ಫೆ.4 : ರಾಜ್ಯದಲ್ಲೇ ಪ್ರಪ್ರಥಮ ಕುಲಾಲ-ಕುಂಬಾರ ಬೃಹತ್ ಸಮಾವೇಶ ಮತ್ತು ಹಕ್ಕೊತ್ತಾಯ ಮಂಡನೆ

ಸಮಾವೇಶದ ಹಕ್ಕೋತ್ತಾಯಗಳು

  • ಕುಲಾಲ ಕುಂಬಾರರಿಗೆ ಸಾಮಾಜಿಕ ನೆಲೆಯಲ್ಲಿ ರಾಜಕೀಯ ಸ್ಥಾನಮಾನ ನೀಡುವುದು.
  • ಪ್ರತ್ಯೇಕ ಕುಂಭ ಅಭಿವೃದ್ಧಿ ನಿಗಮ ಸ್ಥಾಪಿಸಿ, ರೂ.200 ಕೋಟಿ ಅನುದಾನ ನೀಡಿ, ಕುಂಬಾರ ಸಮಾಜದವರನ್ನು ಅಧ್ಯಕ್ಷರನ್ನಾಗಿ ನಿಯುಕ್ತಿಗೊಳಿಸುವುದು.
  • ತಾಲೂಕು ಸಂಘದ ಕಟ್ಟಡಕ್ಕೆ ನಿವೇಶನ, ಸಭಾ ಭವನ, ಅನ್ನಛತ್ರ ನಿರ್ಮಾಣಕ್ಕೆ ರೂ. 5 ಕೋಟಿ ಅನುದಾನ ನೀಡುವುದು.
  • ಮಡಕೆ ಮಾಡುವ ಕುಲಾಲ-ಕುಂಬಾರರಿಗೆ ವಿವಿಧ ಕಡೆಗಳಲ್ಲಿ ಅತ್ಯಾಧುನಿಕ ಯಂತ್ರೋಪಕರಣ ಮತ್ತು ಶೆಡ್ ನಿರ್ಮಾಣ, ಆವೆ ಮಣ್ಣಿನ ಜಾಗ ಸಂಘಕ್ಕೆ ಹಸ್ತಾಂತರಿಸುವುದು.
  • ಸರ್ವಜ್ಞ ಅಧ್ಯಯನ ಪೀಠ ಮತ್ತು ಸರ್ವಜ್ಞ ಪ್ರಾಧಿಕಾರ ರಚಿಸುವುದು. ಮಡಕೆ ಮಾಡುವ 60 ವರ್ಷ ಮೇಲ್ಪಟ್ಟ ಕುಂಬಾರ ಸಮುದಾಯದವರಿಗೆ ಸರಕಾರದ ವತಿಯಿಂದ ಪಿಂಚಣಿ ನೀಡುವುದು.
  • ರಾಜ್ಯದ ಪ್ರತಿ ವಿಧಾನ ಸಭಾ ಕ್ಷೇತ್ರದ ಕೇಂದ್ರ ಭಾಗದಲ್ಲಿ ತಾಲೂಕು ಸಂಘಗಳಿಗೆ ನಿವೇಶನ ಮತ್ತು ಸುಸಜ್ಜಿತ ಸಭಾಭವನ ಮತ್ತು ಮೂಲ ಸೌಕರ್ಯ ಒದಗಿಸಿಕೊಡುವುದು. 

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕುಲಾಲ-ಕುಂಬಾರರ ಸಮಾವೇಶ ಮತ್ತು ಹಕ್ಕೋತ್ತಾಯ ಸಮಿತಿ ಇದರ ನೇತೃತ್ವದಲ್ಲಿ, ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಗುರುವಾಯನಕೆರೆ, ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಬೆಳ್ತಂಗಡಿ, ಕರ್ನಾಟಕ ರಾಜ್ಯ ಕುಂಬಾರ ಮಹಾ ಸಂಘ ಬೆಂಗಳೂರು, ರಾಜ್ಯ ಕುಂಬಾರ ಸರಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಕುಲಾಲ-ಕುಂಬಾರ ಬೃಹತ್ ಸಮಾವೇಶ ಮತ್ತು ಹಕ್ಕೋತ್ತಾಯ ಮಂಡನೆ ಕಾರ್ಯಕ್ರಮ ಬೆಳ್ತಂಗಡಿ ತಾಲೂಕು ಕ್ರೀಡಾಂಗಣದಲ್ಲಿ ಫೆ.4ರಂದು ನಡೆಯಲಿದೆ ಎಂದು ಸಮಾವೇಶ ಮತ್ತು ಹಕ್ಕೋತ್ತಾಯ ಸಮಿತಿ ಅಧ್ಯಕ್ಷ ಲ| ಹರೀಶ್ ಕಾರಿಂಜ ತಿಳಿಸಿದ್ದಾರೆ.
