ಅರೆಮಲೆಬೆಟ್ಟು ಕೊಡಮಣಿತ್ತಾಯ ದೈವಸ್ಥಾನದ ಜಾತ್ರಾ ಮಹೋತ್ಸವ ದೈವರಾಧನೆ ಸಮಾಜದ ಸಾಮರಸ್ಯಕ್ಕೆ ಸಾಕ್ಷಿ: ಕರಿಂಜೆ ಶ್ರೀ

ಗುರುವಾಯನಕೆರೆ : ಶ್ರೀ ಕೊಡಮಣಿತ್ತಾಯ ದೈವಸ್ಥಾನ ಅರೆಮಲೆಬೆಟ್ಟದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವವು ವಿವಿಧ ವೈದಿಕ ಹಾಗೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಫೆ.12ರಂದು ವಿಜೃಂಭಣೆಯಿಂದ ನಡೆಯಿತು.
ಬೆಳಗ್ಗೆ ತೋರಣ ಮೂಹೂರ್ತ, ಉಗ್ರಾಣ ಮುಹೂರ್ತ, ಗಣಪತಿ ಹೋಮ, ಕಲಶಪೂಜೆ, ಕಲಶಾಭಿಷೇಕ, ಧ್ವಜಾರೋಹಣ, ಬಲಿ ಉತ್ಸವ ಬಳಿಕ ಮಧ್ಯಾಹ್ನ ಮತ್ತು ಸಂಜೆ ಶ್ರೀಮತಿ ಕಾಶಿ ಶೆಟ್ಟಿ ಮತ್ತು ಮಕ್ಕಳು ನವಶಕ್ತಿ ಕೃಪಾ ಶಕ್ತಿನಗರ ಗುರುವಾಯನಕೆರೆ ಇವರಿಂದ ಅನ್ನದಾನ ಸೇವೆ ನಡೆಯಿತು.
ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ ಅವರು ನಮ್ಮ ಸಂಸ್ಕೃತಿ-ಸಂಸ್ಕಾರದ ಮೂಲ ಬೇರು ತುಳುನಾಡು ಆಗಿದೆ. ದೈವರಾಧನೆ ಮತ್ತು ನಾಗರಾಧನೆ ತುಳುನಾಡಿನ ಪರಂಪರೆಯಾಗಿದ್ದು, ಈ ಮಣ್ಣಿನ ಆರಾಧನೆಯಿಂದ ಈ ನಾಡಿನಲ್ಲಿ ಯಾವುದೇ ಪ್ರಕೃತಿ ವಿಕೋಪಗಳಂತಹ ಘಟನೆಗಳು ನಡೆದಿಲ್ಲ, ದೈವರಾಧನೆಯಲ್ಲಿ ಉನ್ನತ ವ್ಯಕ್ತಿಯಿಂದ ಕಟ್ಟಕಡೆಯ ವ್ಯಕ್ತಿಗಳಿಗೆ ಸಮಾನ ಅವಕಾಶ ನೀಡಲಾಗಿದ್ದು, ಇದು ಸಮಾಜದ ಸಾಮರಸ್ಯವನ್ನು ಎತ್ತಿ ಹಿಡಿಯುತ್ತಿದೆ ಇಂತಹ ಸಂಸ್ಕೃತಿ, ಸಂಸ್ಕಾರವನ್ನು ನಾವು ಮಕ್ಕಳಿಗೆ ಕಲಿಸಬೇಕಾದ ಅಗತ್ಯವಿದೆ ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀನಿವಾಸ ವಿ. ಕಿಣಿಯವರು ಮಾತನಾಡಿ ನಾವು ಧರ್ಮ ಮಾರ್ಗದಲ್ಲಿದ್ದರೆ ದೈವ ದೇವರು ನಮ್ಮನ್ನು ಕೈ ಹಿಡಿದು ನಡೆಸುತ್ತಾರೆ. ನಾವು ಯಾರಿಗೂ ಅನ್ಯಾಯ ಮಾಡದೇ ಜೀವಿಸುವುದೇ ನಿಜವಾದ ಮಾನವ ಧರ್ಮವಾಗಿದೆ ಎಂದರು. ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ ಮಾತನಾಡಿ ನಮ್ಮ ಹಿರಿಯರು ಹಾಕಿ ಕೊಟ್ಟ ಸಂಸ್ಕಾರ- ಸಂಸ್ಕೃತಿಯನ್ನು ನಾವು ಆಚರಿಸುತ್ತಿದ್ದೇವೆ ಇದನ್ನು ಮುಂದಿನ ಪೀಳಿಗೆಗೆ ನೀಡುವುದು ನಮ್ಮ ಧರ್ಮ ಅದಕ್ಕಾಗಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದು ಇಂದಿನ ಅಗತ್ಯವಾಗಿದೆ ಎಂದರು. ಅಧ್ಯಕ್ಷತೆಯನ್ನು ಪ್ರವೀಣ್‌ಕುಮಾರ್ ಅಜ್ರಿ ಪಾಡ್ಯಾರಬೀಡು ವಹಿಸಿ ದೈವರಾಧನೆ ಪರಂಪರೆ ಬೆಳೆಯಲು ಎಲ್ಲರ ಸಹಕಾರ ಅಗತ್ಯ ಎಂದು ಅಭಿಪ್ರಾಯ ಪಟ್ಟರು. ವೇದಿಕೆಯಲ್ಲಿ ಉದ್ಯಮ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದ ಗೌರವಕ್ಕೆ ಪಾತ್ರರಾದ ಶಶಿಧರ ಶೆಟ್ಟಿ ನವಶಕ್ತಿ ಬರೋಡ, ಕುವೆಟ್ಟು ಗ್ರಾ.ಪಂ ಅಧ್ಯಕ್ಷ ಅಶೋಕ್ ಕೋಟ್ಯಾನ್ ಉಪಸ್ಥಿತರಿದ್ದರು. ಸಂಖ್ಯಾ ಮತ್ತು ಸುರಭೀ ಇವರ ಪ್ರಾರ್ಥನೆ ಬಳಿಕ ಆನುವಂಶಿಕ ಆಡಳಿತ ಮೊಕ್ತೇಸರ ಸುಖೇಶ್ ಕುಮಾರ್ ಕಡಂಬು ಸ್ವಾಗತಿಸಿ, ಕ್ಷೇತ್ರ ಹಿನ್ನಲೆ ತಿಳಿಸಿದರು. ಶಿಕ್ಷಕ ಬೆಳ್ತಂಗಡಿ ಲಯನ್ಸ್ ಅಧ್ಯಕ್ಷ ಧರಣೇಂದ್ರ ಕೆ. ಜೈನ್ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕ ಶಾಂತಿರಾಜ ಜೈನ್ ಪಡಂಗಡಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.