ಬೆಳ್ತಂಗಡಿ ವಕೀಲರ ಸಂಘದ ಪದಗ್ರಹಣ ತಂತ್ರಜ್ಞಾನದ ಬಳಕೆಯಿಂದ ವೃತ್ತಿಯಲ್ಲಿ ಯಶಸ್ಸು: ಹೆಬ್ಬಾರ್

3

ಬೆಳ್ತಂಗಡಿ: ವಕೀಲ ವೃತ್ತಿಗೆ ಸಮಾಜದಲ್ಲಿ ಗೌರವದ ಸ್ಥಾನವಿದ್ದು, ವಕೀಲರು ನಿರಂತರ ಅಧ್ಯಯನ ಶೀಲರಾಗಬೇಕು, ಪ್ರಸ್ತುತ ಇಂದಿನ ತಂತ್ರಜ್ಞಾನವನ್ನು ಬಳಸಿಕೊಂಡಲ್ಲಿ ವೃತ್ತಿಯಲ್ಲಿ ಯಶಸ್ಸನ್ನು ಸಾಧಿಸುವುದರೊಂದಿಗೆ ಜನ ಮನ್ನಣೆಯನ್ನು ಗಳಿಸಬಹುದು ಎಂದು ಕುಂದಾಪುರ ಹಿರಿಯ ವಕೀಲರಾದ ಎ.ಎಸ್.ಎನ್ ಹೆಬ್ಬಾರ್ ಹೇಳಿದರು.
ಬೆಳ್ತಂಗಡಿ ವಕೀಲರ ಸಂಘ ಇದರ ೨೦೧೭-೧೯ನೇ ಸಾಲಿನ ನೂತನ ಅಧ್ಯಕ್ಷ ಸೇವಿಯರ್ ಪಾಲೇಲಿ ಹಾಗೂ ತಂಡದ ಪದಗ್ರಹಣ ಸಮಾರಂಭವು ಅ.೧೪ರಂದು ಇಲ್ಲಿಯ ಸುವರ್ಣ ಆರ್ಕೇಡ್‌ನ ಸಪ್ತಪದಿ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಹೆಬ್ಬಾರ್ ಅವರು ನಗರ ಪ್ರದೇಶಕ್ಕಿಂತ ಗ್ರಾಮಾಂತರ ಪ್ರದೇಶದ ವಕೀಲರಿಗೆ ಜನರ ಸಂಪರ್ಕ ಹೆಚ್ಚು. ಇಂದು ಕುಟುಂಬದ ವೈದ್ಯರಿರುವಂತೆ, ಕುಟುಂಬದ ವಕೀಲರು ಇದ್ದಾರೆ. ವಕೀಲರು ಸಮಾಜ ಮುಖಿ ಚಿಂತನೆಯೊಂದಿಗೆ ತಮ್ಮ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ನಿಟ್ಟಿಯಲ್ಲಿ ಪ್ರಯತ್ನಿಸಬೇಕು ಎಂದು ಸಲಹೆಯಿತ್ತರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಎಸ್ ಬಿಳಗಿ ಅವರು ಮಾತನಾಡಿ, ವಕೀಲರಿಗೆ ವೃತ್ತಿಯ ಬಗ್ಗೆ ಹೆಚ್ಚಿನ ಗೌರವ ಇರಬೇಕು, ಭಾಷೆಯ ಮೇಲೆ ಪ್ರಭುತ್ವ, ಸಮಯ ಪ್ರಜ್ಞೆ, ಉತ್ತಮ ಜ್ಞಾನ ಇದ್ದರೆ ಈ ವೃತ್ತಿಯಲ್ಲಿ ಪ್ರಸಿದ್ಧಿಯನ್ನು ಪಡೆಯಬಹುದು. ಪದಾಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಿದಾಗ ಸಂಘದ ಪ್ರಗತಿಯೂ ಸಾಧ್ಯವಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ವಕೀಲ ಪ್ರತಾಪಸಿಂಹ ನಾಯಕ್ ಸಂಘದ ಪದಾಧಿಕಾರಿಗಳು ಎಲ್ಲರೊಡನೆ ಪ್ರೀತಿ-ವಿಶ್ವಾಸದಿಂದ, ಚಾರಿತ್ರ್ಯವಂತರಾಗಿ, ನಿರ್ಣಯಕ್ಕೆ ಬದ್ಧರಾಗಿ, ಹಣಕಾಸಿನ ವ್ಯವಹಾರದಲ್ಲಿ ಶುದ್ಧತೆ ಇದ್ದಾಗ ಸಂಘಟನೆ ಬಲಿಷ್ಠವಾಗಿ ಬೆಳೆಯುತ್ತದೆ ಎಂದು ಸಲಹೆಯಿತ್ತರು.