ಅವರು ಜ.25ರಂದು ಬೆಳ್ತಂಗಡಿ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಶತಮಾನಗಳಿಂದ ಪಾರಂಪರಿಕವಾಗಿ ಕುಂಬಾರಿಕೆ ವೃತ್ತಿ ಮಾಡುತ್ತಾ ಜೀವನ ಸಾಗಿಸುತ್ತಿರುವ ಕುಲಾಲ-ಕುಂಬಾರರು ಇದುವರೆಗೆ ಆಳ್ವಿಕೆ ಮಾಡಿದ ಅನೇಕ ಸರಕಾರಗಳ ಮುಂದೆ ಸಮಾಜದ ಅಭಿವೃದ್ಧಿಗಾಗಿ ಹಲವು ಬೇಡಿಕೆಗಳನ್ನು ಮುಂದಿಟ್ಟರೂ ಇದಕ್ಕೆ ಆಡಳಿತ ನಡೆಸುವವರಿಂದ ಸರಿಯಾದ ಸ್ಪಂದನೆ ದೊರೆಯದ ಹಿನ್ನಲೆಯಲ್ಲಿ ಕುಲಾಲ-ಕುಂಬಾರ ಸಮಾಜವನ್ನು ಒಗ್ಗೂಡಿಸಿ, ಅಂದು ನಡೆಯಲಿರುವ ಸಮಾವೇಶದಲ್ಲಿ ಸಮಾಜದ ಹಕ್ಕೋತ್ತಾಯಗಳನ್ನು ಮಂಡಿಸಲಾಗುವುದು ಎಂದರು.
ಸಮಾವೇಶಕ್ಕೆ ಮೊದಲು ಬೆಳ್ತಂಗಡಿ ಅಯ್ಯಪ್ಪ ದೇವಸ್ಥಾನದ ಬಳಿಯಿಂದ ತಾಲೂಕು ಕ್ರೀಡಾಂಗಣದವರೆಗೆ ಬೃಹತ್ ಹಕ್ಕೋತ್ತಾಯ ಜಾಥಾ ನಡೆಯಲಿದ್ದು, ಜಾಥಾವನ್ನು ಬರ್ಕೆ ಫ್ರೆಂಡ್ಸ್‌ನ ಯಜ್ಞೇಶ್ ಕುಲಾಲ್ ಉದ್ಘಾಟಿಸಲಿದ್ದಾರೆ. ಡಾ| ಎಂ.ವಿ. ಕುಲಾಲ್, ಯಶೋಧ ಕೃಷ್ಣಪ್ಪ ಕುಲಾಲ್, ಅನಿಲ್‌ದಾಸ್, ಪ್ರಭಾಕರ ಕುಲಾಲ್, ಮಂಜಪ್ಪ ಕುಲಾಲ್, ಡಾ| ಜಯರಾಜ್‌ಪ್ರಕಾಶ್, ಗೋಪಾಲ್ ಕುಲಾಲ್ ಭಾಗವಹಿಸಲಿದ್ದಾರೆ. ನಂತರ ತಾಲೂಕು ಕ್ರೀಡಾಂಗಣದಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಉಪಸ್ಥಿತರಿದ್ದಾರೆ. ಅಧ್ಯಕ್ಷತೆಯನ್ನು ಕುಲಾಲ-ಕುಂಬಾರರ
ಯುವ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಲ| ಹರೀಶ್ ಕಾರಿಂಜ ವಹಿಸಲಿದ್ದು, ಕರ್ನಾಟಕ ರಾಜ್ಯ ಕುಂಬಾರರ ಮಹಾ ಸಂಘ ಬೆಂಗಳೂರು ಇದರ ಕಾರ್ಯಾಧ್ಯಕ್ಷ ಡಾ| ಅಣ್ಣಯ್ಯ ಕುಲಾಲ್ ಉಳ್ತೂರು ಹಕ್ಕೋತ್ತಾಯ ಮಂಡನೆ ಮಾಡಲಿದ್ದಾರೆ. ಕರ್ನಾಟಕ ರಾಜ್ಯ ಕುಂಬಾರರ ಮಹಾ ಸಂಘ ಬೆಂಗಳೂರು ಇದರ ಅಧ್ಯಕ್ಷ ಶಿವಕುಮಾರ್ ಚೌಡಶೆಟ್ಟಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಾ. ಜಿ. ಪರಮೇಶ್ವರ್, ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್, ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಸಂಸದ ನಳಿನ್‌ಕುಮಾರ್ ಕಟೀಲ್, ಶಾಸಕ ಕೆ. ವಸಂತ ಬಂಗೇರ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ರಾಜ್ಯ ಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್, ಸೇರಿದಂತೆ ಜನಪ್ರತಿನಿಧಿಗಳು, ರಾಜ್ಯದ ವಿವಿಧ ತಾಲೂಕುಗಳ ಕುಲಾಲ-ಕುಂಬಾರರ ಸಂಘದ ಪದಾಧಿಕಾರಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ ಎಂದರು. ಕರ್ನಾಟಕ ರಾಜ್ಯದಲ್ಲಿ ಸುಮಾರು 20 ಲಕ್ಷ ಹಾಗೂ ಬೆಳ್ತಂಗಡಿ ತಾಲೂಕಿನಲ್ಲಿ ಸುಮಾರು 30 ಸಾವಿರ ಕುಲಾಲ-ಕುಂಬಾರರಿದ್ದಾರೆ. ಸಮಾವೇಶದಲ್ಲಿ ದ.ಕ, ಉಡುಪಿ ಸೇರಿದಂತೆ ರಾಜ್ಯದಾದ್ಯಂತದಿಂದ ಸುಮಾರು 20 ಸಾವಿರಕ್ಕೂ ಮಿಕ್ಕಿ ಸಮಾಜ ಬಾಂಧವರು ಭಾಗವಹಿಸಲಿದ್ದಾರೆ. ಈಗಾಗಲೇ ಎಲ್ಲಾ ಅತಿಥಿ-ಗಣ್ಯರು ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು. ಪ್ರಪ್ರಥಮ ಬಾರಿಗೆ ಹಕ್ಕೋತ್ತಾಯ ಸಮಾವೇಶವನ್ನು ನಡೆಸುವುದರ ಮೂಲಕ ತಾಲೂಕು, ಜಿಲ್ಲೆ ಹಾಗೂ ರಾಜ್ಯದಲ್ಲಿ ಕುಲಾಲ/ಕುಂಬಾರರು ಬಲಿಷ್ಠ ಸಂಘಟನೆಯಾಗಿ ರೂಪುಗೊಂಡು ರಾಜಕೀಯ ನಾಯಕರ ಮತ್ತು ಸರಕಾರದ ಮುಂದೆ ತಮ್ಮ ಬೇಡಿಕೆಯನ್ನು ಮಂಡನೆ ಮಾಡಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಾವೇಶ ಮತ್ತು ಹಕ್ಕೋತ್ತಾಯ ಸಮಿತಿ ಗೌರವಾಧ್ಯಕ್ಷ ಹೆಚ್. ಪದ್ಮಕುಮಾರ್ ಬೆಳ್ತಂಗಡಿ, ಕಾರ್ಯಾಧ್ಯಕ್ಷ ಉಮೇಶ್ ಕುಲಾಲ್ ಗುರುವಾಯನಕೆರೆ, ಪ್ರಧಾನ ಕಾರ್ಯದರ್ಶಿ ಪುಷ್ಪರಾಜ ಲಾಯಿಲ, ಕಾರ್ಯದರ್ಶಿ ಅಶೋಕ್ ಎಸ್.ಹಾರಬೆ, ಪ್ರಚಾರ ಸಮಿತಿ ಅಧ್ಯಕ್ಷ ಮಿಥುನ್‌ಕುಲಾಲ್ ಅಳಕೆ, ಮೆರವಣಿಗೆ ಸಮಿತಿ ಅಧ್ಯಕ್ಷ ಸೋಮನಾಥ್ ಕೆ.ವಿ. ಕುಕ್ಕೇಡಿ, ಮಾಧ್ಯಮ ಸಮಿತಿ ಅಧ್ಯಕ್ಷ ಬಿ.ಎಸ್. ಕುಲಾಲ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.