ಜಾಗೃತ ಹಿಂದೂ ಸಮಾಜದಿಂದ ಧರ್ಮದ ಉಳಿವು

ವಿರಾಟ್ ಸಂತ ಸಮಾಗಮದಲ್ಲಿ ಸಂತರ ಪ್ರತಿಪಾದನೆ

ಸಂಸ್ಕೃತಿ ಇಲ್ಲದೆ ಬದುಕಿಲ್ಲ : ಸುಬ್ರಹ್ಮಣ್ಯ ಶ್ರೀ
ಗ್ರಾಮಕ್ಕೊಂದು ಮಠವಾಗಲಿ : ಶ್ರೀ ಚಾರುಕೀರ್ತಿ
ಭಜನಾ ಸಂಕೀರ್ತನೆ ಸಮಾಜಕ್ಕೆ ಶಕ್ತಿ : ಮಾಣಿಲ ಶ್ರೀ
ಹಿಂದೂ ಸಮಾಜ ಜಾಗೃತವಾಗಬೇಕು : ವಜ್ರದೇಹಿ ಶ್ರೀ
ಸಮಾಜದಲ್ಲಿ ತಾರತಮ್ಯ ನಿಲ್ಲಲಿ : ಡಾ| ಸಂತೋಷ್ ಗುರೂಜಿ
ಗೋವು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಲಿ : ಮುಕ್ತಾನಂದ ಶ್ರೀ
ಮಕ್ಕಳಿಗೆ ಸಂಸ್ಕೃತಿ ಕಲಿಸಿ : ಶ್ರೀ ವಿಖ್ಯಾತಾನಂದ
ಹಿಂದುತ್ವ ಹೃದಯದಲ್ಲಿರಬೇಕು : ಶ್ರೀ ವಿವೇಕಚೈತನ್ಯಾನಂದ
ಸುವರ್ಣ ಅಕ್ಷರಗಳಲ್ಲಿ ಬರೆದಿಡಬೇಕಾದ ದಿನ : ಡಾ| ಪದ್ಮಪ್ರಸಾದ ಅಜಿಲ

ಬಳೆಂಜ: ಸನಾತನ ಹಿಂದೂ ಧರ್ಮದ ಆಚರಣೆ ಹಾಗೂ ಸಂಸ್ಕೃತಿಯ ಹಿಂದೆ ಆಧ್ಯಾತ್ಮದ ದೊಡ್ಡ ಸಂದೇಶವಿದೆ. ಭಜನೆ, ದೈವ, ದೇವರು, ನಾಗರಾಧನೆ ನಮ್ಮ ಸಮಾಜದ ದೊಡ್ಡ ಶಕ್ತಿ, ನಾವು ಧರ್ಮಮಾರ್ಗದಲ್ಲಿ ನಡೆಯಬೇಕು. ಮೂಲ ನಂಬಿಕೆಯನ್ನು ಉಳಿಸುವುದರ ಜೊತೆಗೆ ಹಿಂದೂ ಧರ್ಮದ ಮೇಲಾಗುವ ದೌರ್ಜನ್ಯದ ವಿರುದ್ಧ ಹೋರಾಟ ನಡೆಸಬೇಕು. ಜಾಗೃತ ಹಿಂದೂ ಸಮಾಜದಿಂದ ಮಾತ್ರ ನಮ್ಮ ಧರ್ಮ ಹಾಗೂ ಸಂಸ್ಕೃತಿ ಉಳಿಯಲು ಸಾಧ್ಯವಿದೆ ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳು ಮುಂದುವರಿಯಬೇಕು ಎಂದು ಬಳೆಂಜದಲ್ಲಿ ಮಾ.18ರಂದು ನಡೆದ `ವಿರಾಟ್ ಸಂತ ಸಮಾಗಮ’ದಲ್ಲಿ ಭಾಗವಹಿಸಿದ್ದ ಎಂಟು ಮಠಗಳ ಸಂತರು ಪ್ರತಿಪಾದಿಸಿದರು.
