ಹೈನುಗಾರಿಕೆ

ಮುಕ್ಕೂರು ಜಗನ್ನಾಥ ಪೂಜಾರಿಯವರ ಅಪರೂಪದ ಸಾಧನೆ
ಕೃಷಿ ಈ ದೇಶದ ಆಸ್ತಿ. ಕೃಷಿಕರು ಈ ದೇಶದ ಬೆನ್ನೆಲುಬು. ಸುಳ್ಯ ತಾಲೂಕು ಕೃಷಿಯ ಮಟ್ಟಿಗೆ ಸಂಪಧ್ಭರಿತ ನೆಲ. ಹೈನುಗಾರಿಕೆ ಹಾಗೂ ಕೃಷಿ ಒಂದಕ್ಕೊಂದು ಪೂರಕ. ಹೆಚ್ಚಿನವರು ಕೃಷಿಗಾಗಿ ಹೈನುಗಾರಿಕೆ ಮಾಡುತ್ತಿದ್ದರೆ, ಮುರುಳ್ಯ ಗ್ರಾಮದ ಅಲೆಕ್ಕಾಡಿ ‘ಅನಘಾ ಫಾರ್ಮ್ಸ್’ನ ಮುಕ್ಕೂರು ಜಗನ್ನಾಥ ಪೂಜಾರಿ ಹೈನುಗಾರಿಕೆಗಾಗಿ ಕೃಷಿ ಮಾಡುತ್ತಿದ್ದಾರೆ. ಸಣ್ಣದಾಗಿ ಒಂದು ದನ ಖರೀದಿಸಿ ಹೈನುಗಾರಿಕೆ ಆರಂಭಿಸಿದ ಅವರು ಕಳೆದ ೯ ವರ್ಷಗಳಿಂದ ಅದನ್ನೇ ಮುಖ್ಯ ವೃತ್ತಿಯನ್ನಾಗಿಸಿದ್ದಾರೆ. ಪ್ರತಿ ನಿತ್ಯ ೧೫೦ ಲೀಟರ್ ಹಾಲನ್ನು ಕೆಎಂಎಫ್‌ಗೆ ನೀಡುತ್ತಿದ್ದಾರೆ. ಸ್ಥಳೀಯ ತಳಿ ಮಲೆನಾಡು ಗಿಡ್ಡ, ಎಚ್‌ಎಫ್ ಹಾಗೂ ಜರ್ಸಿ ತಳಿಯ ದನಗಳನ್ನು ಅವರು ಸಾಕುತ್ತಿದ್ದಾರೆ. ತಮ್ಮ ಮನೆಗೆ ಹೊಂದಿಕೊಂಡಂತೆ ಸಿಮೆಂಟ್ ಶೀಟ್‌ನ ಕೊಟ್ಟಿಗೆ ನಿರ್ಮಿಸಿ ಅದರಲ್ಲಿ ದನಗಳನ್ನು ಸಾಕುತ್ತಿದ್ದು, ಅದರಲ್ಲಿ ಎಲ್ಲಾ ರೀತಿಯ ಆಧುನಿಕ ವ್ಯವಸ್ಥೆಗಳನ್ನು ಅಳವಡಿಸಿದ್ದಾರೆ. ಆಹಾರ ಹಾಕಲು, ನೀರು ಕುಡಿಯಲು ಅನುಕೂವಾಗುವಂತೆ ಸಿಮೆಂಟಿನ ತೊಟ್ಟಿಗಳನ್ನು ನಿರ್ಮಿಸಿದ್ದಾರೆ. ಹಟ್ಟಿಯಲ್ಲಿ ದನಗಳು ಜಾರದಂತೆ ಅದಕ್ಕೆ ರಬ್ಬರ್ ಮ್ಯಾಟ್‌ಗಳನ್ನು ಹಾಕಿದ್ದಾರೆ. ಬೇಸಿಗೆಯಲ್ಲಿ ಹಟ್ಟಿ ಒಳಗಿನ ವಾತಾವರಣ ಬಿಸಿ ಏರದಂತೆ ಫ್ಯಾನ್‌ಗಳನ್ನು ಅಳವಡಿಸಿ ದ್ದಾರೆ. ದನಗಳಿಗೆ ಸಂಗೀತ ಕೇಳಲು ಸ್ಟೀರಿಯೋ ಸ್ಪೀಕರ್‌ಗಳಿವೆ. ಹಾಲು ಹಿಂಡಲು ವಿದ್ಯುತ್ ಚಾಲಿತ ಹಾಲು ಕರೆಯುವ ಯಂತ್ರವೂ ಇದೆ. ವಿದ್ಯುತ್ ಕೈಕೊಟ್ಟಾಗ ಇನ್ವರ್ಟರ್ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ.
