ಬೆಳ್ತಂಗಡಿ ನ.ಪಂ.: ರೂ.6.61 ಕೋಟಿಯ ಬಜೆಟ್ ಮಂಡನೆ

ಬೆಳ್ತಂಗಡಿ : ಬೆಳ್ತಂಗಡಿ ನಗರ ಪಂಚಾಯತದ 2018-19ನೇ ಸಾಲಿನಲ್ಲಿ ರೂ.661.79 ಲಕ್ಷ ಆದಾಯ ಮತ್ತು ರೂ. 658.58 ಲಕ್ಷ ಖರ್ಚು ಹಾಗೂ ರೂ. 3.21 ಲಕ್ಷ ಮಿಗತೆ ಬಜೆಟ್‌ನ್ನು ಜ.30ರಂದು ನಡೆದ ನಗರ ಪಂಚಾಯತದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಮಂಡಿಸಿದರು.
ಆದಾಯದ ಮೂಲವಾಗಿ ನೀರಿನ ಸರಬರಾಜು ಶುಲ್ಕ ರೂ. 30ಲಕ್ಷ, ಘನತ್ಯಾಜ್ಯ ಮನೆ-ಮನೆ ಕಸ ಸಂಗ್ರಹದಿಂದ ರೂ. 5 ಲಕ್ಷ, ಸಕ್ಕಿಂಗ್ ಯಂತ್ರ ಬಾಡಿಗೆ ರೂ.1 ಲಕ್ಷ, ಆಸ್ತಿ ತೆರಿಗೆಯಿಂದ ರೂ.೪೫ ಲಕ್ಷ, ದಂಡ ಮತ್ತು ಜುಲ್ಮಾನೆ ಆಸ್ತಿ ತೆರಿಗೆ ರೂ. ೪ ಲಕ್ಷ, ಕರ ಸಂಗ್ರಹ ಶುಲ್ಕ ರೂ. ೧.೨೦ ಲಕ್ಷ, ಉದ್ದಿಮೆ ಪರವಾನಿಗೆಯಿಂದ ರೂ.೩.೫೦ ಲಕ್ಷ, ಅಭಿವೃದ್ಧಿ ಶುಲ್ಕ ರೂ.೧೨ ಲಕ್ಷ, ವಾಣಿಜ್ಯ ಮಳಿಗೆ ಬಾಡಿಗೆಯಿಂದ ರೂ. ೨೫ ಲಕ್ಷ, ಮಾರುಕಟ್ಟೆ ಶುಲ್ಕ ರೂ.೧.೫೦ ಲಕ್ಷ, ಸಭಾಂಗಣಗಳ ಹಾಗೂ ಇತರ ರೂ. ೨.೪೦ಲಕ್ಷ, ಕಟ್ಟಡ ಪರವಾನಿಗೆಯಿಂದ ರೂ.೫ಲಕ್ಷ, ಜಾಹೀರಾತು ತೆರಿಗೆ ರೂ. ೧.೪೦ ಲಕ್ಷ ಸೇರಿದಂತೆ ವಿವಿಧ ಮೂಲಗಳಿಂದ ರೂ. ೬,೫೭,೮೨,೫೦೦ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.
