ತಾಲೂಕು 15 ನೇಯ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಬಾಬು ಶೆಟ್ಟಿ ನಾರಾವಿ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಾ. 25 ರಂದು ಬೆಳ್ತಂಗಡಿ ನಗರದ ಎಸ್‌ಡಿಎಂ ಕಲಾಭವನದಲ್ಲಿ ಜರುಗಲಿರುವ 15 ನೇಯ ತಾ. ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ರಾಗಿ ನಿವೃತ್ತ ಶಿಕ್ಷಕ ಹಾಗೂ ವಿಶ್ರಾಂತ ಉಪನ್ಯಾಸ, ಸಾಹಿತಿ ಬಾಬು ಶೆಟ್ಟಿ ನಾರಾವಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಕಸಾಪ ತಾ. ಅಧ್ಯಕ್ಷ ಡಾ. ಬಿ ಯಶೋವರ್ಮ ಅವರು ಅಧಿಕೃತ ಪ್ರಕಟಣೆ ನೀಡಿದ್ದಾರೆ.
ಬಾಬು ಶೆಟ್ಟಿ ನಾರಾವಿ ಅವರ ಲಘು ಪರಿಚಯ:
ಎಂ.ಎ ಬಿಇಡಿ, ರಾಷ್ಟ್ರಭಾಷೆ ಹಿಂದಿ ಪ್ರವೀಣ ಹಾಗೂ ಗಮಕ ಪ್ರೌಢ ವಿದ್ಯಾರ್ಹತೆ ಹೊಂದಿರುವ ಬಾಬು ಶೆಟ್ಟಿ ಅವರು ಮಂಜೇಶ್ವರ ಸಮೀಪದ ಮೂಡಂಬೈಲು ಕೌಡೂರು ಗ್ರಾಮದಲ್ಲಿ ಹುಟ್ಟಿದವರಾಗಿದ್ದು ಪ್ರಸ್ತುತ ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ನೆಲೆಸಿದ್ದಾರೆ. ನಾರಾವಿ ಪ್ರೌಢ ಶಾಲೆ ಹಾಗೂ ಸಂತ ಅಂತೋನಿ ಪ. ಪೂ ಕಾಲೇಜಿನಲ್ಲಿ ಕನ್ನಡ ಭಾಷಾ ಶಿಕ್ಷಕ ಹಾಗೂ ಉಪನ್ಯಾಸಕರಾಗಿ
ಸುದೀರ್ಘ 41 ವರ್ಷಗಳ ವೃತ್ತಿ ಜೀವನ ನಡೆಸಿ ವಯೋ ನಿವೃತ್ತರಾಗಿದ್ದಾರೆ. 1989 ರಿಂದ ಮಂಗಳೂರು ಆಕಾಶವಾಣಿಯಲ್ಲಿ ಚಿಂತನ, ತುಳು ಸಣ್ಣ ಕತೆ, ಭಾಷಣ ಕಾರ್ಯಕ್ರಮ ನೀಡುತ್ತಿದ್ದಾರೆ, ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಬೆಳಕಿನೆಡೆಗೆ ಎಂಬ ಅಂಕಣ ಬರಹದ ಮೂಲಕ ನೂರಾರು ಲೇಖನಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ ವಿಕ್ರಮ, ಬಂಟರ ವಾಹಿನಿ, ನಮ್ಮ ಬೆದ್ರ ಪತ್ರಿಕೆಗಳಲ್ಲಿ ಸಾಂದರ್ಭಿಕ ಬರಹಗಳನ್ನು ನೀಡಿದ್ದಾರೆ.
ಪೂ-ಮುಳ್ಳು ಎಂಬ ತುಳು ಹಸ್ತಪ್ರತಿ ನಾಟಕ ರಚಿಸಿರುವ ಅವರು, 2010 ರಲ್ಲಿ ನಿಮ್ಮ ಕೈಯಲ್ಲಿ ನನ್ನ ಹಣತೆ ಮತ್ತು 2017 ರಲ್ಲಿ ಅಂತರಂಗ- ಬಹಿರಂಗ ಎಂಬ ತನ್ನ ಚಿಂತನಾ ಬರಹಗಳ ಕೃತಿ ಹೊರತಂದಿದ್ದಾರೆ. ತಾಲೂಕು, ಜಿಲ್ಲೆಯ ಹಲವೆಡೆಗಳಲ್ಲಿ ಧಾರ್ಮಿಕ ಭಾಷಣ, ಗಮಕವಾಚನ- ವ್ಯಾಖ್ಯಾನ ಸಹಿತ ಅನೇಕ ಕಡೆ ವಿಶೇಷ ಸಂಪನ್ಮೂಲ ಉಪನ್ಯಾಸ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಅವರ ವೃತ್ತಿ ಸೇವೆಗೆ ಅವರಿಗೆ 2000 ದಲ್ಲಿ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, 2001 ರಲ್ಲಿ ಜಿಲ್ಲಾ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಲಭಿಸಿದೆ. ನಾಡು ನುಡಿಗೆ ಸಲ್ಲಿಸಿದ ಅವರ ಸೇವೆಯನ್ನು ಗುರುತಿಸಿ ಸುದ್ದಿ ಬಿಡುಗಡೆ ಬೆಳ್ಳಿಹಬ್ಬ, ಕಾಂತಾವರ ಕನ್ನಡ ಸಂಘ, ವಾಣಿ ಶಿಕ್ಷಣ ಸಂಸ್ಥೆಗಳು ಮತ್ತು ನಾರಾವಿ ಸಂತ ಅಂತೋನಿ ಕಾಲೇಜಿನಲ್ಲಿ ಸೇರಿದಂತೆ ನಾಡಿನ ಅನೇಕ ಕಡೆ ಸನ್ಮಾನ ಪುರಸ್ಕಾರಗಳು ಲಭಿಸಿವೆ. ಕಳೆದ ಬಾರಿ ಉಜಿರೆಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸೇರಿದಂತೆ ಅನೇಕ ಕಡೆ ಸ್ವರಚಿತ ಕವನ ಪ್ರಸ್ತುತಿಪಡಿಸಿದ್ದಾರೆ. ಮುಂಡಾಜೆಯಲ್ಲಿ ನಡೆದ ತಾ. ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆಯನ್ನೂ ಅವರು ವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.