ಅ.೨೪: ಡಾ. ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣಮಹೋತ್ಸವ

Advt_NewsUnder_1
Advt_NewsUnder_1
Advt_NewsUnder_1

1

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರಿಗೆ ಪಟ್ಟಾಭಿಷೇಕವಾಗಿ ೫೦ ವರ್ಷ ಆಗುತ್ತಿದ್ದು, ಪಟ್ಟಾಭಿಷೇಕ ವರ್ಧಂತ್ಯುತ್ಸವಕ್ಕೆ ಸುವರ್ಣ ಮಹೋತ್ಸವ ಸಂಭ್ರಮ ಈ ಹಿನ್ನಲೆಯಲ್ಲಿ ಧರ್ಮಸ್ಥಳ ಗ್ರಾಮಸ್ಥರು, ಧರ್ಮಸ್ಥಳ ಪೇಟೆಯ ವ್ಯಾಪಾರಸ್ಥರು ಹಾಗೂ ತಾಲೂಕಿನ ನಾಗರಿಕರು ಈ ಸಂಭ್ರಮವನ್ನು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅ.೨೪ರಂದು ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಿಜೃಂಭಣೆಯಿಂದ ಆಚರಿಸಲಿದ್ದಾರೆ.

ಅಂದು ಬೆಳಿಗ್ಗೆ ಬಸದಿ ಹಾಗೂ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಯಲಿದೆ. ಈ ದಿನ ಊರ-ಪರವೂರ ಗಣ್ಯರು, ಹೆಗ್ಗಡೆಯವರ ಅಭಿಮಾನಿಗಳು, ಕ್ಷೇತ್ರದ ಭಕ್ತರು, ಸಂಘ-ಸಂಸ್ಥೆಯವರು, ಸರಕಾರಿ ಅಧಿಕಾರಿಗಳು ಸೇರಿದಂತೆ ನಾಗರಿಕರು ಕ್ಷೇತ್ರಕ್ಕೆ ಬಂದು ಹೆಗ್ಗಡೆಯವರಿಗೆ ಭಕ್ತಿ ಪೂರ್ವಕ ಅಭಿವಂದನೆಗಳನ್ನು ಸಲ್ಲಿಸಲಿದ್ದಾರೆ. ಸಂಜೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರಿನ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹಾಗೂ ಬೆಳ್ತಂಗಡಿ ಕ್ಷೇತ್ರದ ಶಾಸಕ ಕೆ. ವಸಂತ ಬಂಗೇರ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಕ್ಷೇತ್ರದ ಹಿರಿಯ ಸಿಬ್ಬಂದಿಯವರನ್ನು ಸನ್ಮಾನಿಸುವ ಕಾರ್ಯಕ್ರಮ ಪ್ರತಿ ವರ್ಷದಂತೆ ಈ ವರ್ಷವೂ ನಡೆಯಲಿದೆ.
೧೯೬೮ನೇ ಅಕ್ಟೋಬರ್ ೨೪ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ೨೧ನೇ ಧರ್ಮಾಧಿಕಾರಿ ಯಾಗಿ ಡಾ. ವೀರೇಂದ್ರ ಹೆಗ್ಗಡೆಯವರು ಪಟ್ಟಾಭಿಷಿಕ್ತರಾಗಿದ್ದರು. ಬಳಿಕ ಅವರು ಕ್ಷೇತ್ರದ ಸರ್ವ ತೋಮುಖ ಪ್ರಗತಿಗೆ ಅನೇಕ ಪರಿವರ್ತನೆಗಳನ್ನು, ಹೊಸ- ಹೊಸ ಯೋಜನೆಗಳನ್ನು ಜಾರಿಗೆ ತಂದು ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾದರಿ ಕ್ಷೇತ್ರವಾಗಿ ಜನಮನ್ನಣೆಗೆ ಪಾತ್ರವಾಗಿರುವುದು
ಭಕ್ತ ಸಮೂಹಕ್ಕೆ ಹರ್ಷವನ್ನುಂಟು ಮಾಡಿದೆ. ಶ್ರೀ ಕ್ಷೇತ್ರದಲ್ಲಿ ಪಾರಂಪರಿಕವಾಗಿ ನಡೆದುಕೊಂಡು ಬರುತ್ತಿರುವ ಚರ್ತುವಿಧ ದಾನ ಪರಂಪರೆಯನ್ನು ಮುಂದುವರಿಸಿಕೊಂಡು, ಕಾಲದ ಅಗತ್ಯತೆಗೆ ಅನುಗುಣವಾಗಿ ಈ ಪರಂಪರೆಗೆ ಹೊಸ ದಿಕ್ಕನ್ನು ನೀಡಿದವರು ಡಾ| ಹೆಗ್ಗಡೆಯವರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಮುದಾಯ ಅಭಿವೃದ್ಧಿ ಕಾರ್ಯಕ್ರಮ, ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮಗಳು, ಸಿರಿ ಗ್ರಾಮೋದ್ಯೋಗ ಸಂಸ್ಥೆ, ಜನಜಾಗೃತಿ ವೇದಿಕೆಯ ಕಾರ್ಯಕ್ರಮಗಳು, ಆರೋಗ್ಯ ಸುರಕ್ಷಾ ಮತ್ತು ನೈರ್ಮಲ್ಯ ಯೋಜನೆಗಳು, ಪರಿಸರ ಸಂಬಂಧಿತ ಕಾರ್ಯಕ್ರಮಗಳು, ಪ್ರಗತಿ ಬಂಧು ಸ್ವಸಹಾಯ ಸಂಘಗಳು, ರುಡ್‌ಸೆಟ್ ಮೂಲಕ ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮ, ಧಾರ್ಮಿಕ ಕೇಂದ್ರಗಳ ಸ್ವಚ್ಛತೆ ಸೇರಿದಂತೆ ಹಲವಾರು ಜನಪರ ಕಾರ್ಯಕ್ರಮಗಳು ಇಂದು ರಾಜ್ಯದಾದ್ಯಂತ ನಡೆಯುತ್ತಿದ್ದು, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮನ್ನಣೆಗೂ ಪಾತ್ರವಾಗಿದೆ. ಧರ್ಮೋತ್ಥಾನ ಟ್ರಸ್ಟ್ ಮೂಲಕ ರಾಜ್ಯ ಹಾಗೂ ಹೊರ ರಾಜ್ಯದ ನೂರಾರು ದೇವಸ್ಥಾನ, ಬಸದಿಯನ್ನು ಶಾಸ್ತ್ರ ಬದ್ಧವಾಗಿ ನವೀಕರಿಸಲಾಗಿದೆ.
ಶಾಂತಿವನ ಟ್ರಸ್ಟ್, ಯೋಗ ಮತ್ತು ನೈತಿಕ ಶಿಕ್ಷಣ, ಭಜನಾ ತರಬೇತಿ ಕಮ್ಮಟಗಳು, ಯಕ್ಷಗಾನ ತರಬೇತಿ, ಮಂಜೂಷಾ ವಸ್ತು ಸಂಗ್ರಹಾಲಯ, ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನ ಮೊದಲಾದ ಸಂಸ್ಥೆಗಳ ಮೂಲಕ ಸಂಸ್ಕೃತಿ ರಕ್ಷಣೆಯ ಕಾರ್ಯ ಕ್ರಮಗಳನ್ನೂ ಹೆಗ್ಗಡೆಯವರು ಮಾಡುತ್ತಿದ್ದಾರೆ.
ಪ್ರತಿ ವರ್ಷ ಧರ್ಮಸ್ಥಳದಲ್ಲಿ ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಬಡ ಕುಟುಂಬಗಳಿಗೆ ಆಧಾರವಾಗಿದ್ದು, ಅನೇಕ ಸಂಘ-ಸಂಸ್ಥೆಗಳು ಧರ್ಮಸ್ಥಳದ ಮಾದರಿಯನ್ನು ಅನುಸರಿಸುತ್ತಿದ್ದಾರೆ. ಜನಜಾಗೃತಿ ವೇದಿಕೆಯ ಮದ್ಯವರ್ಜನ ಶಿಬಿರಗಳಲ್ಲಿ ಸೇರಿ ಮದ್ಯಮುಕ್ತರಾಗಿರುವ ಸಾವಿರಾರು ಕುಟುಂಬಗಳು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ರಾಜ್ಯದಾದ್ಯಂತ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಅನೇಕ ಶಿಕ್ಷಣ ಸಂಸ್ಥೆಗಳು, ತಾಂತ್ರಿಕ ಕಾಲೇಜುಗಳು, ವೈದ್ಯಕೀಯ ಕಾಲೇಜು, ಕಾನೂನು ಕಾಲೇಜುಗಳು ನಡೆಯುತ್ತಿವೆ. ತಮ್ಮ ಸಂಸ್ಥೆಗಳ ಮೂಲಕ ಈಗಾಗಲೇ ೩ ಗಿನ್ನಿಸ್ ದಾಖಲೆಗಳನ್ನೂ ಕೂಡ ಮಾಡಲಾಗಿದೆ. ಸ್ವಚ್ಚ ಧಾರ್ಮಿಕ ನಗರ ಎಂಬ ಹಿರಿಮೆಗೂ ಪಾತ್ರರಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಯುತ್ತಿರುವ ಈ ಎಲ್ಲಾ ಕ್ರಾಂತಿಕಾರಕ ಕಾರ್ಯಕ್ರಮಗಳು ಅಪಾರ ಜನಮನ್ನಣೆ ಹಾಗೂ ಹಿರಿಮೆಗೆ ಪಾತ್ರವಾಗಿದ್ದು, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಪುರಸ್ಕಾರಗಳಿಗೂ ಪಾತ್ರವಾಗಿವೆ. ಡಾ. ಹೆಗ್ಗಡೆಯವರಿಗೂ ಪದ್ಮವಿಭೂಷಣ ಗೌರವವನ್ನೂ ತಂದುಕೊಟ್ಟಿದೆ. ೧೯೬೮ನೇ ಅ.೨೪ರಂದು ಪಟ್ಟಾಭಿಷೇಕವಾಗಿದ್ದು, ೨೦೧೮ಕ್ಕೆ ೫೦ ವರ್ಷವನ್ನು ಪೂರೈಸುತ್ತಿದ್ದು, ಪಟ್ಟಾಭಿಷೇಕದ ವರ್ಧಂತ್ಯುತ್ಸವಕ್ಕೆ ೫೦ ವರ್ಷ ಸಂದು ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಇದನ್ನು ವೈವಿಧ್ಯಪೂರ್ಣವಾಗಿ ಆಚರಿಸಲು ಕ್ಷೇತ್ರದ ಭಕ್ತರು, ಅಭಿಮಾನಿಗಳು, ತಾಲೂಕಿನ ನಾಗರಿಕರು ಸಿದ್ಧತೆಗಳನ್ನು ನಡೆಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.