ಶ್ರೀ ಪಂಚಲಿಂಗೇಶ್ವರ-ದುರ್ಗಾಪರಮೇಶ್ವರೀ ದೇವಸ್ಥಾನ ಬಳೆಂಜ ಇದರ ವರ್ಷಾವಧಿ ಜಾತ್ರಾ ಮಹೋತ್ಸವದ ಅಂಗವಾಗಿ ಒಂದೇ ವೇದಿಕೆಯಲ್ಲಿ ಕರಾವಳಿ ಕರ್ನಾಟಕದ ಅಷ್ಠಮಠಗಳ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ `ವಿರಾಟ್ ಸಂತ ಸಮಾಗಮ’ ವಿಶೇಷ ಧರ್ಮ ಜಾಗೃತಿ ಸಮಾವೇಶ ಹಾಗೂ ಸಾಮೂಹಿಕ ಯುಗಾದಿ ಆಚರಣೆ ಮಾ.18 ರಂದು ಬಳೆಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ `ಉದಯವರ್ಮ ಪಡಿವಾಳ್ ವೇದಿಕೆ’ಯಲ್ಲಿ ಜರುಗಿತು.
ಸಂಸ್ಕೃತಿ ಇಲ್ಲದೆ ಬದುಕಿಲ್ಲ: ಸುಬ್ರಹ್ಮಣ್ಯ ಶ್ರೀ
ಸನಾತನ ಹಿಂದೂ ಧರ್ಮದ ಸಂಸ್ಕೃತಿ ಅತ್ಯಂತ ಶ್ರೇಷ್ಠವಾದುದು, ನಮ್ಮ ಧರ್ಮ ಮತ್ತು ಸಂಸ್ಕೃತಿಯ ಹಿಂದೆ ದೊಡ್ಡ ಸಂದೇಶ ಅಡಗಿದೆ. ಸಂಸ್ಕೃತಿ ಇಲ್ಲದೆ ನಮ್ಮ ಬದುಕು ಸಾಧ್ಯವಿಲ್ಲ. ನಮ್ಮಲ್ಲಿ ಸಾಕಷ್ಟು ಸಂಪತ್ತು ಇದ್ದರೂ ನಾವು ವಿದೇಶಿ ಸಂಸ್ಕೃತಿಯನ್ನು ಅನುಸರಿಸಿ ಬದುಕುತ್ತಿದ್ದೇವೆ ಇದು ಸರಿಯಲ್ಲ ಎಂದು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನ ಶ್ರೀ ಸಂಪುಟ ನರಸಿಂಹ ಮಠ ಸುಬ್ರಹ್ಮಣ್ಯದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.
ಇತರ ಎಲ್ಲಾ ಜೀವಿಗಳಿಗಿಂತ ಮನುಷ್ಯನಿಗೆ ದೇವರು ಅದ್ಭುತವಾದ ಶಕ್ತಿ ಕೊಟ್ಟಿದ್ದಾರೆ. ನಮಗೆ ಆಲೋಚಿಸುವ ಶಕ್ತಿಯಿದೆ. ನಾವು ಧರ್ಮ ಮಾರ್ಗದಲ್ಲಿ ನಡೆಯಬೇಕು. ನಮ್ಮ ಆಚರಣೆಗಳಿಂದ ಸಮಾಜದಲ್ಲಿ ಶಾಂತಿ ನಿರ್ಮಾಣವಾಗಬೇಕು ನಂಬಿಕೆ ಮತ್ತೊಬ್ಬರ ಬದುಕಿಗೆ ಅಡ್ಡಿಯಾಗಬಾರದು, ಸಾರ್ವಜನಿಕ ಶ್ರೇಯಸ್ಸು ನಮ್ಮ ಆಚರಣೆಯಲ್ಲಿರಬೇಕು ಎಂದರು.
