ಮಿಷನ್ ಲೀಗ್ ಚಟುವಟಿಕೆ ಮತಾಂತರ ಎಂದು ಭಾವಿಸುವುದು ತಪ್ಪು: ಸುಪ್ರಿಂ ಕೋರ್ಟ್ ನ್ಯಾಯಮೂರ್ತಿ ಕುರಿಯನ ಜೋಸೆಫ್

cherupushpaಬೆಳ್ತಂಗಡಿ: ಪ್ರಭು ಏಸುಕ್ರಿಸ್ತರ ಸಹನೆ, ತ್ಯಾಗ, ಸೇವೆಯ ಜೀವನದ ಆದರ್ಶ ಮೈಗೂಡಿಸಿಕೊಂಡು ನಮ್ಮ ಜೀವನ ಶೈಲಿಯ ಮೂಲಕ ಇನ್ನೊಬ್ಬರನ್ನು ನಮ್ಮೆಡೆಗೆ ಆಕರ್ಷಿಸುವಂತಾಗಬೇಕು, ನಮ್ಮ ಸೇವೆ ಇನ್ನೊಬ್ಬರ ಬಾಳಲ್ಲಿ ಬೆಳಕಾಗಿ ಪರಿವರ್ತನೆಯಾಗಬೇಕು. ಮಿಷನ್ ಲೀಗ್ ಆ ಕೆಲಸವನ್ನು ಮಾಡುತ್ತಿದ್ದು ಅದನ್ನು ಮತಾಂತರ ಎಂದು ಭಾವಿಸುವುದು ತಪ್ಪು ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಕುರಿಯನ ಜೋಸೆಫ್ ಹೇಳಿದರು.
ಬೆಳ್ತಂಗಡಿ ಸಂತ ಲಾರೆನ್ಸ್ ಪ್ರಧಾನ ದೇವಾಲಯ (ಕೆಥಡ್ರಲ್)ದಲ್ಲಿ ಅ. 21 ರಂದು ನಡೆದ ಚೆರುಪುಷ್ಪ ಮಿಷನ್ ಲೀಗ್ ಇದರ 70ನೇ ರಾಷ್ಟ್ರೀಯ ಮಟ್ಟದ ಆಚರಣೆಯಲ್ಲಿ ಅವರು ಪ್ರಧಾನ ಭಾಷಣ ಮಾಡುತ್ತಿದ್ದರು.
ನಾನೂ ಕೂಡ ಚೆರುಪುಷ್ಪ ಮಿಷನ್ ಲೀಗ್‌ನ ಒಬ್ಬ ಕಾರ್ಯಕರ್ತನೆಂದು ಹೇಳಿಕೊಳ್ಳಲು ಹೆಮ್ಮೆಪಡುತ್ತೇನೆ, ನಾನು ನನ್ನ ಆ ಪ್ರಾಯದಲ್ಲಿ ಸಂಘಟನೆಗಾಗಿ ವ್ಯಯಿಸಿದ ಸಮಯ ನನ್ನ ಬಾಳಲ್ಲಿ ಎಂದೂ ವ್ಯರ್ಥವಾಗಿಲ್ಲ, ಈಗ ನಮ್ಮ ಕರ್ತವ್ಯಕ್ಕೆ ಅದರಿಂದ ಅಡ್ಡಿಯೂ ಆಗಿಲ್ಲ, ಬೆಳೆಯಲು ಕಾರಣವಾಯಿತು ಎಂದು ಹೇಳಿದ ಅವರು, ಇನ್ನೊಬ್ಬರಿಗೆ ಮಾಡುವ ಸೇವೆಯನ್ನು ಸ್ವತಃ ಅನುಭವಿಸಿ ಮಾಡಬೇಕು, ನಮ್ಮ ಜೀವನ ಶೈಲಿಯ ಮೂಲಕ ಏಸುಕ್ರಿಸ್ತ ಯಾರು ಎಂದು ತೋರಿಸಿಕೊಡುವಂತಾಗಬೇಕು. ಸೇವೆ ತ್ಯಾಗಪೂರ್ಣ ಜೀವನದ ಮೂಲಕ ಮಿಷನ್ ಲೀಗ್ ಏಸುಕ್ತಿಸ್ತರ ಜೀವನ ಸಂದೇಶ ಸಾರುವ ಕೆಲಸ ಮಾಡುತ್ತಿದೆ, ಸೇವೆ ಮಾಡುವುದು ಮತಾಂತರಕ್ಕಲ್ಲ, ಆ ಉದ್ದೇಶ ಕೂಡ ಇಲ್ಲ ಎಂದರು.
