ಹೈನುಗಾರಿಕೆಯಲ್ಲಿ ಆಧುನಿಕ ಪದ್ಧತಿ ಅಳವಡಿಸಿ: ರವಿರಾಜ ಹೆಗ್ಡೆ ಕುಕ್ಕಾವು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಉದ್ಘಾಟನೆ

2 copy

ಮಿತ್ತಬಾಗಿಲು: ಇಂದು ವೈಜ್ಞಾನಿಕವಾಗಿ ಹೈನುಗಾರಿಕೆಯಲ್ಲಿ ಅನೇಕ ಬದಲಾವಣೆಗಳಾಗಿದ್ದು, ಆಧುನಿಕ ಪದ್ಧತಿಯಿಂದ ಹೈನುಗಾರಿಕೆಯನ್ನು ಮಾಡಿದರೆ ಹೆಚ್ಚು ಲಾಭ ಪಡೆಯಬಹುದು ಎಂದು ದ.ಕ ಸಹಕಾರಿ ಹಾಲು ಒಕ್ಕೂಟ ಮಂಗಳೂರು ಇದರ ಅಧ್ಯಕ್ಷ ರವಿರಾಜ ಹೆಗ್ಡೆ ಹೇಳಿದರು.
ಅವರು ಅ.೧೪ರಂದು ಮಿತ್ತಬಾಗಿಲು ಗ್ರಾಮದ ಕುಕ್ಕಾವು ಎಂಬಲ್ಲಿ ನೂತನವಾಗಿ ಆರಂಭಗೊಂಡ ಕುಕ್ಕಾವು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ದ.ಕ. ಒಕ್ಕೂಟದ ೭೧೧ನೇ ಸಂಘ ಇದಾಗಿದ್ದು, ಸಂಘವು ಆರ್ಥಿಕವಾಗಿ ಸದೃಢವಾಗ ಬೇಕಾದರೆ ಸಂಘಕ್ಕೆ ಸದಸ್ಯರು ಗುಣಮಟ್ಟದ ಹಾಲನ್ನು ಪೂರೈಸಬೇಕು. ದಿನಕ್ಕೆ ಕಡಿಮೆ ಎಂದರೆ ೩೦೦ ಲೀಟರ್‌ನಷ್ಟು ಹಾಲು ಬರಬೇಕು. ದೇಶಿಯ ತಳಿಗಳನ್ನು ಸಾಕುವುದು, ಸ್ವಲ್ಪ ಭಾಗ ಹಸಿ ಹುಲ್ಲು ಬೆಳೆಸುವುದರಿಂದ ಉತ್ತಮ ಹಾಲನ್ನು ಪೂರೈಕೆ ಮಾಡಲು ಸಾಧ್ಯವಾಗುತ್ತದೆ ಎಂದರು. ಬೆಳ್ತಂಗಡಿ ತಾಲೂಕಿನಲ್ಲಿ ೭೮ ಹಾಲು ಉತ್ಪಾದಕರ ಸಂಘಗಳಿದ್ದು, ದಿನಕ್ಕೆ ೭೪ ಸಾವಿರ ಲೀ ಹಾಲು ಸಂಗ್ರಹಣೆಯಾಗುತ್ತದೆ. ಜಿಲ್ಲೆಯಲ್ಲಿ ಬೆಳ್ತಂಗಡಿ ಪ್ರಥಮ ಸ್ಥಾನದಲ್ಲಿದೆ. ಸದಸ್ಯರಿಗೆ ಒಕ್ಕೂಟದಲ್ಲಿ ಬಹಳಷ್ಟು ಸೌಲಭ್ಯಗಳಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಒಕ್ಕೂಟಕ್ಕೆ ‘ರಾಷ್ಟ್ರಮಟ್ಟದ ಎಕ್ಸಲೆಂಟ್ ಅವಾರ್ಡ್’ ದ್ವಿತೀಯ ಪ್ರಶಸ್ತಿ ಬಂದಿದ್ದು, ಇದನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಇದೆ ಎಂದು ಹೇಳಿ, ಸಂಘಕ್ಕೆ ೦.೦೭ ಸೆಂಟ್ಸ್ ಜಾಗ ದಾನ ನೀಡಿದ ದೇವರಾವ್ ಅವರನ್ನು ಅಭಿನಂದಿಸಿದರು.