ಗ್ರಾಮಕ್ಕೊಂದು ಪಾಠವಾಗಲಿ: ಶ್ರೀ ಚಾರುಕೀರ್ತಿ
ಸನಾತನ ಹಿಂದೂ ಧರ್ಮ ಸಂಸ್ಕೃತಿಗಳ ನೆಲೆಬೀಡಾಗಿದೆ. ಹಿಂದೂ ಎನ್ನಲು ಯಾರಿಗೂ ಕೀಳರಿಮೆ ಬೇಡ. ದೈವ, ದೇವರು, ನಾಗರಾಧನೆ ಈ ಸಂಸ್ಕೃತಿಯ ಮೂಲ. ಇಂತಹ ಸಂಸ್ಕೃತಿ ವಿದೇಶಗಳಿಗೂ ಹೋಗಬೇಕು. ಪ್ರತಿ ಗ್ರಾಮಕ್ಕೊಂದು ಮಠ ಹಾಗೂ ದೇವಾಲಯ ಇರಬೇಕು ಎಂದು ಶ್ರೀ ದಿಗಂಬರ ಜೈನ ಮಠ ಮೂಡಬಿದ್ರೆಯ ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ಹೇಳಿದರು.
ಆಧ್ಯಾತ್ಮಿಕತೆ ಜಗತ್ತಿನ ದೊಡ್ಡ ಸಂಪತ್ತು. ನಮ್ಮ ಜೀವನ ಶಾಂತಿದಾಯಕವಾಗಬೇಕಾದರೆ ಇಂತಹ ಕಾರ್ಯಕ್ರಮ ಅಗತ್ಯ. ಸ್ವಾಮೀಜಿಗಳ ತಪಸ್ಸು, ಅನುಕಂಪ ಹರಿದು ಬಂದರೆ ಜಗತ್ತು ಕಲ್ಯಾಣವಾಗುತ್ತದೆ. ಬಳೆಂಜದಲ್ಲಿ ಇಂದು ಎಂಟು ಮಠಗಳ ಸ್ವಾಮೀಜಿಗಳ ಸಮಾಗಮದಿಂದ ಈ ಮಣ್ಣು ಪುಣ್ಯಪ್ರಾಪ್ತಿಯಾಗುತ್ತದೆ ಎಂದು ತಿಳಿಸಿದರು.
ಭಜನಾ ಸಂಕೀರ್ತನೆ ಸಮಾಜಕ್ಕೆ ಶಕ್ತಿ: ಮಾಣಿಲ ಶ್ರೀ
ಹರಿನಾಮ ಸಂಕೀರ್ತನೆಯಿಂದ ಮನಸ್ಸು ಪರಿಶುದ್ಧಗೊಳ್ಳುತ್ತದೆ ಜೀವನಕ್ಕೆ ಮೌಲ್ಯಾಧಾರಿತ ಶಕ್ತಿ ಕೊಡುತ್ತದೆ ಎಂದು ಶ್ರೀ ಮಹಾಲಕ್ಷ್ಮೀ ಕ್ಷೇತ್ರ ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿಯವರು ಹೇಳಿದರು.
ಗ್ರಾಮದ ಅಭ್ಯುದಯ ಭಜನಾ ಮಂಡಳಿಯಲ್ಲಿದೆ. ಭಜನೆಯಿಂದ ಮನುಷ್ಯನ ಜೀವನಕ್ಕೆ ಉತ್ತಮ ಸಂಸ್ಕಾರ ದೊರೆಯುತ್ತದೆ. ತಂದೆ-ತಾಯಿ, ಗುರುಹಿರಿಯರನ್ನು ಗೌರವಿಸುವ ಮೂಲಕ ಇಂದು ಈ ಗ್ರಾಮಕ್ಕೆ ಎಂಟು ಸಂತರು ಬರುವಂತೆ ಮಾಡಿರುವ ಈ ಗ್ರಾಮದ ಜನರ ಧಾರ್ಮಿಕ ಮನೋಭಾವ ಅತ್ಯಂತ ಶ್ರೇಷ್ಠವಾಗುತ್ತದೆ ಎಂದರು.
