ಸ್ವಾವಲಂಬಿ ಬದುಕಿಗೆ ಮಾದರಿಯಾದ ಸುಬ್ರಹ್ಮಣ್ಯದ ಅಟೋ ಚಾಲಕಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಪುರುಷರಿಗೆ ಸಡ್ಡು ಹೊಡೆಯುವಂತೆ ಮಹಿಳೆಯೊಬ್ಬಳು ರಿಕ್ಷಾ ಚಾಲನೆಗೆ ಮುಂದಾಗಿ ಸ್ವಾವಲಂಬಿ ಬದುಕು ಕಂಡುಕೊಂಡು ಇತರರಿಗೆ ಮಾದರಿಯಾಗಿದ್ದಾರೆ.
ಜೀವನದಲ್ಲಿ ಏನಾದರೊಂದು ಸಾಧಿಸಬೇಕು ಎಂಬವರಿಗೆ ಸುಬ್ರಹ್ಮಣ್ಯದಲ್ಲಿ ನೆಲೆಸಿರುವ ಮಲೆಕುಡಿಯ ಜನಾಂಗದ ಮಹಿಳೆಯಾದ ಲೀಲಾವತಿ ಮಾದರಿಯಾಗಿ ಕಾಣುತ್ತಾರೆ. ಜೀವನದುದ್ದಕ್ಕೂ ಕಷ್ಟಕಾರ್ಪಣ್ಯಗಳನ್ನು ಎದುರಿಸುತ್ತಲೇ ಬೆಳೆದು ಇದೀಗ ಇಳಿವಯಸ್ಸಿನಲ್ಲಿ ಅಟೋ ಚಾಲಕಿಯಾಗಿ ಸ್ವಾವಲಂಬಿ ಜೀವನ ನಡೆಸಿ ಆದರ್ಶಪ್ರಾಯರಾಗಿದ್ದಾರೆ.

autorani1 autorani4 autorani5
ಸುಬ್ರಹ್ಮಣ್ಯ ಪರಿಸರದ ಪ್ರಥಮ ಮಹಿಳಾ ಅಟೋಚಾಲಕಿ ಎಂಬ ಹೆಗ್ಗಳಿಕೆಗೂ ಪಾತ್ರರಾದ ಲೀಲಾವತಿ ಅವರಿಗೆ 55 ವರ್ಷ ಪ್ರಾಯ. ಆದರೂ 18ರ ಯುವಕರಂತೆ ಚುರುಕು, ಕಾರ್ಯತತ್ಪರತೆಯಿಂದ ಪ್ರಯಾಣಿಕರ ಮನಗೆದ್ದಿದ್ದಾರೆ.
ಸುಬ್ರಹ್ಮಣ್ಯದ ಮೂಲನಿವಾಸಿಗಳಾದ ಮಲೆಕುಡಿಯ ಜನಾಂಗದ ಮಲೆಮೋಂಟ ಅವರ ಪುತ್ರಿಯಾದ ಲೀಲಾವತಿ ಶಾಲೆಯ ಮೆಟ್ಟಿಲು ಹತ್ತಿ ಓದಿರುವುದು ಕೇವಲ ಎರಡನೇ ತರಗತಿವರೆಗೆ ಮಾತ್ರ. ಆದರೆ ವ್ಯವಹಾರ, ಲೆಕ್ಕಾಚಾರ, ವಹಿವಾಟಿನಲ್ಲಿ ಪದವೀಧರರನ್ನೂ ಮೀರಿಸುವಷ್ಟು ಪ್ರಾವೀಣ್ಯತೆ ಇವರಿಗಿದೆ. ಬಡಗಿ ವೃತ್ತಿಯಾಗಿದ್ದ ಕುಂಬಳೆಯ ಮಾಧವ ಎಂಬವರೊಂದಿಗೆ ವಿವಾಹವಾಯಿತು. ಆರಂಭದಲ್ಲಿ ವೈವಾಹಿಕ ಜೀವನ ಚೆನ್ನಾಗಿತ್ತು. ಅದರ ಫಲವಾಗಿ ಓರ್ವ ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳು ಜನಿಸಿದರು. ಬಾಡಿಗೆ ರೂಂನಲ್ಲಿ ಪುಟ್ಟ ಮಕ್ಕಳೊಂದಿಗೆ ಸುಬ್ರಹ್ಮಣ್ಯದಲ್ಲೇ ವಾಸವಾಗಿದ್ದ ಲೀಲಾವತಿಯವರ ಜೀವನದಲ್ಲಿ ಕಹಿ ಘಟನೆಯೊಂದು ನಡೆಯಿತು. ಕುಟುಂಬದ ಜವಾಬ್ದಾರಿ ಹೊರಬೇಕಾದ ಪತಿ ಬೇರೆ ಮದುವೆಯಾಗಿ ಲೀಲಾವತಿಯವರೊಂದಿಗೆ ವಿಚ್ಛೇದನ ಬಯಸಿದರು. ಮಾತುಕತೆಯ ಫಲವಾಗಿ ತಿಂಗಳಿಗೆ 2೦೦ ರೂ. ಪರಿಹಾರಧನ ನೀಡುವುದೆಂದು ನಿರ್ಧಾರವಾಗಿದ್ದರೂ, ಆ ಹಣ ಲೀಲಾವತಿಯವರ ಕೈಗೆ ಬರಲೇ ಇಲ್ಲ. ಹಣ ನೀಡದ ಪತಿ ಮಕ್ಕಳನ್ನು ಕೇಳಿದ. ಆದರೆ ಅದಕ್ಕೊಪ್ಪದ ಲೀಲಾವತಿ ಕಾಡಿ, ಬೇಡಿಯಾದರು ಹೆತ್ತ ಕಂದಮ್ಮಗಳನ್ನು ಸಾಕಿ ಬೆಳೆಸುವೆ ಎಂದು ಪ್ರತಿಜ್ಞೆ ಮಾಡಿ ತನ್ನ ತಂದೆಯವರ ಪೂರ್ಣ ಸಹಕಾರದಿಂದ ಮೂರು ಮಕ್ಕಳನ್ನು ಬೆಳೆಸಿದರು, ವಿದ್ಯಾಭ್ಯಾಸ ನೀಡಿ ಪೋಷಿಸಿದರು.
ಲೀಲಾವತಿಯವರ ಹಿರಿಯ ಮಗಳು ಚಂದ್ರಾವತಿ ಪಿಯುಸಿವರೆಗೆ ವ್ಯಾಸಂಗ ಮಾಡಿ, ಸುಬ್ರಹ್ಮಣ್ಯ ಗ್ರಾ.ಪಂ.ನ ಅಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಎಡನೆಯ ಪುತ್ರಿ ಸವಿತಾ ೮ನೇ ತರಗತಿವರೆಗೆ ಓದಿ ವಿವಾಹವಾದರು. ಈಗ ಇಬ್ಬರೂ ವಿವಾಹಿತರು. ಮಗ ಸುಬ್ರಹ್ಮಣ್ಯನು ಅಟೋ ಚಾಲಕನಾಗಿದ್ದನು. ಕುಟುಂಬಕ್ಕೆ ಆಸರೆಯಾಗಬೇಕಾಗಿದ್ದ ಅವನೂ ಒಂದು ದಿನ ಮನೆ ಬಿಟ್ಟು ಹೋದವ ಮತ್ತೆ ಹಿಂತಿರುಗಲೇ ಇಲ್ಲ. ಸುಬ್ರಹ್ಮಣ್ಯದ ಚಂದ್ರಹಾಸ ಭಟ್ ಅವರ ಸಹಕಾರದಿಂದ ಸುಬ್ರಹ್ಮಣ್ಯದ ನೂಚಿಲದಲ್ಲಿ 5 ಸೆಂಟ್ಸ್ ಸರಕಾರಿ ಜಾಗ ಸಿಕ್ಕಿತು. ಏನಾದರೂ ಸಾಧಿಸಲೇಬೇಕು ಎಂಬ ಹಠದಿಂದ ಲೀಲಾವತಿ 1999ರಲ್ಲಿ ತಳ್ಳುವ ಗಾಡಿ ಖರೀದಿಸಿ, ಚಹಾ, ಕಾಫಿ, ತಿಂಡಿಯ ಮಿನಿ ಕ್ಯಾಂಟೀನ್ ನಡೆಸತೊಡಗಿದರು. ಆ ಗಾಡಿ ಖರೀದಿಸಲೂ ಸ್ಥಳೀಯ ಸೊಸೈಟಿಯಿಂದ ಸಾಲ ಪಡೆದಿದ್ದರು. 