ಮಲೆಯಾಳಿ ಕ್ರಿಶ್ಚಿಯನ್ ಅಸೋಸಿಯೇಶನ್ ವತಿಯಿಂದ ಬೆಳ್ತಂಗಡಿಯಲ್ಲಿ ರಾಜ್ಯಮಟ್ಟದ ಮ್ಯಾಟ್ ಕಬಡ್ಡಿ

ಕಬಡ್ಡಿಗೆ ಪ್ರೋತ್ಸಾಹದಾಯಕವಾಗಿ ತಾಲೂಕಿಗೆ 2 ಮ್ಯಾಟ್ ಒದಗಣೆ

ಕ್ರೈಸ್ತ ಸಮಾಜ ಈ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ವಿಶ್ವಾಸವಿರಿಸಿದ್ದು, ಸಂಘಟನೆ ಕಟ್ಟಿಕೊಂಡು ಸಹೋದರತ್ವ ಬಾಳ್ವೆ, ಕೋಮು ಸಾಮರಸ್ಯಕ್ಕೆ ವಿಶೇಷ ಕೊಡುಗೆ ನೀಡುತ್ತಿದೆ. ಶಿಕ್ಷಣ ಕ್ಷೇತ್ರ, ಅನಾಥ ನಿರ್ಗತಿಕ ಆರೈಕೆ ಮಂದಿರಗಳು, ಗ್ರಾಮಾಂತರ ಪ್ರದೇಶಗಳಲ್ಲೂ ಶೈಕ್ಷಣಿಕ ಸಂಸ್ಥೆ ಸ್ಥಾಪಿಸಿ ಜಾತಿ ಧರ್ಮ ಬೇಧವಿಲ್ಲದೆ ಎಲ್ಲರಿಗೂ ಶಿಕ್ಷಣ ನೀಡುವ ಕಾರ್ಯ ಮಾಡುತ್ತಿದೆ. ೧೨ ವರ್ಷಗಳಿಂದ ಸಂಘಟನೆ ಕಟ್ಟಿಕೊಂಡು ಸಮಾಜದೊಳಗೆ ಜಾಗೃತಿ ಮತ್ತು ಸ್ವಾಭಿಮಾನ ಮೂಡಿಸುವ ಕಾರ್ಯ ನಡೆಸಿಕೊಂಡು ಬರುತ್ತಿದ್ದೇವೆ. ನಾವು ಈ ಕ್ರೀಡಾಕೂಟ ಆಯೋಜಿಸಿದ್ದರಿಂದಾಗಿ ಐವನ್ ಡಿಸೋಜಾ ಮತ್ತು ಶಾಸಕ ಬಂಗೇರರು ಒಂದೊಂದು ಮ್ಯಾಟ್ ಒದಗಿಸಿಕೊಡುವ ಭರವಸೆ ಇಲ್ಲಿಂದ ನೀಡಿದ್ದು, ಇದರ ಹೆಮ್ಮೆ ನಮ್ಮ ಮಲೆಯಾಳಿ ಕ್ರಿಶ್ಚಿಯನ್ ಅಸೋಸಿಯೇಶನ್‌ಗೆ ಸಲ್ಲಿಕೆಯಾಗಬೇಕಾಗಿದೆ. ಎ.ಸಿ. ಜಯರಾಜ್, ರಾಜ್ಯಾಧ್ಯಕ್ಷರು
ಮಲೆಯಾಳಿ ಕ್ರಿಶ್ಚಿಯನ್ ಅಸೋಸಿಯೇಶನ್.

