಗಿದ್ದ ಜನ ಕೂಡ ನೀರಿಗಾಗಿ ಪರದಾಡಿದ ಸ್ಥಿತಿಗೆ ಸಕಾಲಿಕ ಪರಿಹಾರವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿ ಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಸೂಕ್ತ ಪರಿಹಾರ ವ್ಯವಸ್ಥೆ ಮಾಡಿದ್ದು ಇದೀಗ ಪರಿಸ್ಥಿತಿ ತಿಳಿಯಾಗಿದ್ದು ಎಲ್ಲವೂ ಎಂದಿನಂತೆ ಕಾರ್ಯಾರಂಭಿಸಿ ನಿರಾಳತೆಯ ವಾತಾವರಣ ಮೂಡಿದೆ.
ಆಸ್ಪತ್ರೆಯಲ್ಲಿ 18 ಸಾವಿರ ಲೀ. ಗಾತ್ರದ ನೀರಿನ ಟ್ಯಾಂಕ್ (ಸಂಪ್) ವ್ಯವಸ್ಥೆ ಇದೆಯಾದರೂ ನಗರ ಪಂಚಾಯತ್‌ನಿಂದ ಬರುವ ನೀರಿನ ಪ್ರಮಾಣ ಕಡಿಮೆಯಾಗಿ ಸಮಸ್ಯೆ ಎದುರಾಗಿತ್ತು. ಆಸ್ಪತ್ರೆಗೆ ನೀರಿನ ಮೂಲವಾಗಿದ್ದ ಕೊಳವೆಬಾವಿ (ಬೋರ್‌ವೆಲ್)ನಲ್ಲಿ ನೀರಿನ ಒರತೆ ಯೂ ಕಡಿಮೆಯಾದ ಪರಿಣಾಮ ಸಮಸ್ಯೆ ಮತ್ತಷ್ಟು ಬಿಗಡಾಯಿಸಿತ್ತು. ಅಲ್ಲದೆ ಬೇಸಿಗೆ ಕಾಲವಾದುದರಿಂದ ನೀರಿನ ಬಳಕೆ ಪ್ರಮಾಣ ಹೆಚ್ಚಳ, 100 ಬೆಡ್‌ಗಳ ಆಸ್ಪತ್ರೆಯಾಗಿರು ವುದರಿಂದ ಸಹಜವಾಗಿಯೇ ನೀರಿನ ಸಮಸ್ಯೆ ಎದುರಿಸುವಂತಾಗಿತ್ತು.
ಡಯಾಲಿಸಿಸ್ ಕೇಂದ್ರ ಕಾರ್ಯಸ್ಥಗಿತ:
ನೀರಿನ ಅಭಾವದಿಂದ ಅನಿವಾಸಿ ಭಾರತೀಯರ ಸಂಘವಾದ ದ.ಕ. ಜಿಲ್ಲಾ ಮುಸ್ಲಿಂ ಅಸೋಸಿಯೇಶನ್ ಕತಾರ್ ನವರು ಹಿದಾಯ ಫೌಂಡೇಶನ್ ಸಂಸ್ಥೆಯ ಮೂಲಕ ಆಸ್ಪತ್ರೆಗೆ ಉಚಿತವಾಗಿ ಕೊಡಮಾಡಿದ ಡಯಾಲಿಸಿಸ್ ಮೆಷಿನ್ ಸಹಿತ ಸರಕಾರದಿಂದಲೂ ಚಾಲ್ತಿಗೆ ತಂದಿರುವ ಡಯಾಲಿಸಿಸ್ ಮೆಷಿನ್ ಕಾರ್ಯ ಸ್ಥಗಿತಗೊಳಿಸಿತ್ತು. ಪ್ರತಿ ರೋಗಿಗೆ ಒಂದು ಡಯಾಲಿಸಿಸ್‌ಗೆ ೪ ಗಂಟೆ ಕನಿಷ್ಟ ಸಮಯ ಬೇಕಾಗಿದ್ದು, ರೋಗಿಗೆ ತಲಾ 300 ರಿಂದ 400 ಲೀಟರ್ ನೀರು ಕೂಡ ಬೇಕಾಗುತ್ತದೆ. ಆದರೆ ಆಸ್ಪತ್ರೆಯಲ್ಲಿ ನೀರೇ ಇಲ್ಲದ್ದರಿಂದ ಡಯಾಲಿಸಿಸ್ ಘಟಕ ಚಾಲೂ ಇಡುವುದೇ ಅಸಾಧ್ಯದ ಮಾತಾಗಿತ್ತು. ಇದ್ದಕ್ಕಿದ್ದಂತೆ ಡಯಾಲಿಸಿಸ್ ಯಂತ್ರ ಕಾರ್ಯ ನಿಲ್ಲಿಸಿದ್ದರಿಂದ ಮಾಮೂಲಿಯಾಗಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದ ಮಂದಿ ದುಬಾರಿ ಖರ್ಚು ಮಾಡಿಕೊಂಡು ಪುತ್ತೂರು ಮತ್ತು ಮಂಗಳೂರಿಗೆ ಹೋಗಬೇಕಾಗಿ ಬಂತು.