ಹಿಂದೂ ಸಮಾಜ ಜಾಗೃತವಾಗಬೇಕು: ವಜ್ರದೇಹಿ ಶ್ರೀ: ಸನಾತನ ಹಿಂದೂ ಸಮಾಜ ಮತ್ತು ಸಂಸ್ಕೃತಿಯ ಮೇಲೆ ನಿರಂತರವಾಗಿ ದೌರ್ಜನ್ಯ, ದಬ್ಬಾಳಿಕೆಗಳು ನಡೆಯುತ್ತಿದ್ದು, ಹಿಂದೂ ಸಮಾಜ ಜಾಗೃತರಾಗಬೇಕಾದ ಅಗತ್ಯವಿದೆ ಎಂದು ಶ್ರೀ ವಜ್ರದೇಹಿ ಮಠ ಗುರುಪುರದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಎಚ್ಚರಿಸಿದರು.
ರಾಜಮಹಾರಾಜರ ಕಾಲದಲ್ಲಿ ಈ ಧರ್ಮ ಅಭಿವೃದ್ಧಿ ಪಥದಲ್ಲಿ ಸಾಗಿತು. ನಂತರ ಲೂಟಿಕೋರರು, ಕ್ರ್ರೈಸ್ತ ಮೇಷನರಿಗಳು ಈ ಧರ್ಮದ ಮೇಲೆ ದಾಳಿ ಮಾಡಿದರು. ಬ್ರಿಟಿಷರಿಂದ ಬಳುವಳಿಯಾಗಿ ಬಂದ ಮೆಕಾಲೆ ಶಿಕ್ಷಣ ನಮ್ಮ ಸಂಸ್ಕೃತಿಯನ್ನು ಸಂಪೂರ್ಣ ನಾಶ ಮಾಡಿತು. ಮಠಾಧೀಶರು, ಧಾರ್ಮಿಕ ನಾಯಕರಿಂದ ಹಿಂದೂ ಧರ್ಮ ಉಳಿದಿದೆ. ಇಂದು ಸರಕಾರ ಮಠ, ಮಂದಿರವನ್ನು ತನ್ನ ನಿಯಂತ್ರಣಕ್ಕೆ ತರಲು ಯತ್ನಿಸುತ್ತಿದೆ. ಇದರ ವಿರುದ್ಧ ಜಾಗೃತರಾಗಬೇಕು, ಹಿಂದೂ ಧರ್ಮವನ್ನು ಉಳಿಸುವ ಚೈತನ್ಯವನ್ನು ಮುಂದಿನ ಚುನಾವಣೆಯಲ್ಲಿ ಬಟನ್ ಒತ್ತುವ ಮೂಲಕ ತೋರಿಸಬೇಕು ಎಂದರು.
ಸಮಾಜದಲ್ಲಿ ತಾರತಮ್ಯ ನಿಲ್ಲಬೇಕು : ಡಾ| ಸಂತೋಷ್ ಗುರೂಜಿ
ಹಿಂದೂ ಸಮಾಜದಲ್ಲಿ ನಂಬಿಕೆಯ ಹೆಸರಿನಲ್ಲಿ ನಡೆಯುತ್ತಿರುವ ವಂಚನೆ ಮತ್ತು ತಾರತಮ್ಯ ನೀತಿಯ ವಿರುದ್ಧ ಹಿಂದೂ ಧರ್ಮ ಒಟ್ಟಾಗಬೇಕಾದ ಅಗತ್ಯವಿದೆ. ಇದು ಬಳೆಂಜ ಗ್ರಾಮದಿಂದಲೇ ಆರಂಭವಾಗಲಿ ಎಂದು ಬಾರಕೂರು ಮಹಾಸಂಸ್ಥಾನ ಕುಂದಾಪುರದ ಡಾ| ವಿಶ್ವಸಂತೋಷ ಭಾರತಿ ಸ್ವಾಮೀಜಿ ಹೇಳಿದರು.