16 ವರ್ಷಗಳ ಕಾಲ ಈ ವ್ಯವಹಾರ ನಿರಂತರವಾಗಿ ಸಾಗಿತು. ವ್ಯವಹಾರ ಚೆನ್ನಾಗಿದ್ದ ಸ್ಥಳದಿಂದ ರಸ್ತೆ ಬದಿಯ ಗಾಡಿಗಳೆಲ್ಲವೂ ಪಾರ್ಕಿಂಗ್ ಏರಿಯಾಕ್ಕೆ ಹೋದಾಗ ವ್ಯಾಪಾರ ಕಡಿಮೆಯಾಗತೊಡಗಿತು. ಇದೇ ವೇಳೆ ಎರಡು ರಿಕ್ಷಾಗಳ ಮಾಲಕಿಯಾಗಿದ್ದರು ಲೀಲಾವತಿ. ಪ್ರತಿದಿನ ಚಾಲಕ ಕೇವಲ 3೦ ರೂ.ಗಳನ್ನು ಮಾಲಕಿಗೆ ನೀಡುತ್ತಿದ್ದ. ಅಟೋ ರಿಕ್ಷಾ ವ್ಯವಹಾರವೂ ನಷ್ಟವೆಂದೆನಿಸಿದಾಗ ಅವುಗಳನ್ನು ಮಾರಾಟ ಮಾಡಿದರು.
2013ರಲ್ಲಿ ಮಹಿಳೆಯಾದ ತಾನು ಅಟೋ ರಿಕ್ಷಾ ಚಾಲನೆ ಮಾಡಿದರೆ ಹೇಗೆ ಎಂಬ ಆಲೋಚನೆ ಬಂದು ಸುಬ್ರಹ್ಮಣ್ಯ ಪದವಿ ಪೂರ್ವ ಕಾಲೇಜಿನ ಬಯಲಿನಲ್ಲಿ ಅಟೋ ಚಾಲನೆ ಕಲಿಯಲಾರಂಭಿಸಿದರು. ಕೇವಲ ಎಂಟೇ ದಿನದಲ್ಲಿ ಪರಿಣತಿ ಪಡೆದರು. ಚಾಲನೆಗೆ ಬೇಕಾದ ಪರವಾನಿಗೆಯೂ ದೊರೆಯಿತು. ಆದರೆ ಹೊಸ ಅಟೋ ರಿಕ್ಷಾ ಖರೀದಿಸಲು ಎಲ್ಲಾ ಬ್ಯಾಂಕ್, ಸೊಸೈಟಿಗಳ ಮೆಟ್ಟಿಲು ಹತ್ತಿದರೂ ಯಾರೂ ಸಾಲ ಕೊಡಲಿಲ್ಲ. “ಪ್ರಾಯವಾಯಿತಮ್ಮಾ, ಸಾಲ ಕೊಡಲು ಆಗುತ್ತಿಲ್ಲ” ಎಂದವರೇ ಹಲವರು. ಕೆಲವು ಮಂದಿ ಇವರ ಆಸೆಯನ್ನು ಕೇಳಿ ನಕ್ಕರು. ಆ ವೇಳೆ ಸುಬ್ರಹ್ಮಣ್ಯದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನವರು 5೦ ಸಾವಿರ ರೂ. ಠೇವಣಿ ಇರಿಸಿದರೆ ಒಂದು ಲಕ್ಷ ರೂ. ಸಾಲ ನೀಡಬಹುದೆಂದರು. ಇವರ ದಯನೀಯ ಪರಿಸ್ಥಿತಿಯನ್ನು ಮನಗಂಡ ಹಿತೈಷಿಯೋರ್ವರು ನಿಗದಿತ ಠೇವಣಿ ಇರಿಸಿದರು. ಅದರ ಫಲವಾಗಿ ಲೀಲಾವತಿಯವರಿಗೆ ಅಟೋ ರಿಕ್ಷಾ ಖರೀದಿಗಾಗಿ ಸಾಲ ಮಂಜೂರಾಯಿತು.
