ಬೆಳ್ತಂಗಡಿ ಕ್ಷೇತ್ರದ ಅಭಿವೃದ್ಧಿಗೆ ಇನ್ನೂ 50 ಕೋಟಿ ರೂ. ಮಂಜೂರು ಕಡಿರುದ್ಯಾವರ ಬೆಳ್ಳೂರು ಎತ್ತಿನಗಂಡಿ ಸೇತುವೆಗೆ 4 ಕೋಟಿ

Advt_NewsUnder_1
Advt_NewsUnder_1
Advt_NewsUnder_1

ಕಡಿರುದ್ಯಾವರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಿನಿ ವಿಧಾನ ಸೌಧ ಕಟ್ಟಡ ಉದ್ಘಾಟನೆಗೆ ಬೆಳ್ತಂಗಡಿಗೆ ಬಂದಿದ್ದ ವೇಳೆ ತಾಲೂಕಿನ ಜನತೆಯ ಪರವಾಗಿ ಬೇಡಿಕೆ ಇಟ್ಟಿದ್ದ 100 ಕೋಟಿ ರೂ. ಅನುದಾನದಲ್ಲಿ ಈಗಾಗಲೇ ೫೦ ಕೋಟಿ ರೂ. ನೀಡಿದ್ದು, ಬಾಕಿಯಾಗಿದ್ದ ಇತರ ಬೇಡಿಕೆ ಈಡೇರಿಕೆಗೆ ಮತ್ತೂ ೫೦ ಕೋಟಿ ರೂ. ಒದಗಿಸಿಕೊಟ್ಟಿದ್ದಾರೆ ಎಂದು ಶಾಸಕ ವಸಂತ ಬಂಗೇರ ಪ್ರಕಟಿಸಿದರು.
ಕಡಿರುದ್ಯಾವರ ಗ್ರಾಮದ ಬೆಳ್ಳೂರುಬೈಲು ಎತ್ತಿನಗಂಡಿ ಎಂಬಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ೪ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸೇತುವೆ ರಚನೆಗೆ ಮಾ. 6 ರಂದು ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ತೆಂಗಿನ ಕಾಯಿ ಒಡೆದಲ್ಲಿ ಅಭಿವೃದ್ಧಿ ಯಾಗಿದೆ :
ಶಾಸಕ ವಸಂತ ಬಂಗೇರ ಚುನಾವಣೆ ಹತ್ತಿರ ಬರುತ್ತಿದ್ದಂತೆ ತೆಂಗಿನಕಾಯಿ ಒಡೆದುಕೊಂಡು ಹೋಗುತ್ತಾರೆ. ಇದು ಜನರಿಗೆ ಮಾಡುವ ಮೋಸ ಎಂದು ವಿರೋಧ ಪಕ್ಷದವರು ದೂರುತ್ತಾರೆ. ಆದರೆ ನಾನು ಎಲ್ಲೆಲ್ಲಾ ಕಾಯಿ ಒಡೆದಿದ್ದೇನೆ ಅಲ್ಲೆಲ್ಲಾ ರಸ್ತೆ, ಸೇತುವೆ, ಶಾಲೆ, ಆಸ್ಪತ್ರೆ, ರಚನೆಯಾಗಿದೆ. ನನಗಿಂತ ಮುನ್ನ ಅವರೂ ಕ್ಷೇತ್ರದಲ್ಲಿ ಶಾಸಕರಾಗಿದ್ದರು. ಅವರೇನು ತೆಂಗಿನ ಸಿಪ್ಪೆ ಗುದ್ದಿದ್ದೇ ಎಂದು ಸ್ವಲ್ಪ ಘರಂ ಆಗಿಯೇ ಬಂಗೇರ ತಿರುಗೇಟು ನೀಡಿದರು. ಈಗ ಬಿಡುಗಡೆಯಾಗಿರುವ ಎಲ್ಲಾ ಕಾಮಗಾರಿಗಳಿಗೆ ಮಾ. 28 ರ ವರೆಗೂ ಶಿಲಾನ್ಯಾಸ ಇಟ್ಟುಕೊಂಡಿದ್ದೇನೆ. ನೀತಿ ಸಂಹಿತೆ ಜಾರಿಯಾದರೆ ಶಿಲಾನ್ಯಾಸ ಸಾಧ್ಯವಾಗುವುದಿಲ್ಲ, ನಂತರ ಅನುದಾನ ಬಂದರೆ ಶಿಲಾನ್ಯಾಸ ಆಗದೆ ಕಾಮಗಾರಿ ಮಾಡುವುದು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಈ ರೀತಿ ಮಾಡುತ್ತಿದ್ದೇನೆ ಎಂದರು.