ತುಳುನಾಡಿನಲ್ಲಿ ಭೂತರಾಧನೆಯ ವಿಶಿಷ್ಟ ಸಂಸ್ಕೃತಿ ಇದೆ. ಈ ಸಂಸ್ಕೃತಿ ಭಾರತದ ಯಾವುದೇ ಭಾಗದಲ್ಲಿ ಇಲ್ಲ. ದೈವ ಪರಂಪರೆ ಇಲ್ಲಿ ಗಟ್ಟಿಯಾಗಿದೆ. ನಮ್ಮ ಅಧ್ಯಯನದ ಪ್ರಕಾರ ದೇವರು ಮೈಮೇಲೆ ಬರುವುದಿಲ್ಲ ಕೆಲವರು ನಂಬಿಕೆಯ ಹೆಸರಿನಲ್ಲಿ ಜನರನ್ನು ಮೋಸ ಮಾಡುತ್ತಿದ್ದಾರೆ. ಆದರೆ ನಾಗರಾಧನೆ ಮತ್ತು ದೈವರಾಧನೆಯಲ್ಲಿ ಆವೇಶ ಬರುತ್ತದೆ, ದೈವಗಳಿಗೆ ಬ್ರಹ್ಮಕಲಶವನ್ನು ಕೆಲವು ಪುರೋಹಿತರ ಸೂಚನೆಯಂತೆ ಮಾಡಲಾಗುತ್ತಿದೆ ಇದು ಸರಿಯಲ್ಲ ದೈವಗಳಿಗೆ ಬ್ರಹ್ಮಕಲಶ ಮಾಡುವ ಸಂಪ್ರಾದಾಯವೇ ಇಲ್ಲ ಎಂದು ತಿಳಿಸಿದರು.
ಹಿಂದೂ ಧರ್ಮದಲ್ಲಿ ಅನೇಕ ತಾರತಮ್ಯಗಳು ನಡೆಯುತ್ತಿದೆ. ಯಕ್ಷಗಾನ ಬಯಲಾಟದಲ್ಲಿ ಶೂದ್ರರು ಆಟ ಆಡಿಸಿದರೆ ಅವರ ಮನೆಗೆ ದೇವರು ಬರುವುದಿಲ್ಲ. ಕಾರಣ ಆಡಿಸುವವರು ಮಾಂಸಹಾರಿಗಳು. ಆದರೆ ಅವರು ಕೊಡುವ ಕಾಣಿಕೆ ಆಗುತ್ತದೆ. ದೇವರ ವಾಹನ ಹಾವು, ಸಿಂಹ, ಹುಲಿ, ಇವು ಮಾಂಸಹಾರಿಗಳಲ್ಲವೇ ಇವುಗಳನ್ನೇ ಇಟ್ಟುಕೊಂಡ ದೇವರು ಮಾಂಸಹಾರಿಗಳ ಮನೆಗೆ ಯಾಕೆ? ಬರುವುದಿಲ್ಲ ಎಂದು ಪ್ರಶ್ನಿಸಿ, ನಾವು ಮೂಢ ನಂಬಿಕೆಯನ್ನು ಬಿಟ್ಟು ವೈಚಾರಿಕತೆಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಗೋವು ರಾಷ್ಟ್ರೀಯ ಪ್ರಾಣಿಯಾಗಬೇಕು: ಮುಕ್ತಾನಂದ ಶ್ರೀ
ಗೋವಿಗೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದ್ದು, ಪ್ರತಿ ದಿನ ಗೋವಿನ ಪೂಜೆ ನಡೆಯುತ್ತದೆ. ನಮ್ಮ ರಾಷ್ಟ್ರದ ಪ್ರಾಣಿ ಹುಲಿಯ ಬದಲು ಗೋವು ರಾಷ್ಟ್ರದ ಪ್ರಾಣಿಯಾಗಬೇಕು ಗೋ ಹತ್ಯೆಯನ್ನು ಸಂಪೂರ್ಣ ತಡೆಯಬೇಕು ಎಂದು ಶ್ರೀ ಲಕ್ಷ್ಮೀ ಸತ್ಯನಾರಾಯಣ ವೀರಾಂಜನೇಯ ಕ್ಷೇತ್ರ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ ನುಡಿದರು.