ವ್ಯಕ್ತಿತ್ವ ವಿಕಾಸ, ಸೇವೆ, ದೇವರ ಆಶೀರ್ವಾದವೇ ಗುರಿ: ಆರ್ಚ್ ಬಿಷಪ್ ಜಾರ್ಜ್ ಞಿರಳಕ್ಕಾಟ್
ಮಿಷನ್ ಲೀಗ್‌ನಿಂದಾಗಿ ಇಂದು ದೇಶಾದ್ಯಂತ ಎಳೆಯ ಮಕ್ಕಳು ಉತ್ತಮ ಪ್ರತಿಭೆಗಳಾಗಿ ಸಮಾಜಕ್ಕೆ ಅರ್ಪಿತವಾಗುತ್ತಿದ್ದಾರೆ. ಇದೇ ತ್ಯಾಗ, ವ್ಯಕ್ತಿತ್ವ ವಿಕಸನ ಆ ಮೂಲಕ ದೇವರ ಆಶೀರ್ವಾದ ಪಡೆಯುವುದೇ ಮಿಷನ್ ಲೀಗ್ ಗುರಿ ಎಂದು ತಲಶೇರಿ ಧರ್ಮಪ್ರಾಂತ್ಯದ ಆರ್ಚ್ ಬಿಷಪ್ ಜಾರ್ಜ್ ಞಿರಳಕ್ಕಾಟ್ ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಮಿಷನ್‌ಲೀಗ್‌ಗೆ ಮಕ್ಕಳು ಮತ್ತು ಹಿರಿಯರು ಎಂಬ ವ್ಯತ್ಯಾಸವಿಲ್ಲದೆ ಎಲ್ಲರೂ ಸೇರಿ ಏಸುಕ್ರಿಸ್ತರ ತ್ಯಾಗಮಯ ಜೀವನದ ಸಂದೇಶದ ಪ್ರಚಾರ ಮಾಡುವುದಾಗಿದೆ. ಸೇವಾ ಚೈತನ್ಯ ನೆಲೆನಿಲ್ಲಲು ಇಂತಹ ಸಮಾವೇಶ ಪೂರಕವಾಗಿದೆ, ಕ್ರೈಸ್ತ ಸಮಾಜಸ್ತರು ಕುಟುಂಬ ಜೀವನ ಗಟ್ಟಿಗೊಳಿಸಬೇಕು, ಹೆಣ್ಣು ಮಕ್ಕಳನ್ನು ಧರ್ಮಭಗಿನಿಯರಾಗಿಸಲು ಪ್ರೇರೇಪಿಸಿದಾಗ ಮಾತ್ರ ಸಮುದಾಯ ಬೆಳೆಯಲು ಸಾಧ್ಯ, ಮಿಷನ್ ಲೀಗ್‌ನ ಬಗ್ಗೆ ಪ್ರತಿಯೊಬ್ಬ ಕ್ರೈಸ್ತ ಕೂಡ ಅಭಿಮಾನ ಪಡಬೇಕು ಎಂದರು.
