ವಸತಿ ಯೋಜನೆ ಫಲಾನುಭವಿಗಳ ಪ್ರಗತಿ ಪರಿಶೀಲನೆ ತಾಲೂಕಿನಲ್ಲಿ 2426 ಮನೆಗಳು ನಿರ್ಮಾಣಕ್ಕೆ ಬಾಕಿ ಮಾರ್ಚ್ ಒಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ

Thaluku panchayath mahithi karyagaraಬೆಳ್ತಂಗಡಿ : ತಾಲೂಕು ಪಂಚಾಯತು ಬೆಳ್ತಂಗಡಿ ಇದರ ವತಿಯಿಂದ ಬೆಳ್ತಂಗಡಿ ತಾಲೂಕಿನ ೪೩ ಗ್ರಾಮ ಪಂಚಾಯತುಗಳಲ್ಲಿ ವಸತಿ ಯೋಜನೆಯ ಫಲಾನುಭವಿಗಳ ಪ್ರಗತಿ ಸಾಧನೆ ಬಗ್ಗೆ ಕಾರ್ಯಾಗಾರ ನ.೧೪ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಸಭಾಂಗಣದಲ್ಲಿ ಜರುಗಿತು.
ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ವೇದಾವತಿ, ತಾ.ಪಂ ಸದಸ್ಯರಾದ ಕೊರಗಪ್ಪ ಗೌಡ. ಕೃಷ್ಣಯ್ಯ ಆಚಾರ್, ವಿ.ಟಿ ಸೆಭಾಸ್ಟೀನ್, ಕೇಶವತಿ, ಸುಶೀಲ, ಜಯರಾಮ, ಸುಧಾಕರ್, ಅಮಿತಾ ಕುಶಾಲಪ್ಪ ಗೌಡ, ವಿನೂಷ ಪ್ರಕಾಶ್, ಕಾರ್ಯನಿರ್ವಾಹಣಾಧಿಕಾರಿ ಬಸವರಾಜ್, ಜಿ.ಪಂ ಸಹಾಯಕ ಯೋಜನಾಧಿಕಾರಿ ಕುಸುಮಧರ್, ತಾ.ಪಂ ಸಹಾಯಕ ಲೆಕ್ಕ ಅಧೀಕ್ಷಕ ಗಣೇಶ್ ಪೂಜಾರಿ, ತಾ.ಪಂ ವ್ಯವಸ್ಥಾಪಕಿ ಸುವರ್ಣ ಕುಮಾರಿ ಉಪಸ್ಥಿತರಿದ್ದರು.
ಜಿ.ಪಂ ಯೋಜನಾ ನಿರ್ದೇಶಕ ಹಾಗೂ ವಸತಿ ಯೋಜನೆಯ ನೋಡೆಲ್ ಅಧಿಕಾರಿ ಕೆ.ಎಸ್ ಲೋಕೇಶ್ ಮಾತನಾಡಿ ಬೆಳ್ತಂಗಡಿ ತಾಲೂಕಿನಲ್ಲಿ ವಿವಿಧ ಯೋಜನೆಯ ೨,೪೨೬ ಮನೆಗಳು ನಿರ್ಮಾಣಕ್ಕೆ ಬಾಕಿಯಾಗಿ ಉಳಿದಿದೆ ಮುಂದಿನ ಮಾರ್ಚ್ ಒಳಗೆ ಎಲ್ಲಾ ಮನೆಗಳು ಪೂರ್ತಿಗೊಳ್ಳಬೇಕು. ಮನೆ ನಿರ್ಮಾಣಕ್ಕೆ ಯಾವ ಸಮಸ್ಯೆಗಳಿವೆ ಎಂಬುದನ್ನು ತಿಳಿಯಲು ಇಂದು ಫಲಾನುಭವಿಗಳನ್ನು ಸೇರಿಸಿ ಈ ಕಾರ್ಯಾಗಾರ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ದ.