ಆರೋಗ್ಯ, ಶಿಕ್ಷಣಕ್ಕೆ ಕ್ರೈಸ್ತ ಸಮಾಜದ ಕೊಡುಗೆ ಅಪಾರ
ಕ್ರೈಸ್ತ ಸಮಾಜ ಕೇರಳದಿಂದ ವಲಸೆ ಬಂದವರಾದರೂ ಇಲ್ಲಿನ ಬರಡು ಭೂಮಿಯಲ್ಲಿ ರಬ್ಬರ್ ಮತ್ತು ಇತರೇ ಕೃಷಿ ಕೈಗೊಂಡು ಈ ಮಣ್ಣನ್ನು ಹಸನಾಗಿಸಿದ ಕೀರ್ತಿ ಹೊತ್ತಿದ್ದಾರೆ. ಜೊತೆಗೆ ಆಸ್ಪತ್ರೆ, ಶಾಲಾ ಕಾಲೇಜು ಕಟ್ಟುವ ಮೂಲಕ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
ಶಾಸಕ ವಸಂತ ಬಂಗೇರ

ಕಬಡ್ಡಿ ಮತ್ತು ರಾಜಕೀಯ ಎರಡೂ ಎಚ್ಚರ ವಹಿಸಬೇಕಾದ ಕ್ಷೇತ್ರ
ಕಬಡ್ಡಿ ಆಟದಲ್ಲಿ ಎದುರಾಳಿಯ ಕಾಲೆಳೆಯುವ ಕ್ರೀಯೆ ನಡೆದರೆ ರಾಜಕೀಯದ ಆಟದಲ್ಲಿ ಎದುರಾಳಿ ಮತ್ತು ತಮ್ಮೊಳಗಿನವರೂ ಕೂಡ ಕಾಲೆಳೆಯುವ ಕಾರ್ಯ ಮಾಡುತ್ತಾರೆ. ಆದ್ದರಿಂದ ಈ ಎರಡೂ ಕ್ಷೇತ್ರಗಳು ಅತೀ ಎಚ್ಚರ ವಹಿಸಬೇಕಾದ ಕ್ಷೇತ್ರಗಳು.
ಪ್ರೋ ಕಬಡ್ಡಿಯ ಮೂಲಕ ಗ್ರಾಮೀಣ ಕಬಡ್ಡಿಗೆ ಮೆಗಾ ಸ್ವರೂಪ ಬಂದಿದ್ದು ಗ್ರಾಮ ಗ್ರಾಮಗಳಲ್ಲೂ ಕಬಡ್ಡಿಯ ಕಾವು ಏರುತ್ತಿರುವುದು ಒಳ್ಳೆಯ ಬೆಳವಣಿಗೆ.
ರಂಜನ್ ಜಿ ಗೌಡ.
ಅಧ್ಯಕ್ಷರು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಬೆಳ್ತಂಗಡಿ.

ಕಬಡ್ಡಿ ಮತ್ತು ರಾಜಕೀಯ ಎರಡೂ ಎಚ್ಚರ ವಹಿಸಬೇಕಾದ ಕ್ಷೇತ್ರ
ಕಬಡ್ಡಿ ಆಟದಲ್ಲಿ ಎದುರಾಳಿಯ ಕಾಲೆಳೆಯುವ ಕ್ರೀಯೆ ನಡೆದರೆ ರಾಜಕೀಯದ ಆಟದಲ್ಲಿ ಎದುರಾಳಿ ಮತ್ತು ತಮ್ಮೊಳಗಿನವರೂ ಕೂಡ ಕಾಲೆಳೆಯುವ ಕಾರ್ಯ ಮಾಡುತ್ತಾರೆ. ಆದ್ದರಿಂದ ಈ ಎರಡೂ ಕ್ಷೇತ್ರಗಳು ಅತೀ ಎಚ್ಚರ ವಹಿಸಬೇಕಾದ ಕ್ಷೇತ್ರಗಳು.
ಪ್ರೋ ಕಬಡ್ಡಿಯ ಮೂಲಕ ಗ್ರಾಮೀಣ ಕಬಡ್ಡಿಗೆ ಮೆಗಾ ಸ್ವರೂಪ ಬಂದಿದ್ದು ಗ್ರಾಮ ಗ್ರಾಮಗಳಲ್ಲೂ ಕಬಡ್ಡಿಯ ಕಾವು ಏರುತ್ತಿರುವುದು ಒಳ್ಳೆಯ ಬೆಳವಣಿಗೆ.
ರಂಜನ್ ಜಿ ಗೌಡ.
ಅಧ್ಯಕ್ಷರು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಬೆಳ್ತಂಗಡಿ.

ಬೆಳ್ತಂಗಡಿ : ತಾಲೂಕಿನ ಕಬಡ್ಡಿ ಕ್ರೀಡಾಳುಗಳಿಗೆ ಇನ್ನಷ್ಟು ಅವಕಾಶ ಹೆಚ್ಚಿಸುವ ದೃಷ್ಟಿಯಿಂದ ನಮ್ಮ ಶಾಸಕತ್ವದ ಅನುದಾನದಲ್ಲಿ ತಾಲೂಕಿಗೆ ಎರಡು ಕ್ರೀಡಾಂಗಣಕ್ಕೆ ಅನುವಾಗುವಂತೆ ಮ್ಯಾಟ್‌ಗಳನ್ನು ಒದಗಿಸಿಕೊಡುತ್ತೇವೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ಮತ್ತು ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿರುವ ಶಾಸಕ ವಸಂತ ಬಂಗೇರ ಹೇಳಿದರು.
