ತಾಲೂಕಿನಲ್ಲಿ 1230 ವಿದ್ಯುತ್ ಸಂಪರ್ಕ ಇಲ್ಲದ ಮನೆಗಳು ಸರ್ವೆಯಲ್ಲಿ ಪತ್ತೆ ದೀನದಯಾಳ್ ಯೋಜನೆಯಲ್ಲಿ ಸಂಪರ್ಕ: ಜನವರಿಯಿಂದ ಕಾಮಗಾರಿ ಆರಂಭ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

KDP sabheಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನಲ್ಲಿ ನಡೆದ ಸರ್ವೆಯಿಂದ ವಿದ್ಯುತ್ ಸಂಪರ್ಕ ಇಲ್ಲದ 1230 ಮನೆಗಳು ಪತ್ತೆಯಾಗಿದ್ದು, ಈ ಮನೆಗಳಿಗೆ ದೀನ ದಯಾಳ್ ಯೋಜನೆಯಲ್ಲಿ ಮುಂದಿನ ಜನವರಿ ತಿಂಗಳಲ್ಲಿ ವಿದ್ಯುತ್ ಸಂಪರ್ಕಕ್ಕೆ ಎಲ್ಲಾ ವ್ಯವಸ್ಥೆಗಳನ್ನು ಮಾಡುವುದಾಗಿ ಬೆಳ್ತಂಗಡಿ ಮೆಸ್ಕಾಂನ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಶಿವಶಂಕರ್ ತಿಳಿಸಿದರು.
ಬೆಳ್ತಂಗಡಿ ತಾಲೂಕು ಪಂಚಾಯತದ ಮಾಸಿಕ ಕೆಡಿಪಿ ಸಭೆ ಪಂಚಾಯತದ ಅಧ್ಯಕ್ಷೆ ದಿವ್ಯಜ್ಯೋತಿ ಅವರ ಅಧ್ಯಕ್ಷತೆಯಲ್ಲಿ ಡಿ. 5ರಂದು ತಾ.ಪಂ. ಸಭಾಂಗಣದಲ್ಲಿ ಜರುಗಿತು. ಉಪಾಧ್ಯಕ್ಷೆ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್. ಸುವರ್ಣ, ಕಾರ್ಯನಿರ್ವಹಣಾಧಿಕಾರಿ ಬಸವರಾಜ್ ಅಯ್ಯಣ್ಣಾನವರ್, ತಾ.ಪಂ. ಸಹಾಯಕ ಲೆಕ್ಕ ಅಧೀಕ್ಷಕ ಗಣೇಶ್ ಪೂಜಾರಿ, ವ್ಯವಸ್ಥಾಪಕಿ ಸುವರ್ಣ ಕುಮಾರಿ ಉಪಸ್ಥಿತರಿದ್ದರು.
ಸಭೆಯಲ್ಲಿ ಮೆಸ್ಕಾಂ ಇಲಾಖೆಯ ಪ್ರಗತಿಯ ವರದಿಯನ್ನು ನೀಡಿದ ಶಿವಶಂಕರ್ ಅವರು ಬೆಳ್ತಂಗಡಿ ವ್ಯಾಪ್ತಿಯಲ್ಲಿ 3 ಗಂಗಾಕಲ್ಯಾಣ ಯೋಜನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಉಜಿರೆ ವಲಯದಲ್ಲಿ ಒಂದು ಕುಡಿಯುವ ನೀರು ಮತ್ತು 9 ಗಂಗಾಕಲ್ಯಾಣ ಯೋಜನೆಗೆ ಸಂಪರ್ಕ ನೀಡುವ ಕೆಲಸವನ್ನು ಪೂರ್ತಿ ಗೊಳಿಸಲಾಗಿದೆ ಎಂದು ತಿಳಿಸಿದರು. ವಿದ್ಯುತ್ ಇಲ್ಲದ ಮನೆಗಳ ಪ್ರಾಥಮಿಕ ಸರ್ವೆ ಈಗಾಗಲೇ ಪೂರ್ತಿಗೊಂಡಿದೆ. ಪತ್ತೆಯಾದ ಬಿಪಿಎಲ್ ಕಾರ್ಡ್ ಹೊಂದಿರುವ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ನೀಡಲಾಗುವುದು. ಇದರ ಗುತ್ತಿಗೆಯನ್ನು ಜ್ಯೋತಿ ಇಲೆಕ್ಟ್ರಿಕಲ್ ಬಂಟ್ವಾಳ ಇವರು ವಹಿಸಿಕೊಂಡಿದ್ದಾರೆ ಎಂದು ತಿಳಿಸಿದರು. ನಾವು ಇತರರ ಬಗ್ಗೆ ಮಾತನಾಡುತ್ತೇವೆ. ನಮ್ಮ ವಸತಿ ಗೃಹದ ಪ್ರದೇಶದಲ್ಲೇ ವಿದ್ಯುತ್ ಇಲ್ಲ. ಇದರ ಬಗ್ಗೆ ನ.ಪಂ. ಗಮನಕ್ಕೆ ತಂದರೂ ವ್ಯವಸ್ಥೆಯಾಗಿಲ್ಲ ಎಂದು ಕಾರ್ಯ ನಿರ್ವಾಹಣಾಧಿಕಾರಿ ಬಸವರಾಜ್ ಅಸಮಾಧಾನ ವ್ಯಕ್ತಪಡಿಸಿದರು.