ರಾತ್ರಿ ನೀರಿದ್ದ ಟ್ಯಾಂಕ್ ಬೆಳಿಗ್ಗೆ ಖಾಲಿ!
ಈ ನಡುವೆ ಡಯಾಲಿಸಿಸ್‌ನ ತುರ್ತು ಮಹತ್ವ ಅರಿತ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಆದಂ ಅವರು ಡಯಾಲಿಸಿಸ್ ಘಟಕಕ್ಕೆ ಮಾತ್ರ ಸೀಮಿತವಾಗಿ ಅಳವಡಿಸಲಾಗಿದ್ದ ೧ ಸಾವಿರ ಲೀ. ಟ್ಯಾಂಕ್‌ಗೆ ಪ್ರತ್ಯೇಕ ಆದ್ಯತೆಯಲ್ಲಿ ಸಂಜೆಯ ವೇಳೆಗೆ ನೀರಿನ ವ್ಯವಸ್ಥೆ ಮಾಡಿ ಟ್ಯಾಂಕ್ ತುಂಬಿಸಿಕೊಟ್ಟಿದ್ದರು. ಖಚಿತಪಡಿಸಿಕೊಳ್ಳಲು ಅವರೇ ಸ್ವತಃ ಆಸ್ಪತ್ರೆಯ ಹಿಂಭಾಗದಲ್ಲಿರುವ ಟ್ಯಾಂಕನ್ನು ಪರಿಶೀಲನೆ ಕೂಡ ನಡೆಸಿದ್ದರು. ಆದರೆ ಬೆಳಗಾಗುವಾಗ ಅದರ ನೀರು ಪೂರ್ತಿ ಖಾಲಿಯಾಗಿತ್ತು. ಆದರೆ ಇದಕ್ಕೆ ಕಾರಣ ಮಾತ್ರ ನಿಗೂಢವಾಗಿತ್ತು!
ವಸತಿಗೃಹದಲ್ಲೂ ನೀರಿಲ್ಲ :
ಆಸ್ಪತ್ರೆಯ ಸುತ್ತ ಇರುವ ಸಿಬ್ಬಂದಿಗಳು, ವೈದ್ಯಾಧಿಕಾರಿಗಳ ವಸತಿಗೃಹಕ್ಕೂ ಕೂಡ ನೀರಿನ ಅಭಾವದ ಬಿಸಿ ಮುಟ್ಟಿತ್ತು. ಕೆಲವರು ವಸ್ತ್ರ ಒಗೆಯಲು ತಮ್ಮ ತಮ್ಮ ಮನೆಗೆ ಹೋಗಿ ಬಂದ ಬಗ್ಗೆಯೂ ಮಾತನಾಡಿಕೊಳ್ಳುತ್ತಿದ್ದರು.
ಶಾಸಕರ ವತಿಯಿಂದ 10 ಗಂಟೆಗಳೊಳಗೆ ಕೊಳವೆಬಾವಿ ವ್ಯವಸ್ಥೆ:
ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆಯಾಗಿರುವ ಬಗ್ಗೆ ತಾ| ವೈದ್ಯಾಧಿಕಾರಿ ಡಾ| ಕಲಾಮಧು ಶೆಟ್ಟಿ ಮತ್ತು ಆಡಳಿತ ವೈದ್ಯಾಧಿಕಾರಿ ಡಾ| ಆದಂ ಅವರು ಶಾಸಕರ ಬಳಿ ತೆರಳಿ ವಿಚಾರ ಮನದಟ್ಟು ಮಾಡಿಕೊಟ್ಟರು. ಜನ ಸಾಮಾನ್ಯರಿಗೆ ನೇರ ಪರಿಣಾಮ ತಟ್ಟಬಹುದಾದ ಸದ್ರಿ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಶಾಸಕರು 10 ಗಂಟೆಯೊಳಗಾಗಿ ಜಿಯಾಲಜಿಸ್ಟ್‌ನ್ನು ಕರೆಸಿ ನೀರಿನ ಲಭ್ಯತೆ ಪರಿಶೀಲಿಸಿದರು. ಕೂಡಲೇ ಹೊಸ ಕೊಳವೆಬಾವಿ ಕೂಡ ತೋಡಿಸಿದ್ದು ಎರಡೂವರೆ ಇಂಚು ನೀರು ಕೂಡ ಲಭ್ಯವಾಗಿದೆ. ಅದಕ್ಕೆ ಪಂಪು ಇಳಿಸುವ ಕೆಲಸ ಬಾಕಿ ಇದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.