ಖರ್ಚಿನಲ್ಲಿ ಬೀದಿ ದೀಪಕ್ಕೆ ರೂ. ೨೦ಲಕ್ಷ, ನೀರು ಸರಬುರಾಜು ವಿದ್ಯುಚ್ಛಕ್ತಿ ರೂ.೧೦ ಲಕ್ಷ, ನೀರು ಸರಬರಾಜು ಸಾಮಾಗ್ರಿ ರೂ. ೬ ಲಕ್ಷ, ಬೀದಿ ದೀಪ ಸಾಮಾಗ್ರಿ ರೂ. ೧.೫೦ ಲಕ್ಷ, ಆರೋಗ್ಯ ಶಾಖೆ ಸಾಮಾಗ್ರಿ ರೂ. ೨ಲಕ್ಷ, ಘನತ್ಯಾಜ್ಯ ವಸ್ತು ನಿರ್ವಹಣೆ ರೂ. ೩೫ ಲಕ್ಷ, ರಸ್ತೆ ನಿರ್ವಹಣೆ ರೂ. ೨೬ ಲಕ್ಷ, ಕಟ್ಟಡ ನಿರ್ವಹಣೆ ರೂ.೭ಲಕ್ಷ, ಚರಂಡಿ ನಿರ್ವಹಣೆ ರೂ.೪ ಲಕ್ಷ, ನೀರು ಸರಬರಾಜು ರೂ.೧೫.೫೦ ಲಕ್ಷ, ಬೀದಿ ದೀಪ ರೂ.೭.೫೦ ಲಕ್ಷ, ಕಟ್ಟಡಗಳು ಇತರ ನಿರ್ಮಾಣ ಕಾಮಗಾರಿಗಳು ರೂ. ೬೫ ಲಕ್ಷ, ರಸ್ತೆಗಳ ನಿರ್ಮಾಣ ರೂ. ೬೩ ಲಕ್ಷ ಬೀದಿ ದೀಪ ವ್ಯವಸ್ಥೆ ರೂ. ೧೭ ಲಕ್ಷ, ಚರಂಡಿ ನಿರ್ಮಾಣ ರೂ.೨೯ ಲಕ್ಷ, ನೀರು ಸರಬರಾಜು ವ್ಯವಸ್ಥೆ ರೂ. ೬೦ ಲಕ್ಷ ಸೇರಿದಂತೆ ರೂ. ೬,೫೮,೫೮,೦೪೩ ಮೀಸಲಿರಿಸಲಾಗಿದೆ ಎಂದು ತಿಳಿಸಿದರು.
ಅನಧಿಕೃತ ಪ್ಲೇಕ್ಸ್ ತೆರವು: ನಗರ ಪಂಚಾಯತು ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಪ್ಲೇಕ್ಸ್ ಹಾಕಲಾಗುತ್ತಿದೆ ಎಂದು ಉಪಾಧ್ಯಕ್ಷ ಜಗದೀಶ್ ಸಭೆಯ ಗಮನಕ್ಕೆ ತಂದರು. ಈ ಹಿಂದೆ ಆದ ನಿರ್ಣಯವನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ ಎಂದು ಜನಾರ್ದನ ಬಂಗೇರ ಆರೋಪಿಸಿದರು. ಅಧ್ಯಕ್ಷರು ಮಾತನಾಡಿ ಪರವಾನಿಗೆ ಪಡೆಯದೆ ಹಾಕಿದ ಬ್ಯಾನರ್‌ಗಳನ್ನು ಪರಿಶೀಲಿಸಿ ತೆರವುಗೊಳಿಸುವಂತೆ ಸೂಚನೆ ನೀಡಿದರು.
ಲೋವೋಲ್ಟೇಜ್ ಸಮಸ್ಯೆ: ನಗರದಲ್ಲಿ ವಿದ್ಯುತ್ ಲೋವೋಲ್ಟೇಜ್ ಸಮಸ್ಯೆ ಬಗ್ಗೆ ಚರ್ಚೆ ನಡೆಯಿತು. ಕೆರೆಕೋಡಿ, ಜ್ಯೂ.ಕಾಲೇಜು ಪರಿಸರದಲ್ಲಿ ಇದರ ಸಮಸ್ಯೆ ಇದೆ.
ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿರುವ ಡಯಾಲೀಸಿಸ್ ಮೆಶೀನ್ ಇದರಿಂದಾಗಿ ಹಾಳಾಗಿದೆ ಎಂದು ಜಗದೀಶ್ ತಿಳಿಸಿದರು. ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಎರಡು ಡಯಾಲೀಸಿಸ್ ಮೆಶೀನ್ ಇದೆ. ಈಗ ಉಜಿರೆಯ ಒಬ್ಬರು ದಾನಿ ಇನ್ನೊಂದು ಮೆಶೀನ್ ಕೊಟ್ಟಿದ್ದಾರೆ. ಈಗಾಗಲೇ ಇಲ್ಲಿ ೬೦ ಮಂದಿ ಡಯಾಲೀಸಿಸ್‌ಗೆ ನೊಂದಾವಣೆ ಮಾಡಿದ್ದು, ಈಗ ದಿನಕ್ಕೆ ೮ ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಡಾ| ಆದಂ ಮಾಹಿತಿ ನೀಡಿದರು. ಡಯಾಲೀಸಿಸ್‌ಗೆ ನೀರು ಹೆಚ್ಚು ಬೇಕಾಗುತ್ತದೆ ಈಗಾಗಲೇ ಶಾಸಕರು ಒಂದು ಕೊಳವೆ ಬಾವಿ ಕೊಡಿಸುವುದಾಗಿ ಹೇಳಿದ್ದಾರೆ ಎಂದು ಸಭೆಗೆ ವಿವರಿಸಿದರು.