ಅಧ್ಯಕ್ಷತೆ ವಹಿಸಿದ್ದ ದ.ಕ. ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕ ನಿರಂಜನ್ ಭಾವಂತಬೆಟ್ಟು ಮಾತನಾಡಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಇದ್ದರೆ ಸಂಘ ಅಭಿವೃದ್ಧಿ ಪಥದಲ್ಲಿ ಸಾಗುತ್ತದೆ. ಬೆಳ್ತಂಗಡಿ ತಾಲೂಕಿನಲ್ಲಿ ೭೭ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅತಿಥಿಗಳಾಗಿ ಭಾಗವಹಿಸಿದ್ದ ಒಕ್ಕೂಟದ ನಿರ್ದೇಶಕ ಸೀತಾರಾಮ ರೈ ಅವರು ಮಾತನಾಡಿ, ಕುಕ್ಕಾವು ಸಂಘವು ಇತರ ಎಲ್ಲಾ ಸಂಘಗಳಿಗೆ ಮಾದರಿ ಸಂಘವಾಗಿ ಜಿಲ್ಲೆಯಲ್ಲಿ ಕೀರ್ತಿಯನ್ನು ಗಳಿಸಲಿ ಎಂದು ಹಾರೈಸಿದರು. ಇನ್ನೋರ್ವ ನಿರ್ದೇಶಕ ಪದ್ಮನಾಭ ಶೆಟ್ಟಿ ಅರ್ಕಜೆ ಅವರು ಮಾತನಾಡಿ ಆಡಳಿತ ಮಂಡಳಿ, ಕಾರ್ಯದರ್ಶಿ ಹಾಗೂ ಸಿಬಂದಿವರ್ಗ, ಸದಸ್ಯರ ಸತತ ಶ್ರಮದಿಂದ ಸಂಘ ಉತ್ತಮವಾಗಿ ಬೆಳೆಯಲು ಸಾಧ್ಯವಿದೆ. ತಾಲೂಕಿನ ಗುಂಡೂರಿ, ಪದ್ಮುಂಜ,
ತೋಟತ್ತಾಡಿ ಸಂಘಗಳು ಈಗಾಗಲೇ ಜಿಲ್ಲೆಯಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದರು.
ಜಿ.ಪಂ.ಸ. ಸೌಮ್ಯಲತಾ ಜಯಂತ ಗೌಡ ಮಾತನಾಡಿ ಕುಕ್ಕಾವು ಸಂಘಕ್ಕೆ ತನ್ನ ಜಿ.ಪಂ ನಿಧಿಯಿಂದ ಮುಂದಿನ ವರ್ಷ ರೂ.೫೦ ಸಾವಿರ ನೀಡುವುದಾಗಿ ಭರವಸೆಯಿತ್ತರು. ತಾ.ಪಂ ಸದಸ್ಯ ಜಯರಾಮ ಮಾತನಾಡಿ ಕುಕ್ಕಾವು ಸಂಘ ಆರಂಭಕ್ಕೆ ತಾನು ನೀಡಿದ ಸಹಕಾರವನ್ನು ನೆನಪಿಸಿದರು. ಗ್ರಾ.ಪಂ. ಅಧ್ಯಕ್ಷ ನಾರಾಯಣ ಪಾಟಾಳಿಯವರು ಮಾತನಾಡಿ ಉದ್ಯೋಗ ಖಾತ್ರಿಯಲ್ಲಿ ಹಟ್ಟಿ ರಚನೆಗೆ ಸಹಕಾರ ನೀಡುವುದಾಗಿ ಭರವಸೆಯಿತ್ತರು. ಕೂಡಬೆಟ್ಟು ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಕೆ ಧನಂಜಯ ರಾವ್ ಮಾತನಾಡಿ ಸಂಘ ಆರಂಭದ ಹಿನ್ನಲೆಗಳನ್ನು ವಿವರಿಸಿ ಎಲ್ಲರ ಸಹಕಾರದಿಂದ ನೂತನ ಸಂಸ್ಥೆ ಆರಂಭಗೊಂಡಿದೆ ಎಂದು ತಿಳಿಸಿದರು.