ಎಚ್‌ಎಫ್ ತಳಿಯ ನಾಲ್ಕು, ಜರ್ಸಿ ತಳಿಯ ನಾಲ್ಕು ಮಲೆನಾಡು ಗಿಡ್ಡ ಸೇರಿದಂತೆ ಸುಮಾರು ೧೫ ಹಸುಗಳು ಅವರ ಕೊಟ್ಟಿಗೆಯಲ್ಲಿವೆ. ಎಚ್.ಎಫ್ ತಳಿ ಹೈನುಗಾರಿಕಗೆ ಸೂಕ್ತ ತಳಿ ಎನ್ನುವ ಅವರು ಜರ್ಸಿಯ ಹಾಲಿನಲ್ಲಿ ಕೊಬ್ಬನಂಶ ಹೆಚ್ಚಿದೆ. ಎಚ್‌ಎಫ್ ತಳಿಯ ದನದ ಹಾಲಿನಲ್ಲಿ ಕೊಬ್ಬಿನಂಶ ಕಡಿಮೆ ಇದ್ದರೆ, ಎರಡೂ ತಳಿಯ ದನಗಳನ್ನು ಸಾಕುವುದು ಉತ್ತಮ ಎನ್ನುವ ಸಲಹೆಯನ್ನೂ ನೀಡುತ್ತಾರೆ. ಬೆಳಿಗ್ಗೆ ನಾಲ್ಕೂವರೆ ಗಂಟೆಗೆ ಹೈನುಗಾರಿಕೆಯ ದಿನಚರಿ ಆರಂಭ. ಸೆಗಣಿ ತೆಗೆದು ಹಟ್ಟಿ ಶುಚಿಗೊಳಿಸುವುದು. ೫ ಗಂಟೆಗೆ ಹಿಂಡಿ ಹಾಕಿ ಐದೂವರೆಗೆ ಹಾಲು ಕರೆಯುವುದು. ೬ ಗಂಟೆಗೆ ಹುಲ್ಲು ಹಾಕುವುದು. ಬಳಿಕ ಮನೆ, ತೋಟದ ಕೆಲಸ. ೧೦ ಗಂಟೆಗೆ ಮತ್ತೆ ಹುಲ್ಲು ಹಾಕಿ ೧೨ ಗಂಟೆಗೆ ಶುದ್ಧ ನೀರು ಕೊಡುತ್ತಾರೆ. ಮಧ್ಯಾಹ್ನ ೩ ಗಂಟೆಗೆ ಸೆಗಣಿ ತೆಗೆದು ನೀರು ಹಾಕಿ ಶುಚಿಗೊಳಿಸುತ್ತಾರೆ. ೪ ಗಂಟೆಯಿಂದ ಹಾಲು ಹಿಂಡುವುದು, ಬಳಿಕ ಹಿಂಡಿ ಮತ್ತು ಹುಲ್ಲು ಹಾಕುತ್ತಾರೆ. ದಿನಕ್ಕೆ ಎರಡು ಬಾರಿ ಮುರುಳ್ಯದ ಹಾಲು ಸೊಸೈಟಿಗೆ ಹಾಲು ಒಯ್ಯುತ್ತಾರೆ. ಅಲ್ಲಿಂದಲೇ ಹಿಂಡಿಯನ್ನೂ ತರುತ್ತಾರೆ. ಅದಕ್ಕಾಗಿ ಬೈಕ್ ಹಾಗೂ ಓಮ್ನಿಯನ್ನೂ ಇಟ್ಟುಕೊಂಡಿದ್ದಾರೆ. ಕೊಟ್ಟಿಗೆಯ ಒಂದು ಮೂಲೆಯಲ್ಲಿ ಅಂತರ್ಗತ ಗೋಬರ್ ಗ್ಯಾಸ್ ಘಟಕವನ್ನು ಮಾಡಿಕೊಂಡಿದ್ದು, ಮನೆಗೆ ಬೇಕಾದ ಇಂಧನವನ್ನು ಇದರಿಂದಲೇ ಪಡೆಯುತ್ತಾರೆ. ತ್ಯಾಜ್ಯ ಸ್ಲರಿ ನೀರು ತೋಟಕ್ಕೆ ಬಿಡುತ್ತಾರೆ. ‘ಸಿಓತ್ರಿ’ ಹಾಗೂ ‘ಸಂಪೂರ್ಣ’ ತಳಿಯ ಹಸಿರು ಹುಲ್ಲುನ್ನು ಮನೆಯ ಸುತ್ತ ಬೆಳೆಸಿದ್ದಾರೆ. ಇದರೊಂದಿಗೆ ತೋಟದ ಹುಲ್ಲು, ಅಡಿಕೆ ಹಾಳೆಯನ್ನೂ ದನಗಳಿಗೆ ನೀಡುತ್ತಾರೆ. ಹುಲ್ಲು ಕತ್ತರಿಸಲು ಪವರ್ ವೀಡರ್ ಮತ್ತು ಚಾಪ್ ಕಟ್ಟರ್ ಕೂಡಾ ಇವರಲ್ಲಿದೆ.
