ತಾ.ಪಂ. ವಿವಿಧ ಸ್ಥಾಯಿ ಸಮಿತಿಗಳಿಗೆ ಸದಸ್ಯರ ಆಯ್ಕೆ

ತಾಲೂಕಿನ ಅಭಿವೃದ್ಧಿ ಎಲ್ಲಾ ಪಕ್ಷಗಳ ಧ್ಯೇಯವಾಗಬೇಕು: ಬಂಗೇರ

ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ವಿ.ಟಿ. ಸೆಬಾಸ್ಟಿನ್ ಆಯ್ಕೆ

ತಾ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ನೆರಿಯ ಕ್ಷೇತ್ರದ ತಾ.ಪಂ. ಸದಸ್ಯ ವಿ.ಟಿ. ಸೆಬಾಸ್ಟಿನ್ ಅವರು ಆಯ್ಕೆಯಾಗಿದ್ದಾರೆ.
ಸದಸ್ಯರಾಗಿ ತಾ.ಪಂ. ಸದಸ್ಯರಾದ ಮಿತ್ತಬಾಗಿಲು ಕ್ಷೇತ್ರದ ಜಯರಾಮ ಅಲಂಗಾರು, ಅಳದಂಗಡಿ ಕ್ಷೇತ್ರದ ಶ್ರೀಮತಿ ವಿನುಷಾ ಪ್ರಕಾಶ್, ನಾರಾವಿ ಕ್ಷೇತ್ರದ ಶ್ರೀಮತಿ ರೂಪಲತಾ, ಮಡಂತ್ಯಾರು ಕ್ಷೇತ್ರದ ಶ್ರೀಮತಿ ವಸಂತಿ ಹಾಗೂ ವೇಣೂರು ಕ್ಷೇತ್ರದ ವಿಜಯ ಗೌಡ ಅವರನ್ನು ಆರಿಸಲಾಯಿತು. ನೂತನ ಅಧ್ಯಕ್ಷ ಸೆಬಾಸ್ಟಿನ್ ಮಾತನಾಡಿ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಾಲೂಕಿನಲ್ಲಿ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುವುದಾಗಿ ತಿಳಿಸಿದರು.

