ರಸ್ತೆಗಳ ಅಭಿವೃದ್ಧಿಗೆ ಒತ್ತಾಯಿಸಿ ಮೇಲಂತಬೆಟ್ಟು ಗ್ರಾಮಸ್ಥರ ಪ್ರತಿಭಟನೆ

Melanthabettu prathibhataneಮೇಲಂತಬೆಟ್ಟು: ಬೆಳ್ತಂಗಡಿ ನಗರದಿಂದ ಕೇವಲ 2 ಕಿ.ಮೀ ದೂರದಲ್ಲಿರುವ ಮೇಲಂತಬೆಟ್ಟು ಗ್ರಾಮದ ಕಲ್ಲಗುಡ್ಡೆಯಿಂದ ಮುಂಡೂರು ಗ್ರಾಮದ ಕೋಟಿಕಟ್ಟೆವರೆಗೆ ಹಾಗೂ ಬಸದಿ ಬಳಿಯಿಂದ ಮೇಲಂತಬೆಟ್ಟು ಕೇಂದ್ರ ಸ್ಥಾನದವರೆಗಿನ ರಸ್ತೆಗಳು ತೀರಾ ಹದಗೆಟ್ಟು ಹೋಗಿದ್ದು, ಈ ರಸ್ತೆಗಳನ್ನು ಶೀಘ್ರವಾಗಿ ಅಭಿವೃದ್ಧಿಗೊಳಿಸುವಂತೆ ಒತ್ತಾಯಿಸಿ, ಈ ಭಾಗದ ನಾಗರಿಕರು ನ.21ರಂದು ರಸ್ತೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಗ್ರಾಮದ ವಿವಿಧ ಕಡೆಗಳಿಂದ ನೂರಾರು ಗ್ರಾಮಸ್ಥರು ಕಲ್ಲಗುಡ್ಡೆಯಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಿ ರಸ್ತೆ ದುರಸ್ಥಿಗೆ ಆಗ್ರಹಿಸಿದರು. ನಂತರ ಬೆಳ್ತಂಗಡಿಗೆ ಆಗಮಿಸಿ ಜಿ.ಪಂ ಇಂಜಿನಿಯರಿಂಗ್ ಉಪವಿಭಾಗ ಕಛೇರಿ ಎದುರು ಪ್ರತಿಭಟನೆ ನಡೆಸಿದರು. ವಾಟ್ಸಪ್‌ನಲ್ಲಿ ರಸ್ತೆ ಅಭಿವೃದ್ಧಿಗೆ ರೂ.1.25 ಕೋಟಿ ಮಂಜೂರಾಗಿದೆ ಎಂದು ಸುಳ್ಳು ಮಾಹಿತಿ ರವಾನಿಸಿದ ಬಗ್ಗೆ ಪ್ರತಿಭಟನಾಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ನೇತೃತ್ವ ವಹಿಸಿದ್ದ ಮೇಲಂತಬೆಟ್ಟು ಗ್ರಾ.ಪಂ ಮಾಜಿ ಅಧ್ಯಕ್ಷೆ ಜೆಸಿಂತಾ ಮೋನಿಸ್ ಮಾತನಾಡಿ ಗ್ರಾಮದ ರಸ್ತೆ ತೀರಾ ಅವ್ಯವಸ್ಥೆಗೊಂಡಿದ್ದು, ನಡೆದಾಡಲು ಸಾಧ್ಯವಿಲ್ಲದ ಸ್ಥಿತಿಯಾಗಿದೆ. ರಸ್ತೆ ದುರಸ್ಥಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾರೂ ಸ್ಪಂದಿಸಿಲ್ಲ, ನಿನ್ನೆ ಈ ರಸ್ತೆ ಅಭಿವೃದ್ಧಿಗೆ ರೂ.1.25 ಕೋಟಿ ಮಂಜೂರಾಗಿದೆ ಎಂದು ವಾಟ್ಸಪ್‌ನಲ್ಲಿ ಸುಳ್ಳು ಮಾಹಿತಿ ಹಾಕಿ, ಪ್ರತಿಭಟನೆಗೆ ಬರುವವರನ್ನು ತಡೆಯುವ ಕೆಲಸ ಮಾಡಿದ್ದಾರೆ. ಮಾಹಿತಿ ಹಾಕಿದವನು ಈಗ ಬಂದು ಮಂಜೂರಾದ ಬಗ್ಗೆ ಹೇಳಲಿ ಎಂದು ಸವಾಲು ಹಾಕಿದರು.
ನ್ಯಾಯವಾದಿ ಅಲೋಸಿಯಸ್ ಲೋಬೊ ಮಾತನಾಡಿ ರಸ್ತೆಯನ್ನು ದುರುಸ್ಥಿ ಪಡಿಸುವಂತೆ ಜನರು ಒಟ್ಟಾಗಿ ಇಂದು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ಇದರ ಬಗ್ಗೆ ಶೀಘ್ರ ಗಮನ ಹರಿಸುವಂತೆ ಒತ್ತಾಯಿಸಿದರು. ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಹರೀಶ್ ಪೂಂಜ ಮಾತನಾಡಿ ರಸ್ತೆ ಡಾಮರೀಕರಣಕ್ಕೆ ಒತ್ತಾಯಿಸಿ ಗ್ರಾಮದ ಜನರು ನಡೆಸುವ ಈ ಪ್ರತಿಭಟನೆಗೆ ಬಿಜೆಪಿ ಯುವ ಮೋರ್ಚಾ ಪೂರ್ಣ ಬೆಂಬಲ ನೀಡುತ್ತದೆ ಎಂದರು.