ಒಕ್ಕೂಟದ ನಿರ್ದೇಶಕ ನಾರಾಯಣ ಪ್ರಕಾಶ್ ಕೆ, ಒಕ್ಕೂಟದ ನಿರ್ವಾಹಕ ನಿರ್ದೇಶಕ ಡಾ| ಬಿ.ವಿ. ಸತ್ಯನಾರಾಯಣ ಶುಭ ಕೋರಿದರು. ವಾಸುದೇವ ಕಕ್ಕೆನೇಜಿ ಅನಿಸಿಕೆ ವ್ಯಕ್ತಪಡಿಸಿದರು.
ವ್ಯವಸ್ಥಾಪಕ ನಿತ್ಯಾನಂದ ಭಕ್ತ, ಸಹಾಯಕ ವ್ಯವಸ್ಥಾಪಕ ಶ್ರೀನಿವಾಸ ಎಂ, ಸಂಘದ ಕಾರ್ಯದರ್ಶಿ ಸುಷ್ಮಾ ರಾಜೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಡಿರುದ್ಯಾವರ ಸಂಘಕ್ಕೆ ಹಾಲು ಸಾಗಾಟ ಮಾಡುತ್ತಿದ್ದ ರಿಕ್ಷಾ ಚಾಲಕ ರೂಪೇಶ್ ಕೊಲ್ಪೆ ಇವರನ್ನು ಗುರುತಿಸಲಾಯಿತು.
ಸಂಘದ ನಿರ್ದೇಶಕಿ ವತ್ಸಲಾ ಶಿವಾನಂದ್ ಮತ್ತು ಜಯಂತಿ ಸುರೇಶ್ ಗೌಡ ಇವರ ಪ್ರಾರ್ಥನೆ ಬಳಿಕ ಸಂಘದ ಅಧ್ಯಕ್ಷೆ ಜಲಜಾಕ್ಷಿ ಸ್ವಾಗತಿಸಿದರು.
ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಶ್ರೀನಿವಾಸ ಎಂ. ಕಾರ್ಯಕ್ರಮ ನಿರೂಪಿಸಿ, ಸಂಘದ ನಿರ್ದೇಶಕಿ ಶಕುಂತಳಾ ಅಶೋಕ ಗೌಡ ವಂದಿಸಿದರು. ಸಂಘದ ಉಪಾಧ್ಯಕ್ಷೆ ರಾಜಮ್ಮ ಅಮ್ಮಿ ಪೂಜಾರಿ, ನಿರ್ದೇಶಕರುಗಳಾದ ಸುಂದರಿ ಅಣ್ಣು ಮುಗೇರ, ಪೂವಕ್ಕ ಆನಂದ ನಾಯ್ಕ, ಗೀತಾ ಚಿದಾನಂದ ಪೂಜಾರಿ, ಮೀನಾಕ್ಷಿ ಡೀಕಯ್ಯ ಗೌಡ, ಯಮುನಾ ರಾಮ ದೇವಾಡಿಗ, ಸೆಲಿನ್ ದೇವಸ್ಯ ತೆಂಗುಂಪಳ್ಳಿ, ರತ್ನಾವತಿ ಪುಟ್ಟ ಕುಂಬಾರ, ಬಾಲಕ್ಕ ಮಜಲು, ವಸಂತ ಲಕ್ಷ್ಮೀ ಪರಮೇಶ್ವರ ರಾವ್ ಅತಿಥಿ-ಗಣ್ಯರನ್ನು ಗೌರವಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.