ಜನಪ್ರತಿನಿಧಿಗಳ ನಿರ್ಲಕ್ಷ: ತಾಲೂಕು ಹಬ್ಬಗಳ ಆಚರಣಾ ಸಮಿತಿಯವರು ನ.ಪಂ. ಉಪಾಧ್ಯಕ್ಷ, ಸದಸ್ಯರನ್ನು ನಗರದಲ್ಲಿ ಆಗುವ ಯಾವುದೇ ಸಮಾರಂಭಕ್ಕೆ ಕರೆಯದೆ ಕಡೆಗಣಿಸುತ್ತಿದ್ದರೆ ಮುಖ್ಯಮಂತ್ರಿಗಳು ಬಂದ ದಿನವೂ ಹೀಗೆಯೇ ಆಗಿತ್ತು ಎಂದು ಜಗದೀಶ್ ಆರೋಪಿಸಿದರು. ನನ್ನನ್ನು ತಡೆದು ಒಳಗೆ ಬಿಡಲಿಲ್ಲ ಎಂದು ಮಮತಾ ವಿ. ಶೆಟ್ಟಿ ಹೇಳಿದರು. ಇದರ ಬಗ್ಗೆ ಕಳೆದ ಕರಾವಳಿ ಉತ್ಸವದ ಸಮಯದಲ್ಲೇ ನಾನು ಅಧಿಕಾರಿಗಳ ಗಮನಕ್ಕೆ ತಂದಿದ್ದೆ ಎಂದು ಜನಾರ್ದನ ಬಂಗೇರ ತಿಳಿಸಿದರು.
ನ.ಪಂ. ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರ ಸಮಸ್ಯೆ ಬಗ್ಗೆ ಸಭೆಯಲ್ಲಿ ದೀರ್ಘ ಚರ್ಚೆ ನಡೆಯಿತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಜಗದೀಶ್ ಅವರು ಕನಿಷ್ಠ ವೇತನ ಪಡೆಯುತ್ತಿರುವ ಅವರ ವೇತನವನ್ನು ಹೆಚ್ಚಿಸುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರು ನೌಕರರು ವೇತನದ ಬಗ್ಗೆ ನನ್ನ ಗಮನಕ್ಕೆ ತಾರದೆ ದೂರು ನೀಡಿದ್ದಾರೆ. ಅದರಲ್ಲಿ ಆರೋಪವನ್ನು ಮಾಡಿದ್ದಾರೆ. ಆದರೆ ನೌಕರರಿಗೆ ಯಾವುದೇ ರೀತಿಯ ಅನ್ಯಾಯ ಮಾಡಿಲ್ಲ, ಅವರ ವೇತನದ ಬಗ್ಗೆ ನನಗೂ ಕಾಳಜಿಯಿದ್ದು, ಪ್ರತಿವರ್ಷ ಏರಿಕೆ ಮಾಡಿದ್ದೇನೆ. ಈ ವರ್ಷವು ಏರಿಕೆ ಮಾಡಲು ಲಿಸ್ಟ್ ತಯಾರಿಸಿ ನೀಡಿದ್ದೇನೆ. ಆದರೆ ನೌಕರರು ದೂರು ನೀಡಿ, ಆರೋಪ ಮಾಡಿರುವುದು ಬೇಸರ ತಂದಿದೆ ಎಂದು ತಿಳಿಸಿದರು. ಇದರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದರೂ ಅಂತಿಮ ತೀರ್ಮಾನವಾಗಲಿಲ್ಲ. ನ.ಪಂ. ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಯೋಜನಾಧಿಕಾರಿ ವೆಂಕಟ್ರಮಣ ಶರ್ಮ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.