ರಾಮ ರಾಜ್ಯ ಮಹಾತ್ಮಾಗಾಂಧಿಜೀಯವರ ಕಲ್ಪನೆ, ರಾಮರಾಜ್ಯದ ಬಗ್ಗೆ ಮಾತನಾಡಿದರೆ ಇದು ರಾಜಕೀಯವಾಗುತ್ತದೆ ಎನ್ನುತ್ತಾರೆ. ಆದರೆ ಸನ್ಯಾಸ ಎಂಬುದು ರಾಜಕೀಯಕ್ಕಿಂತ ಮೀಗಿಲಾದುದು ಇದರಲ್ಲಿ ಆಸೆ, ಆಕಾಂಕ್ಷೆ, ಎಂಬುದು ಇಲ್ಲ ಇದನ್ನು ರಾಜಕೀಯ ವ್ಯಕ್ತಿಗಳು ಗಮನಿಸಬೇಕು ಎಂದು ತಿಳಿಸಿದರು.
ಮಕ್ಕಳಿಗೆ ಸಂಸ್ಕೃತಿ ಕಲಿಸಿ: ವಿಖ್ಯಾತಾನಂದ ಶ್ರೀ
ಇಂದು ಉದ್ಯೋಗ ಸೇರಿದಂತೆ ವಿವಿಧ ವ್ಯವಹಾರಗಳಿಗೆ ಆಂಗ್ಲ ಭಾಷೆ ಕಲಿಯುವುದು ಅಗತ್ಯವಾಗಿದೆ. ಮಕ್ಕಳಿಗೆ ಆಂಗ್ಲ ಭಾಷೆಯ ಶಿಕ್ಷಣ ನೀಡಿ ಆದರೆ ನಮ್ಮ ಸಂಸ್ಕೃತಿ, ಸಂಪ್ರದಾಯ, ಆಚರಣೆಗಳನ್ನು ಕಲಿಸಿ ಎಂದು ಶ್ರೀ ಗುರು ಸೇವಾಶ್ರಮ ಬಲ್ಯೋಟ್ಟುವಿನ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಹೇಳಿದರು.
ನಮ್ಮ ಆಶ್ರಮದ ಮೂಲಕ ಆಂಗ್ಲ ಮಾಧ್ಯಮ ಶಾಲೆ ನಡೆಯುತ್ತಿದೆ. ಶಾಲೆಯಲ್ಲಿ ಮಕ್ಕಳು ಹಿಂದೂ ಸಂಪ್ರಾದಾಯದಂತೆ ನಡೆಯುತ್ತಾರೆ. ಭಜನೆ ಸೇರಿದಂತೆ ಹಿಂದೂಗಳ ಹಬ್ಬ ಆಚರಣೆಯೂ ನಡೆಯುತ್ತದೆ. ನಾವು ಆಂಗ್ಲ ಭಾಷೆಯ ಶಿಕ್ಷಣ ಕಲಿತರು ನಮ್ಮ ಸಂಸ್ಕೃತಿಯಿಂದ ದೂರವಾಗಬಾರದು ಎಂದು ಸಲಹೆಯಿತ್ತರು.