ಗ್ರಾಮಸ್ಥರಾದ ಪಿ.ಕೆ. ಸೋಮಪ್ಪ ಪಡಿಬೆಟ್ಟು ಮಾತನಾಡಿ ಕಳೆದ 20 ವರ್ಷಗಳಿಂದ ಜನಪ್ರತಿನಿಧಿಗಳು ಸರಕಾರ ನಮ್ಮನ್ನು ವಂಚಿಸುತ್ತಾ ಬಂದಿದೆ. ಇದರ ಅಭಿವೃದ್ಧಿಗೆ ರೂ.1.25 ಕೋಟಿ ಬಿಡುಗಡೆಯಾಗಿದೆ ಎಂದು ವಾಟ್ಸಪ್‌ನಲ್ಲಿ ಸುಳ್ಳು ಮಾಹಿತಿ ಹಬ್ಬಿಸಲಾಗಿದೆ. ಇದು ಜನರನ್ನು ದಾರಿ ತಪ್ಪಿಸುವ ತಂತ್ರವಾಗಿದೆ. ಈ ರಸ್ತೆಯನ್ನು 15 ದಿನಗಳ ಒಳಗೆ ಅಭಿವೃದ್ಧಿ ಪಡಿಸದಿದ್ದಲ್ಲಿ ಮುಂದಿನ ಚುನಾವಣೆಯನ್ನು ಬಹಿಷ್ಕಾರಿಸುವುದಾಗಿ ಎಚ್ಚರಿಸಿದರು. ಪುನಿತ್ ಕಕ್ಕರ್ಮೆ ಮಾತನಾಡಿ ವಾಟ್ಸಪ್‌ನಲ್ಲಿ ರೂ.1.25 ಕೋಟಿ ಮಂಜೂರಾಗಿದೆ ಎಂಬ ಮಾಹಿತಿ ಬಂದ ಬಗ್ಗೆ ಅಧಿಕಾರಿಗಳಲ್ಲಿ ವಿಚಾರಿಸಿದಾಗ ಈ ರಸ್ತೆಗಳಿಗೆ ಯಾವುದೇ ಅನುದಾನ ಮಂಜೂರಾಗಿಲ್ಲ ಎಂಬುದು ಬೆಳಕಿಗೆ ಬಂದಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಚಂದ್ರರಾಜ ನೂಜೆಲು, ಕಿಶೋರ್‌ಕುಮಾರ್ ಕುರ್ತೊಡಿ, ನವೀನ್ ಪೂಜಾರಿ ಅಡ್ಕದಬೈಲು, ಮೋಹನ್ ಕುಲಾಲ್ ಅಡ್ಕದಬೈಲು, ಲಕ್ಷ್ಮೀ ಪಾಲೆತ್ತಡಿ, ಶಶಿಕಲಾ ಭಟ್, ರಿಕ್ಷಾ ಚಾಲಕರಾದ ರಿಯಾಜ್, ಹನೀಫ್, ಮಾರ್ಸಲ್, ಅಜೇಯ್, ಹಾಗೂ ಲಾರೆನ್ಸ್, ಸುಂದರ, ಹಮೀದ್, ಇಸ್ಮಾಯಿಲ್, ಸುರೇಶ್ ಮಾಪಾಲಾಡಿ, ಸತೀಶ್ ಆಚಾರ್ಯ ಮಾಪಲಾಡಿ, ಮಹಾಬಲ ಮೇಲಂತಬೆಟ್ಟು, ಜೋನ್ ಪಿಂಟೋ, ದಿವಾಕರ ಶೆಟ್ಟಿ, ವೇಣೂಗೋಪಾಲ್, ಡೀಕಯ್ಯ ಪೂಜಾರಿ ಮಾಪಾಲಾಡಿ, ಸತೀಶ್ ಆಚಾರ್ಯ ಮಾಪಾಲಾಡಿ, ಜೋನ್ ರೋಡ್ರಿಗಸ್, ಧರ್ಣಪ್ಪ ಸಪಲ್ಯ ನೂಜೇಲು, ಸಂದೀಪ್ ಸುವರ್ಣ ಮೇಲಂತಬೆಟ್ಟು, ಅಕ್ಷಿತ್ ಬಂಗೇರ ಮೇಲಂತಬೆಟ್ಟು, ಕೃಷ್ಣ ಮೇಸ್ತ್ರಿ ಕಲ್ಲಗುಡ್ಡೆ, ಅಶ್ವಿನಿ ಮೇಲಂತಬೆಟ್ಟು, ದಮಯಂತಿ ಪಾಲೆತ್ತಾಡಿ, ಅಶೋಕ್ ಪಾಲೆತ್ತಾಡಿ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.