ಬಳೆಂಜ: ರೂ. 3.15 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಿಲಾನ್ಯಾಸ

ಬಳೆಂಜ : ಬಳೆಂಜ ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ನೂತನ ರಸ್ತೆ, ಸೇತುವೆ ಹಾಗೂ ರಸ್ತೆ ಕಾಂಕ್ರೀಟಿಕರಣ ಸೇರಿದಂತೆ ರೂ 3.15 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬೆಳ್ತಂಗಡಿ ಕ್ಷೇತ್ರದ ಶಾಸಕ ಕೆ. ವಸಂತ ಬಂಗೇರ ಮಾ.೧೦ರಂದು ಶಿಲಾನ್ಯಾಸ ನೆರವೇರಿಸಿದರು.
ಕಾಪಿನಡ್ಕ- ಬಳೆಂಜ ರಸ್ತೆ ಅಭಿವೃದ್ಧಿಗೆ ರೂ. 90 ಲಕ್ಷ, ಬೊಳ್ಳಾಜೆ-ನಿಟ್ಟಡ್ಕ-ಪೆರ್ಮುಡ ರಸ್ತೆ ರೂ 30 ಲಕ್ಷ, ಬಳೆಂಜ- ಶಾಂತಿನಗರ ರಸ್ತೆ ಕಾಂಕ್ರೀಟಿಕರಣ ರೂ. 20 ಲಕ್ಷ, ನಿಟ್ಟಡ್ಕ-ತೋಟದಪಲ್ಕೆ-ಕುಡುಂಬಾಡಿ ರಸ್ತೆ ಕಾಂಕ್ರೀಟಿಕರಣ ರೂ.40 ಲಕ್ಷ, ಬೊಂಟ್ರೋಟ್ಟು-ಕೇಂಗುಲ ರಸ್ತೆ ಕಾಂಕ್ರೀಟಿಕರಣ ರೂ. 25 ಲಕ್ಷ, ಗುಂಡೇರಿ-ಗಿಳಿಕಾಪು ರಸ್ತೆ ಕಾಂಕ್ರೀಟಿಕರಣ ರೂ. 25  ಲಕ್ಷ, ನಾಲ್ಕೂರು-ಐತಡ್ಕ ಎಂಬಲ್ಲಿ ಸೇತುವೆ ನಿರ್ಮಾಣ ರೂ. 10 ಲಕ್ಷ, ತೆಂಕಕಾರಂದೂರು-ಪೇರಲ್ದಕಟ್ಟೆ-ಸುದೆಗುಂಡಿ ರಸ್ತೆ ಕಾಂಕ್ರೀಟಿಕರಣ ರೂ 40 ಲಕ್ಷ, ಬೊಳ್ಳಾಜೆ-ಡೆಂಜೋಳಿ ರಸ್ತೆ ಮರುಡಾಮರೀಕರಣ ರೂ. 25 ಲಕ್ಷ, ತೆಂಕಕಾರಂದೂರು-ಓಡದಕರಿಯ ರಸ್ತೆ ಕಾಂಕ್ರೀಟೀಕರಣ ರೂ.10 ಲಕ್ಷ, ಒಟ್ಟು ರೂ . 3.15 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಿಲಾನ್ಯಾಸ ಹಾಗೂ ಉದ್ಘಾಟನೆಯನ್ನು ಶಾಸಕರು ನೆರವೇರಿಸಿದರು.
ನಂತರ ಬಳೆಂಜದಲ್ಲಿ ನಡೆದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ, ಶಾಸಕರು ತೆಂಗಿನ ಕಾಯಿ ಒಡೆಯುತ್ತಾ ಹೋಗುತ್ತಿದ್ದಾರೆ ಕೆಲಸ ಆಗುತ್ತಿಲ್ಲ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಅವರು ತಾಲೂಕಿನ ಎಲ್ಲಾ ಗ್ರಾಮಗಳಿಗೆ ಹೋಗಿ ಕಣ್ಣುಬಿಟ್ಟು ನೋಡಲಿ. ನಾನು ತೆಂಗಿನ ಕಾಯಿ ಒಡೆದಲ್ಲಿ ಕೆಲಸ ಆಗಿದೆ. ಹಣ ಮಂಜೂರು ಆದ ಬಳಿಕವೇ ಕಾಯಿ ಒಡೆದಿದ್ದೇನೆ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಅಭಿವೃದ್ಧಿ ಕಾರ್ಯದಲ್ಲಿ ರಾಜಕೀಯ ಮಾಡಿಲ್ಲ, ಯಾರಿಗೂ ವಂಚನೆ ಮಾಡಿಲ್ಲ, ಅಕ್ರಮ ಸಕ್ರಮದಲ್ಲಿ ಪಕ್ಷ, ಜಾತಿ ನೋಡದೇ ಎಲ್ಲರ ಜಾಗವನ್ನೂ ಕೂಡಾ ಮಂಜೂರು ಮಾಡಿದ್ದೇನೆ. ಈ ಕ್ಷೇತ್ರದ ಜನರು ಇಟ್ಟ ಪ್ರೀತಿ-ವಿಶ್ವಾಸವನ್ನು ಉಳಿಸಿದ್ದೇನೆ. ಅಗೌರವ ತರುವ ಯಾವುದೇ ಕೆಲಸ ಮಾಡಿಲ್ಲ. 1984 ರಲ್ಲಿ ಬೆಳ್ತಂಗಡಿ ತಾಲೂಕು ಹೇಗಿತ್ತು. ಈಗ 2018 ರಲ್ಲಿ ತಾಲೂಕು ಹೇಗಿದೆ ಎಂಬುದನ್ನು ಜನರೇ ವಿಮರ್ಶೆ ಮಾಡಲಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ, ತಾ.ಪಂ. ಸದಸ್ಯೆ ವಿನೂಷ ಪ್ರಕಾಶ್, ತಾ.ಪಂ. ಮಾಜಿ ಸದಸ್ಯ ಧರ್ಣಪ್ಪ ಪೂಜಾರಿ, ಬಳೆಂಜ ಗ್ರಾ.ಪಂ. ಅಧ್ಯಕ್ಷೆ ದೇವಕಿ, ಮಾಜಿ ಅಧ್ಯಕ್ಷ ವಿಶ್ವನಾಥ ಡೋಂಗ್ರೆ, ಗ್ರಾ.ಪಂ. ಸದಸ್ಯರಾದ ಪಿ.ಕೆ. ಚಂದ್ರಶೇಖರ್, ವಿಕ್ಟರ್ ಕ್ರಾಸ್ತಾ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.