ದೇವರಗದ್ದೆಯ ವಿವೇಕಾನಂದರು ಲೀಲಾವತಿಯವರಿಗೆ ಚಾಲಕನ ಸೀಟಿನಲ್ಲಿ ಕುಳಿತು ಅಟೋ ಓಡಿಸಲು ಕಲಿಸಿದರು. ನಿರಂತರ ಕಲಿಕೆಯಿಂದ 2015ರ ಮಾರ್ಚ್ ತಿಂಗಳಿನಿಂದಾರಂಭಿಸಿ ಎರಡು ತಿಂಗಳ ಕಾಲ ಸುಬ್ರಹ್ಮಣ್ಯದ ಪ್ರಮುಖ ರಸ್ತೆಗಳಲ್ಲಿ ಲೀಲಾವತಿಯವರು ಪ್ರಾಯೋಗಿಕವಾದ ಅಟೋ ಚಾಲನೆ ನಡೆಸಿದರು.
2015ರ ಮೇ ತಿಂಗಳ 22ರಂದು ಅಟೋ ನಿಲ್ದಾಣಕ್ಕೆ ಬಂದು ಅಧಿಕೃತವಾಗಿ ಬಾಡಿಗೆ ಮಾಡಲು ಆರಂಭಿಸಿದರು. ಆರಂಭದಲ್ಲಿ ಬೆಳಿಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯವರಗೆ ಅಟೋ ಚಾಲಕಿಯಾಗಿ ದುಡಿಯುತ್ತಿದ್ದ ಲೀಲಾವತಿ ಬದುಕು ನಡೆಸಲು ಇದೊಂದೇ ಆದಾಯ ಸಾಕಾಗಲಾರದು ಎಂದು ಅಂದುಕೊಂಡು ಇದೀಗ ಮತ್ತೆ ಗಾಡಿಯಲ್ಲಿ ಮುಳ್ಳು ಸೌತೆ ವ್ಯಾಪಾರ ಆರಂಭಿಸಿದ್ದಾರೆ. ಈ ಮಧ್ಯೆ ಯಾರಾದರು ಬಾಡಿಗೆಗೆ ಕರೆದರೆ ಹೋಗುತ್ತಾರೆ. ವಯೋವೃದ್ಧರು, ಅಂಗವಿಕಲರು ದಾರಿ ಬದಿ ಕಂಡರೆ ಅವರನ್ನು ಉಚಿತವಾಗಿ ಕರೆದೊಯ್ಯವುದು ಕೂಡಾ ಲೀಲಾವತಿಯವರ ದಿನಚರಿಗಳಲ್ಲೊಂದು.
ಖಾಕಿ ಶರ್ಟ್ ಧರಿಸಿ ಪ್ರಯಾಣಿಕ, ಯಾತ್ರ್ರಾರ್ಥಿಗಳಿಗೆ ಉತ್ತಮ ಸೇವೆ ಒದಗಿಸುವ ಅಟೋ ರಾಣಿ ಲೀಲಾವತಿ ಈಗ ಲೀಲಾಜಾಲವಾಗಿ ರಿಕ್ಷಾ ಚಲಾಯಿಸುತ್ತಾ ಸುದ್ದಿ ಮಾಡಿದ್ದಾರೆ.ಅವರ ಬದುಕು ಹಸನಾಗಲಿ ಎಂಬ ಆಶಯ ನಮ್ಮದು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.