ಡೆಂಗ್ಯೂ-ಇಲಿಜ್ವರ ಪತ್ತೆಯಾಗಿಲ್ಲ: ಬೆಳ್ತಂಗಡಿ ತಾಲೂಕಿನಲ್ಲಿ ಡೆಂಗ್ಯೂ ಮತ್ತು ಇಲಿ ಜ್ವರದ ಯಾವುದೇ ಪ್ರಕರಣ ಪತ್ತೆಯಾಗಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಈ ಹಿಂದಿನ ಸಭೆಯಲ್ಲಿ ಡೆಂಗ್ಯೂ ಪ್ರಕರಣದ ವಿಷಯವನ್ನು ತಾನು ಪ್ರಸ್ತಾಪಿಸಿದ್ದರೂ ಅದರ ವರದಿಯನ್ನು ಜಿಲ್ಲೆಯಿಂದ ತರಿಸಿಕೊಳ್ಳದಿರುವುದಕ್ಕೆ ಅಧ್ಯಕ್ಷೆ ದಿವ್ಯಜ್ಯೋತಿ ಅಸಮಾಧಾನ ಸೂಚಿಸಿ, ಇದನ್ನು ತರಿಸಿ ಪರಿಶೀಲನೆ ನಡೆಸುವಂತೆ ಸೂಚಿಸಿದರು.
ಪಶುಸಂಗೋಪನಾ ಇಲಾಖೆ ಯಿಂದ ವಿಶೇಷ ಘಟಕ ಯೋಜನೆಯಲ್ಲಿ 10 ಕರು ಸಾಕಾಣಿಕೆ ಘಟಕಗಳಿಗೆ ಅವಕಾಶಗಳಿದ್ದು, ಇದರಲ್ಲಿ 4 ಘಟಕಗಳು ಆಗಿದೆ. ಇನ್ನೂ 6 ಘಟಕಗಳು ಈ ತಿಂಗಳಲ್ಲಿ ಆಗುವ ನಿರೀಕ್ಷೆಯಿದೆ ಎಂದು ಸಹಾಯಕ ನಿರ್ದೇಶಕ ಡಾ| ರತ್ನಾಕರ ಮಲ್ಯ ತಮ್ಮ ಇಲಾಖಾ ಪ್ರಗತಿ ನೀಡಿ ತಿಳಿಸಿದರು. ಶಿಕ್ಷಣ ಇಲಾಖೆಯ ವರದಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಗುರುಪ್ರಸಾದ್ ತಾಲೂಕಿನಲ್ಲಿ ಅತಿಥಿ ಶಿಕ್ಷಕರ ವೇತನದ ಬಗ್ಗೆ ತಾ.ಪಂ.ದಲ್ಲಿ ಅಫ್‌ಲೋಡ್ ಆದ ಕೂಡಲೇ ಪಾವತಿಯಾಗುತ್ತದೆ ಎಂದು ತಿಳಿಸಿದರು.
ಎಲ್ಲಾ ಇಲಾಖೆಗಳು ತಮ್ಮ ಅನುದಾನದಲ್ಲಿ ಎಸ್.ಇ.ಪಿ. ಮತ್ತು ಟಿ.ಎಸ್.ಪಿಯ ಯೋಜನೆಗಳನ್ನು ಪ್ರಥಮ ಹಂತದಲ್ಲಿ ಮಾಡಿ ಮುಗಿಸಿದ ನಂತರ ಇತರ ಯೋಜನೆಗಳನ್ನು ಮಾಡಬೇಕು. ಇದಕ್ಕೆ ಸರಕಾರದ ನಿರ್ದೇಶನ ಕೂಡಾ ಇದೆ. ಇದನ್ನು ಇಲಾಖಾಧಿಕಾರಿಗಳು ಗಮನದಲ್ಲಿರಿಸಿಕೊಳ್ಳಬೇಕು ಎಂದು ಕಾರ್ಯನಿರ್ವಾಹಣಾಧಿಕಾರಿಯವರು ಸೂಚನೆ ನೀಡಿದರು. ತಾಲೂಕಿನಲ್ಲಿ 2017-18ನೇ ಸಾಲಿನಲ್ಲಿ ೫ ಅಂಗನವಾಡಿ ಕಟ್ಟಡಗಳು ಮಂಜೂರಾಗಿದೆ. ಚಾರ್ಮಾಡಿ ಗ್ರಾಮದ ಕಕ್ಕಿಂಜೆ, ಹತ್ಯಡ್ಕ ಗ್ರಾಮದ ಅರಸಿನಮಕ್ಕಿ, ಪಾರೆಂಕಿ ಗ್ರಾಮದ ಅಕ್ಷರಕರಾವಳಿ, ಮುಂಡಾಜೆ ಗ್ರಾಮದ ಕೊಟ್ರೊಟ್ಟು, ವೇಣೂರು ಗ್ರಾಮದ ಕೊಪ್ಪದಬಾಕಿಮಾರು ಮಂಜೂರಾದ ಸ್ಥಳಗಳು. ಇವುಗಳಲ್ಲಿ ಪಾರೆಂಕಿ ಅಕ್ಷರಕರಾವಳಿ ಕಟ್ಟಡ ಆರಂಭಿಸಿಲ್ಲ, ಕಕ್ಕಿಂಜೆ ಕಟ್ಟಡ ಸ್ಲಾಬ್ ಹಂತದಲ್ಲಿದೆ. ಅರಸಿನಮಕ್ಕಿ ಪಂಚಾಂಗದ ಹಂತದಲ್ಲಿದೆ ಎಂದು ಸಿಡಿಪಿಒ ಸಭೆಗೆ ಮಾಹಿತಿ ನೀಡಿದರು. ಶಿಶಿಲಕ್ಕೆ ಅಂಗನ ವಾಡಿ ಕಟ್ಟಡದ ಬೇಡಿಕೆಯಿದ್ದು, ಮುಂದಿನ ಸಾಲಿನಲ್ಲಿ ಸೇರ್ಪಡೆ ಗೊಳಿಸುವಂತೆ ಕಾರ್ಯನಿರ್ವಾಹ ಣಾಧಿಕಾರಿಗಳು ಸೂಚನೆ ನೀಡಿದರು.
ಶಿಬಾಜೆ ಗ್ರಾಮದ ಬರ್ಗುಲದಲ್ಲಿ ಐಂಗುಡ ಎಂಬವರಿಗೆ ಸರಕಾರದಿಂದ ಮನೆ ಮಂಜೂರಾಗಿದ್ದು, ಇದರ ನಿರ್ಮಾಣ ಮಾಡಬೇಕಾದರೆ ಅವರ ಜಾಗದಲ್ಲಿರುವ ಮರಗಳನ್ನು ಕಡಿಯಬೇಕಾಗಿದೆ. ಈಗ ಇರುವ ಮನೆಯ ಬಳಿ ಅಪಾಯಕಾರಿ ಮರಗಳಿವೆ ಇದರ ಸರ್ವೆ ನಡೆದು ಆರು ತಿಂಗಳಾದರೂ ಇಲಾಖೆ ಮರ ತೆಗೆದಿಲ್ಲ ಎಂದು ಅಧ್ಯಕ್ಷೆ ದಿವ್ಯಜ್ಯೋತಿ ತಿಳಿಸಿದರು. ಇದನ್ನು ಪರಿಶೀಲನೆ ನಡೆಸುವುದಾಗಿ ಉಪ್ಪಿನಂಗಡಿ ಅರಣ್ಯಾಧಿಕಾರಿ ಲೋಕೇಶ್ ತಿಳಿಸಿದರು. ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿಯೂ ಇಂತಹ 17 ಪ್ರಕರಣಗಳಿವೆ. ಇಲ್ಲಿರುವ ವಿದ್ಯುತ್ ಲೈನ್‌ಗಳನ್ನು ತೆಗೆಯುವಂತೆ ಮೆಸ್ಕಾಂಗೆ ಪತ್ರ ಬರೆದು ತಿಳಿಸಿದ್ದರೂ ಇದುವರೆಗೆ ಸ್ಪಂದನೆ ಸಿಕ್ಕಿಲ್ಲ ಎಂದು ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಸುಬ್ಬಯ್ಯ ನಾಯ್ಕ ಸಭೆಯ ಗಮಕ್ಕೆ ತಂದರು.
ಸಮಾಜಕಲ್ಯಾಣ, ಬಿ.ಸಿ.ಎಂ, ತಾಲೂಕು ಪಂಚಾಯತು, ತೋಟಗಾರಿಕೆ, ಸಹಕಾರ, ಕೃಷಿ, ರೇಷ್ಮೆ, ಸಾಮಾಜಿಕ ಅರಣ್ಯ, ಅರಣ್ಯ ಇಲಾಖೆ ವೇಣೂರು, ಜಿ.ಪಂ. ಇಂಜಿನಿಯರಿಂಗ್ ಉಪವಿಭಾಗದ ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿಯ ವರದಿ ನೀಡಿದರು. ಕಾರ್ಯನಿರ್ವಾಹಣಾಧಿಕಾರಿ ಬಸವರಾಜ್ ಅಯ್ಯಣ್ಣಾನವರ್ ಸ್ವಾಗತಿಸಿದರು. ತಾಲೂಕು ಸಂಯೋಜಕ ಜಯಾನಂದ ಧನ್ಯವಾದವಿತ್ತರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.