ಕ ಜಿಲ್ಲೆಯಲ್ಲಿ ೫ ವರ್ಷಗಳ ಅವಧಿಯಲ್ಲಿ ೧೫ ಲಕ್ಷ ಮನೆಗಳ ನಿರ್ಮಾಣದ ಗುರಿ ಇಟ್ಟುಕೊಳ್ಳಲಾಗಿದೆ. ಪ್ರತಿ ವರ್ಷ ೩ ಲಕ್ಷ ಮನೆಗಳು ನಿರ್ಮಾಣವಾಗಬೇಕು. ಆದರೆ ಗುರಿ ಸಾಧಿಸಲು ಸ್ವಲ್ಪ ಪ್ರಮಾಣದಲ್ಲಿ ಮನೆಗಳು ಬಾಕಿಯಾಗಿದೆ. ಎಲ್ಲಾ ಪಂಚಾಯತುಗಳ ಜನಪ್ರತಿನಿಧಿಗಳು ಜನರ ಸಮಸ್ಯೆಗಳ ಬಗ್ಗೆ ತಿಳಿದು ಅದನ್ನು ಅಧಿಕಾರಿಗಳ ಗಮನಕ್ಕೆ ತಂದಲ್ಲಿ ಇದನ್ನು ನಿವಾರಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ವಿವಿಧ ಗ್ರಾ.ಪಂಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಮನೆ ನಿರ್ಮಾಣಕ್ಕೆ ಮರಳಿನ ಸಮಸ್ಯೆ ಮತ್ತು ಈ ತಿಂಗಳ ತನಕ ಮಳೆ ಬಂದಿರುವುದು, ಪಂಚಾಯತು ವ್ಯಾಪ್ತಿಯಲ್ಲಿ ಮರಳಿದ್ದರು ಅದನ್ನು ತೆಗೆಯಲು ಅಧಿಕಾರ ಇಲ್ಲದಿರುವುದರಿಂದ ಪಂಚಾಯತಕ್ಕೆ ಅಧಿಕಾರ ನೀಡಬೇಕು, ಮನೆ ಮಂಜೂರಾದ ಕೆಲವರು ಕಡು ಬಡವರಾಗಿದ್ದು, ಅವರಿಗೆ ಆರಂಭದಲ್ಲೇ ಸ್ವಲ್ಪ ಪ್ರಮಾಣದಲ್ಲಿ ಮುಂಗಡ ಹಣ ನೀಡಬೇಕು ಎಂಬ ಬೇಡಿಕೆ ಸಭೆಯಲ್ಲಿ ವ್ಯಕ್ತವಾಯಿತು. ಅನೇಕ ಪಂಚಾಯತುಗಳಲ್ಲಿ ಪಂಚಾಂಗ, ಗೋಡೆಯ ಕೆಲಸ ಪೂರ್ತಿ ಯಾದರೂ ತಾಂತ್ರಿಕ ಸಮಸ್ಯೆಗಳಿಂದ ಹಣ ದೊರೆಯದಿರುವುದು ಸಮೀಕ್ಷೆಯಲ್ಲಿ ಕಂಡು ಬಂದಿತ್ತು. ಪ್ರಾಸ್ತಾವಿಕವಾಗಿ ಮಾತನಾಡಿದ ತಾ.ಪಂ ಕಾರ್ಯ ನಿರ್ವಾಹಣಾಧಿಕಾರಿ ಯವರು ತಾಲೂಕಿನಲ್ಲಿ ೯೨೪ ಮನೆಗಳು ಗೋಡೆ ಹಂತದಲ್ಲಿ ಮತ್ತು ೭೬೨ ಮನೆಗಳು ಮೇಲ್ಛಾವಣಿ ಹಂತದಲ್ಲಿ ಇದೆ. ಜಿಲ್ಲೆಯ ಇತರ ತಾಲೂಕಿಗೆ ಹೋಲಿಸಿದರೆ ಬೆಳ್ತಂಗಡಿ ತಾಲೂಕಿನಲ್ಲಿ ೨೪೨೬ ಮನೆಗಳು ಮಾರ್ಚ್ ಒಳಗೆ ಪೂರ್ತಿಗೊಳ್ಳಬೇಕಾಗಿದೆ. ನಮ್ಮ ತಾಲೂಕಿನಲ್ಲಿ ಮಾಲಾಡಿ ಗ್ರಾ.ಪಂ ಶೇ ೭೬ ಸಾಧನೆ ಮಾಡಿ ಪ್ರಥಮ ಸ್ಥಾನದಲ್ಲಿದೆ ಎಂದರು. ಜಿ.ಪಂ ಸದಸ್ಯ ಧರಣೇಂದ್ರ ಕುಮಾರ್ ಮಾತನಾಡಿ ಶಾಸಕರು ೯೪ಸಿಯಲ್ಲಿ ಜಾಗ ಇಲ್ಲದ ಬಡವರಿಗೆ ಅತೀ ಹೆಚ್ಚು ಹಕ್ಕುಪತ್ರವನ್ನು ನೀಡಿದ್ದು, ಅವರಿಗೆ ಮನೆಗಳನ್ನು ನಿರ್ಮಿಸಲು ಅನುಕೂಲವಾಗಿದೆ ಎಂದು ತಿಳಿಸಿದರು. ತಾಲೂಕು ಸಂಯೋಜಕ ಜಯಾನಂದ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.