ಸಂಘದ ನೂತನ ಅಧ್ಯಕ್ಷ ಸೇವಿಯರ್ ಪಾಲೇಲಿ ಮಾತನಾಡಿ, ವಕೀಲ ಮಿತ್ರರ ಕಲ್ಯಾಣ, ಉತ್ತಮ ಬಾಂಧವ್ಯ, ಬೇಕಾದ ವ್ಯವಸ್ಥೆ ಮಾಡಿಕೊಡುವುದು ನಮ್ಮ ಉದ್ದೇಶವಾಗಿದೆ. ಜೊತೆಗೆ ವಕೀಲರ ಸಂಘಕ್ಕೆ ಸ್ವಂತ ಕಟ್ಟಡ, ಬೆಳ್ತಂಗಡಿ ನ್ಯಾಯಾಲಯಕ್ಕೆ ನೂತನ ಕಟ್ಟಡ ಇದರ ಬಗ್ಗೆ ಪ್ರಯತ್ನಿಸುವುದಾಗಿ ಭರವಸೆಯಿತ್ತರು. ಮುಖ್ಯ ಅತಿಥಿಗಳಾಗಿ ಸಿವಿಲ್ ನ್ಯಾಯಾಧೀಶ ಜೆ.ಎಂ.ಎಫ್.ಸಿ ಬೆಳ್ತಂಗಡಿಯ ಸತೀಶ್ ಎಸ್.ಟಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಜೆ.ಎಂ.ಸಿ ಬೆಳ್ತಂಗಡಿಯ ಕೆ.ಎಂ ಆನಂದ್ ಭಾಗವಹಿಸಿ ಶುಭ ಕೋರಿದರು. ವೇದಿಕೆಯಲ್ಲಿ ಹಿರಿಯ ವಕೀಲರಾದ ನೇಮಿರಾಜ ಶೆಟ್ಟಿ, ಸಂಘದ ಅಧ್ಯಕ್ಷ ಶಶಿಕಿರಣ್ ಜೈನ್ ಮತ್ತು ಶ್ರೀಮತಿ ಗೀತಾಂಜಲಿ ಬಿಳಗಿ, ಸಂಘದ ಉಪಾಧ್ಯಕ್ಷ ಶ್ರೀನಿವಾಸ ಗೌಡ, ಕೋಶಾಧಿಕಾರಿ ಗಣೇಶ್ ಗೌಡ, ಜೊತೆ ಕಾರ್ಯದರ್ಶಿ ಮುಮ್ತಾಜ್ ಬೇಗಂ ಉಪಸ್ಥಿತರಿದ್ದರು. ರೆಹನಾಭಾನು ಮತ್ತು ಸನಿಹ ಇವರ ಪ್ರಾರ್ಥನೆ ಬಳಿಕ ವಕೀಲ ವಸಂತ ಮರಕಡ ಸ್ವಾಗತಿಸಿದರು. ವಕೀಲರಾದ ಬಿ.ಕೆ ಧನಂಜಯ ರಾವ್ ಮತ್ತು ಶೈಲೇಶ್ ಠೋಸರ್ ಕಾರ್ಯಕ್ರಮ ನಿರೂಪಿಸಿ, ನೂತನ ಕಾರ್ಯದರ್ಶಿ ಮನೋಹರ್ ಕುಮಾರ್ ಎ. ಇಳಂತಿಲ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.