ನಾಲ್ಕೂವರೆ ಕೊಬ್ಬಿನಾಂಶ ಇರುವ ಹಾಲಿಗೆ ೩೦ ರೂಪಾಯಿ ದರ ಮತ್ತು ಸರಕಾರದ ಪ್ರೋತ್ಸಾಹಧನ ನಾಲ್ಕು ರೂಪಾಯಿ ಸೇರಿ ೩೪ ಸಿಗುತ್ತದೆ. ನಿತ್ಯ ೧೦೦ ಲೀಟರ್‌ಗಿಂತ ಹೆಚ್ಚಿಗೆ ಹಾಲು ಹಾಕುವವರಿಗೆ ಲೀಟರ್‌ಗೆ ೫೦ ಪೈಸೆಯನ್ನು ಕೆಎಂಫ್‌ನವರು ನೀಡುತ್ತಾರೆ. ೧೦೦ ರೂಪಾಯಿ ಸಿಕ್ಕಿದರೆ ಅದರಲ್ಲಿ ೬೦ ರೂಪಾ ಯಿ ಖರ್ಚು ಬರುತ್ತದೆ. ಉಳಿದ ೪೦ ರೂಪಾ ಯಿ ನಾವು ಸ್ವಂತ ಕೆಲಸ ಮಾಡಿ ದ್ದಕ್ಕೆ ಉಳಿಯುತ್ತದೆ ಎನ್ನುತ್ತಾರೆ ಅವರು.
ಜಾನುವಾರಿಗಳಿಗೆ ಬರುವ ರೋಗದಲ್ಲಿ ಕೆಚ್ಚಲು ಬಾವು ರೋಗ ಪ್ರಮುಖವಾದುದು, ಅಲೋಪತಿಯಿಂದ ನಾಟಿ ವೈದ್ಯ ಪದ್ಧತಿಯೇ ಇದಕ್ಕೆ ಹೆಚ್ಚು ಸೂಕ್ತ. ಸಾಮಾನ್ಯವಾಗಿ ಲೋಲೆಸರ ಅಂದರೆ ಅಲೋವೆರವನ್ನು ಅರಶಿಣದೊಂದಿಗೆ ಲೇಪಿಸಿದರೆ ಇದು ಗುಣವಾ ಗುತ್ತದೆ. ಕೊಟ್ಟಿಗೆಯಲ್ಲಿ ಸ್ವಚ್ಛತೆ ಇಲ್ಲದಿದ್ದರೆ ಕಾಲುಬಾಯಿ ಜ್ವರ ಬರುತ್ತದೆ. ಇದಕ್ಕೆ ವೈದ್ಯರ ಬಳಿಗೆ ಹೋಗಲೇ ಬೇಕು. ಚುಚ್ಚುಮದ್ದು ನೀಡದೆ ಇದು ಗುಣವಾಗುವುದಿಲ್ಲ. ಇನ್ನು ಕರು ಹಾಕಿದ ದನಗಳಿಗೆ ಕ್ಯಾಲ್ಸಿಯಂ ಕೊರತೆ ಎದುರಾಗುತ್ತದೆ. ಅದಕ್ಕಾಗಿ ಕ್ಯಾಲ್ಸಿಯಂ ನೀಡುವುದು ಅಗತ್ಯ. ಹರಿವೆ ಗಿಡ, ಸೊಪ್ಪು ದನಗಳಿಗೆ ಉತ್ತಮ ಆಹಾರ. ಆದರೆ ಅದರ ಬೀಜ ಮಾತ್ರ ವಿಷವಾಗಿ ಪರಿಣಮಿಸುತ್ತದೆ.