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಪಂಚಾಯತದ ವಿಶೇಷ ಸಭೆಯು ಮಾ.2 ರಂದು ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿಯವರ ಅಧ್ಯಕ್ಷತೆಯಲ್ಲಿ ಜರುಗಿ, ತಾ.ಪಂ.ದ ಹಣಕಾಸು ಯೋಜನಾ ಮತ್ತು ಲೆಕ್ಕ ಪರಿಶೋಧನ ಸ್ಥಾಯಿ ಸಮಿತಿ, ಸಾಮಾನ್ಯ ಸ್ಥಾಯಿ ಸಮಿತಿ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ನೂತನ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಶಾಸಕ ಕೆ. ವಸಂತ ಬಂಗೇರ, ತಾ.ಪಂ. ಉಪಾಧ್ಯಕ್ಷೆ ವೇದಾವತಿ, ಕಾರ್ಯನಿರ್ವಹಣಾಧಿಕಾರಿ ಬಸವರಾಜ್ ಅಯ್ಯಣ್ಣನವರ್, ತಾ.ಪಂ. ಸದಸ್ಯರು, ತಾ.ಪಂ. ಸಹಾಯಕ ಲೆಕ್ಕ ಅಧೀಕ್ಷಕರಾದ ಗಣೇಶ್ ಪೂಜಾರಿ, ಗ್ರಾ.ಪಂ. ಆಹ್ವಾನಿತ ಸದಸ್ಯರು ಉಪಸ್ಥಿತರಿದ್ದರು.
ತಾ.ಪಂ. ಹಣಕಾಸು ಯೋಜನಾ ಮತ್ತು ಲೆಕ್ಕ ಪರಿಶೋಧನ ಸ್ಥಾಯಿ ಸಮಿತಿಗೆ ಅಧ್ಯಕ್ಷರು ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಸದಸ್ಯರಾಗಿ ತಾ.ಪಂ. ಸದಸ್ಯರಾದ ಗೋಪಿನಾಥ ನಾಯಕ್, ಪ್ರವೀಣ್ ಗೌಡ, ಶ್ರೀಮತಿ ಸುಜಾತ ರೈ, ಶಶಿಧರ ಎಂ, ಜೋಯೆಲ್ ಗೋಡ್ ಫ್ರೀ ಮೆಂಡೋನ್ಸಾ ಇವರು ಆಯ್ಕೆಯಾದರು. ಸಾಮಾನ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರು ತಾ.ಪಂ. ಉಪಾಧ್ಯಕ್ಷೆ ವೇದಾವತಿ, ಸದಸ್ಯರಾಗಿ ತಾ.ಪಂ. ಸದಸ್ಯರಾದ ಶ್ರೀಮತಿ ಸುಶೀಲ, ಓಬಯ್ಯ, ಶ್ರೀಮತಿ ಜಯಶೀಲ, ಲಕ್ಷ್ಮೀನಾರಾಯಣ, ಶ್ರೀಮತಿ ಕೇಶವತಿ ಇವರು ಆಯ್ಕೆಯಾದವರು.
ಶಾಸಕ ಕೆ. ವಸಂತ ಬಂಗೇರ ಮಾತನಾಡಿ, ತಾ.ಪಂ.ದಲ್ಲಿ ಎರಡು ಪಕ್ಷಗಳ ಸದಸ್ಯರು ಒಮ್ಮತದಿಂದ ಕಾರ್ಯ ನಿರ್ವಹಿಸಬೇಕು. ನೂತನ ಅಧ್ಯಕ್ಷರು ಎಲ್ಲಾ ಸದಸ್ಯರನ್ನು ಸಮಾನ ದೃಷ್ಟಿಯಿಂದ ನೋಡಿ ಕಾರ್ಯನಿರ್ವಹಿಸಬೇಕು. ಚುನಾವಣೆ ಸಂದರ್ಭದಲ್ಲಿ ಎಲ್ಲರೂ ರಾಜಕೀಯ ಮಾಡುತ್ತಾರೆ. ಆದರೆ ಅಭಿವೃದ್ಧಿ ವಿಚಾರ ಬಂದಾಗ ಎಲ್ಲರೂ ಒಟ್ಟು ಸೇರಿ ತಾಲೂಕಿನ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಹಿಂದೆ ತಾ.ಪಂ. ಹಾಗೂ ಜಿ.ಪಂ.ಗೆ ಸಾಕಷ್ಟು ಅನುದಾನ ಬರುತ್ತಿತ್ತು. ಆದರೆ ಈಗ ಹೆಸರಿಗಷ್ಟೇ ತಾ.ಪಂ. ಹಾಗೂ ಜಿ.ಪಂ. ಸದಸ್ಯರು, ಎಲ್ಲಾ ಅನುದಾನ ನೇರವಾಗಿ ಗ್ರಾ.ಪಂಕ್ಕೆ ಬರುತ್ತದೆ. ಹೀಗಾಗಬಾರದು ತಾ.ಪಂ. ಹಾಗೂ ಜಿ.ಪಂ. ಸದಸ್ಯರಿಗೂ ಸಾಕಷ್ಟು ಅನುದಾನ ನೀಡಬೇಕು ಈ ಬಗ್ಗೆ ತಾನು ಸರಕಾರವನ್ನು ಒತ್ತಾಯಿಸುವುದಾಗಿ ತಿಳಿಸಿ, ತಾಲೂಕಿನಲ್ಲಿ ಸುಮಾರು ೩ ಸಾವಿರ ಕಿ.ಮೀ ನಷ್ಟು ಗ್ರಾಮೀಣ ರಸ್ತೆ ಇದೆ. ಎಲ್ಲಾ ರಸ್ತೆಗಳನ್ನು ಒಮ್ಮೆಲೇ ಅಭಿವೃದ್ಧಿ ಸಾಧ್ಯವಿಲ್ಲ, ಆದ್ಯತೆ ಮೇಲೆ ಮಾಡುತ್ತಾ ಬರಲಾಗುತ್ತಿದೆ. ಇತ್ತೀಚೆಗೆ ಪರಪ್ಪು-ಕೊಯ್ಯೂರು ರಸ್ತೆಗೆ ರೂ.110 ಕೋಟಿ ಇಟ್ಟಿದ್ದೇನೆ ಎಂದು ಹೇಳಿದರೂ ಜನರು ನಂಬದೇ ಪ್ರತಿಭಟನೆ ನಡೆಸಿದರು. ಮಾ.1ರಂದು ಈ ರಸ್ತೆಯ ಶಿಲಾನ್ಯಾಸವನ್ನು ನೆರವೇರಿಸಿದ್ದೇನೆ ಎಂದು ತಿಳಿಸಿದರು.
ತಾ.ಪಂ. ಉಪಾಧ್ಯಕ್ಷೆ ವೇದಾವತಿಯವರು ಮಾತನಾಡಿ ನೂತನ ಅಧ್ಯಕ್ಷ ಹಾಗೂ ಸದಸ್ಯರಿಗೆ ಶುಭ ಕೋರಿದರು. ನಿರ್ಗಮನ ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್. ಸುವರ್ಣ ಮಾತನಾಡಿ ತನ್ನ ಸೇವಾವಧಿಯಲ್ಲಿ ಪ್ರಾಮಾಣಿಕವಾಗಿ ಯಾವುದೇ ತಪ್ಪು ಮಾಡದೇ ಕಾರ್ಯನಿರ್ವಹಿಸಿದ್ದೇನೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ದಿವ್ಯಜ್ಯೋತಿಯವರು ವಿವಿಧ ಸಮಿತಿಗಳು ತಾ.ಪಂ. ಆಡಳಿತ ನಡೆಸುವಲ್ಲಿ ಸಹಕಾರಿಯಾಗುತ್ತದೆ. ತಾಲೂಕಿನಲ್ಲಿ ಉತ್ತಮ ಕಾರ್ಯ ಮಾಡಲು ಎಲ್ಲರ ಸಹಕಾರ ಬೇಕು ಎಂದರು. ಕಾರ್ಯನಿರ್ವಹಣಾಧಿಕಾರಿ ಬಸವರಾಜ್ ಅಯ್ಯಣ್ಣನವರ್ ಸ್ವಾಗತಿಸಿದರು. ತಾಲೂಕು ಸಂಯೋಜಕ ಜಯಾನಂದ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.