ಕರ್ನಾಟಕ ರಾಜ್ಯ ಮಲೆಯಾಳಿ ಕ್ರಿಶ್ಚಿಯನ್ ಅಸೋಸಿಯೇಶನ್ ಬೆಳ್ತಂಗಡಿ ವತಿಯಿಂದ ಕರ್ನಾಟಕ ರಾಜ್ಯ ಮತ್ತು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಕಾರದೊಂದಿಗೆ ಬೆಳ್ತಂಗಡಿ ತಾ| ಕ್ರೀಡಾಂಗಣದಲ್ಲಿ ಮಾ. ೪ ರಂದು ಆಯೋಜನೆಗೊಂಡಿದ್ದ ರಾಜ್ಯಮಟ್ಟದ ಆಹ್ವಾನಿತ ತಂಡಗಳ ಹೊನಲು ಬೆಳಕಿನ ಪ್ರೋ ಮಾದರಿ ಮ್ಯಾಟ್ ಕಬಡ್ಡಿ ಪಂದ್ಯಾಟದ ಸಂಜೆಯ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಸಮಾರಂಭದಲ್ಲಿ ಮಾತನಾಡಿದ ಐವನ್ ಡಿಸೋಜಾ ಅವರು, ಕಬಡ್ಡಿಗೆ ಇಂದು ರಾಷ್ಟ್ರೀಯ ಆಟದ ಆಕರ್ಷಣೆ ಬಂದಿದೆ. ಅಪ್ಪಟ ನಮ್ಮ ಮಣ್ಣಿನ ದೇಶೀಯ ಕ್ರೀಡೆಯಾದ ಕಬಡ್ಡಿ ದೇಶ ವಿದೇಶಗಳಲ್ಲೂ ಪ್ರಸಿದ್ಧಿ ಪಡೆಯುತ್ತಿದೆ. ಮುಂದಿನ ಒಲಿಂಪಿಕ್‌ನಲ್ಲೂ ಕಾಣುವಂತಾಗಬೇಕು, ಕಬಡ್ಡಿಯಲ್ಲಿ ಯುವಜನತೆ ಹೆಚ್ಚು ಗುರುತಿಸಿಕೊಳ್ಳಬೇಕು ಎಂದರು. ಶಾಸಕ ವಸಂತ ಬಂಗೇರ ಮಾತನಾಡಿ, ನಾನೂ ಕೂಡ ಉತ್ತಮ ಕಬಡ್ಡಿ ಆಟಗಾರನಾಗಿದ್ದೆ, ಕಾಲೇಜು ವಿದ್ಯಾಭ್ಯಾಸದ ಸಮಯ ಮೈಸೂರು ವಿ.ವಿ. ಯನ್ನು ಪ್ರತಿನಿಧಿಸಿ ಆಡಿದ್ದೇನೆ, ನಿಯಮಾವಳಿಗಳು ಬಲಿಷ್ಠಗೊಂಡಿದ್ದು ಶೂ ಧರಿಸಿ ಕಬಡ್ಡಿ ಆಡುವಂತಹಾ ಮ್ಯಾಟ್ ವರೆಗೂ ಆವಿಷ್ಕಾರಗಳು ಆಗಿವೆ. ಈಗೀಗ ಟಿ.ವಿಗಳಲ್ಲೂ ಕಬಡ್ಡಿ ವೀಕ್ಷಣೆಗೆ ಅವಕಾಶವಿದ್ದು ಮಹಿಳೆಯರೂ ಕೂಡ ಆಟದ ವೀಕ್ಷಕರಾಗಿದ್ದಾರೆಂಬುದು ಸಂತೋಷದಾಯಕ ವಿಚಾರ. ಇಷ್ಟೊಂದು ವ್ಯವಸ್ಥಿತ ರೀತಿಯಲ್ಲಿ ಈ ಕ್ರೀಡಾಕೂಟವನ್ನು ಸಂಘಟಿಸಿದ ಮಲೆಯಾಳಿ ಕ್ರಿಶ್ಚಿಯನ್ ಎಸೋಸಿಯೇಶನ್ ಶ್ರಮ ಮೆಚ್ಚುವಂತಹದ್ದು ಎಂದರು.