ಅಕ್ರಮ ಸಕ್ರಮದಲ್ಲಿ ಒಂದು ಕಡತ ಮಾತ್ರ ತಿರಸ್ಕಾರ :
35 ವರ್ಷಗಳಿಂದ ಬೆಳ್ತಂಗಡಿ ಕ್ಷೇತ್ರದಲ್ಲಿ 5 ಬಾರಿ ಶಾಸಕನಾಗಿದ್ದೇನೆ 50  ವರ್ಷಗಳಿಂದ ಕ್ಷೇತ್ರದಲ್ಲಿ ರಾಜಕೀಯ ಜೀವನ ಕಳೆದಿದ್ದೇನೆ, 9 ಬಾರಿ ವಿಧಾನ ಸಭೆಗೆ, 1 ಬಾರಿ ಲೋಕ ಸಭೆಗೆ ಸ್ಪರ್ಧಿಸಿದ್ದೇನೆ. ಆದರೆ ಇದುವರೆಗೆ ಮೋಸದ ರಾಜಕೀಯ ಮಾಡಲಿಲ್ಲ, ಅದ್ದರಿಂದ ದೇವರ ಆಶೀರ್ವಾದ ನನ್ನ ಮೇಲಿದೆ. ಇಷ್ಟೂ ವರ್ಷಗಳಲ್ಲಿ ಅಕ್ರಮ ಸಕ್ರಮದಡಿ 35 ಸಾವಿರ ಮಂದಿಗೆ ಹಕ್ಕುಪತ್ರ ನೀಡಿದ್ದೇನೆ. ಈ ವೇಳೆ ಜಾತಿ ರಾಜಕೀಯ ಪಕ್ಷದ ವ್ಯತ್ಯಾಸ ನೋಡಿಲ್ಲ, ತಾರತಮ್ಯ ಮಾಡಿಲ್ಲ, ಇಷ್ಟು ಸಾವಿರ ಕಡತಗಳ ಪೈಕಿ ಲಾಲ ಗ್ರಾಮದಲ್ಲಿ ನದಿ ಪರಂಬೋಕಿನಲ್ಲಿದ್ದ ೧ ಕಡತ ಮಾತ್ರ ತಿರಸ್ಕೃತಗೊಳಿಸಿದ್ದೇನೆ ಅಷ್ಟೇ ಎಂದರು.
ಸರಕಾರಿ ಆಸ್ಪತ್ರೆಯಲ್ಲಿ ೪ ಡಯಾಲಿಸಿಸ್ ಮೆಷಿನ್:
ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಈಗಾಗಲೇ 2 ಡಯಾಲಿಸಿಸ್ ಮೆಷಿನ್ ಒದಗಿಸಿಕೊಟ್ಟಿದ್ದೇನೆ. ಇನ್ನೊಂದು ಕತಾರ್ ಮುಸ್ಲಿ ವೆಲ್ಫೇರ್ ಅಸೋಸಿಯೇಶನ್‌ನಿಂದ ತರಿಸಿದ್ದೇನೆ. ಇನ್ನೂ ಒಂದು ಕೊಡಬೇಕೆಂದು ಅವರ ಬಳಿ ಕೇಳಿದ್ದು ಕೊಡುವ ಭರವಸೆ ನೀಡಿದ್ದಾರೆ. ಆ ಮೂಲಕ ೪ ಡಯಾಲಿಸಿಸ್ ಮೆಷಿನ್ ಅಳವಡಿಕೆಗೆ ಕ್ರಮ ಕೈಗೊಂಡು ಜನತೆಗೆ ಪ್ರಯೋಜನವಾಗುವಂತೆ ಮಾಡಿದ್ದೇನೆ. ಕಿಡ್ನಿ ರೋಗಕ್ಕೆ ತುತ್ತಾದ ಮಂದಿ ಮಂಗಳೂರಿಗೆ ಹೋಗಿ ತಲಾ 2 ಸಾವಿರ ಖರ್ಚು ಮಾಡಿ ಮಾಡಿಸಿಕೊಂಡು ಡಯಾಲಿಸಿಸ್ ಮಾಡಿ ಇಡೀ ಕುಟುಂಬವೇ ಆರ್ಥಿಕ ಹೊಡೆತಕ್ಕೆ ಸಿಲುಕಿ ಸರ್ವನಾಶವಾಗುವುದನ್ನು ತಪ್ಪಿಸುವ ಪ್ರಯತ್ನ ಮಾಡಿದ್ದೇನೆ ಎಂದರು.