ಇತರರಿಗಾಗಿ ಪ್ರಾಣತ್ಯಾಗ ಮಾಡುವವರಾಗಿ ಪರಿವರ್ತನೆಯಾಗೂದು : ಬಿಷಪ್ ಲಾರೆನ್ಸ್ ಮುಕ್ಕಯಿ
ಇತರರನ್ನು ಕೊಂದು ತಿನ್ನುವ ಜನಾಂಗವೊಂದನ್ನೂ ಕೂಡ ಈ ಮಿಷನ್ ಲೀಗ್ ಚಟುವಟಿಕೆ ಮಾನವೀಯತೆಯೆಡೆಗೆ ತಂದು ನಿಲ್ಲಿಸಿ ನೈಜ ಉದಾಹರಣೆ ಇದೆ. ಮಿಷನ್ ಲೀಗ್ ಚಟುವಟಿಕೆ ಅದೇ ತೆರನಾದುದು. ಮನುಷ್ಯರನ್ನು ಕೊಂದು ತಿನ್ನುವವರನ್ನು ಪರಿವರ್ತಿಸಿ ಇತರರಿಗಾಗಿ ತನ್ನ ಪ್ರಾಣವನ್ನೇ ಅರ್ಪಿಸುವವರಾಗಿ ತಯಾರುಗೊಳಿಸುವ ಗುಡಾಣ ಇದಾಗಿದೆ ಎಂದು ಬಣ್ಣಿಸಿದರು. ತಮ್ಮ ಸಂತೋಷಕ್ಕಾಗಿ ಇತರರ ಸಂತೋಷಕ್ಕೆ ಧಕ್ಕೆ ತರುವ ಜನ ಬೆಳೆಯುತ್ತಿರುವ ಈ ದೇಶದಲ್ಲಿ, ಲೋಕದ ಸಂತೋಷಕ್ಕಾಗಿ ತನ್ನ ಸಂತೋಷವನ್ನು ತ್ಯಾಗಮಾಡುವ ಜನಾಂಗ ಈ ಭಾರತ ದೇಶಕ್ಕೆ ಅಗತ್ಯವಾಗಿದೆ ಎಂದೂ ಅವರು ನುಡಿದರು.
ಕಾರ್ಯಕ್ರಮದಲ್ಲಿ ಭದ್ರಾವತಿ ಧರ್ಮಪ್ರಾಂತ್ಯದ ಬಿಷಪ್ ಜೋಸೆಫ್ ಅರುಮಚಾಡತ್ತ್, ಮಂಡ್ಯ ಧರ್ಮಪ್ರಾಂತ್ಯದ ಬಿಷಪ್ ಆಂಟನಿ ಕರಿಯಿಲ್, ಪುತ್ತೂರು ಧರ್ಮಪ್ರಾಂತ್ಯದ ಬಿಷಪ್ ಗೀವರ್ಗೀಸ್ ಮಕಾರಿಯೋಸ್ ಶುಭ ಹಾರೈಸಿದರು.
ಚೆರುಪುಷ್ಪ ಮಿಷನ್ ಲೀಗ್ ರಾಷ್ಟ್ರೀಯ ಅಧ್ಯಕ್ಷ ಬಿನೋಯ್ ಪಳ್ಳಿಪರಂಬಿಲ್ ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿ ಬಳಿಕ ನಡೆದ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.
ಸಂಘಟನೆಯ ಮುಖಂಡ ಡೇವಿಸ್ ವಾಲೂರಾನ್, ಹ್ಯಾರಿ ಡಿಸೋಜಾ, ರೋಯಿ ಮ್ಯಾಥ್ಯೂ, ಜ್ಞಾನಪ್ರಕಾಶ್, ಜಾರ್ಜ್ ಕಾರಕ್ಕಲ್, ಆಂಟನಿ ಪುದಿಯಪರಂಬಿಲ್, ಸುಜಿ ಥಾಮಸ್ ಪುಲ್ಲುಕ್ಕಾಟ್, ಬಿನು ಮಂಕೂಟ್ಟಮ್, ಫಾ. ಸೆಬಾಸ್ಟಿಯನ್, ಮೀರಾ ಜಾರ್ಜ್, ಸಿ. ಪಾವನಾ, ವರ್ಗೀಸ್ ಕಲಪುರಕ್ಕಲ್, ಜೋಸ್ ತಾರಗನ್, ವರ್ಗೀಸ್ ಕಝುತ್ತಾಡಿಯಿಲ್ ಮೊದಲಾದವರು ಉಪಸ್ಥಿತರಿದ್ದರು.