ಹಿಂದುತ್ವ ಹೃದಯದಲ್ಲಿರಬೇಕು: ಶ್ರೀ ವಿವೇಕ ಚೈತನ್ಯಾನಂದ
ಸನಾತನ ಧರ್ಮದ ಅನುಷ್ಠಾನ ಮಾಡುವವರು ಹಿಂದೂಗಳು, ನಮಗೆ ಧರ್ಮದ ಮೇಲೆ ಕಾಳಜಿ ಬೇಕು, ಧರ್ಮದ ವಿಚಾರವನ್ನು ತಿಳಿದುಕೊಳ್ಳಬೇಕು. ಹಿಂದುತ್ವ ನಮ್ಮ ಹೃದಯದಲ್ಲಿರಬೇಕು. ಇದರಿಂದ ಧರ್ಮ ಜಾಗೃತಿಯಾಗುತ್ತದೆ. ಧರ್ಮದ ತಿರುಳು ಅರಿಯಲು ವಿವೇಕ ತತ್ವವನ್ನು ಕಲಿಯಿರಿ ಎಂದು ಶ್ರೀ ರಾಮಕೃಷ್ಣ ತಪೋವನ ಪೊಳಲಿಯ ಶ್ರೀ ವಿವೇಕಚೈತನ್ಯಾನಂದ ಸ್ವಾಮೀಜಿ ಹೇಳಿದರು.
ಅಧ್ಯಕ್ಷತೆಯನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲ ವಹಿಸಿ ಎಂಟು ಮಠದ ಸ್ವಾಮೀಜಿಗಳು ಒಂದೇ ವೇದಿಕೆಯಲ್ಲಿ ಒಟ್ಟು ಸೇರಿ ಧರ್ಮದ ಬಗ್ಗೆ ಚಿಂತನೆ ನಡೆಸಿರುವುದು ಬಳೆಂಜ ಇತಿಹಾಸದಲ್ಲೇ ಸುವರ್ಣ ಅಕ್ಷರಗಳಲ್ಲಿ ಬರೆದಿಡಬೇಕಾದ ದಿನವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಸಂತರು ನೀಡಿದ ಸಂದೇಶಗಳು ಅನುಷ್ಠಾನವಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಅನ್ನದಾನದ ಸೇವಾಕರ್ತರಾದ ಅನ್ನಪೂರ್ಣ ಹಾಸ್ಪಿಟಲಿಟಿ ಸರ್ವೀಸ್ ತುಮಕೂರಿನ ಆಡಳಿತ ನಿರ್ದೇಶಕ ಹರೀಶ್ ಶೆಟ್ಟಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಿಕ್ಷಕ ಹರೀಶ್ ದೇವಾಡಿಗ ಹಾನಿಂಜೆ ಸನ್ಮಾನಿತರನ್ನು ಪರಿಚಯಿಸಿದರು. ವೇದಿಕೆಯಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ, ಅನುವಂಶೀಯ ಆಡಳಿತ ಮೊಕ್ತೇಸರ ಶೀತಲ್ ಪಡಿವಾಳ್, ಉತ್ಸವ ಸಮಿತಿ ಅಧ್ಯಕ್ಷ ಅರುಣ್ ಹೆಗ್ಡೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸತೀಶ್ ರೈ ಬಾರ್‍ದಡ್ಕ ಉಪಸ್ಥಿತರಿದ್ದರು.
ವಿರಾಟ್ ಸಂತ ಸಮಾಗಮ ಕಾರ್ಯಕ್ರಮದ ಸಂಚಾಲಕ ಅಶ್ವಥ್ ಹೆಗ್ಡೆ ಕುಳೆಂಜಿರೋಡಿ ಗುತ್ತು ಬಳಂಜ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಕೊನೆಯಲ್ಲಿ ವಂದಿಸಿದರು. ಎಂಟು ಮಠಗಳ ಸಂತರಿಗೆ ಹಿಂದೂ ಧರ್ಮದ ಒಂದೊಂದು ವಿಷಯದ ಬಗ್ಗೆ ಮಾತನಾಡಲು ಅವಕಾಶ ನೀಡಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.