5 ವಿದ್ಯಾರ್ಥಿಗಳಿದ್ದ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಗ 900 ವಿದ್ಯಾರ್ಥಿಗಳು:
ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾರಂಭ ಮಾಡುವ ಸಂದರ್ಭ ಕೇವಲ 5 ವಿದ್ಯಾರ್ಥಿಗಳು ಮಾತ್ರ ಇದ್ದರೆಂಬ ಕಾರಣಕ್ಕೆ ಅಂದಿನ ಶಿಕ್ಷಣ ಸಚಿವರು ಉದ್ಘಾಟನೆಗೆ ಆಕ್ಷೇಪಣೆ ಮಾಡಿದ್ದರು. ಬಳಿಕ ಅನಿವಾರ್ಯವಾಗಿ ಉದ್ಘಾಟಿಸಿ ಕೊಟ್ಟಿದ್ದರು. ಆದರೆ ಇಂದು ಅದೇ ಕಾಲೇಜಿನಲ್ಲಿ 900  ರಷ್ಟು ವಿದ್ಯಾರ್ಥಿಗಳು ಪದವಿ, ಸ್ನಾತಕೋತ್ತರ ಪದವಿ ಕಲಿಯುತ್ತಿದ್ದಾರೆ. ಇಷ್ಟು ವರ್ಷದಲ್ಲಿ ಸಾವಿರಾರು ಮಂದಿ ಪದವಿ ಪಡೆದುಹೊರಹೋಗಿದ್ದಾರೆ ಎಂದರು.
ಅಧ್ಯಕ್ಷತೆಯನ್ನು ಕಡಿರುದ್ಯಾವರ ಗ್ರಾ.ಪಂ. ಅಧ್ಯಕ್ಷೆ ವನಿತಾ ಸಾಲಿಯಾನ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಲಾಲ ಜಿ.ಪಂ. ಸದಸ್ಯೆ ಸೌಮ್ಯಲತಾ ಜಯಂತ ಗೌಡ, ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಮಿತ್ತಬಾಗಿಲು ತಾ.ಪಂ. ಸದಸ್ಯ ಜಯರಾಮ ಆಲಂಗಾರು, ಮಾಜಿ ಜಿ.ಪಂ. ಸದಸ್ಯ ಇಚ್ಚಿಲ ಸುಂದರ ಗೌಡ ಉಜಿರೆ, ಕೊಲ್ಲಿ ಶ್ರೀ ದುರ್ಗಾ ದೇವಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಂಜುನಾಥ ಕಾಮತ್, ಇಂದಬೆಟ್ಟು ಗ್ರಾ.ಪಂ. ಉಪಾಧ್ಯಕ್ಷ ಇಬ್ರಾಹಿಂ, ಲೋಕೋಪಯೋಗಿ ಇಲಾಖಾ ಪ್ರಭಾರ ಕಾರ್ಯಪಾಲಕ ಅಭಿಯಂತರ ಶಿವಪ್ರಸಾದ್ ಅಜಿಲ, ಶೋಭಾ ನಾರಾಯಣ ಗೌಡ ದೇವಸ್ಯ, ಕಡಿರುದ್ಯಾವರ ಗ್ರಾ.