ಮುಖ್ಯ ಅತಿಥಿಗಳಾಗಿ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್, ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷ ಚಂದನ್ ಪ್ರಸಾದ್ ಕಾಮತ್, ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಮಲೆಯಾಳಿ ಕ್ರಿಶ್ಚಿಯನ್ ಅಸೋಸಿಯೇಶನ್ ರಾಜ್ಯ ಸಂಯೋಜಕ ಎ.ಸಿ. ಕುರಿಯನ್, ಯುವ ಅಧ್ಯಕ್ಷ ಸಜೇಶ್, ಜಿಲ್ಲಾ ಯುವ ಅಧ್ಯಕ್ಷ ಅಖಿಲೇಶ್ ಏಂಟನಿ, ಬಿಲ್ಲವ ಸಂಘದ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ, ಪತ್ರಕರ್ತರ ಸಂಘದ ಅಧ್ಯಕ್ಷ ಮನೋಹರ ಬಳೆಂಜ, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಬಿ. ಅಶ್ರಫ್, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಟಿ. ಸೆಬಾಸ್ಟಿಯನ್, ಗೌಡರ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷ ಸೋಮೇ ಗೌಡ, ಜಿಲ್ಲಾ ಕಬಡ್ಡಿ ಸಂಸ್ಥೆ ಉಪಾಧ್ಯಕ್ಷ ಲ| ನಾಮದೇವ ರಾವ್, ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಎ.ಸಿ. ಮ್ಯಾಥ್ಯೂ,ಪಿ ಡಬ್ಲ್ಯುಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ವಿನಯ ಹೆಗ್ಡೆ, ಸಂಘಟನೆಯ ಶಿವಮೊಗ್ಗ ಜಿಲ್ಲಾಧ್ಯಕ್ಷ ಶೀನ್ ಜೋಸೆಫ್, ಸಿಪಿಐಎಂ ಪಕ್ಷದ ಅಧ್ಯಕ್ಷ ಶಿವಕುಮಾರ್ ಎಂ.ಎಸ್, ಏಕಲವ್ಯ ಪ್ರಶಸ್ತಿ ಪುರಸ್ಕೃತ ಕಬಡ್ಡಿ ಆಟಗಾರ ಉದಯ ಚೌಟ, ಕಾರ್ಪೋರೇಟರ್ ಎ.ಸಿ. ವಿನಯರಾಜ್, ಡಿಎಸ್‌ಎಸ್ ಮೈಸೂರು ವಿಭಾಗ ಸಂಚಾಲಕ ಚಂದು ಎಲ್, ಜಿಲ್ಲಾ ಕಬಡ್ಡಿ ಸಂಸ್ಥೆಯ ಪುರುಷೋತ್ತಮ ಪೂಜಾರಿ, ತಾ| ಕಾರ್ಯದರ್ಶಿ ಪ್ರಭಾಕರ ಹೆಗ್ಡೆ ಹಟ್ಟಾಜೆ ಗುತ್ತು, ಬೆಳ್ತಂಗಡಿ ಧರ್ಮಪ್ರಾಂತ್ಯದ ರೆ. ಫಾ. ಟೋಮಿ ಕಳ್ಳಿಕ್ಕಾಟ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫ್ರಾನ್ಸಿಸ್ ವಿ.ವಿ. ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯ ಎಲ್ಲಾ ಅತಿಥಿಗಳಿಗೆ ಮಲೆಯಾಳಿ ಕ್ರಿಶ್ಚಿಯನ್ ಅಸೋಸಿಯೇಶನ್ ತಾ| ಅಧ್ಯಕ್ಷ, ಉದ್ಯಮಿ ಅಜಯ್ ಎ.ಜೆ. ಹೂಗುಚ್ಚ ಸ್ಮರಣಿಕೆ ನೀಡಿ ಬರಮಾಡಿಕೊಂಡು ಸ್ವಾಗತಿಸಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜೇಮ್ಸ್ ಅಬ್ರಾಹಾಂ ವಂದಿಸಿದರು. ತಾ| ಕಾರ್ಯದರ್ಶಿ ವಿನ್ಸೆಂಟ್ ಸಹಿತ ಎಲ್ಲಾ ಪದಾಧಿಕಾರಿಗಳು ಕ್ರೀಡಾಕೂಟದ ಯಶಸ್ವಿಗೆ ಸಹಕರಿಸಿದರು. ಕ್ರೀಡಾಕೂಟಕ್ಕೂ ಮುನ್ನ ಮಧ್ಯಾಹ್ನ ರೆ. ಫಾ. ಬಿನೋಯ್ ಜೋಸೆಫ್ ಅವರಿಂದ ಕ್ರೀಡಾಂಗಣದಲ್ಲಿ ದಿವ್ಯ ಆಶೀರ್ವಚನ ಧಾರ್ಮಿಕ ವಿಧಿಯಂತೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.