ಹೈನುಗಾರಿಕೆಗೆ ಕೆಎಂಎಫ್‌ನಿಂದ ಹಾಗೂ ನಬಾರ್ಡ್‌ನಿಂದ ಸಾಕಷ್ಟು ಪ್ರೋತ್ಸಾಹ, ಸೌಲಭ್ಯ ಸಿಗುತ್ತಿದೆ. ಆಧುನಿಕ ಯಂತ್ರೋ ಪಕರಣಗಳ ಖರೀದಿಗೆ ಶೇಕಡಾ ೫೦ರ ಸಹಾಯಧನದಲ್ಲಿ ನಬಾರ್ಡ್ ಮೂಲಕ ೩ ಲಕ್ಷದವರಗೆ ಸಾಲ ಕೂಡಾ ಸಿಗುತ್ತದೆ. ಯುವ ಜನತೆ ಸಾಕಷ್ಟು ಮಂದಿ ಈ ಕ್ಷೇತ್ರದಲ್ಲಿ ಆಸಕ್ತಿ ವಹಿಸುತ್ತಿದ್ದು, ಶ್ರದ್ಧೆ ಯಿಂದ ಮಾಡಿದರೆ ಯಶಸ್ಸು ಖಂಡಿತಾ ಎನ್ನುವುದು ಜಗನ್ನಾಥ ಪೂಜಾರಿ ಅವರ ಅಭಿಪ್ರಾಯ.
ಕೃಷಿ ಹೈನುಗಾರಿಕೆ ಎಂದರೆ ಅದು ಮನೆ ಮಂದಿ ಸೇರಿ ಮಾಡುವ ಕೆಲಸ. ಕುಟುಂಬದ ಎಲ್ಲರೂ ಕೈ ಜೋಡಿಸಿದರೆ ಕೆಲಸ ಹಗುರ. ಜಗನ್ನಾಥ ಪೂಜಾರಿಯವರ ಪತ್ನಿ ಮತ್ತು ಮಕ್ಕಳು ಹೈನುಗಾರಿಕೆಯಲ್ಲಿ ಸಹಕರಿಸುತ್ತಿದ್ದಾರೆ.
ಮನೆಯ ಸುತ್ತಲೂ ‘ಸಂಪೂರ್ಣ’ ಹಾಗೂ ‘ಸಿಓತ್ರಿ’ ತಳಿಯ ಮೇವಿನ ಹುಲ್ಲನ್ನು ಬೆಳೆಸಿದ್ದಾರೆ. ಕೊಳವೆ ಬಾವಿ ಕೊರೆದು ನೀರಾವರಿ ವ್ಯವಸ್ಥೆ. ಅಡಿಕೆಯೊಂದಿಗೆ ತೆಂಗು, ಕಾಳುಮೆಣಸು, ರಬ್ಬರ್ ಕೃಷಿ ಇದೆ. ತೋಟಕ್ಕೆ ಹೊಂದಿಕೊಂಡಿರುವ ಜಮೀನನ್ನು ಖರೀದಿಸಿ ಅದರಲ್ಲೂ ತಮ್ಮ ಕೃಷಿಯನ್ನು ವಿಸ್ತರಿಸಿದ್ದಾರೆ. ಗೊಬ್ಬರ ಹಾಗೂ ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಅನುಕೂವಾಗುವಂತೆ ವಾಹನ ಹೋಗಲು ತೋಟದ ಮಧ್ಯದಲ್ಲಿ ರಸ್ತೆಯನ್ನು ನಿರ್ಮಿಸಿದ್ದಾರೆ. ಒಟ್ಟಿನಲ್ಲಿ ಪಾಳು ಬಿದ್ದಿದ್ದ ಜಮೀನು ಇಂದು ಹಸಿರಿನಿಂದ ನಳನಳಿಸುತ್ತಿದೆ.

ಚೇತನ್‌ರಾಂ ಇರಂತಕಜೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.