ಹಿರಿಯ ಸಂಘಟಕರನ್ನು ಗುರುತಿಸಲಾಯಿತು.
ಸಿಎಂಎಲ್ ನಿರ್ದೇಶಕ ಫಾ| ಜೋಸೆಫ್ ಮಾಟ್ಟಮ ಸ್ವಾಗತಿಸಿದರು. ಕೇಂದ್ರೀಯ ಪ್ರ. ಕಾರ್ಯದರ್ಶಿ ಸುಜಿ ಥಾಮಸ್ ವರದಿ ವಾಚಿಸಿದರು. ಫಾ| ಆಂಟನಿ ಪುದಿಯಪರಂಬಿಲ್ ಪ್ರಸ್ತಾವನೆಗೈದರು.
ಸಪ್ತತಿ ರ್‍ಯಾಲಿ: ಸಮಾವೇಶಕ್ಕೂ ಮುನ್ನ ಬೆಳ್ತಂಗಡಿ ಅಂಬೇಡ್ಕರ್ ಭವನದಿಂದ ಕೆಥಡ್ರಲ್ ಚರ್ಚ್ ವರೆಗೆ ಚೆರುಪುಷ್ಪ ಮಿಷನ್ ಲೀಗ್ ಮಕ್ಕಳು ಹಾಗೂ ಕಾರ್ಯಕರ್ತರ ಬೃಹತ್ ಸಪ್ತತಿ ರ್‍ಯಾಲಿ ನಡೆಯಿತು. ಜೋನ್ ಕೊಚುಚೆರುನ್ನಿಲಂ ಸ್ವಾಗತಿಸಿದರು. ಬೆಳ್ತಂಗಡಿ ಧರ್ಮಪ್ರಾಂತ್ಯದ ವಿಕಾಲ್ ಜನರಲ್ ಜೋಸ್ ವಲಿಯಪರಂಬಿಲ್ ರ್‍ಯಾಲಿಗೆ ಚಾಲನೆ ನೀಡಿದರು.
ಹಿರಿಯ ಸಂಘಟಕರನ್ನು ಗುರುತಿಸಲಾಯಿತು. ಸಪ್ತತಿ ಸಂಭ್ರಮದ ನಿಮಿತ್ತ ಅ. 20 ರಂದು ಹಮ್ಮಿಕೊಳ್ಳಲಾಗಿದ್ದ ವಿವಿಧ ಸ್ಪರ್ಧಾ ವಿಜೇತರಿಗೆ ಹಾಗೂ ಪ್ರತಿಭಾನ್ವಿತ ಮಕ್ಕಳಿಗೆ ಪ್ರೋತ್ಸಾಹ ನೀಡಲಾಯಿತು. ಕಲೋತ್ಸವದಲ್ಲಿ ಪ್ರಥಮ ಸ್ಥಾನಿಯಾದ ಮಕ್ಕಳ ಆಯ್ದ ಕಾರ್ಯಕ್ರಮ ಪ್ರದರ್ಶನಗೊಂಡಿತು. ಕಾರ್ಯಕ್ರಮಕ್ಕೂ ಮುನ್ನ ಶಿಸ್ತು ಬದ್ಧ ರ್‍ಯಾಲಿ ನಗರದಾಧ್ಯಂತ ಸಾಗಿಬಂತು, ಬೈಬಲ್ ವಾಚನದ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
ಸಮಾರಂಭದಲ್ಲಿ ಭದ್ರಾವತಿ, ಮಂಡ್ಯ, ದಾವಣಗೆರೆ, ಬೆಳ್ತಂಗಡಿ ಧರ್ಮಪ್ರಾಂತ್ಯ ಸಹಿತ ಇತರೆಡೆಗಳಿಂದ ಚೆರುಪುಷ್ಪ ಮಿಷನ್ ಲೀಗ್‌ನ ಮಕ್ಕಳು ಹಾಗೂ ಕಾರ್ಯಕರ್ತರು ಸೇರಿ ಸುಮಾರು 2,500 ರಷ್ಟು ಮಂದಿ ಭಾಗಿಯಾಗಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.