ಪಂ. ಉಪಾಧ್ಯಕ್ಷ ಸಂತೋಷ್ ಕುಮಾರ್ ವಳಂಬ್ರ, ಸದಸ್ಯರಾದ ರೇಣುಕಾ, ಯಶೋಧಾ, ನೋಣಯ್ಯ ಗೌಡ ವೇದಿಕೆಯಲ್ಲಿದ್ದರು. ಬಂಗಾಡಿ ಸಹಕಾರಿ ಬ್ಯಾಂಕ್ ಅಧ್ಯಕ್ಷ ಲಕ್ಷ್ಮಣ ಗೌಡ ಇರ್ತಿಲಾಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಸೇತುವೆ ಬಗ್ಗೆ ೩೫ ವರ್ಷಗಳ ಹಿಂದಿನ ಬೇಡಿಕೆ ಈಡೇರಿದ ನೆನಪು ಹಾಗೂ ಅಂದು ಈ ಸೇತುವೆಗಾಗಿ ಅಹವಾಲು ಸಲ್ಲಿಸಿದ್ದ ಹಿರಿಯರುಗಳು, ವಳಂಬ್ರ ನಾರಾಯಣ ಗೌಡ ಸಹಿತ ಕೆಲವು ಪ್ರಮುಖರು ಈ ಭಾಗದಲ್ಲಿ ಚುನಾವಣಾ ಕೆಲಸ ಮಾಡಿದ ವಿಚಾರಗಳು ಮತ್ತು ಅವರಲ್ಲಿ ಅನೇಕರು ಇಂದು ನಮ್ಮೊಂದಿಗಿಲ್ಲ ಎಂಬ ವಿಚಾರಗಳನ್ನು ಬಿಚ್ಚಿಟ್ಟರು. ಯಂಗ್ ಚಾಲೆಂಜರ್‍ಸ್ ಸಂಚಾಲಕ ಲ| ನಾಮದೇವ ರಾವ್ ಸ್ವಾಗತಿಸಿದರು. ಸುಮಿತ್ರಾ ಪ್ರಾರ್ಥನೆ ಹಾಡಿದರು.
ಗ್ರಾ.ಪಂ. ಸದಸ್ಯ ನೇಮಿರಾಜ್ ಗೌಡ ಸ್ವಾಗತಿಸಿದರು. ಇದಕ್ಕೂ ಮುನ್ನ ಶಿಲಾನ್ಯಾಸದಲ್ಲಿ ಸುಧರ್ಮ ರಿಕ್ಷಾ ಚಾಲಕರ ಮಾಲಕರ ಸಂಘದ ಅಧ್ಯಕ್ಷ ಸತೀಶ್ ಮನ್ನಡ್ಕ, ಪ್ರಮುಖರುಗಳಾದ ಸಂಜೀವ ಗೌಡ, ಶೀಲಾ ಪ್ರಾನ್ಸಿಸ್, ಸುಲೈಮಾನ್, ಗಫೂರ್, ಹುಸೈನಾರ್, ಜಾಕೂಬ್ ಮೋನಿಸ್, ಶರೀಫ್ ಬರಂಬಿಲ, ನವೀನ್ ಕಟ್ಲಡ್ಕ, ಜಯರಾಮ ಬಂಗಾಡಿ, ಬಾಲಕೃಷ್ಣ ಗೌಡ, ಜೋಸ್ ಜೆಆರ್‌ಟಿ, ಕುಂಞಣ್ಣ ಗೌಡ, ಗ್ರೇಸಿಯನ್ ವೇಗಸ್, ನಾರಾಯಣ ಗೌಡ ದೇವಸ್ಯ ಕೃಷ್ಣ ಡೆಮ್ಮೆಜಾಲು, ಜೋಸ್, ಉದಯ ಕುಮಾರ್, ನಾಗರಾಜ್ ಲಾಲ, ಬಾಲಕೃಷ್ಣ ಗೌಡ ಶೀತಲಡ್ಡ, ಬೇಬಿ, ಬಾಲಕೃಷ್ಣ, ಪ್ರಭಾವತಿ, ವಿಷ್ಣುಮೂರ್ತಿ ಗೌಡ ಹೊಸಮನೆ, ಯೋಗೀಶ್, ಮೊದಲಾದ ಗಣ್ಯರುಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.